ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಕ್ಷೇತ್ರದ ಮೇರು ಪ್ರತಿಭೆ ನಮ್ಮ ವಿಜಯಕುಮಾರ್
ಪ್ರತಿಭೆಗಳ ಪಾಲಿಗೆ ಜಯದ ಬೆಳಕನ್ನು ನೀಡುವ ವಿಜಯಕುಮಾರ್
ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಕ್ಷೇತ್ರದ ಮೇರು ಪ್ರತಿಭೆ ನಮ್ಮ ವಿಜಯಕುಮಾರ್ಪ್ರತಿಭೆಗಳ ಪಾಲಿಗೆ ಜಯದ ಬೆಳಕನ್ನು ನೀಡುವ ವಿಜಯಕುಮಾರ್
ಬಹಳ ಹೆಮ್ಮೆ ಮತ್ತು ಅಭಿಮಾನದಿಂದ ಬರೆಯಲು ಅಣಿಯಾಗಿದ್ದೇನೆ. ತನ್ನೆಲ್ಲಾ ಸ್ವಾರ್ಥವನ್ನು ಬದಿಗಿತ್ತು, ನಿಸ್ವಾರ್ಥ ಮನಸ್ಸಿನಿಂದ ಸಮಾಜ ಸೇವೆ ಮಾಡುವುದರ ಮೂಲಕ ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಕುವರನಾದ ಸಾಂಸ್ಕೃತಿಕ ಶಕ್ತಿ ಮತ್ತು ಶಕ್ತಿವಂತ ಕಲಾವಿದ ಹಾಗೂ ಸಾವಿರಾರು ಕಲಾಪ್ರತಿಭೆಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದ ಗ್ರೇಟ್ ಪರ್ಸನಾಲಿಟಿಯ ಯುವಕ, ಒಲವಿನ ಸಹೋದರ, ಅರ್ವದ ಅಣ್ಣನೆಂದೆ ಜನಪ್ರೀತಿಗಳಿಸಿದ ನನ್ನವರೆ ಆಗಿರುವ ವಿಜಯಕುಮಾರ್ ಜೈನ್ ಅವರಿಗೆ ಹಾಗೂ ಅವರ ಕಲಾಸೇವೆಗೆ ಈ ಬರಹ ಅರ್ಪಣೆ.
ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಆಮಂತ್ರಣ ಪರಿವಾರದ ಮೂಲಕ ರಾಜ್ಯವ್ಯಾಪಿ ಗಮನ ಸೆಳೆದ ಹಳ್ಳಿಗಾಡಿನ ಈ ಯುವಕ ಬೇರೆ ಯಾರು ಅಲ್ಲ. ಬೆಳ್ತಂಗಡಿ ತಾಲೂಕಿನ ನಾವರ ಗ್ರಾಮದ ಕೃಷಿಕ ಮನೆತನದ ಹೆಮ್ಮೆಯ ಕುಡಿ. ಅಂದ ಹಾಗೆ ಸಾಂಸ್ಕೃತಿಕ ಕ್ಷೇತ್ರದ ಸೊಗಸುಗಾರ, ಮೋಡಿಗಾರ, ಮಾತುಗಾರ ನಮ್ಮ ವಿಜಯಣ್ಣನಿಗೆ ಇಂದು ಜನ್ಮದಿನದ ಸಂಭ್ರಮ. ಈ ಸಂಭ್ರಮಕ್ಕೆ ನನ್ನದೊಂದು ನುಡಿರೂಪದ ಗೌರವಪೂರ್ವಕ ಶುಭಾಶಯ.
ಪ್ರಥಮವಾಗಿ ವಿಜಯಣ್ಣನಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ, ಬರವಣಿಗೆಗೆ ಸಿದ್ದನಾಗಿದ್ದೇನೆ. ಅಂದ ಹಾಗೆ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ನಾವರ ಗ್ರಾಮದ ಶ್ರಮಜೀವಿ ರೈತ ಕೊರಗು ಹೆಗ್ಡೆ ಮತ್ತು ಆದರ್ಶ ಮಾತೆ ಜಯವತಿ ದಂಪತಿಗಳ ಮುದ್ದಿನ ಮಗ ಈ ನಮ್ಮ ವಿಜಯಕುಮಾರ್ ಅವರು. ವಿಜಯಕುಮಾರ್ ಅವರಿಗೆ ಸ್ವರ್ಗಸ್ಥರಾದ ಸುಜಾತ ಎಂಬ ಅಕ್ಕ ಇದ್ದರು. ಅಣ್ಣ ವೀರೇಂದ್ರ ಕುಮಾರ್. ನಮ್ಮ ವಿಜಯಕುಮಾರ್ ಅವರು ಕಿರಿಮಗ ಎಂಬ ಸಲುಗೆಯ, ಮಮತೆಯ ಪ್ರೀತಿಗೆ ಪಾತ್ರರಾದವರು.
ವಿಜಯಕುಮಾರ್ ಕುಟುಂಬ ಆರ್ಥಿಕವಾಗಿ ಶ್ರೀಮಂತಿಕೆಯ ಕುಟುಂಬವಲ್ಲ. ಒಂದು ರೀತಿಯಲ್ಲಿ ಹೇಳುವುದಾದರೇ ನನ್ನ ಹಾಗೆ, ಅಂದರೆ ನಾವೆಲ್ಲ ಜೈನ ಧರ್ನಕ್ಕೆ ಸೇರಿದ ಹೆಮ್ಮೆಯ ಜೈನದಲಿತರೆನ್ನುವುದನ್ನು ಅತ್ಯಂತ ಅಭಿಮಾನದಿಂದ ಹೇಳಲು ನಾನ್ಯಾಕೆ ಹಿಂಜರಿಯಲಿ ಅಲ್ವೆ. ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ, ಗದ್ದೆ ಚಟುವಟಿಕೆಯನ್ನು ಮಾಡುವುದರ ಮೂಲಕ ಸಂಸಾರವನ್ನು ಸಂತೃಪ್ತಿಯಿಂದ ನಡೆಸಿದ ಧನ್ಯತೆ ಕೊರಗು ಹೆಗ್ಡೆಯವರಿಗಿದೆ.
ನಮ್ಮ ವಿಜಯಕುಮಾರ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಪಿಲ್ಯದಲ್ಲಿರುವ ಸರಕಾರಿ ಹಿ.ಪ್ರಾಥಮಿಕ ಶಾಲೆಯಲ್ಲಿ ಪಡೆದು, ಮುಂದೆ ಅಳದಂಗಡಿ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಮುಂದೆ ಓದಬೇಕೆಂಬ ಉತ್ಕಟ ಬಯಕೆ ಅವರಿಗಿತ್ತಾದರೂ ಬಡತನದ ವಕ್ರದೃಷ್ಟಿ ಅವರ ಮುಂದಿನ ಶಿಕ್ಷಣಕ್ಕೆ ಅಡ್ಡಿಯಾಯಿತು. ಹಾಗಾಗಿ ಕಾಲೇಜು ಮೆಟ್ಟಿಲೇರುವ ಅವರ ಕನಸು ಕೊನೆಗೂ ಈಡೇರಲೆ ಇಲ್ಲ.
ಬಾಲ್ಯದಲ್ಲೆ ಮಿಂಚಿದ್ದ ಬಾಲಕ:
ವಿಜಯಕುಮಾರ್ ಅವರು ತನ್ನ ಶಾಲಾ ದಿನಗಳಲ್ಲೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಮುಂದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಾಟಕ, ನೃತ್ಯ, ಛದ್ಮವೇಶಗಳಂತಹ ಕಾರ್ಯಕ್ರಮಗಳಲ್ಲಿ ಮಿಂಚಿದ ಸಾಧನೆ ಮಾಡಿ ಶಿಕ್ಷಕರ ಮನ ಗೆದ್ದಿರುವುದು ಇಲ್ಲಿ ಉಲ್ಲೇಖನೀಯ.
ಮುಂದೆ ಓದಲು ಆಗಲಿಲ್ಲ. ಹಾಗಾದ್ರೆ ಮುಂದೇನು ಮಾಡಲಿ ಎಂಬ ಯೋಚನೆಯಿಲ್ಲದ ಆ ಬಾಲಕ ಮೊದಲು ಇಳಿದಿದ್ದು ತನ್ನ ಬಾಲ್ಯದಲ್ಲೆ ರೂಢಿಗತ ಮಡಿಕೊಂಡು ಬಂದಿದ್ದ ಹೊಲ, ಗದ್ದೆಯ ಕೆಲಸವನ್ನು ಮಾಡಲು. ಹೀಗೆ ಮುಂದುವರಿದ ಅವರ ಕೃಷಿ ಬದುಕು ಕಾಲಕ್ರಮೇಣ ಅದರ ಜೊತೆ ಜೊತೆಯಲ್ಲಿ ಹೈನುಗಾರಿಕೆಯನ್ನು ಮಾಡುವಂತಾಯಿತು. ಆದರೂ ದುಡಿಮ ಜಾಸ್ತಿ ಗಳಿಕೆ ಕಡಿಮೆ ಎಂಬಂತೆ ಬದುಕು ಕಂಡವರು ನಮ್ಮ ವಿಜಯಕುಮಾರ್ ಅವರು.
ಸ್ವ ಉದ್ಯೋಗದ ಕಡೆಗೆ ಹೆಜ್ಜೆಯಿಟ್ಟ ವಿಜಯಣ್ಣ:
ದಿನ ಉರುಳಿದಂತೆ ಕೃಷಿ ಚಟುವಟಿಕೆಯ ಜೊತೆಗೆ ಉಳಿದ ಸಮಯದಲ್ಲಿ ಇನ್ನೇನಾದರೂ ಮಾಡಬೇಕೆಂದು ಬಯಸಿ, ಮೊದಲೆ ತನಗೆ ಅರಿವಿಲ್ಲದಂತೆ ಬಂದಿದ್ದ ಬ್ಯಾನರ್ ಕಲೆಯನ್ನು ಮುಂದುವರಿಸಬೇಕೆಂದು ಚಿಂತಿಸಿ, ಅಳದಂಗಡಿಯಲ್ಲೊಂದು ಕಂಪ್ಯೂಟರ್ ಅಂಗಡಿಯನ್ನು ಪ್ರಾರಂಭಿಸಿದರು. ಎಲ್ಲಿಯೂ ಕಂಪ್ಯೂಟರ್ ತರಬೇತಿ ಪಡೆಯದ ಚಿಗುರು ಮೀಸೆಯ ಯುವಕ ವಿಜಯಕುಮಾರ್ ಸ್ವಂತ ಕಂಪ್ಯೂಟರ್ ಖರೀದಿಸಿ ಕಂಪ್ಯೂಟರ್ ಕಲಿತಿರುವುದು ಅವರ ಸತತ ಪ್ರಯತ್ನ ಮತ್ತು ಅವರ ಕಾಳಜಿಯನ್ನು ಎತ್ತಿ ತೋರಿಸುತ್ತದೆ.
ಹೀಗೆ ಮುಂದುವರಿದ ಅವರ ಸ್ವ ಉದ್ಯೋಗ ತಕ್ಕಮಟ್ಟಿನ ಯಶಸ್ಸನ್ನು ಕಂಡುಕೊಂಡಿತು. ಬರಣಿಗೆಯ ಹುಚ್ಚನ್ನು ಮೈಗೂಡಿಸಿಕೊಂಡಿದ್ದ ವಿಜಯಕುಮಾರ್ ಅವರು ಪತ್ರಕರ್ತರಾಗಿಯೂ ಪತ್ರಿಕಾ ರಂಗಕ್ಕೆ ಇಳಿದರು.
ಹೆಮ್ಮೆಯ ಪತ್ರಕರ್ತರಾಗಿ ವಿಜಯಕುಮಾರ್ :
ಆರಂಭದಲ್ಲಿ ಸುದ್ದಿ ಬಿಡುಗಡೆ, ಹೊಸದಿಗಂತ, ಸಂಯುಕ್ತ ಕರ್ನಾಟಕ, ಜನಬಿಂಬ ಮೊದಲಾದ ಪತ್ರಿಕೆಗಳಿಗೆ ವರದಿಗಾರರಾಗಿ ಸೇವೆಯನ್ನು ಸಲ್ಲಿಸಿದ ವಿಜಯಕುಮಾರ್ ಅವರು ದಿನ ಉರುಳಿದಂತೆ ವಾರದ ಡಂಗುರ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸಿದರು. ಆನಂತರ ಚೇತನ ವಾರಪತ್ರಿಕೆಯ ಉಪ ಸಂಪಾದಕರಾಗಿ, ವಿಜಯವಾಹಿನಿ ಪತ್ರಿಕೆಯ ಸಂಪಾದಕರಾಗಿ, ಸುದ್ದಿ ದಿಗಂತ ಪತ್ರಿಕೆಯ ಉಪ ಸಂಪಾದಕರಾಗಿ ಸೇವೆಯನ್ನು ಸಲ್ಲಿಸಿದ ಧನ್ಯತೆ ನಮ್ಮ ವಿಜಯಕುಮಾರ್ ಅವರಿಗಿದೆ.
ಪತ್ರಕರ್ತರಾಗಿ ತನ್ನ ನೈಜ ವಾಸ್ತವ ವರದಿಗಳ ಮೂಲಕ ಸಮಾಜದ ಅಂಕು ಡೊಂಕುಗಳ ಬಗ್ಗೆ ಬೆಳಕು ಚೆಲ್ಲಿದ ಘನ ಕಾರ್ಯವನ್ನು ಮಾಡಿದ ಶ್ರೇಯಸ್ಸು ವಿಜಯಕುಮಾರ್ ಸಂಪಾದಿಸಿಕೊಂಡಿದ್ದಾರೆ. ತನ್ನ ಹರಿತವಾದ ಬರವಣಿಗೆಯ ಮೂಲಕ ಅನ್ಯಾಯಗಳನ್ನು ದಿಟ್ಟವಾಗಿ ಎದುರಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿರುವ ವಿಜಯಕುಮಾರ್ ಅವರ ವರದಿಗಾರಿಕೆಯನ್ನು ತಾಲೂಕಿನ ಜನತೆ ಎಂದು ಮರೆಯಲಾರರು.
ಅಪೂರ್ವ ಸಂಘಟಕ ನಮ್ಮ ವಿಜಯಕುಮಾರ್ :
ವಿಜಯಕುಮಾರ್ ಅಂದ್ರೆ ಒಬ್ಬ ಅಸಾಮಾನ್ಯ ಮತ್ತು ಅಪೂರ್ವ ಸಂಘಟಕ ಎಂದೆ ಕರೆಯಬಹುದಾದ ಹೆಸರು ಕಣ್ರೀ. ಕೆಲಸದ ಒತ್ತಡದ ನಡುವೆಯು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ತನ್ನನ್ನು ತಾನು ತೊಡಗಿಸಿಕೊಂಡಿರುವ ವಿಜಯಕುಮಾರ್ ಅವರ ಸಮಾಜಮುಖಿ ಕಾರ್ಯವನ್ನು ಕೊಂಡಾಡಲೆಬೇಕು. ಬಹಳ ವರ್ಷಗಳ ಹಿಂದೆ ನಡೆದ ನಾವರ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿಯಾಗಿ ದೇವಸ್ಥಾನದ ಕಾರ್ಯಚಟುವಟಿಕೆಗಳನ್ನು ಸುಗಮ ರೀತಿಯಲ್ಲಿ ಮುಂದುವರೆಸಿಕೊಂಡು ಊರ ಹಿರಿಯರ ವಾತ್ಸಲ್ಯಕ್ಕೆ ಪಾತ್ರರಾದವರು ಇದೇ ನಮ್ಮ ವಿಜಯಕುಮಾರ್ ಅವರು. ಕಳೆದ 15 ವರ್ಷಗಳ ಹಿಂದೆ ಅವರ ಹುಟ್ಟೂರು ನಾವರ ಗ್ರಾಮದಲ್ಲಿ ಶಾರದೋತ್ಸವ ಸಮಿತಿಯನ್ನು ಪ್ರಾರಂಭಿಸಿ ಅದರ ಪ್ರಧಾನ ಸಂಚಾಲಕರಾಗಿ, ಊರ ಜನರನ್ನು ಒಂದುಗೂಡಿಸಿ ಶಾರದೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳುವುದರ ಮೂಲಕ ನಾವರ ಜನರ ಪ್ರಾಣವಾಗಿದ್ದಾರೆ.
ಇದರ ಜೊತೆ ಜೊತೆಯಲ್ಲೆ ನಾವರ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾಗಿ, ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರಾಗಿ, ಅಭಿನಯ ಯುವಕ ಮಂಡಳದ ಸಂಸ್ಥಾಪಕ ಅಧ್ಯಕ್ಷರಾಗಿ, ಆಳ್ವಾಸ್ ನುಡಿಸಿರಿಯ ಅಳದಂಗಡಿ ಘಟಕದ ಕಾರ್ಯದರ್ಶಿಯಾಗಿ, ಲಯನ್ಸ್ ಕ್ಲಬಿನ ಸದಸ್ಯರಾಗಿ, ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಹೀಗೆ ಇನ್ನೂ ಅನೇಕ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ಸಮರ್ಪಣಾಭಾವದಿಂದ ತೊಡಗಿಸಿಕೊಂಡ ಸಂಭ್ರಮ ವಿಜಯಕುಮಾರ್ ಅವರದ್ದಾಗಿದೆ.
ಆಟೋ ರಿಕ್ಷಾ ಚಾಲಕರ/ಮಾಲಕರ ಸಂಘದ ಗೌರವಾಧ್ಯಕ್ಷರಾಗಿ ವಿಜಯಕುಮಾರ್:
ಅಳದಂಗಡಿಯ ಶ್ರಮಜೀವಿಗಳಾದ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷರಾಗಿ ಕಳೆದ 4 ವರ್ಷಗಳಿಂದ ಸಂಘದ ಮಹೋನ್ನತ ಪ್ರಗತಿಗೆ ಶಕ್ತಿಮೀರಿ ಶ್ರಮಿಸುವುದರ ಮೂಲಕ ನನ್ನೆಲ್ಲ ಆಟೋ ಸಹೋದರರ ನೆಚ್ಚಿನ ದೊಡ್ಡಣ್ಣನಾಗಿ ವಿಜಯಕುಮಾರ್ ಅವರು ಅವರೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಪ್ರತಿಭೆಗಳಿಗೆ ಅರಮನೆಯಾದ ಆಮಂತ್ರಣ ಪರಿವಾರ:
ತಾನಷ್ಟೆ ಬೆಳೆದರೇ ಸಾಲದು, ಬೆಳೆಯುವ ಪ್ರತಿಭೆಗಳನ್ನು ಹುಡುಕಿ, ಆ ಪ್ರತಿಭೆಗಳಿಗೆ ಸಂಪೂರ್ಣ ಸಹಕಾರವನ್ನು ನೀಡಿ, ಅವುಗಳನ್ನು ಸಮಾಜದ ಆಸ್ತಿಯನ್ನಾಗಿಸಬೇಕೆಂಬ ಮಹತ್ವದ ಸಂಕಲ್ವವನ್ನು ತೊಟ್ಟ ವಿಜಯಕುಮಾರ್ ಅವರು ಪ್ರತಿಭೆಗಳ ಲೋಕನ್ನೆ ಸೃಷ್ಟಿಸಿ ರಾಜ್ಯಮಟ್ಟದವರೆಗೆ ಗಮನ ಸೆಳೆದ ಆಮಂತ್ರಣ ಪರಿವಾರ ಎಂಬ ನಿತ್ಯನೂತನವಾದ ಸಂಸ್ಥೆಯೊಂದನ್ನು ಪ್ರಾರಂಭಿಸಿ ಬೆಳ್ತಂಗಡಿ ತಾಲೂಕಿನ ಮಹತ್ವದ ಆಸ್ತಿಯಾಗಿದ್ದಾರೆಂಬುವುದನ್ನು ಹರ್ಷಿತ ಮನಸ್ಸಿನಿಂದ ಹೇಳಬಯಸುತ್ತೇನೆ.
ಸಾವಿರಕ್ಕೂ ಹೆಚ್ಚು ಕಲಾವಿದರುಗಳಿಗೆ ಸನ್ಮಾನ- ಇದು ಆಮಂತ್ರಣಕ್ಕೊಂದು ಹೆಮ್ಮೆ
ಆಮಂತ್ರಣ ಪರಿವಾರದ ಮೂಲಕ ಗೆಳೆಯರ, ಹಿತೈಷಿಗಳ ಸರ್ವ ಸಹಕಾರವನ್ನು ಪಡೆದು, ಎಲ್ಲರ ಒಪ್ಪಿಗೆ ಮತ್ತು ಅಪ್ಪುಗೆಯ ನಂತರವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ವಿಜಯಕುಮಾರ್ ಅವರು ಆಮಂತ್ರ್ರಣ ಪರಿವಾರದ ಮೂಲಕ ಈವರೇಗೆ ಸಾವಿರಕ್ಕೂ ಮಿಕ್ಕಿ ಯುವ ಕಲಾವಿದರುಗಳನ್ನು, ಯುವ ಪ್ರತಿಭೆಗಳನ್ನು ಗುರುತಿಸಿ, ಸನ್ಮಾನಿಸಿ, ಅವರ ಕಲಾಸೇವೆಗೆ ಜೀವಶಕ್ತಿಯನ್ನು ತುಂಬುವ ದಿವ್ಯಕಾರ್ಯವನ್ನು ಮಾಡಿದ ಹೆಗ್ಗಳಿಕೆ ನಮ್ಮ ವಿಜಯಕುಮಾರ್ ಅವರಿಗಿದೆ.
ರಾಜ್ಯಮಟ್ಟದ ಆಮಂತ್ರಣ ಪರಿವಾರ ಆವಾರ್ಡಿಗೆ ಮೂರು ವರ್ಷದ ಸಂಭ್ರಮ:
ಆಮಂತ್ರಣ ಪರಿವಾರದ ಮೂಲಕ ಕಳೆದ ಮೂರು ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುವ ರಾಜ್ಯಮಟ್ಟದ ಆಮಂತ್ರಣ ಪರಿವಾರ ಆವಾರ್ಡ್ ಎಂಬ ಅದ್ದೂರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವ ವಿಜಯಕುಮಾರ್ ಅವರು ನಿಜಕ್ಕೂ ಒಬ್ಬ ಅಸಾಮಾನ್ಯ ವ್ಯಕ್ತಿತ್ವದ ಪರಿಪೂರ್ಣ ಕಲಾಪುರುಷ ಎಂದೆ ಹೇಳಬಹುದು. ಆಮಂತ್ರಣ ಪರಿವಾರದ ವರ್ಣರಂಜಿತ ಕಾರ್ಯಕ್ರಮಗಳನ್ನು ನೋಡುವುದೆ ಒಂದು ಭಾಗ್ಯ.
ಮಾತುಗಾರ ವಿಜಯಕುಮಾರ್ :
ನಮ್ಮ ವಿಜಯಕುಮಾರ್ ಅವರೊಬ್ಬ ಪ್ರಚಂಡ ವಾಗ್ಮಿಯಾಗಿ ಗಮನ ಸೆಳೆದಿದ್ದಾರೆ. ತಾಲೂಕಿನ ಬಹುತೇಕ ಕಾರ್ಯಕ್ರಮಗಳ ನಿರೂಪಣೆಯ ಜವಾಬ್ದಾರಿ ನಮ್ಮ ವಿಜಯಕುಮಾರ್ ಅವರಿಗೆ ಮಾಮುಲಿ. ಈವರೇಗೆ ಸಾವಿರಕ್ಕೂ ಮಿಕ್ಕಿ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿ ಕಾರ್ಯಕ್ರಮಗಳ ಶೋಭೆಯನ್ನು ಹೆಚ್ಚಿಸಿದ್ದಾರೆ.
ಮಕ್ಕಳೊಂದಿಗೆ ಮಕ್ಕಳಂತಿರುವ ವಿಜಯಣ್ಣ:
ವಿಜಯಕುಮಾರ್ ಅವರನ್ನು ಎಲ್ಲರು ಇಷ್ಟಪಡುತ್ತಾರೆ. ಪುಟಾಣಿ ಮಕ್ಕಳಂತೂ ಅತ್ಯಂತ ಹೆಚ್ಚು ಮುದ್ದಿಸುತ್ತಾರೆ. ಮಕ್ಕಳ ಜೊತೆ ಮಕ್ಕಳಂತೆ, ಮಕ್ಕಳ ಇಷ್ಟಕ್ಕೆ ಅನುಗುಣವಾಗಿ ಅವರ ಆಸಕ್ತಿಗೆ ಪ್ರೋತ್ಸಾಹಿಸುವ ವಿಜಯಕುಮಾರ್ ಅವರ ಹೃದಯಗುಣವಂತಿಕೆಯೆ ಮಕ್ಕಳಿಗೆ ಬಹು ಇಷ್ಟವಾಗಲು ಕಾರಣ.
ಅರಸರ ಆಶೀರ್ವಾದವೆ ಶ್ರೀರಕ್ಷೆ ಎನ್ನುವ ವಿಜಯಕುಮಾರ್:
ಅರಸ ಮನೆತನದ ಭವ್ಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಧರ್ಮಶೃದ್ದೆಯಿಂದ ಅರುವ ಅರಮನೆಯ ಅರಸರಾದ ಪೂಜ್ಯ ಡಾ: ತಿಮ್ಮಣ್ಣರಸರಾದ ಡಾ: ಪದ್ಮಪ್ರಸಾದ ಅಜಿಲರವರ ದಿವ್ಯ ಆಶೀರ್ವಾದವೆ ತನ್ನ ಸಾಧನೆಗೆ ಮತ್ತು ಕಲಾಸೇವೆಗೆ ಶ್ರೀರಕ್ಷೆ ಎನ್ನುವ ವಿಜಯಕುಮಾರ್ ಅವರು ಅರಸರ ಎಲ್ಲ ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿ ಭಾಗವಹಿಸಿ ಸೇವೆ ಮಾಡುತ್ತಿದ್ದಾರೆ.
ಹರೀಶ ಪೂಂಜಾ ಅವರಂದಂತೆ ಸಾಂಸ್ಕೃತಿಕ ರಾಯಭಾರಿ :
ಕಳೆದ ಕೆಲ ತಿಂಗಳ ಹಿಂದೆ ಶಾಸಕ ಹರೀಶ ಪೂಂಜಾ ರವರು ಅಳದಂಗಡಿ ಅರಮನೆಗೆ ಸಾಂಸ್ಕೃತಿಕ ರಾಯಭಾರಿ ಅಂತಾ ಯಾರನ್ನಾದರೂ ನೇಮಕ ಮಾಡುವುದಾದರೇ ಅದಕ್ಕೆ ಸೂಕ್ತ ವ್ಯಕ್ತಿ ನಮ್ಮ ವಿಜಯಕುಮಾರ್ ಎಂದಿದ್ದರು. ಈ ಮಾತು ಅಕ್ಷರಶ: ಸತ್ಯ. ನಮ್ಮ ವಿಜಯಕುಮಾರ್ ಅವರು ಒಬ್ಬ ಸಮರ್ಥ ಸಂಘಟಕರಾಗಿ, ಅತ್ಯುತ್ತಮ ಸಾಂಸ್ಕೃತಿಕ ರಾಯಭಾರಿಯಾಗಿ ಗಮನಾರ್ಹ ಕಾರ್ಯವನ್ನು ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿಯೆ ಶಾಸಕ ಹರೀಶ ಪೂಂಜಾ ರವರಿಗೆ ವಿಜಯಕುಮಾರ್ ಅವರ ಮೇಲೆ ಎಲ್ಲಿಲ್ಲದ ಪ್ರೀತಿ, ಮಮತೆಯಿದೆ.
ನೋವನ್ನು ನುಂಗಿ ಎಲ್ಲರನ್ನು ನಗಿಸುವ ಕಲಾವಿದ:
ತನ್ನೆಲ್ಲಾ ನೋವನ್ನು ನುಂಗಿಕೊಂಡು, ಇನ್ನೊಬ್ಬರನ್ನು ನಗಿಸುವ ವಿಜಯಕುಮಾರ್ ಅವರು ಅತ್ಯುತ್ತಮ ಕಲಾವಿದರು ಹೌದು. ಈವರೇಗೆ ನಾಲ್ಕು ನಾಟಕಗಳನ್ನು ರಚಿಸಿರುವ ವಿಜಯಕುಮಾರ್ ಅವರು ಸಾಕಷ್ಟು ನಾಟಕಗಳಲ್ಲಿ ಅಭಿನಮಯಿಸಿ ಅತ್ಯುತ್ತಮ ನಾಟಕ ಕಲಾವಿದರಾಗಿ ಗಮನ ಸೆಳೆಯುವ ಪ್ರದರ್ಶನವನ್ನು ನೀಡಿದ್ದಾರೆ. ಜೀವನದಲ್ಲಿ ಹಲವಾರು ಕಷ್ಟ, ನಷ್ಟಗಳನ್ನು ಅನುಭವಿಸಿದ್ದರೂ ತನ್ನ ನೋವನ್ನು ತಾನೆ ನುಂಗಿಕೊಂಡು, ಇನ್ನೊಬ್ಬರಿಗಾಗಿ ಜೀವನ ಸವೆಸುವ ವಿಜಯಕುಮಾರ್ ಅವರ ಸಾಧನೆ, ಪರಿಶ್ರಮವನ್ನು ಗಮನಿಸಿ ರಾಜ್ಯೋತ್ಸವದಂತಹ ಮಹೋನ್ನತ ಪ್ರಶಸ್ತಿಯನ್ನು ಒದಗಿಸಿಕೊಟ್ಟು ತಾಲೂಕಿನ ಸಾಂಸ್ಕೃತಿಕ ಲೋಕಕ್ಕೆ ಹೊಸಶಕ್ತಿಯನ್ನು ನೀಡಬೇಕೆಂಬುವುದೆ ನನ್ನಯ ಆಗ್ರಹವಾಗಿದೆ.
ಅವಕಾಶ, ಅರ್ಹತೆ ಎಲ್ಲವೂ ಇದ್ದರೂ ಅನೇಕ ಬಾರಿ ಅದೃಷ್ಟ ಅವರಿಗೆ ಕೈಕೊಟ್ಟಿತ್ತಾದರೂ ಅದಕ್ಕೆಂದೂ ಎದೆಗುಂದದೇ ಸಾಧಿಸಿ, ಮೇಲೆದ್ದು ಬರುವೆನೆಂದು ಪಣತೊಟ್ಟು ಯಶಸ್ಸಿನೆಡೆಗೆ ಶರವೇಗದ ಹೆಜ್ಜೆಯನ್ನಿಟ್ಟಿರುವ ವಿಜಯಕುಮಾರ್ ಅವರ ಜೀವನನಡೆ, ಸಾಂಸ್ಕೃತಿಕ ನಡೆ ಅನುಕರಣೀಯ. ವಿಜಯಕುಮಾರ್ ಅವರ ಅನುಪಮ ಸಾಧನೆಯನ್ನು ಪರಿಗಣಿಸಿ ನಾಡಿನ ವಿವಿಧ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.
ಜೀವನದಲ್ಲಿ ಹಲವಾರು ಅಡೆ ತಡೆಗಳನ್ನು ದಾಟಿ, ಕಲೆ, ಸಂಸ್ಕೃತಿ, ಪತ್ರಿಕೆ ಹೀಗೆ ನಾನಾ ಕ್ಷೇತ್ರಗಳಲ್ಲಿ ದಣಿವರಿಯದೆ ಶ್ರಮಿಸುವ ಕಾಯಕಯೋಗಿ ವಿಜಯಕುಮಾರ್ ಅವರ ಸಾಧನೆಗೆ ಅವರಪ್ಪ, ಅವರಮ್ಮನ ಆಶೀರ್ವಾದ, ಅಣ್ಣ ವೀರೇಂದ್ರಕುಮಾರ್ ಅವರ ಮಾರ್ಗದರ್ಶನ, ಬಂಧುಗಳ, ಗೆಳೆಯರ, ಹಿರಿಯರ ಪ್ರೋತ್ಸಾಹ, ಸಹಕಾರವು ಪ್ರಮುಖ ಕಾರಣ.
ಎಲ್ಲರ ಮನಗೆದ್ದ ಸಾಹಸಿ, ಹೃದಯಸಾಮ್ರಾಟ್ ವಿಜಯಕುಮಾರ್ ಅವರಿಗೆ ಮಗದೊಮ್ಮೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮವ
ಸಂದೇಶ್.ಎಸ್.ಜೈನ್