Wednesday, December 12, 2018

ದಾಂಡೇಲಿಯ ಜ್ಞಾನದೇಗುಲಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ
ಸಾಧನೆಯ ಶಿಖರವನ್ನೇರಿದ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆ
ಸುವರ್ಣ ಸಂಭ್ರಮ ಸಡಗರದಲ್ಲಿ ದಾಂಡೇಲಿಯ ಶೈಕ್ಷಣಿಕ ಕ್ಷೇತ್ರಕ್ಕೆ ಅಗ್ರಣೀಯ ಕೊಡುಗೆ ನೀಡಿದ ಸೆಂಟ್ ಮೈಕಲ್ ಕಾನ್ವೆಂಟ್

ಬಹಳ ಹೆಮ್ಮೆ ಮತ್ತು ಅಭಿಮಾನದಿಂದ ಇಂದು ದಾಂಡೇಲಿಯ ಜ್ಞಾನದೇಗುಲದ ಬಗ್ಗೆ ಗೌರವದಿಂದ ಬರೆಯಲು ಹೊರಟಿದ್ದೇನೆ.  ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಭಾಗ್ಯದ ಬಾಗಿಲನ್ನು ತೆರೆದು ನಮ್ಮೂರಿನ ಶೈಕ್ಷಣಿಕ ಕ್ಷೇತ್ರದಲ್ಲಿ ಮಹೋನ್ನತ ಮೈಲಿಗಲ್ಲನ್ನು ಸಾಧಿಸಿದ ಅಪರೂಪದ ಅಪೂರ್ವ, ಸುಸಂಸ್ಕೃತ ಹಾಗೂ ಉತ್ಕೃಷ್ಟ ಗುಣಮಟ್ಟದ ಹೆಮ್ಮೆಯ ಸೊಬಗಿನ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆ. ಈ ವರ್ಷ ಸುವರ್ಣ ಮಹೋತ್ಸವದ ಸಂಭ್ರಮ, ಸಡಗರದಲ್ಲಿ ವಿಜೃಂಭಿಸುತ್ತಿದೆ. ಈ ವಿಜೃಂಭಣೆಯನ್ನು ಸ್ಮರಿಸುವ ಮತ್ತು ಈ ಶಾಲೆಯ ಸಾರ್ಥಕ ಶೈಕ್ಷಣಿಕ ಸಾಧನೆಗೆ ಗೌರವಾಭಿಮಾನದ ಅಭಿವಂದನೆಗಳನ್ನು ಸಲ್ಲಿಸಿ, ಈ ಜ್ಞಾನ ಮಂದಿರ ಬೆಳೆದು ಬಂದ ಹಾದಿಯನ್ನು ವಿವರಿಸಲು ಅಣಿಯಾಗಿದ್ದೇನೆ.

ಒಂದು ಊರಿನ ಪ್ರಗತಿಯಲ್ಲಿ ಆ ಊರಿನ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ದಾಂಡೇಲಿ ನಗರದ ಅಭಿವೃದ್ಧಿಯಲ್ಲಿ ನಮ್ಮ ಹಿರಿಮೆ, ಗರಿಮೆಯ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆಯ ಕೊಡುಗೆ ಅನನ್ಯವಾಗಿದೆ. ಈ ಕಾರಣಕ್ಕಾಗಿ ಸಮಸ್ತ ದಾಂಡೇಲಿಗರ ಪರವಾಗಿ ಶಾಲೆಯ ಆಡಳಿತ ಮಂಡಳಿಗೆ ಮತ್ತು ಜ್ಞಾನದಾಸೋಹವನ್ನು ಉಣಬಡಿಸುವ ಗುರುವರ್ಯರುಗಳಿಗೆ ಅನಂತ ಅನಂತ ಕೃತಜ್ಞತೆಗಳನ್ನು ಸಲ್ಲಿಸಿಯೆ ಮುಂದಿನದ್ದು ವಿವರಿಸಲು ಹರ್ಷಿತನಾಗಿದ್ದೇನೆ.

ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಸೌಂದರ್ಯಗಳಿಂದ ಕಂಗೊಳಿಸುವ ಕೈಗಾರಿಕೆ ನಗರಿ ಎಂಬ ಗೌರವದ ಶ್ರೇಯಸ್ಸಿಗೆ ಹಾಗೂ ಪ್ರವಾಸೋದ್ಯಮ ನಗರಿ ಎಂದು ವಿಶ್ವ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದ ಅನೇಕತೆಯಲ್ಲಿ ಏಕತೆಯನ್ನು ಸಾರುವ ಮಿನಿ ಇಂಡಿಯಾ ಎಂದೆ ಕರೆಸಿಕೊಳ್ಳುವ ಶಾಂತಿಯ ನಗರ, ಕರುಣಾಮಯಿ ನಾಗರೀಕ ಸಮಾಜವನ್ನು ಹೊಂದಿದ ವಿಶ್ವಪ್ರಿಯ ದಾಂಡೇಲಿ ನಗರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬೆಳೆದು ನಿಂತ ಬಹುದೊಡ್ಡ ಆಲದ ಮರ ಈ ನಮ್ಮ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆ. ಈ ಶಾಲೆ ಪ್ರಾರಂಭವಾಗಿ ಈ ವರ್ಷ 50 ನೇ ವರ್ಷಾಚರಣೆಯ ತವಕದಲ್ಲಿದೆ.

ಈ ನಿಟ್ಟಿನಲ್ಲಿ 50 ವರ್ಷಗಳ ಸಾರ್ಥಕ ಶೈಕ್ಷಣಿಕ ಸೇವೆಯನ್ನು ಸ್ಮರಣೀಯವಾಗಿಸಬೇಕೆಂಬ ಮಹತ್ವದ ಸಂಕಲ್ಪದೊಂದಿಗೆ ಇದೀಗ ಡಿಸೆಂಬರ್ :15 ರಂದು ಸುವರ್ಣ ಮಹೋತ್ಸವ ಎಂಬ ಅವಿಸ್ಮರಣೀಯ ಕಾರ್ಯಕ್ರಮವನ್ನು ನಡೆಸಲು ಸಕಲ ರೀತಿಯಲ್ಲಿ ಸನ್ನದ್ದಗೊಂಡಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಕ್ರಿಯೆಟಿವ್ ಡಾಕ್ಟರ್ಸ್ ಗಳನ್ನು, ಇಂಜೀನಿಯರ್ಸ್ ಗಳನ್ನು ಹಾಗೂ ದೇಶಕ್ಕೆ ಪ್ರಖ್ಯಾತ ಅಧಿಕಾರಿಗಳನ್ನು, ವಕೀಲರುಗಳನ್ನು ನೀಡಿದ ಸರ್ವಮಾನ್ಯ ಗೌರವವನ್ನು ಹೊಂದಿದ ಈ ಶಾಲೆಯ ಶೈಕ್ಷಣಿಕ ಸಾಧನೆಯನ್ನು ಅಷ್ಟು ಸಲೀಸಾಗಿ ವಿವರಿಸುವುದು ಕಷ್ಟದ ಮಾತೆ. ಈ ಶಾಲೆಯ ಸಾಧನೆಯ ಹಿಂದೆ ಸಾರ್ಥಕ ಶ್ರಮವಿದೆ. ಆ ಶ್ರಮದ ಫಲದಿಂದ ಯಶಸ್ಸಿನ ವರಪ್ರಸಾದ ಈ ಶಾಲೆಗೆ ಸದಾ ಸಿಗುತ್ತಿರುವುದು ನಮ್ಮೂರಿನ ಜನತೆಗೆ ದೊರೆತ ಬಹುದೊಡ್ಡ ಭಾಗ್ಯ ಎಂದೆ ಹೇಳಬಹುದು.

ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಂಡ ರೆವರೆಂಡ್ ಫಾದರ್: ಜೋಸೆಫ್ ಕೊಯಿಮಾ ಅವರು ದಾಂಡೇಲಿಗೆ ಬಂದು ದಾಂಡೇಲಿಯ ಸೆಂಟ್ ಮೈಕಲ್ ಹೈಯರ್ ಪ್ರೈಮರಿ ಸ್ಕೂಲಿಗೆ ನಂತರವಾಗಿ ಅಗತ್ಯ ಬೇಕಾದ ಹೈಸ್ಕೂಲನ್ನು ಪ್ರಾರಂಭಿಸುವ ಚಿಂತನೆ ನಡೆಸಿದರು. ಅವರ ಸತತ ಪ್ರಯತ್ನ ಹಾಗೂ ಕ್ರಿಯಾಶೀಲ ವೈಖರಿಗೆ ಫಲಶೃತಿ ಎಂಬಂತೆ ಸ್ವತಂತ್ರವಾಗಿ ದಾಂಡೇಲಿಯ ಅಂಬೇವಾಡಿಯಲ್ಲಿ ದಿನಾಂಕ: 14.06.1969 ರಂದು ಜನ್ಮತಾಳಿದ ವಿದ್ಯಾದೇಗುಲವೆ ಈ ನಮ್ಮ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆ. ಈ ಶಾಲೆಯ ಸಂಸ್ಥಾಪಕ ಮುಖ್ಯೋಪಾಧ್ಯಾಯರಾಗಿ ರೆವರೆಂಡ್ ಫಾದರ್: ಜೋಸೆಫ್ ಕೊಯಿಮಾ ಅವರು ಸಲ್ಲಿಸಿದ ಕೊಡುಗೆ, ಸವೆಸಿದ ಶ್ರಮ, ತನ್ನನ್ನು ತಾನು ಸಮರ್ಪಣಾಭಾವದಿಂದ ತೊಡಗಿಸಿಕೊಂಡ ರೀತಿ ಅನನ್ಯ ಮತ್ತು ಅತ್ಯದ್ಭುತ. ಅವರ ಶ್ರಮವರಿಯದ ಸಾಧನೆಯ ಫಲವೆಂಬಂತೆ ಈ ಶಾಲೆ ಇಂದು ಸುವರ್ಣ ಮಹೋತ್ಸವದ ಸಡಗರದಲ್ಲಿದೆ.
Fr: KOIMMA
ಒಂದು ಸಂಸ್ಥೆಯನ್ನು ಹುಟ್ಟು ಹಾಕಿ, ಅದಕ್ಕೆ ಸೂಕ್ತ ರೀತಿಯ ಆಯಾಮವನ್ನು ದೊರಕಿಸಿ ಭವಿಷ್ಯದ ಉನ್ನತಿಗೆ ಮುಂದಾಲೋಚನೆಯಿಟ್ಟು ಸಂಸ್ಥೆಯನ್ನು ಬೆಳೆಸಿ, ಮುನ್ನಡೆಸಿದ ರೆವರೆಂಡ್ ಫಾದರ್: ಜೋಸೆಫ್ ಕೊಯಿಮಾ ಅವರ ಸಾರ್ಥಕ ಶೈಕ್ಷಣಿಕ ಕೊಡುಗೆ ಮತ್ತು ಜೀವಮಾನ ಸಾಧನೆಗೆ ಸಮಸ್ತ ದಾಂಡೇಲಿ ಜನತೆಯ ಪರವಾಗಿ ಗೌರವಪೂರ್ವಕ ಅಭಿವಂದನೆಗಳು.

ಶಾಲೆಯನ್ನು ಗಗನದೆತ್ತರಕ್ಕೆ ಬೆಳೆಸಿದ ಬೆಥನಿ ಶಿಕ್ಷಣ ಸಂಸ್ಥೆ:
12 ವರ್ಷಗಳವರೆಗೆ ಯಶಸ್ವಿಯಾಗಿ ಶಾಲೆಯನ್ನು ಮುನ್ನಡೆಸಿದ ಬಳಿಕ ರೆವರೆಂಡ್ ಫಾದರ್: ಜೋಸೆಫ್ ಕೊಯಿಮಾ ಅವರು ಮಂಗಳೂರಿನಲ್ಲಿ ಸಹೋದರಿಯರು ಹುಟ್ಟು ಹಾಕಿದ ಬೆಥನಿ ಶಿಕ್ಷಣ ಸಂಸ್ಥೆಗೆ ಶಾಲೆಯ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಅಲ್ಲಿಂದ ಇಲ್ಲಿವರೆಗೆ ಹಾಗೂ ಮುಂದಿನ ತಲೆ ತಲೆಯಾಂತರವದವರೆಗೂ ಈ ಶಾಲೆಯನ್ನು ಮುನ್ನಡೆಸಿದ ಮತ್ತು ಮುನ್ನಡೆಸುವ ಮಹತ್ವದ ಕಾಯಕವನ್ನು ಬೆಥನಿ ಸಂಸ್ಥೆ ಹೆಮ್ಮೆ, ಅಭಿಮಾನದಿಂದ ಮಾಡುತ್ತಿದೆ, ಮುಂದೆಯೂ ಮಾಡಲಿದೆ. ರೆವರೆಂಡ್ ಫಾದರ್: ಜೋಸೆಫ್ ಕೊಯಿಮಾ ಅವರು ಹಾಕಿಕೊಟ್ಟ ಹೆಜ್ಜೆಗುರುತಿನೊಂದಿಗೆ ಶಾಲೆಯನ್ನು ಗಗನದೆತ್ತರಕ್ಕೆ ಬೆಳೆಸಿದ ಬೆಥನಿ ಶಿಕ್ಷಣ ಸಂಸ್ಥೆಯ ಕೊಡುಗೆ ಮತ್ತು ಶ್ರಮಸಾಧನೆ ಸ್ಮರಣೀಯ. ಈ ಕಾರಣಕ್ಕಾಗಿ ಬೆಥನಿ ಸಂಸ್ಥೆಯ ಆಡಳಿತ ಮಂಡಳಿಯನ್ನು ವಿಶೇಷವಾಗಿ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.


ಸಣ್ಣದಾಗಿ ಆರಂಭವಾದ ಮೂರ್ನಾಲ್ಕು ಕೊಠಡಿಗಳ ಶಾಲೆ ಅತ್ಯಲ್ಪ ಅವಧಿಯಲ್ಲೆ ತನ್ನ ಶೈಕ್ಷಣಿಕ ಸಾಧನೆಯ ಮೂಲಕ ಜಿಲ್ಲೆಯ ಮನೆ ಮಾತಾಗಿರುವುದು ಸುಳ್ಳಲ್ಲ. ಹೀಗೆ ಬೆಳೆದ ಈ ಶಾಲೆ ಹಂತ ಹಂತವಾಗಿ ಅವಶ್ಯ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡು, ಸುಸಜ್ಜಿತ ಶಾಲೆಯಾಗಿ ಹೆಮ್ಮೆರದ ರೀತಿಯಲ್ಲಿ ಬೆಳೆದು ನಿಂತಿದೆ.

1969 ರಿಂದ ಮೊದಲ್ಗೊಂಡು ಈವರೆಗೆ ಒಟ್ಟು 6100 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣವನ್ನು ಪಡೆದಿರುವುದು ಸಣ್ಣ ಸಾಧನೆಯಲ್ಲ. ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ಈ ಶಾಲೆಯಲ್ಲಿ ಎ ಮತ್ತು ಬಿ ಎಂದು ವರ್ಗಗಳ ಮೂಲಕ ವಿದ್ಯಾರ್ಥಿಗಳು ಜ್ಞಾನಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿರುವ ಈ ಶಾಲೆಯಲ್ಲಿ ಪ್ರಸಕ್ತ 8 ನೇ ತರಗತಿಯ ಎ ಮತ್ತು ಬಿ ವಿಭಾಗದಲ್ಲಿ 198, 9 ನೇ ತರಗತಿಯ ಎ ಮತ್ತು ಬಿ ವಿಭಾಗದಲ್ಲಿ 179 ಮತ್ತು  10 ನೇ ತರಗತಿಯ ಎ ಮತ್ತು ಬಿ ವಿಭಾಗದಲ್ಲಿ 164 ಹೀಗೆ ಒಟ್ಟು 541 ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಈ ಶಾಲೆಯಲ್ಲಿ ಕಲಿತ ಅದೇಷ್ಟೋ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದ ಕೀರ್ತಿ ಸಂಪಾದಿಸಿಕೊಂಡಿದ್ದಾರೆ. ಪ್ರಖ್ಯಾತ ದೇಶಗಳಾದ ಅಮೇರಿಕಾ, ಜರ್ಮನಿ, ಸ್ವಿಜರ್ ಲ್ಯಾಂಡ್, ಇಂಗ್ಲೆಂಡ್, ಸೌದಿ, ದುಬೈ, ಜಪಾನ್, ಮಲೇಷ್ಯಾ ಮೊದಲಾದ ದೇಶಗಳಲ್ಲಿ ಈ ಶಾಲೆಯ ಹಳೆ ವಿದ್ಯಾರ್ಥಿಗಳು ಉನ್ನತ ಉದ್ಯೋಗದಲ್ಲಿದ್ದಾರೆ. ಅಮೇರಿಕಾ, ದುಬೈಗಳಂತ ದೇಶಗಳಲ್ಲಿ ಅಲ್ಲಿಯ ದೇಶವೆ ಕೊಂಡಾಡುವ ವಿಶ್ವಮಟ್ಟದ ಜನಪ್ರಿಯ ವೈದ್ಯರುಗಳಾಗಿ ಈ ಶಾಲೆಯ ಹಳೆ ವಿದ್ಯಾರ್ತಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ದುಬೈಯಲ್ಲಿರುವ ನ್ಯೂರಾಲಿಜಿಸ್ಟ್ ಡಾ: ಫಾರೂಕ್ ಅವರು ಈ ಶಾಲೆಯ ಹೆಮ್ಮೆಯ ವಿದ್ಯಾರ್ಥಿ ಎಂದು ಹೇಳಲು ಅಭಿಮಾನವೆನಿಸುತ್ತಿದೆ. ವಿಶ್ವ ದರ್ಜೆಯ ಕಂಪೆನಿಗಳಲ್ಲಿ ಉನ್ನತ ಅಧಿಕಾರಿಗಳಾಗಿ, ವಿವಿಧ ವಿಭಾಗಳ ಇಂಜಿನಿಯರ್ ಆಗಿ, ದೇಶ ಸೇವೆ ಮಾಡುವ ಸೈನಿಕರಾಗಿ, ಪೊಲೀಸ್ ಅಧಿಕಾರಿಗಳಾಗಿ, ಸಹಾಯಕ ಆಯುಕ್ತರುಗಳಾಗಿ, ಉನ್ನತ ಸರಕಾರಿ ಅಧಿಕಾರಿಗಳಾಗಿ, ವಕೀಲರುಗಳಾಗಿ, ವೈದ್ಯರುಗಳಾಗಿ, ಮಾಸ್ತರರಾಗಿ, ಉಪನ್ಯಾಸಕರಾಗಿ, ಉದ್ಯಮಿಗಳಾಗಿ, ಸುಪ್ರಸಿದ್ದ ಬ್ಯುಜಿನೆಸ್ ಮ್ಯಾನ್ ಗಳಾಗಿ, ಖ್ಯಾತ ಗುತ್ತಿಗೆದಾರರಾಗಿ ಸಮಾಜದ ಗಣ್ಯ ವ್ಯಕ್ತಿಗಳಾಗಿ, ಜನಪ್ರತಿನಿಧಿಗಳಾಗಿ ಗಮನ ಸೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಾಗೂ ಜಗತ್ತಿನ ಬಹುತೇಕ ದೇಶಗಳಲ್ಲಿ ಈ ಶಾಲೆಯ ಹಳೆ ವಿದ್ಯಾರ್ಥಿಗಳಿರುವುದು ಈ ಶಾಲೆಯ ಶೈಕ್ಷಣಿಕ ಹಿರಿಮೆಗೆ ಸಂದ ಜಯವಲ್ಲದೇ ಇನ್ನೇನು ಅಲ್ಲವೆ. ಇವೆಲ್ಲವುಗಳೂ ಸಹ ನಮ್ಮ ಹೆಮ್ಮೆಯ ಜ್ಞಾನ ಮಂದಿರವಾದ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆಯ ಮಹೋನ್ನತ ಕೊಡುಗೆ ಎಂದೆ ಹೇಳಬಹುದು.

ಶಿಕ್ಷಣ ಸೇವೆಯ ಜೊತೆಗೆ ಶಾಲೆಯನ್ನು ಮುನ್ನಡೆಸಿದ ಮುಖ್ಯೋಪಾಧ್ಯಾಯರು ಮತ್ತು ಮುಖ್ಯೋಪಾಧ್ಯಯಿನಿಯವರುಗಳು :
ರೆವರೆಂಡ್ ಫಾದರ್: ಜೋಸೆಫ್ ಕೊಯಿಮಾ ಅವರು ಸಂಸ್ಥಾಪಕ ಮುಖ್ಯೋಪಾಧ್ಯಾಯರಾಗಿ 1969 ರಿಂದ 1982 ರವರೆಗೆ ಸೇವೆ ಸಲ್ಲಿಸಿದ್ದರು. ಅವರಾದ ಬಳಿಕ ಸಿಸ್ಟರ್ ಲೀನ್ಡಾ ಅವರು ಒಂದು ವರ್ಷಗಳವರೆಗೆ ಸೇವೆ, ಮುಂದೆ 2 ವರ್ಷಗಳ ಸೇವೆಯನ್ನು ಸಿಸ್ಟರ್ ರೋಸಿ, 1985 ರಿಂದ 1991 ರವರೆಗೆ ಮುಖ್ಯೋಪಾಧ್ಯಾಯಿನಿಯಾಗಿ ಸಿಸ್ಟರ್ ಪ್ರೇಮಾ, 1991 ರಿಂದ 1995 ರವರೆಗೆ ಸಿಸ್ಟರ್ ಪೆರಿನೆ, ಆನಂತರ ಸಿಸ್ಟರ್ ಇಮೆಲ್ 1995 ರಿಂದ 2002, 2002 ರಿಂದ 2005 ರವರೆಗೆ ಸಿಸ್ಟರ್ ಲೀನ್ಡಾ, 2005 ರಿಂದ 2006 ರವರೆಗೆ ಸಿಸ್ಟರ್ ರೋಮನ್, 2006 ರಿಂದ 2009 ರವರೆಗೆ ಸಿಸ್ಟರ್ ಬೈನಾ, 2009 ರಿಂದ 2015 ರವರೆಗೆ ಸಿಸ್ಟರ್ ಫಿಲೋಮಿನಾ ಅವರು ಸೇವೆ ಸಲ್ಲಿಸಿದ ಬಳಿಕ ಇದೀಗ 2015 ರಿಂದ ಸಿಸ್ಟರ್ ರೇನಿಟಾ ಅವರು ಮುಖ್ಯೋಪಾಧ್ಯಾಯಿನಿಯಾಗಿ ಮಾತೃ ವಾತ್ಸಲ್ಯದೊಂದಿಗೆ ಅನುಪ ಸೇವೆಗೈಯುತ್ತಿದ್ದಾರೆ.

ಶೈಕ್ಷಣಿಕ ಸಾಧನೆಯಲ್ಲಿ ರಾಜ್ಯದ ಗಮನ ಸೆಳೆದ ನಮ್ಮೂರ ಜ್ಞಾನದೇಗುಲ:
ಶೈಕ್ಷಣಿಕ ಸಾಧನೆಯಲ್ಲಿ ನಮ್ಮ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆ ರಾಜ್ಯಮಟ್ಟದಲ್ಲೆ ಗಮನ ಸೆಳೆದು ದಾಂಡೇಲಿಗೇಕೆ ಇಡೀ ಜಿಲ್ಲೆಗೆ ಕೀರ್ತಿ ಗೌರವವನ್ನು ತಂದುಕೊಟ್ಟಿದೆ. ರಾಜ್ಯಮಟ್ಟದಲ್ಲಿ ಹಲವಾರು Rankಗಳನ್ನು ತಂದುಕೊಟ್ಟ ಹಿರಿಮೆ-ಗರಿಮೆ ಈ ಶಾಲೆಗಿದೆ. ಕಳೆದ ವರ್ಷ ಅಂದರೆ 2017-2018 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ 5 Rankಗಳನ್ನು ತಂದುಕೊಟ್ಟ ಶ್ರೇಯಸ್ಸು ಸೆಂಟ್ ಮೈಕಲ್ ಶಾಲೆಗಿದೆ.

ಪಾಠದಲ್ಲಿಯೂ ಮುಂದು-ಕ್ರೀಡೆಯಲ್ಲಿಯೂ ಮುಂದು:


ಪಾಠದಲ್ಲಿಯೂ ನಮ್ಮ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆ ಅಗ್ರಣೀಯ ಸ್ಥಾನದಲ್ಲಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಖಡವಾರು ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಶೇ: ನೂರಕ್ಕೆ ನೂರರಷ್ಟು ಸಾಧನೆ ಮಾಡಿ ರಾಜ್ಯದ ಜನತೆಯ ಗಮನ ದಾಂಡೇಲಿಯತ್ತ ಸೆಳೆದಿರುವ ಈ ಶಾಲೆ ಪಾಠದ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲಿ ಮುಂದಿದೆ. ಈ ಶಾಲೆಯ ವಿದ್ಯಾರ್ತಿಗಳು ವಿವಿಧ ಕ್ರೀಡೆಗಳ ಮೂಲಕ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಅಮೋಘ ಪ್ರದರ್ಶನವನ್ನು ನೀಡಿ ದಾಂಡೇಲಿಗೆ ಮಹತ್ತರ ಆಯಾಮವನ್ನು ತಂದುಕೊಟ್ಟಿದ್ದಾರೆ. ಇದಕ್ಕೆ ಕಾರಣ ಈ ಶಾಲೆಯ ಶ್ರಮ ಸಾಧನೆ.

ನೈತಿಕ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡುವ ಬೆಥನಿ ಶಿಕ್ಷಣ ಸಂಸ್ಥೆಯ ನಮ್ಮ ಸೆಂಟ್ ಮೈಕಲ್ ಶಾಲೆ :


ಬೆಥನಿ ಶಿಕ್ಷಣ ಸಂಸ್ಥೆಯ ಮೂಲ ಧ್ಯೇಯ ಮತ್ತು ಆಶಯದಂತೆ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯೂ ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ನೈತಿಕ ಶಿಕ್ಷಣವನ್ನು ಕೊಡುವ ಪರಿಪಾಠವನ್ನು ಬೆಳೆಸಿಕೊಂಡಿರುವ ಈ ಶಾಲೆ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಸೌಹಾರ್ಧತೆ, ಸಹೋದತ್ವ, ಶಾಂತಿ, ಐಕ್ಯತೆ, ಸಾಮರಸ್ಯದ ಜೀವನಕ್ರಮ ಮತ್ತು ಅದನ್ನು ಭವಿಷ್ಯದ ಬದುಕಿನಲ್ಲಿ ಆಳವಡಿಸಿಕೊಳ್ಳುವಂತೆ ಪ್ರೇರಣಾದಾಯಿಯಾಗಿ ಕೆಲಸ ಮಾಡುತ್ತಿದೆ. ಜೀವನಶಿಕ್ಷಣವನ್ನು ನೀಡಬೇಕೆಂದೆ ಬೇರೆ ಬೇರೆ ರೀತಿಯ ಉಪನ್ಯಾಸಗಳು, ತರಬೇತಿಗಳು, ಜಾಗೃತಿ ಕಾರ್ಯಕ್ರಮಗಳು ಮತ್ತು ಚರ್ಚಾಕೂಟಗಳನ್ನು ಲೆಕ್ಕವಿಲ್ಲದ್ದಷ್ಟು ಹಮ್ಮಿಕೊಳ್ಳುತ್ತಿರುವುದು ವಿದ್ಯಾರ್ಥಿಗಳ ಪಾಲಿಗೆ ಸೌಭಾಗ್ಯ ಎಂದೆ ಹೇಳಬಹುದು.

ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಒತ್ತು:



ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ನೈತಿಕ ಶಿಕ್ಷಣವನ್ನು ಕೊಡುವ ಕೆಲಸವನ್ನು ನಿತ್ಯ ನಿರಂತರವಾಗಿ ಈ ಶಾಲೆ ಮಾಡುತ್ತಲೆ ಬಂದಿದೆ. ಹೊಸತನದ ಹಾಗೂ ಸಂಸ್ಕಾರಯುತವಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷವಾದ ಒತ್ತನ್ನು ಕೊಡುವುದರ ಮೂಲಕ ಸಾಂಸ್ಕೃತಿಕ ಕ್ಷೇತ್ರದ ಬಲವರ್ಧನೆಗೆ ಶ್ರಮಿಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ಶಾಲೆ ಹಲವಾರು ಪ್ರಶಸ್ತಿ, ಬಹುಮಾನಗಳನ್ನು ತನ್ನದಾಗಿಸಿಕೊಂಡ ಧನ್ಯತೆಯನ್ನು ಹೊಂದಿದೆ.

ಇವೆಲ್ಲವುಗಳ ಜೊತೆಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ತಂಡ, ಸ್ಕೌಟ್ಸ್ & ಗೈಡ್ಸ್ ತಂಡಗಳು ವಿವಿಧ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿವೆ.

ಅತ್ಯುತ್ತಮ ಕಂಪ್ಯೂಟರ್ ಲ್ಯಾಬ್:


ಬೆಳೆಯುತ್ತಿರುವ ಕಂಪ್ಯೂಟರ್ ಯುಗದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಕಂಪ್ಯೂಟರ್ ಶಿಕ್ಷಣವನ್ನು ನೀಡಿ ಗಮನ ಸೆಳೆಯುತ್ತಿದೆ. ಎಲ್ಲ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡು ಇಂಟರ್ ನೆಟ್ ಹಾಗೂ ಕಂಪ್ಯೂಟರ್ ವಿಷಯದಲ್ಲಿ ಮೂಲಶಿಕ್ಷಣವನ್ನು ಅರಿತುಕೊಳ್ಳುತ್ತಿದ್ದಾರೆ.

ಸುಂದರವಾದ ಆಟದ ಮೈದಾನ:

ಶಾಲೆಯ ಮುಂಭಾಗದಲ್ಲಿ ಹಚ್ಚ ಹಸಿರ ಹೊದಿಕೆಯ ವಿಶಾಲವಾದ ಆಟದ ಮೈದಾನ ಕಣ್ಮನ ಸೆಳೆಯುತ್ತಿದೆ. ಇದೇ ಆಟದ ಮೈದಾನದಲ್ಲಿ ಬೆವರಿಳಿಸಿ ಅದೇಷ್ಟೊ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದು ಶಾಲೆಯ ಮುಕುಟಕ್ಕೆ ಗರಿಯಾಗಿದ್ದಾರೆ.

ಸಕಲ ಮೂಲಸೌಕರ್ಯಗಳಿರುವ ಅತ್ಯುತ್ತಮ ಗುಣಮಟ್ಟದ ಜ್ಞಾನಸಮುದ್ರ:
ಈ ಶಾಲೆಯಲ್ಲಿ ಏನುಂಟು, ಏನಿಲ್ಲ ಎನ್ನುವ ಹಾಗೆ ಇಲ್ಲ. ಎಲ್ಲ ಮೂಲಸೌಕರ್ಯಗಳ ಜೊಡಣೆಯಿದೆ. ಶುದ್ದ ಕುಡಿಯುವ ನೀರಿನ ಘಟಕ, ಸ್ವಚ್ಚತೆಯಿಂದ ಕೂಡಿದ ಬಿಸಿಯೂಟದ ಕೊಠಡಿ, ಬೆಂಚ್, ಡೆಸ್ಕ್, ಸಭಾಭವನ, ಧ್ವನಿ ವರ್ಧಕದ ಅಳವಡಿಕೆ, ಸ್ವಚ್ಚತೆಯಿಂದ ಕೂಡಿದ ಪ್ರತ್ಯೇಕ ಪ್ರತ್ಯೇಕ ಶೌಚಾಲಯಗಳು, ಅಗತ್ಯಕ್ಕೆ ತಕ್ಕಂತೆ ತರಗತಿ ಕೊಠಡಿಗಳು, ಬೇಸಿಗೆಕಾಲದಲ್ಲಿ ವಿದ್ಯಾರ್ಥಿಗಳಿಗೆ ಸೆಖೆಯಾಗದಿರಲೆಂದು ಪ್ಯಾನ್ ಗಳನ್ನು, ವಿದ್ಯುತ್ ದೀಪಗಳನ್ನು ಆಳವಡಿಸಿಕೊಳ್ಳಲಾಗಿದೆ. ಮಕ್ಕಳ ಸಾಮಾಜಿಕ ಜ್ಞಾನಮಟ್ಟವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ದಿನ ಪತ್ರಿಕೆಗಳನ್ನು ಒಳಗೊಂಡಂತೆ ಸುಂದರವಾದ ಗ್ರಂಥಾಲಯದ ವ್ಯವಸ್ಥೆ, ಮೈಮನ ಸಂತಸಗೊಳಿಸುವ ಹೂದೋಟವಿರುವ ಗಾರ್ಡನ್, ಶಾಲಾ ಮುಖ್ಯೋಪಾಧ್ಯಯಿನಿಯವರಿಗೆ ಶಾಲೆಯ ಆವರಣದೊಳಗಡೆನೆ ಶಾಲೆಯ ಅಧೀಪತ್ಯದಲ್ಲಿರುವ ಮನೆ ಹೀಗೆ ಇನ್ನೂ ಅನೇಕ ರೀತಿಯಲ್ಲಿ ಸೌಲಭ್ಯಗಳನ್ನು ಒಳಗೊಂಡಂತೆ ಪರಿಪೂರ್ಣ ಮತ್ತು ಪರಿಪಕ್ವ ಶಾಲೆಯಾಗಿ ನಮ್ಮೂರಿನ ಹೆಮ್ಮೆಯ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆ ಅಗ್ರ ರೀತಿಯಲ್ಲಿ ಬೆಳೆದುನಿಂತಿದೆ.

ಗುಣಮಟ್ಟದ ಶಿಕ್ಷಣವನ್ನೆ ಮೊದಲ ಗುರಿಯಾಗಿಸಿಕೊಂಡ ಶಿಕ್ಷಕರು:
ಶಾಲೆ ಆರಂಭವಾದಾಗಿನಿಂದ ಇವತ್ತಿನವರೆಗೂ ಗುಣಮಟ್ಟದ ಶಿಕ್ಷಣಕ್ಕೆ ಈ ಶಾಲೆಯ ಶಿಕ್ಷಕ ವೃಂದ ಮೊದಲ ಆದ್ಯತೆಯನ್ನು ನೀಡಿದೆ. ಗುಣಮಟ್ಟದ ಶಿಕ್ಷಣಕ್ಕೆ ಕಂಕಣಬಧ್ದರಾಗಿ ಶ್ರಮಿಸುವ ಶಿಕ್ಷಕರ ಗುಣವಂತಿಕೆಯ ಹಾಗೂ ಮಡಿವಂತಿಕೆಯ ಗುಣಧರ್ಮಕ್ಕೆ ಬಿಗ್ ಸೆಲ್ಯೂಟ್ ಹೇಳಲೆಬೇಕು. ಶಾಲೆಗೆಷ್ಟೇ ಮೂಲಸೌಕರ್ಯಗಳಿದ್ದರೂ, ಆ ಶಾಲೆ ಪ್ರಗತಿಯ ಸಾಧನೆ ಮಾಡಬೇಕಾದರೇ ಹೃದಯವಂತ, ಗುಣವಂತ ಹಾಗೂ ಕ್ರೀಯಾಶೀಲ ಶಿಕ್ಷಕರು ಅತ್ಯಗತ್ಯ ಬೇಕು. ಈ ನಿಟ್ಟಿನಲ್ಲಿ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆ ವಿಶೇಷ ಹೆಜ್ಜೆಯೊಂದಿಗೆ ಮುನ್ನುಗ್ಗುತ್ತಿದೆ.
 
ಬಾಂದವ್ಯದ ಬೆಸುಗೆಯುಂಟು ಇಲ್ಲಿ:
ಈ ಶಾಲೆಯ ಇನ್ನೊಂದು ಪ್ರಮುಖ ವಿಶೇಷವಂದ್ರೆ, ಈ ಶಾಲೆಯಲ್ಲಿ ಬಾಂದವ್ಯದ ಬೆಸುಗೆಯಿದೆ. ವಿದ್ಯಾರ್ತಿಗಳ, ಶಿಕ್ಷಕರುಗಳ, ಶಾಲಾ ಸಿಬ್ಬಂದಿಗಳ ನಡುವೆ ಅನ್ಯೋನ್ಯ ಬಾಂದವ್ಯವಿದೆ. ಅನ್ಯೋನ್ಯತೆಯ ವಾತವರಣವಿದೆ. ಒಬ್ಬರಿಗೊಬ್ಬರು ಕಷ್ಟ ಸುಖಕ್ಕೆ ಸ್ಪಂದಿಸುವುದರ ಮೂಲಕ ಶಾಲೆಯ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಮುಖ್ಯೋಪಾಧ್ಯಯಿನಿ, ಶಿಕ್ಷಕರು ಹಾಗೂ ಒಂದು ಅಟೆಂಡರ್ ಇದ್ದರೂ ವೃತ್ತಿಯಲ್ಲಿ ದೊಡ್ಡವ, ಸಣ್ಣವ ಎಂಬುವುದನ್ನು ಎಲ್ಲಿಯೂ ತೋರಿಸಿಕೊಡದೇ ನಾವೆಲ್ಲರೂ ಒಂದೆ ತಾಯಿಯ ಮಕ್ಕಳು, ಶ್ರಮಜೀವಿಗಳೆಂಬುವುದನ್ನು ತಮ್ಮ ನಡವಳಿಕೆ ಮತ್ತು ಜೀವನ ಸನ್ನಡತೆಯಲ್ಲಿ ತೋರಿಸಿಕೊಡುವುದರ ಮೂಲಕ ಶಾಲೆಯ ಪೂರೋ ಅಭಿವೃದ್ಧಿಗೆ ಪ್ರಮುಖ ಕಾರಣರಾಗಿದ್ದಾರೆ.

ಶಾಲೆಯ ಮೇರು ಪ್ರಗತಿಗೆ ಕಾರಣರಾದ ಕೊಂಡಿಗಳಿವರು:
 Sr. Rose Celine 

 Sr Mariette 

 Sr Assumpta

 Sr Pierine Edu
Sr Suhasini

SR.M.RENITA

ಶಾಲೆಯ ಅಗ್ರಣೀಯ ಸಾಧನೆಗೆ ಮತ್ತು ಮೇರು ಪ್ರಗತಿಗೆ ಕಾರಣರಾದ ಕೊಂಡಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ನೆನಪಿಸಿಕೊಳ್ಳಲೆಬೇಕು. ಬೆಥನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿಸ್ಟರ್: ರೋಸ್ ಸೆಲಿನಾ, ಕಾರ್ಯದರ್ಶಿಯಾಗಿರುವ ಸಿಸ್ಟರ್: ಮೇರಿಟ್ಟೆ, ಕಾರ್ಪರೇಟ್ ಮ್ಯಾನೇಜರ್ ಸಿಸ್ಟರ್: ಅಸುಮಪ್ತಾ, ಸಮನ್ವಯಾಧಿಕಾರಿಯಾಗಿರುವ ಸಿಸ್ಟರ್: ಫೈವರಿನಿ ಇಡು, ಕರೆಸ್ಪಾಂಡೆಂಟ್ ಆಗಿರುವ ಸಿಸ್ಟರ್: ಸುಹಾಸಿನಿ ಹಾಗೂ ಮುಖ್ಯೋಪಾಧ್ಯಯಿನಿ ಸಿಸ್ಟರ್: ಎಂ ರೆನೀಟಾ ಅವರುಗಳ ಮಾರ್ಗದರ್ಶನ ಹಾಗೂ ಸಕಲ ರೀತಿಯ ಪ್ರೋತ್ಸಾಹವೆ ಈ ಶಾಲೆಯ ಉಜ್ವಲ ಭವಿಷ್ಯಕ್ಕೆ ಬಹುಮೂಲ್ಯ ಕೊಡುಗೆಯಾಗಿದೆ.

ಶಾಲೆಯ ಉನ್ನತಿಗಾಗಿ ಶ್ರಮಿಸುತ್ತಿರುವ ಕಾಯಕಯೋಗಿಗಳು:
School Staff
ಹೆಮ್ಮರವಾಗಿ ಬೆಳೆದ ಶಾಲೆಯನ್ನು ಮತ್ತಷ್ಟು ಗಗನದೆತ್ತರಕ್ಕೆ ಬೆಳೆಸುವ ದೀಕ್ಷೆ ಕೈಗೊಂಡ ರೀತಿಯಲ್ಲಿ ಶ್ರಮಿಸುತ್ತಿರುವ ಕಾಯಕಯೋಗಿಗಳನ್ನು ಹೆಸರಿಸದೇ ಹೋದರೆ ಖಂಡಿತವಾಗಿ ಈ ಬರವಣಿಗೆಗೆ ಅರ್ಥವೆ ಇಲ್ಲ. ಶಾಲೆಯನ್ನೆ ತನ್ನ ಒಡಲ ಸಂಸಾರವೆಂದು ಭಾವಿಸಿ ತಾಯಿಹೃದಯದಿಂದ ಸೇವೆ ಸಲ್ಲಿಸುತ್ತಿರುವ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೇನಿಟಾ ಬಿ.ಎಸ್, ಶಿಕ್ಷಕರುಗಳಾದ ಸಿಸ್ಟರ್ ಸೆಲ್ವಿ, ಸಿಸ್ಟರ್ ಪ್ರೇಮಾಲತಾ, ಸಿಸ್ಟರ್ ವೆಲೆಂಟಿನಾ, ಡೇವಿಡ್ ದಾನಂ, ಡಿ.ಎ.ಮೆಂಡಂ, ಜಯಶ್ರೀ, ರೇವತಿ, ಲಕ್ಷ್ಮೀಕಾಂತ, ನಜರೀನ ದೇಸೂರ, ಜಾನ್.ಕುಟಿನೋ, ಪೂಜಾ.ಎಸ್.ಮೂಳೆ, ಶೀರಿನ್, ನೈನಾ ಜಾನ್, ಅವರುಗಳ ದಣಿವರಿಯದ ಶ್ರಮ, ಗುಮಾಸ್ತರಾಗಿರುವ ಪುಟ್ಟಪ್ಪ ದಾಸರ್ ಹಾಗೂ ಸಹಾಯಕ ಸಿಬ್ಬಂದಿ ಚಿನ್ನಮ್ಮಾ ಐವಳ್ಳಿ, ಮತ್ತು ಸಹಾಯಕರಾದ  ಮಂಜುನಾಥ ಕಾಂಬಳೆ ಅವರುಗಳ ನಗುಮೊಗದ ಸೇವೆ ಮತ್ತು ಶ್ರಮವನ್ನು ಮತ್ತು ತಮ್ಮ ಮಕ್ಕಳೆಂಬಂತೆ ಮಕ್ಕಳಿಗೆ ಬಿಸಿಯೂಟವನ್ನು ಸಿದ್ದಪಡಿಸಿ ವಾತ್ಸಲ್ಯದಿಂದ ಬಡಿಸುವ ಬಿಸಿಯೂಟದ ಸಿಬ್ಬಂದಿಗಳಾದ ಫಿಲೋಮಿನಾ ಫರ್ನಾಂಡೀಸ್, ವಿಟ್ಲಾಬಾಯಿ ಬೋಸ್ಲೆ, ರೂಪಾ.ಎಂ, ಎಲಿಜಾ ಫರ್ನಾಂಡೀಸ್ ಮತ್ತು ಬಿಸಾಬಾಯಿ ಅವರುಗಳ ಸೇವೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲೆಬೇಕು. ಶಾಲೆಯನ್ನು ಮನೆಯಂತೆ ಪ್ರೀತಿಸುವ, ಮುದ್ದಿಸುವ ಇವರ ಸೇವಾಪ್ರೀತಿ ಮತ್ತು ಇವರಿಗಿರುವ ಶಾಲೆಯ ಬಗ್ಗೆ ಅಭಿಮಾನವನ್ನು ಗೌರವಪೂರ್ವಕವಾಗಿ ಶ್ಲಾಘಿಸಲೆಬೇಕು.

31 ವರ್ಷಗಳ ಸಾರ್ಥಕ ಸೇವೆಯೊಂದಿಗೆ ಅಭಿಮಾನದಿಂದ ಸೇವೆಗೈಯುವ ಸಹಾಯಕ ಸಿಬ್ಬಂದಿ ಚಿನ್ನಮ್ಮಾ ಐವಳ್ಳಿ:
Mrs Chinnamma 
ಕಳೆದ 31 ವರ್ಷಗಳಿಂದ ಸಹಾಯಕ ಸಿಬ್ಬಂದಿಯಾಗಿ ಚಿನ್ನದಂತಹ ವ್ಯಕ್ತಿತ್ವದ ಚಿನ್ನಮ್ಮಾ ಐವಳ್ಳಿಯವರು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಓಡುವ ಕುದುರೆಯಂತೆ ಹಿರಿಯ ಅಧಿಕಾರಿಗಳು ಹೇಳುವ ಕೆಲಸವನ್ನು ಶರವೇಗದಲ್ಲಿ ಮಾಡಿ ಮುಗಿಸುವ ಈ ಹೆಣ್ಮಗಳ ಶ್ರಮವು ಈ ಶಾಲೆಯ ಸಮಗ್ರ ಅಭಿವೃದ್ಧಿಗೆ ಬಹುದೊಡ್ಡ ಪಾಲನ್ನು ನೀಡಿದೆ ಎಂದರೆ ಅತಿಶಯೋಕ್ತಿ ಎನಿಸದು.
 

ಶಾಲೆಯ ಹೆಸರನ್ನು ಉಳಿಸಿ ಬೆಳೆಸುತ್ತಿರುವ ಮುದ್ದಿನ ವಿದ್ಯಾರ್ಥಿಗಳು:



ಕೀರ್ತಿವೆತ್ತ ಈ ಶಾಲೆಯ ಹೆಸರನ್ನು ಉಳಿಸಿ ಬೆಳೆಸುವಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರಮುಖ ಕಾರಣರಾಗಿದ್ದಾರೆ. ಹಳೆ ವಿದ್ಯಾರ್ಥಿಗಳು ಹಾಕಿಕೊಟ್ಟ ಪರಂಪರೆಯೊಂದಿಗೆ ಮುನ್ನಡೆಯುತ್ತಿರುವ ಈ ಶಾಲೆಯ ವಿದ್ಯಾರ್ಥಿಗಳ ಕ್ರಿಯಾಶೀಲತೆ, ಬುದ್ದಿವಂತಿಕೆ ಮತ್ತು ಗುಣ ನಡತೆ ಶಾಲೆಯ ಪ್ರಗತಿಗೆ ಕಲಶಪ್ರಾಯವಾಗಿದೆ.

ಸುವರ್ಣ ಮಹೋತ್ಸವವನ್ನು ಸ್ಮರಣೀಯವಾಗಿಸಲು ಶ್ರಮಿಸುತ್ತಿರುವ ಸುವರ್ಣ ಮಹೋತ್ಸವ ಸಮಿತಿ:


ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ಸುವರ್ಣ ಮಹೋತ್ಸವ ಸಮಿತಿಯನ್ನು ರಚಿಸಲಾಗಿದೆ. ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳನ್ನು, ಹಳೆ ವಿದ್ಯಾರ್ಥಿಗಳನ್ನು, ಗಣ್ಯ ಮಹನೀಯರನ್ನು ಸೇರಿಸಿಕೊಂಡು  ರಚಿಸಿದ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೆನೀಟಾ.ಬಿ.ಎಸ್, ಉಪಾಧ್ಯಕ್ಷರಾಗಿ ಶಾಲೆಯ ಮೊದಲ ವಿದ್ಯಾರ್ಥಿಯಾಗಿದ್ದ ಮತ್ತು ಹಾಲಿ ನಗರ ಸಭಾ ಸದಸ್ಯರಾಗಿರುವ ಆದಂ ದೇಸೂರು, ಕಾರ್ಯದರ್ಶಿಯಾಗಿ ಸಿಸ್ಟರ್ ಸೆಲ್ವಿ.ಬಿ.ಎಸ್, ಖಜಾಂಚಿಯಾಗಿ ಶಾಲೆಯ ಹಳೆ ವಿದ್ಯಾರ್ಥಿ ಮತ್ತು ಚಾರ್ಟಡ್ ಅಕೌಂಟೆಂಟ್ ಆಗಿರುವ ಸಚಿನ್ ಕಾಮತ್, ಸಹ ಖಜಾಂಚಿಯಾಗಿ ಡೇವಿಡ್ ದಾನಂ ಮತ್ತು ಸಮಿತಿ ಸದಸ್ಯರುಗಳಾಗಿ ಬಹಳಷ್ಟು ಜನ ಸರ್ವ ರೀತಿಯ ಸಹಕಾರವನ್ನು ನೀಡುತ್ತಿದ್ದಾರೆ.

ಇದೇ ಡಿಸೆಂಬರ್:15 ರಂದು ಸುವರ್ಣ ಮಹೋತ್ಸವ :
ಜಗಮಗಿಸಲಿರುವ ಸುವರ್ಣ ಮಹೋತ್ಸವವನ್ನು ನೋಡ ಬನ್ನಿ ಶಾಲೆಗೆ:

ಇದೇ ಡಿಸೆಂಬರ್: 15 ರಂದು ಅದ್ದೂರಿಯಾಗಿ ವಿಜೃಂಭಣೆಯಿಂದ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ವಿವಿಧ ಗಣ್ಯ ಮಹನೀಯರು ಭಾಗವಹಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಗುರುವರ್ಯರುಗಳಿಗೆ, ಸಿಬ್ಬಂದಿಗಳಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಶಾಲಾ ವಿದ್ಯಾರ್ಥಿಗಳಿಂದ ಸುಂದರ ಮತ್ತು ಆಕರ್ಷಕ ಶೈಲಿಯ ಸಾಂಸ್ಕೃತಿಕ ವಿವಿಧ ವಿನೋಧಾವಳಿಗಳು ಕಾರ್ಯಕ್ರಮಕ್ಕೆ ವಿಶೇಷ ರಂಗು ತರಲಿದೆ.

ಒಟ್ಟಿನಲ್ಲಿ ಸದ್ದಿಲ್ಲದೆ ಶಿಕ್ಷಣ ಸೇವೆ ನೀಡುತ್ತಾ, ಸಾರ್ಥಕ ಐವತ್ತು ವರ್ಷಗಳನ್ನು ಸವೆಸಿದ ಈ ಶಾಲೆಯ ಶೈಕ್ಷಣಿಕ ಸಾಧನೆ ಮತ್ತು ಕ್ರಾಂತಿಗೆ ತುಂಬು ಹೃದಯದಿಂದ ಗೌರವಪೂರ್ವಕ ಅಭಿಮಾನದ ಅಭಿವಂದನೆಗಳನ್ನು ಸಲ್ಲಿಸುತ್ತೇನೆ.

ನಿಮ್ಮವ

ಸಂದೇಶ್.ಎಸ್.ಜೈನ್
ಮೊ: 9620595555
email: sandesh.kanyady55@gmail.com


4 comments:

  1. Beautifully written, Sandesh ji. Though I did not study in St. Michael's, I have been in close contact with late Fr. Koimma and Principals of those years. My brothers and sisters are all past students of the school. We are all proud of this School and still remember the pains taken by Fr. Koimma in establishing the institution. Congratulations, St Michael's Convent High school! God bless the institution.

    ReplyDelete
  2. Beautifully written, Sandesh ji. Though I did not study in St. Michael's, I have been in close contact with late Fr. Koimma and Principals of those years. My brothers and sisters are all past students of the school. We are all proud of this School and still remember the pains taken by Fr. Koimma in establishing the institution. Congratulations, St Michael's Convent High school! God bless the institution.

    ReplyDelete
  3. Awesome Sir, thank you for enhancing the joy of Golden Jubilee

    ReplyDelete
  4. Sandesh, I Salute your effort in creating this wonderful space for our St. Michael's High school on face book...on behalf of the Golden Jubilee Committee I Thank you for highlighting the Golden Jubilee Celebrations. God Bless You.

    ReplyDelete

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...