ಇವರು ನಮ್ಮವರು :
ವಿಶಾಲ ಭಾರತದ ವೀರ ಸೈನಿಕ ನಮ್ಮೂರಿನ ವಿಶಾಲ ಮುರಾರಿ
18 ವರ್ಷಗಳ ಸಾರ್ಥಕ ಸೇವೆಯಲ್ಲಿ ನಮ್ಮೂರ ಕುವರ ವಿಶಾಲ ಮುರಾರಿ
18 ವರ್ಷಗಳ ಸಾರ್ಥಕ ಸೇವೆಯಲ್ಲಿ ನಮ್ಮೂರ ಕುವರ ವಿಶಾಲ ಮುರಾರಿ
ಸೈನಿಕನಾಗಿ ದೇಶ ಸೇವೆ ಮಾಡಬೇಕೆಂದು ಬಯಸುವವರು ಬಹಳಷ್ಟು ಜನ ಇದ್ದಾರೆ. ಆದರೆ ಅದಕ್ಕೆ ಅವಕಾಶನೂ ಸಿಗಬೇಕು, ನಮ್ಮಲ್ಲಿ ಅರ್ಹತೆನೂ ಬೇಕು. ನನಗೂ ಇಷ್ಟೈತಿ, ಆದ್ರೇನೂ ನನಗೆ ಅರ್ಹತೆಯಿಲ್ಲ. ಸೈನಿಕನಾಗಬೇಕೆಂದು ಬಯಕೆ ಹೊತ್ತವರು ಒಂದುವೇಳೆ ಸೈನಿಕನಾಗದೇ ಹೋದರೂ ಮತ್ತು ನಾವು ನೀವೆಲ್ಲರೂ ಸೇರಿ ನಮ್ಮ ರಾಷ್ಟ್ರದ ಸೈನಿಕರನ್ನು ಗೌರವಿಸುವ, ಬೆಂಬಲಿಸುವ, ಪ್ರೀತಿಸುವ, ಆರಾಧಿಸುವ ಮಹತ್ವದ ಗುಣವನ್ನು ಮೈಗೂಡಿಸಿಕೊಳ್ಳುವುದು ನಮ್ಮೆಲ್ಲರ ಪ್ರಮುಖ ಗುರಿಯಾಗಿರಬೇಕು. ತನ್ನೆಲ್ಲ ಕುಟುಂಬವನ್ನು ಬಿಟ್ಟು, ರಾತ್ರಿ ಹಗಲೆನ್ನದೆ ದೇಶ ಕಾಯುವ ಸೈನಿಕ ಸಹೋದರರಿಗೆ ಗೌರವದ ಪ್ರಣಾಮಗಳನ್ನು ಸಲ್ಲಿಸುತ್ತಾ, ನಮ್ಮೂರಿನ ಬಿಸಿ ರಕ್ತದ ನವತರುಣ, ಕಳೆದ ಹದಿನೆಂಟು ವರ್ಷಗಳಿಂದ ವೀರ ಯೋಧನಾಗಿ ಪ್ರಾಮಾಣಿಕ ಸೇವೆಗೈಯುತ್ತಿರುವ ಯೋಧನಿಗೆ ನುಡಿ ರೂಪದ ಮೂಲಕ ಗೌರವಿಸುವ ಬರಹ ಇದಾಗಿದೆ.
ಆ ವೀರ ಯೋಧ ಬೇರೆ ಯಾರು ಅಲ್ಲ. ತುಂಬಿದ ಬಡತನದ ಕುಟುಂಬದಲ್ಲಿ ಜನ್ಮವೆತ್ತು, ಎದ್ದು ಬಿದ್ದು ಅಲ್ಲಿ ಇಲ್ಲಿ ಕೆಲಸ ಮಾಡಿ ಶಾಲೆ ಮೆಟ್ಟಿಲ್ಲನ್ನತ್ತಿ ಕಷ್ಟಪಟ್ಟು ದೇಹವನ್ನು ದಂಡಿಸಿಕೊಂಡು ಬೆಳೆದು, ಜೀವನದ ಮಹೋನ್ನತ ಬಯಕೆಯಾದ ಸೈನಿಕನಾಗುವ ಕನಸನ್ನು ನನಸು ಮಾಡಿದ ನಮ್ಮೂರ ಹೆಮ್ಮೆಯ ಕುವರ, ಬಾಂಬೆಚಾಳದ ನಿವಾಸಿ ವಿಶಾಲ್ ಮುರಾರಿಯವರು. ಅಂದ ಹಾಗೆ ಕಳೆದ ಹದಿನೆಂಟು ವರ್ಷಗಳಿಂದ ದೇಶದ ವಿವಿದೆಡೆಗಳಲ್ಲಿ ಯೋಧನಾಗಿ ಪ್ರಾಣದ ಹಂಗನ್ನು ತೊರೆದು ದೇಶ ಸೇವೆ ಮಾಡುತ್ತಿರುವ ಈ ಯುವಕನ ಬಗ್ಗೆ ಬಹಳ ಹೆಮ್ಮೆ ಮತ್ತು ಗೌರವದಿಂದ ಬರೆಯಲು ಹೊರಟಿದ್ದೇನೆ.
ಅಂದ ಹಾಗೆ ದೂರದ ಆಂದ್ರಪ್ರದೇಶದಿಂದ ಉದ್ಯೋಗವನ್ನರಸಿ ದಾಂಡೇಲಿಗೆ ಬಂದು ದಾಂಡೇಲಿಯ ಐ.ಪಿ.ಎಂ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಸೇವೆ ಸಲ್ಲಿಸಿ, ಕಾರ್ಖಾನೆ ಸ್ಥಗಿತಗೊಂಡ ಬಳಿಕ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದ ಹಾಗೂ ಕಳೆದ ಕೆಲ ವರ್ಷಗಳ ಹಿಂದೆ ಸ್ವರ್ಗಸ್ಥರಾದ ನರಸಿಂಹ ಮುರಾರಿ ಹಾಗೂ ಕಣ್ಣೀರ ಬದುಕಿನ ನಡುವೆ ಮಕ್ಕಳನ್ನು ಬೆಳೆಸಿದ ತಾಯಿ ರಂಗಮ್ಮ ದಂಪತಿಗಳ ಮುದ್ದಿನ ಮಗ ಈ ನಮ್ಮ ವಿಶಾಲ ಮುರಾರಿಯವರು. ವಿಶಾಲ ಅವರಿಗೆ ರಂಗಯ್ಯ, ಚಿನ್ನರಂಗಯ್ಯ ಎಂಬಿಬ್ಬರು ಅಣ್ಣಂದಿರರು ಮತ್ತು ಪಾರ್ವತಿ ಹಾಗೂ ಮಹಾಲಕ್ಷ್ಮೀ ಎಂಬಿಬ್ಬರು ತಂಗಿಯಂದಿರರು ಇದ್ದಾರೆ.
ವಿಶಾಲ್ ಅವರ ತಂದೆ ಐಪಿಎಂ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದರಿಂದ ತನ್ನ ಪ್ರಾಥಮಿಕ ಶಿಕ್ಷಣವನ್ನು ಬೈಲಪಾರಿನಲ್ಲಿರುವ ಸರಕಾರಿ ಶಾಲೆಯಲ್ಲಿ ಪಡೆದರು. ಮುಂದೆ ಧಾರವಾಡದ ಬಾಷೆಲ್ ಮಿಶನ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಇದಾದ ಬಳಿಕ ಧಾರವಾಡದ ಕಿಟೆಲ್ ಪಿಯು ಕಾಲೇಜಿನಲ್ಲಿ ಪಿಯುಸಿಗೆ ಸೇರಿ ಮೊದಲ ವರ್ಷದ ಪಿಯುಸಿ ಮುಗಿದ ಮೇಲೆ ಎರಡನೆ ವರ್ಷ ಪಿಯುಸಿ ಅರ್ಧ ಆಗುತ್ತಿರುವಾಗಲೆ ತನ್ನ ಕನಸಿನ ಸೈನಿಕ ವೃತ್ತಿಗೆ ಆಯ್ಕೆಯಾದರು.
ಶಾಲಾ/ಕಾಲೇಜು ವಿದ್ಯಾರ್ಥಿಯಾಗಿರುವಾಗ ಅತ್ಯುತ್ತಮ ಕ್ರೀಡಾಪಟುವಾಗಿ ಗಮನ ಸೆಳೆದಿದ್ದರು. ರನ್ನಿಂಗ್ ರೇಸಿನಲ್ಲಿ ಎಲ್ಲರನ್ನು ಮೀರಿಸಿ ಅವರು ಓಡುತ್ತಿದ್ದ ಶೈಲಿಯನ್ನು ಇನ್ನೂ ಅವರ ಸಹಪಾಠಿಗಳು ನೆನಪಿಸಿಕೊಳ್ಳುತ್ತಾರೆ. ಭವಿಷ್ಯದ ದಿನಗಳಲ್ಲಿ ಸೈನಿಕನಾಗಬೇಕೆಂಬ ಮಹದಾಸೆಯನ್ನಿಟ್ಟುಕೊಂಡಿದ್ದ ವಿಶಾಲ್ ಅವರು ರನ್ನಿಂಗ್ ರೇಸ್ ಹಾಗೂ ದೇಹ ದಂಡಿಸುವ ಕಸರತ್ತಿಗೆ ವಿಶೇಷವಾದ ಒತ್ತನ್ನು ಎಳೆಯ ಪ್ರಾಯದಲ್ಲೆ ಕೊಡಲಾರಂಭಿಸಿದರು. ಅದರ ಫಲವಾಗಿ ಅವರು ಮೊದಲ ಯತ್ನದಲ್ಲೆ ಸೈನಿಕನಾಗಿ ಆಯ್ಕೆಯಾಗಿರುವುದು ಅವರ ಶ್ರಮ ಸಾಧನೆಗೆ ಒಲಿದ ಫಲ ಎಂದು ಅಭಿಮಾನದಿಂದ ಹೇಳಬಹುದು.
ಬೆಂಗಳೂರಿನಲ್ಲಿ 2000 ನೇ ವರ್ಷದಲ್ಲಿ ನಡೆದ ಸೈನಿಕ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿ, ಸೈನಿಕನಾಗಿ ಆಯ್ಕೆಯಾದ ವಿಶಾಲ್ ಅವರು ಆರಂಭದ ಒಂದು ವರ್ಷ ನಾಸಿಕ್ ನಲ್ಲಿರುವ ಸೈನಿಕ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಪಡೆದರು.
ಕಠಿಣ ತರಬೇತಿಯನ್ನು ಲೀಲಾಜಾಲವಾಗಿ ಎದುರಿಸಿ, ಅಲ್ಲಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದ ವಿಶಾಲ್ ಅವರು ಜಮ್ಮುವಿನ ಪುಂಚ್ ಕೇಂದ್ರದಲ್ಲಿ ಸೈನಿಕನಾಗಿ ಕರ್ತವ್ಯಕ್ಕೆ ಸೇರಿಕೊಂಡರು. ಒಂದು ಕಡೆ ವಿಪರೀತ ಚಳಿಗೆ ಮೈಯೊಡ್ಡಿ, ತಾಯಿ ಭಾರತಾಂಬೆಯನ್ನು ಹಾಗೂ ಜನ್ಮದಾತೆ ರಂಗಮ್ಮ ಅವರನ್ನು ಸದಾ ಸ್ಮರಿಸಿಕೊಳ್ಳುತ್ತಲೇ ತನಗೆ ವಹಿಸಿದ ಜವಾಬ್ದಾರಿಯನ್ನು ನಿಷ್ಟೆಯಿಂದ ನಿಭಾಯಿಸಿ ಅಲ್ಲಿಯ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾದ ವಿಶಾಲ್ ಅವರು ಅಲ್ಲಿ 3 ವರ್ಷಗಳ ವರೆಗೆ ಸೇವೆಯನ್ನು ಸಲ್ಲಿಸಿದರು. ಅಲ್ಲಿಂದ ರಾಜಸ್ಥಾನದ ಗಡಿ ಕೇಂದ್ರಕ್ಕೆ ವರ್ಗಾವಣೆಗೊಂಡು ಅಲ್ಲಿ 3 ವರ್ಷ ಸೇವೆಯನ್ನು ಸಲ್ಲಿಸಿದರು. ಮುಂದೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ 6 ವರ್ಷ, ಮತ್ತೆ ಜಮ್ಮುವಿನ ಪುಂಚ್ ಕೇಂದ್ರದಲ್ಲಿ 3 ವರ್ಷ, ರಾಜಸ್ಥಾನದಲ್ಲಿ 3 ವರ್ಷ ಸೇವೆ ಸಲ್ಲಿಸಿ, ಸದ್ಯ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಸೇವೆಯನ್ನು ಸಲ್ಲಿಸಿಸುತ್ತಿದ್ದಾರೆ.
ಉಗ್ರಗಾಮಿಗಳ ಸದ್ದಡಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ ನಮ್ಮೂರಿನ ಹಿರೋ:
ಜಮ್ಮುವಿನ ಪುಂಚ್ ಸೇನಾ ಕೇಂದ್ರದಲ್ಲಿ ಅದೊಂದು ದಿನ ಉಗ್ರಗಾಮಿಗಳು ತನ್ನ ಅಟ್ಟಹಾಸವನ್ನು ಮೆರೆದಿದ್ದರು. ಉಗ್ರರ ಅಟ್ಟಹಾಸಕ್ಕೆ ವಿಶಾಲ್ ಅವರ ಜೊತೆಗಾರನ ಪ್ರಾಣಪಕ್ಷಿ ಹಾರಿ ಹೋಯ್ತು. ತತ್ಕ್ಷಣವೆ ತನ್ನ ಸಹದ್ಯೋಗಿಗಳ ಜೊತೆಗೂಡಿ ಉಗ್ರರ ಸದ್ದಡಗಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ನಮ್ಮೂರಿನ ನಲ್ಮೆಯ ಯುವಕ ವಿಶಾಲ್ ಅವರು. ಗೆಳೆಯನ ಸಾವಿನ ನೋವಿನ ನಡುವೆಯೂ ಸೆಣಸಿದ ರೀತಿ ಅವರು ವಿವರಿಸುವಾಗ ಎಂಥವರಿಗೂ ಕಣ್ಣೀರು ಬರದಿರಲು ಅಸಾಧ್ಯ. ಅಂದ ಹಾಗೆ ನಮ್ಮ ಡೈನಮಿಕ್ ವಿಶಾಲ್ ಅವರು ಈವರೇಗೆ 15 ಕ್ಕೂ ಹೆಚ್ಚು ಆಪರೇಶನ್ ದಾಳಿಯಲ್ಲಿ ಭಾಗವಹಿಸಿ ಯಶಸ್ವಿಯಾಗಿರುವುದು ಅವರ ಜೀವನದ ಬಹುದೊಡ್ಡ ಹೆಮ್ಮೆ ಎಂದೆ ಹೇಳಬಹುದು.
ಭಾರತ-ರಷ್ಯಾ ಸೈನಿಕರ ಇಂದಿರಾ ಎಕ್ಸ್-2018 ಸಹಭಾಗಿತ್ವದ ಆಪರೇಶನ್ ಕಾರ್ಯಗಾರಕ್ಕೆ ಆಯ್ಕೆಯಾದ ನಮ್ಮ ವಿಶಾಲ್:-
ಉತ್ತರಪ್ರದೇಶದ ಬಬಿನಾ ಎಂಬ ದಟ್ಟಡವಿಯಲ್ಲಿ ಭಾರತ ಮತ್ತು ರಷ್ಯಾ ಸೈನಿಕರ ಆಪರೇಶನ್ ಕಾರ್ಯಗಾರದಲ್ಲಿ ಭಾಗವಹಿಸಿದ ಬಹುದೊಡ್ಡ ಸಾಧನೆ ನಮ್ಮ ವಿಶಾಲ್ ಅವರಿಗಿದೆ. ಭಾರತದ ಐದು ಲಕ್ಷ ಸೈನಿಕರಲ್ಲಿ ಒಟ್ಟು 250 ಸೈನಿಕರನ್ನು ಈ ಕಾರ್ಯಗಾರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ 250 ಸೈನಿಕರಲ್ಲಿ ನಮ್ಮೂರ ಹಿರೋ ವಿಶಾಲ್ ಅವರು ಸಹ ಒಬ್ಬರೆನ್ನುವುದು ಇಲ್ಲಿ ಉಲ್ಲೇಖನೀಯ. ರಷ್ಯಾ ದೇಶದ 250 ಮತ್ತು ಭಾರತದ 250 ಸೈನಿಕರು ಸೇರಿ ನಡೆಸಿದ ಈ ಆಪರೆಶನ್ ಕಾರ್ಯಗಾರವು 15 ದಿನಗಳವರೆಗೆ ನಡೆದು, ವಿಶ್ವದ ಗಮನ ಸೆಳೆದಿರುವುದು ಶ್ಲಾಘನೀಯ. ಇಂತಹ ಅವಿಸ್ಮರಣೀಯ ಕಾರ್ಯದಲ್ಲಿ ಭಾಗಿಯಾದ ನಮ್ಮೂರ ಯುವಕ ವಿಶಾಲ್ ಅವರ ಬಿಗ್ ಸಾಧನೆಗೆ ಬಿಗ್ ಸೆಲ್ಯೂಟ್.
ಆಪರೇಶನ್ ದಾಳಿಗಳ ಸಂದರ್ಭದಲ್ಲಿ ನಮ್ಮ ವಿಶಾಲ್ ಅವರು:
ಉಗ್ರಗಾಮಿಗಳ ನಿರಂತರವಾದ ಉಪಟಳವನ್ನು ಸಹಿಸಿಕೊಳ್ಳಲಾಗದೇ, ಉಗ್ರಗಾಮಿಗಳ ವಿರುದ್ದ ಅನೇಕ ಸಲ ನಡೆದ ದಾಳಿಗಳಲ್ಲಿ ಸಕ್ರೀಯವಾಗಿ ರಾತ್ರಿ ಹಗಲೆನ್ನದೆ ಭಾಗವಹಿಸುತ್ತಿದ್ದ ವಿಶಾಲ್ ಅವರಿಗೆ ಹಾಗೂ ಅವರಿರುವ ಸೈನಿಕರ ತಂಡಕ್ಕೆ ಬಿಸಿಲೇರಿ ಮತ್ತು ಬಿಸ್ಕೆಟ್ ಸರ್ವ ಆಹಾರವಾಗಿತ್ತಂತೆ. ಬಿಸ್ಕೆಟ್ ತಿಂದೆ ವಾರಗಟ್ಟಲೆ ದಾಳಿಯಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದ ರೋಚಕ ಸನ್ನಿವೇಶಗಳನ್ನು ವಿಶಾಲ್ ಅವರು ವಿವರಿಸುವಾಗ ಅಯ್ಯೋ ದೇವರೆ ಎಂದೆನಿಸದಿರಲು ಅಸಾಧ್ಯವೆ?.
ತನ್ನನ್ನು ಸದಾ ಕಾಪಾಡುವ ಭಾರತಮಾತೆ ಮತ್ತು ಜನ್ಮದಾತೆ ಎನ್ನುವ ವಿಶಾಲ್ :
ಪ್ರತಿದಿನ, ಪ್ರತಿಕ್ಷಣ ಸದಾ ಎಚ್ಚರದಲ್ಲಿರಬೇಕಾಗಿರುವುದು ಅವರ ಕರ್ತವ್ಯ. ಎಲ್ಲಿ ಏನಾಗ್ತಾದೋ ಗೊತ್ತಿಲ್ಲ. ಜೀವದ ಹಂಗು ತೊರೆದು ದೇಶ ಕಾಯುವ ಕೆಲಸ. ಹೀಗಿರುವಾಗ ಪ್ರತಿದಿನ ಬೆಳ್ಳಂ ಬೆಳಗ್ಗೆ ನಮ್ಮ ವಿಶಾಲ್ ಅವರು ತಾಯಿ ಭಾರತ ಮಾತೆಯನ್ನು ಮತ್ತು ಅವರ ಜನ್ಮದಾತೆ ರಂಗಮ್ಮನವರನ್ನು ಸ್ಮರಿಸಿಯೆ ಮುಂದಿನ ಕೆಲಸಕ್ಕೆ ಅಣಿಯಾಗುತ್ತಾರೆ. ತಾಯಿ ಭಾರತಮಾತೆ ಮತ್ತು ಜನ್ಮದಾತೆಯ ಆಶೀರ್ವಾದವೆ ಜೀವನಧೈರ್ಯ ಮತ್ತು ನಿತ್ಯದ ಕೆಲಸಕ್ಕೆ ಪ್ರೇರಣಾದಾಯಿ ಎಂದು ವಿಶಾಲ್ ಅವರು ಹೆತ್ತಮ್ಮನ ಪ್ರೀತಿ, ವಾತ್ಸಲ್ಯವನ್ನು ಗೌರವದಿಂದ ವಿವರಿಸುತ್ತಾರೆ. ಈ ನಿಟ್ಟಿನಲ್ಲಿ ದೇಶಕ್ಕೆ ಸೈನಿಕನನ್ನು ಕೊಟ್ಟ ತಾಯಿ ರಂಗಮ್ಮ ಅವರಿಗೆ ಗೌರವದ ಕೃತಜ್ಞತೆಗಳು.
ವರ್ಷಕ್ಕೊಮ್ಮೆ ರಜೆಯಲ್ಲಿ ದಾಂಡೇಲಿಗೆ ಬರುವ ಎಂಜಾಯ್ ಯುವಕ ನಮ್ಮ ವಿಶಾಲ್:
ವರ್ಷದ ಮೂರು ತಿಂಗಳು ರಜೆಯಿರುವಾಗ, ರಜೆ ಸಿಕ್ಕಿ ಓಡೋಡಿ ದಾಂಡೇಲಿಗೆ ಬಂದು ಅಮ್ಮನ ಪಾದಕ್ಕೆ ನಮಿಸಿಯೆ, ಅಪ್ಪುಗೆಯಿಂದ ಆಲಿಂಗನ ಮಾಡಿದ ನಂತರವೆ ಮನೆಗೆ ಪ್ರವೇಶ ಮಾಡುವ ಎಂಜಾಯ್ ಯುವಕ ಈ ನಮ್ಮ ವಿಶಾಲ್. ಮೊದಲು ಅಮ್ಮನ ಬಳಿ ವರ್ಷದ ಆಗು ಹೋಗುಗಳನ್ನು ವಿವರಿಸಿ, ಅಮ್ಮನಿಗೆ ತಂದ ವಸ್ತುಗಳನ್ನು ನೀಡಿದ ಮೇಲೆಯೆ ತನ್ನ ಕನಸಿನ ರಾಣಿಯಾಗಿರುವ ಹಸಿರು ಬಣ್ಣದ ಕವಾಸಕಿ ನಿಂಜ (250 ಸಿಸಿ) ಗಾಡಿಯನ್ನೇರಿ ದಾಂಡೇಲಿಯಿಡಿ ಸುತ್ತುತ್ತಾ, ಗೆಳೆಯರ ಜೊತೆ ಸಂಭ್ರಮಿಸುವ ಮನೋಜ್ಞ ಯುವಕ ವಿಶಾಲ್ ಅವರಿಗೆ ತನಗಾಗಿ ಏನಾದರೂ ಮಾಡಬೇಕೆಂಬ ಸ್ವಾರ್ಥವಿಲ್ಲ. ದೇಶಸೇವೆಯನ್ನೆ ಸ್ವಾರ್ಥವಾಗಿಸಿಕೊಂಡು ಮುನ್ನಡೆಯುವ ವಿಶಾಲ್ ಅವರಿಗೆ ವಿಶಾಲ್ ಅವರೆ ಸಾಟಿ.
ದಾಂಡೇಲಿಯ ಮಣ್ಣಿನ ಮಗನಾಗಿ, ದೇಶದ ಗಡಿ ಕಾಯುವ ವೀರ ಯೋಧನಾಗಿ ನಮ್ಮೆದುರಿಗೆ ಇರುವ ಕಟುಮಸ್ತಾದ ಸೂಪರ್ ಪರ್ಸನಾಲಿಟಿಯ ಯುವಕ ವಿಶಾಲ್ ಅವರಿಗೆ ಶುಭವಾಗಲಿ, ಅವರ ಜೀವನ ಉಜ್ವಲವಾಗಲೆಂಬ ಹಾರೈಕೆ. ಅವರು ಇವರಲ್ಲ, ಇವರು ಅವರಲ್ಲ, ಒಟ್ಟಿನಲ್ಲಿ ಇವರು ನಮ್ಮವರು ಎನ್ನುವುದು ಅಷ್ಟೆ ಸತ್ಯ.
ನಿಮ್ಮವ
ಸಂದೇಶ್.ಎಸ್.ಜೈನ್






Great salute to him bro.
ReplyDeleteಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ReplyDeleteReally VISHAL Anna is proud of DANDELI and INDIA
ReplyDeleteGreat Vishal Anna hats of you 🙏❤️
ReplyDelete