Saturday, December 29, 2018

ಸ್ವಾಭಿಮಾನಿ ಸಹೋದರಿ ಸುಮಂಗಲಾ ಚಿಕ್ಕಮಠ
ಜನ್ಮದಿನದ ಸಂಭ್ರಮದಲ್ಲಿ ಸಹೋದರಿ ಸುಮಂಗಲಾ
ಅವರು ಅತ್ತ ಬಡವರೂ ಅಲ್ಲ, ಇತ್ತ ಶ್ರೀಮಂತರೂ ಅಲ್ಲ. ಆದರೆ ಸಂತೃಪ್ತಿಯ ಮನೆತನದಲ್ಲಿ ಜನ್ಮವೆತ್ತ ಸಹೋದರಿಯವರು. ಒಂದು ಮೆನಯಲ್ಲಿ ಹೆಣ್ಣು ಹುಟ್ಟಿತೆಂದರೇ ಅವಳನ್ನು ಸಾಕಿ, ಶಿಕ್ಷಣ ನೀಡಿ, ಇನ್ನೊಬ್ಬನಿಗೆ ಧಾರೆಯೆರೆದು ಕೊಡುವುದೆ ಪ್ರಮುಖ ಜವಾಬ್ದಾರಿ, ಆಕೆಯಿಂದ ನಮಗೇನೂ ಲಾಭವಿಲ್ಲದಿದ್ದರೂ ಖರ್ಚು ಜಾಸ್ತಿ ಎಂಬ ವಾಡಿಕೆಯ ಮಾತು ಅಲ್ಲಿ ಇಲ್ಲಿ ಕೇಳುತ್ತಿರುತ್ತೇವೆ. ಅದು ಕೆಲವೊಂದು ಸಲ ಹೆತ್ತವರ ಮನದೊಳಗಿನ ಮಾತು ಬಿಡಿ. ಅಂತಹದ್ದರಲ್ಲಿಯೂ ಹೆಣ್ಣಾಗಿ ಹುಟ್ಟಿ, ಅಪ್ಪ, ಅಮ್ಮನಿಗೆ ಆಸರೆಯಾಗಿ, ತನ್ನ ಮದುವೆಗೂ ಸಹ ತಕ್ಕಮಟ್ಟಿಗೆ ದುಡ್ಡು ಕೂಡಿಟ್ಟು ಅಪ್ಪ, ಅಮ್ಮನಿಗೆ ಎಲ್ಲಿಯೂ ತೊಂದರೆ ಕೊಡದೆ ಬದುಕು ಕಟ್ಟಿಕೊಂಡ ಸಾಹಸಿ, ಶ್ರಮಸಾಧಕಿ ಸಹೋದರಿಯೊಬ್ಬರನ್ನು ಪರಿಚಯಿಸಲು ಗೌರವ ಮನಸ್ಸಿನಿಂದ ಹೆಮ್ಮೆ ಪಡುತ್ತೇನೆ.

ಈ ಸಹೋದರಿ ಬೇರೆ ಯಾರು ಅಲ್ಲ. ಜೀವನದಲ್ಲೆಂದೂ ಯಾರ ಮನಸ್ಸನ್ನು ನೋಯಿಸದೇ ಎಲ್ಲರನ್ನು ಗೌರವಿಸುವ ಈ ಸಹೋದರಿಗೆ ದುಡಿಮೆಯಿದ್ದರೂ, ಕಣ್ಣೀರು ಮಾತ್ರ ಬಗಲಲ್ಲೆ ಇತ್ತು ಅನ್ನಿಸ್ತದೆ. ಆದಾಗ್ಯೂ ಅವೆಲ್ಲವನ್ನು ಮೆಟ್ಟಿ ತನ್ನೆರಡು ಮಕ್ಕಳ ಸಲುವಾಗಿ, ಸ್ವಾಭಿಮಾನದ ಬದುಕು ಕಟ್ಟಿಕೊಂಡು ಎಲ್ಲರಿಗೂ ಮಾದರಿ ಮತ್ತು ಅನುಕರಣೀಯವಾಗಬಲ್ಲ ಸಹೋದರಿ ಸುಮಂಗಲಾ ಚಿಕ್ಕಮಠ ಅವರು ಕಣ್ರೀ.

ಕಳೆದ 20 ವರ್ಷಗಳಿಂದ ಟ್ಯೂಷನ್ ಸೆಂಟರನ್ನು ನಡೆಸುವುದರ ಮೂಲಕ ದಾಂಡೇಲಿಯ ಹೆಸರಾಂತ ಟ್ಯೂಷನ್ ಸೆಂಟರಿನ ಮಾಲಕಿಯಾಗಿ, ಮುದ್ದು ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಶಿಕ್ಷಣ ಸೇವೆ ನೀಡುತ್ತಿರುವ ಸುಮಂಗಲಾ ಅವರ ಸ್ವಾಭಿಮಾನದ ಬದುಕಿಗೆ ಬಿಗ್ ಸೆಲ್ಯೂಟ್ ಹೇಳಿಯೆ ಬರೆಯಲು ಪ್ರಾರಂಭಿಸುತ್ತೇನೆ.

ಅಂದ ಹಾಗೆ ಇವತ್ತು ನನ್ನ ಸಿಸ್ಟರ್ ಸುಮಂಗಲಾ ಅವರಿಗೆ ಜನ್ಮದಿನದ ಸಂಭ್ರಮ. ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಸಹೋದರಿ ಸುಮಂಗಲಾ ಅವರಿಗೆ ಹಾರ್ದಿಕ ಶುಭಾಶಯಗಳು ಈ ನಿಮ್ಮ ಸಹೋದರನಿಂದ ಎಂದು ಶುಭದ ಮಾತಿನೊಂದಿಗೆ ಅವರು ಬೆಳೆದು ಬಂದ ಯಶೋಗಾಥೆಯನ್ನು ವಿವರಿಸಲು ಅಣಿಯಾಗಿದ್ದೇನೆ.

ನಮ್ಮ ಸುಮಂಗಲಾ ಅವರು ದೂರದೂರಿನವರಲ್ಲ. ಅವರು ದಾಂಡೇಲಿಯವರೆ ಎನ್ನುವುದು ಸಂತಸದ ವಿಚಾರ. ದಾಂಡೇಲಿಯ ಆದರ್ಶ ವ್ಯಕ್ತಿತ್ವದ ಎಸ್.ಜಿ.ಹಿರೇಮಠ ಹಾಗೂ ಸುಸಂಸ್ಕೃತ ಗೃಹಿಣಿ ಸಾವಿತ್ರಿ ದಂಪತಿಗಳ ಎರಡನೆ ಮಗಳು ಈ ನಮ್ಮ ಸುಮಂಗಲಾ ಅವರು. ಸುಮಂಗಲಾ ಅವರಿಗೆ ರಾಜೇಶ್ವರಿ ಎಂಬ ಅಕ್ಕ ಹಾಗೂ ಜ್ಯೋತಿ, ಲಕ್ಷ್ಮೀ ಮತ್ತು ಪೂರ್ಣಿಮಾ ಎಂಬ ಮೂವರು ತಂಗಿಯರಿದ್ದಾರೆ. ಒಂದು ರೀತಿಯಲ್ಲಿ ದೊಡ್ಡ ಸಂಸಾರವಾದರೂ ಮನೆಯಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೇನೂ ಕೊರತೆಯಿರಲಿಲ್ಲ. ಭಜನೆ, ಧ್ಯಾನ್ಯ, ಪ್ರವಚನ ಇವೆಲ್ಲವೂ ನಿತ್ಯದ ಕರ್ತವ್ಯಗಳಾಗಿತ್ತು.

ಸುಮಂಗಲಾ ಅವರು ತನ್ನ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ದಾಂಡೇಲಿಯ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಪಡೆದು, ಮುಂದೆ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಹಾಗೂ ಬಂಗೂರನಗರ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದರು. ಇದಾದ ಬಳಿಕ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿದ್ದ ಕೆ.ಎಲ್.ಇ ಬಿ.ಎಡ್ ಕಾಲೇಜಿನಲ್ಲಿ ಬಿ.ಎಡ್. ಪದವಿಯನ್ನು ಪಡೆದರು. ಮುಂದೆ ಹುಬ್ಬಳ್ಳಿಯ  ಕೆ.ಎಲ್.ಇ ಸಂಸ್ಥೆಯಲ್ಲಿ ಎಂ.ಇಡ್ ಪದವಿಯನ್ನು ಪೊರೈಸಿದರು.

ಶಾಲಾ/ಕಾಲೇಜು ವಿದ್ಯಾರ್ಥಿನಿಯಾಗಿರುವಾಗ್ಲೆ ನಮ್ಮ ಸುಮಂಗಲಾ ಅವರು ಅತ್ಯಂತ ಚುರುಕಿನ ಮತ್ತು ಬುದ್ದಿವಂತ ವಿದ್ಯಾರ್ಥಿನಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಹೀಗೆ ಬೆಳೆದ ಸುಮಂಗಲಾ ಅವರು ಪದವಿ ಶಿಕ್ಷಣ ಪಡೆಯುತ್ತಿರುವಾಗಲೆ ಟ್ಯೂಷನ್ ಕೇಂದ್ರವನ್ನು ಪ್ರಾರಂಭಿಸಿ, ತನ್ನ ಶಿಕ್ಷಣಕ್ಕೆ ಬೇಕಾದ ಹಣವನ್ನು ಹೊಂದಿಸಿಕೊಳ್ಳಲಾರಂಭಿಸಿದರು.

ಶಿಕ್ಷಣ ಪಡೆದ ಮೇಲೆ ಕಿತ್ತೂರುನಲ್ಲಿರುವ ರಾಣಿ ಚೆನ್ನಮ್ಮ ಶಾಲೆಯಲ್ಲಿ ಶಿಕ್ಷಕಿಯಾಗಿ ಒಂದು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದರು. ಆನಂತರದಲ್ಲಿ ಬಸವರಾಜ ಚಿಕ್ಕಮಠ ಅವರೊಂದಿಗೆ ವಿವಾಹವಾಯ್ತು. ಸುಂದರ ಸಂಸಾರವನ್ನು ಬೆಳಗಿಸುವ ದೀಪವಾಗಿ ಗಂಡನ ಮನೆಗೆ ಪ್ರವೇಶಿಸಿದ ಸುಮಂಗಲಾ ಆ ಮನೆಯ ಗೃಹಲಕ್ಷ್ಮೀಯಾದರು.

ವಿವಾಹವಾದ ಬಳಿಕ ಪತಿಯವರ ಸಂಪೂರ್ಣ ಸಹಕಾರ, ಪ್ರೋತ್ಸಾಹ ಪಡೆದು ಪರಿಜ್ಞಾನಾಶ್ರಮ ಹೈಸ್ಕೂಲಿನಲ್ಲಿ ಕೆಲ ವರ್ಷ, ರೋಟರಿ ಶಾಲೆಯಲ್ಲಿ ಸ್ವಲ್ಪ ವರ್ಷ ಮತ್ತು ತಾನೆ ಕಲಿತ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ 5 ವರ್ಷಗಳ ಕಾಲ ಶಿಕ್ಕಿಯಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿದ ಅಭಿಮಾನ ಮತ್ತು ಹೆಮ್ಮೆ ನಮ್ಮ ಸುಮಂಗಲಾ ಅವರಿಗಿದೆ.

ಹೀಗೆ ಜೀವನ ಸವೆಸಿದ ಸುಮಂಗಲಾ ಅವರಿಗೆ ಬಿರುಗಾಳಿಯಂತೆ ಬಂದು ಅಪ್ಪಳಿಸಿದ್ದು ಅವರ ಪತಿಯವರ ಅಗಲುವಿಕೆ. ಒಂದು ಕಡೆ ಎಳೆಯ ಮಕ್ಕಳು, ಭವಿಷ್ಯದ ಹೊಂಗನಸನ್ನು ಕಾಣುತ್ತಿದ್ದ ಸಹೋದರಿ ಸುಮಂಗಲಾ ಅವರು ಎದೆಗುಂದದೇ ಸ್ವಾಭಿಮಾನದ ಬದುಕು ಕಟ್ಟಿಕೊಂಡದ್ದು ಮಾತ್ರ ರಿಯಾಲಿ ಗ್ರೇಟ್.

ಎಂದಿನಂತೆ ಟ್ಯೂಷನ್ ಕೇಂದ್ರವನ್ನು ಗಟ್ಟಿಗೊಳಿಸಲಾರಂಭಿಸಿದ ಸುಮಂಗಲಾ ಅವರು ಮನೆಯಲ್ಲಿದ್ದುಕೊಂಡೆ ಮಕ್ಕಳ ಯೋಗಕ್ಷೇಮದ ಜೊತೆಗೆ ಟ್ಯೂಷನ್ ಕೇಂದ್ರವನ್ನು ನಡೆಸಿ, ನೂರಾರು ಮಕ್ಕಳಿಗೆ ಶಿಕ್ಷಣದ ನೆರವನ್ನು ನೀಡಿ ಗಮನ ಸೆಳೆಯುವ ಸಾಧನೆ ಮಾಡುತ್ತಿದ್ದಾರೆ. ತನ್ನ ಪ್ರಬುದ್ದ ಕಲಿಕೆ, ಗುಣಮಟ್ಟದ ಶಿಕ್ಷಣದಿಂದ ಹೆಸರನ್ನು ಗಟ್ಟಿಗೊಳಿಸಿಕೊಂಡ ಸುಮಂಗಲಾ ಅವರ ಟ್ಯೂಷನ್ ಕೇಂದ್ರ ಇಂದು ದಾಂಡೇಲಿ ನಗರದಲ್ಲಿ ಅಗ್ರ ಹೆಸರಿನೊಂದಿಗೆ ಮುಂಚೂಣಿಯಲ್ಲಿದೆ.

ಸೆಂಟ್ ಮೈಕಲ್ ಕಾನ್ವೆಂಟ್ ಹೈಸ್ಕೂಲಿನ ಸುವರ್ಣ ಮಹೋತ್ಸವ ಸಮಿತಿಯ ಸಕ್ರೀಯ ಪದಾಧಿಕಾರಿಯಾಗಿ, ಸುವರ್ಣ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಸುಮಂಗಲಾ ಅವರು ಯಶಸ್ವಿಯಾಗಿ, ಸ್ವಾಭಿಮಾನಿಯಾಗಿ, ಶ್ರಮವಹಿಸಿ ಬದುಕು ಕಟ್ಟಿಕೊಳ್ಳುವುದರ ಮೂಲಕ ಎಲ್ಲರಿಗೂ ಪ್ರೇರಣಾದಾಯಿಯಾಗಿದ್ದಾರೆ.

ಜೀವನದಲ್ಲಿ ಕಣ್ಣೀರನ್ನು ಉಂಡು ತಿಂದು, ಯಶಸ್ಸಿನ ಮೆಟ್ಟಿಲೇರುತ್ತಿರುವ ಶ್ರಮಸಾಧಕಿ ಸುಮಂಗಲಾ ಅವರ ಜೀವನ ಸಾಧನೆಗೆ ಅವರಪ್ಪ, ಅವರಮ್ಮ, ಅತ್ತೆ, ಮಾವನ ಆಶೀರ್ವಾದ, ಸ್ವರ್ಗಸ್ಥರಾಗಿದ್ದರೂ ಅಂದು ಪತಿಯವರು ನೀಡಿದ ಪ್ರೋತ್ಸಾಹ, ಮುದ್ದಿನ ಮಕ್ಕಳಾದ ನಿಧಿ ಮತ್ತು ಸಿದ್ದಾರ್ಥ ಅವರುಗಳ ಅಕ್ಕರೆಯ ಪ್ರೀತಿ, ಕಟುಂಬಸ್ಥರ, ಬಂಧುಗಳ ಸಹಕಾರ ಸ್ಮರಣೀಯ.

ಸ್ವಾಭಿಮಾನಿ ಸಹೋದರಿ ಸುಮಂಗಲಾ ಅವರಿಗೆ ಮಗದೊಮ್ಮೆ ಜನ್ಮದಿನದ ಶುಭಾಶಯಗಳು.

ನಿಮ್ಮ ಸಹೋದರ,

ಸಂದೇಶ್.ಎಸ್.ಜೈನ್
 
 

Friday, December 28, 2018

ಸಿ.ಎಸ್.ಆರ್ ಯೋಜನೆಯಡಿ ಸಮಾಜಮುಖಿಯಾಗಿ ಗಮನ ಸೆಳೆದ ವೆಸ್ಟ್ ಕೊಸ್ಟ್ ಪೇಪರ್ ಮಿಲ್







ದಾಂಡೇಲಿ: ರಾಷ್ಟ್ರದ ಪ್ರತಿಷ್ಟಿತ ಕಾರ್ಖಾನೆಗಳಲ್ಲಿ ಒಂದಾದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಳೆದ ಅನೇಕ ವರ್ಷಗಳಿಂದ ದಾಂಡೇಲಿ ಹಾಗೂ ದಾಂಡೇಲಿ ಸುತ್ತಲ ಪ್ರದೇಶಗಳು ಹಾಗೂ ಹಳಿಯಾಳ ಮತ್ತು ಜೊಯಿಡಾ ತಾಲೂಕಿಗೆ ಸಂಬಂಧಿಸಿದಂತೆ ಅನೇಕ ಜನಪರ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಜನಮುಖಿಯಾಗಿ ಹಾಗೂ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ.

ವಿಶೇಷವಾಗಿ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿ ಅಂದರೆ ಸಿ.ಎಸ್.ಆರ್ ಯೋಜನೆಯಡಿ ಹಲವಾರು ವರ್ಷಗಳಿಂದ ವಿವಿಧ ಶಾಲಾ/ಕಾಲೇಜುಗಳಿಗೆ, ಸಾರ್ವಜನಿಕ ಕ್ಷೇತ್ರಗಳಿಗೆ ಅತ್ಯಗತ್ಯ ಮೂಲಸೌಕರ್ಯಗಳನ್ನು ಒದಗಿಸಿದ ಶ್ರೇಯಸ್ಸು ಕಾಗದ ಕಾರ್ಖಾನೆಗಿದೆ. 

ಮೊನ್ನೆ ನವಂಬರ್ ತಿಂಗಳಿನಿಂದ ಈವರೇಗೆ ಒಟ್ಟು ಎರಡು ತಿಂಗಳಲ್ಲಿ ಕಾಗದ ಕಾರ್ಖಾನೆ ತನ್ನ ಸಿ.ಎಸ್.ಆರ್ ಯೋಜನೆಯಡಿ ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಎಜುಕೇಶನ್ ಟ್ರಸ್ಟ್ ಇಲ್ಲಿಯ ಶಾಲೆಗೆ ರೂ:1,80,000/- ವೆಚ್ಚದಲ್ಲಿ 50 ಡೆಸ್ಕ್ ಕಂ ಬೆಂಚುಗಳನ್ನು ಒದಗಿಸಿದೆ. ಸಿದ್ದಾಪುರ ತಾಲೂಕಿನ ಕಾಳಿಕಾ ಭವನಿ ಆಂಗ್ಲ ಮಾಧ್ಯಮ ಶಾಲೆಗೆ ರೂ: 36,000/- ವೆಚ್ಚದಲ್ಲಿ 10 ಡೆಸ್ಕ್ ಕಂ ಬೆಂಚುಗಳನ್ನು, ರೂ:78,000/- ವೆಚ್ಚದಲ್ಲಿ 3 ಕಂಪ್ಯೂಟರ್ಸ್ ಗಳನ್ನು, ರೂ: 28,000/- ವೆಚ್ಚದಲ್ಲಿ 1 ನೀರಿನ ಟ್ಯಾಂಕನ್ನು ವಿತರಿಸಲಾಗಿದೆ.

ದಾಂಡೇಲಿಯ ಟೌನ್ಶೀಪ್, ಹಳಿಯಾಳ ರಸ್ತೆಯಲ್ಲಿರುವ ಅಲೈಡ್ ಏರಿಯದಲ್ಲಿರುವ ಹಾಗೂ ನಿರ್ಮಲ ನಗರದಲ್ಲಿರುವ ಒಟ್ಟು ಮೂರು ಅಂಗನವಾಡಿ ಕೇಂದ್ರಗಳಿಗೆ ಹಾಗೂ ಹಳಿಯಾಳದ ಗುಂಡಿಕೇರಿ ಮತ್ತು ಬಸವನಗಲ್ಲಿ ಅಂಗನವಾಡಿ ಕೇಂದ್ರಗಳಿಗೆ ಒಟ್ಟು ರೂ: 1 ಲಕ್ಷ ವೆಚ್ಚದಲ್ಲಿ 32 ಇಂಚಿನ ಒಟ್ಟು 5 ಎಲ್.ಇ.ಡಿ ಟಿವಿಗಳನ್ನು ವಿತರಿಸಲಾಗಿದೆ. ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ರೂ: 25,000/- ವೆಚ್ಚದಲ್ಲಿ 24 ಇಂಚಿನ 1 ಎಲ್.ಇ.ಡಿ ಟಿವಿಯನ್ನು ನೀಡಲಾಗಿದೆ.

ಬಂಗೂರನಗರ ಪಿಯು ಕಾಲೇಜಿಗೆ ರೂ: 1,38,800/- ಮೊತ್ತದಲ್ಲಿ 2 ಶುದ್ದ ಕುಡಿಯುವ ನೀರಿನ ಘಟಕವನ್ನು, ಬಂಗೂರುನಗರ ಪದವಿ ಕಾಲೇಜಿಗೆ ರೂ:64,000/- ವೆಚ್ಚದಲ್ಲಿ 1 ಶುದ್ದ ಕುಡಿಯುವ ನೀರಿನ ಘಟಕ ಮತ್ತು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೂ: 64,000/- ವೆಚ್ಚದಲ್ಲಿ 1 ಶುದ್ದ ಕುಡಿಯುವ ನೀರಿನ ಘಟಕವನ್ನು ಕಾಗದ ಕಾಖರ್ಾನೆ ಉಚಿತವಾಗಿ ನೀಡಿ ಗಮನ ಸೆಳೆದಿದೆ. ಒಟ್ಟಾರೆಯಾಗಿ ಕಳೆದೆರಡು ತಿಂಗಳಿನಿಂದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಒಟ್ಟು ರೂ: 7,13,800/- ಮೊತ್ತವನ್ನು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯ ಈ ಕಾರ್ಯಕ್ರಮಕ್ಕೆ ಬಳಕೆ ಮಾಡಿದಂತಾಗಿದೆ. ಇವುಗಳ ಹೊರತಾಗಿಯೂ ದಾಂಡೇಲಿ ಹಾಗೂ ಜೊಯಿಡಾದ ಸಾರ್ವಜನಿಕ ಆಸ್ಪತ್ರೆಗಳಿಗೆ ಶವವನ್ನು ಇಡುವ ಪ್ರಿಜರ್ ಯಂತ್ರವನ್ನು ಉಚಿತವಾಗಿ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಉಳಿದಂತೆ ಕಳೆದ ಅನೇಕ ವರ್ಷಗಳಿಂದ ನಗರದ ವಿವಿಧ ಸಾರ್ವಜನಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೈ ಜೋಡಿಸಿರುವುದಲ್ಲದೇ, ಬಡ ಮಕ್ಕಳ ಶಿಕ್ಷಣಕ್ಕೆ ಶಿಕ್ಷಣ ನೆರವು ಹೀಗೆ ಮೊದಲಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನಸಾಮಾನ್ಯರ ಅಚ್ಚುಮೆಚ್ಚಿನ ಕಾರ್ಖಾನೆಯಾಗಿ ಗಮನ ಸೆಳೆಯುತ್ತಿದೆ.
 
ಸಂಕಷ್ಟಕ್ಕೆ ಸ್ಪಂದಿಸುವ ಹೃದಯವಂತ ಸತೀಶ ಬೆಂಡೆ
ಗುಣವಂತ ಸತೀಶ ಬೆಂಡೆಯವರಿಗೆ ಜನ್ಮದಿನದ ಸಂಭ್ರಮ








ಸಂಕಷ್ಟಕ್ಕೆ ಸ್ಪಂದಿಸುವ ಹೃದಯವಂತ ಸತೀಶ ಬೆಂಡೆ
ಗುಣವಂತ ಸತೀಶ ಬೆಂಡೆಯವರಿಗೆ ಜನ್ಮದಿನದ ಸಂಭ್ರಮ
ಅವರು ಎಲ್ಲರಂತಲ್ಲ. ತಾನಷ್ಟೆ ಬದಕಬೇಕೆಂದು ಬಯಸಿ ಬದುಕುವ ಪರಿಪಾಠ ಅವರದ್ದಲ್ಲ. ತನ್ನ ಜೊತೆ ತಮ್ಮವರು ಬದುಕು ಕಟ್ಟಿಕೊಳ್ಳಬೇಕು. ಸರ್ವರು ಸುಖದ ಬಾಳು ಕಟ್ಟಿಕೊಳ್ಳಬೇಕೆಂಬ ಹೆಬ್ಬಯಕೆಯನ್ನು ಹೊಂದಿದ ವಿಶಾಲ ಹೃದಯದ ಹೃದಯವಂತ. ಇನ್ನೊಬ್ಬರ ಸಂತಸದಲ್ಲೆ ತನ್ನ ಸಂತಸವನ್ನು ಕಂಡ ಅಪರೂಪದ ಅಪೂರ್ವ ವ್ಯಕ್ತಿಯವರು. ರಾಜಕೀಯವಾಗಿ 38 ವರ್ಷಗಳಿಂದ ಗುರುತಿಸಿಕೊಂಡರೂ, ಎಲ್ಲಿಯೂ ಪದವಿ, ಕುರ್ಚಿ ಆಸೆಗೆ ಬಲಿ ಬೀಳದೆ ನಿಸ್ವಾರ್ಥವಾಗಿ ರಾಜಕೀಯ ಸೇವೆಗೈದ ಪರಿಣತ ರಾಜಕಾರಣಿ. ಅವರು ಮನಸ್ಸು ಮಾಡಿದರೇ ಯಾವತ್ತೋ ನಿಗಮ-ಮಂಡಳಿಯಲ್ಲಿ ಬಹುದೊಡ್ಡ ಹುದ್ದೆಯನ್ನು ಪಡೆಯಬಹುದಿತ್ತು. ಅದು ಮಾಡಲಿಲ್ಲ. ಆದರೆ ಅವರು ಬಹಳಷ್ಟು ಜನರನ್ನು ರಾಜಕೀಯಕ್ಕೆ ಕರೆತಂದು ಸಕ್ರೀಯ ಚುನಾವಣಾ ಅಖಾಡಕ್ಕಿಳಿಸಿ ಅಧಿಕಾರದ ಗದ್ದುಗೆಗೆ ಏರಿಸಿದರಾದರೂ ಅವರೆಂದೂ ಸಕ್ರೀಯ ಚುನಾವಣಾ ಹಣಹಣಿಗೆ ಇಳಿದವರಲ್ಲ. ತಾನಾಯಿತು, ತನ್ನ ಕೆಲಸವಾಯ್ತೆಂದು, ಸ್ವಚ್ಚ ಹೃದಯದಿ ಕೆಲಸ ಮಾಡಿದ ನನ್ನ ನೆಚ್ಚಿನ ಮತ್ತು ಮೆಚ್ಚಿನ ಹಿರಿಯಣ್ಣ. ಇಷ್ಟಾದ ಮೇಲೆ ಅವರ ಹೆಸರು ಹೇಳಲೆಬೇಕು. ಅವರ್ಯಾರು ಬೇರೆಯವರಲ್ಲ, ಸ್ಟೈಲಿಸ್ ಹಾಗೂ ಸೈಂಟಿಷ್ಟ್ ಗಡ್ಡದಾರಿ, ಕಟುಮಸ್ತಾದ ಪರ್ಸನಾಲಿಟಿಯನ್ನು ಹೊಂದಿದ ಮಧುರ ಮನಸ್ಸಿನ ನಮ್ಮ ಹೆಮ್ಮೆಯ ಸತೀಶ ಬೆಂಡೆಯವರು.

ನಮ್ಮ ಹಿರಿಯಣ್ಣ ಸತೀಶ ಬೆಂಡೆಯವರಿಗೆ ಇಂದು ಜನ್ಮದಿನದ ಸಂಭ್ರಮ. ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನಿಸ್ವಾರ್ಥ ಮನಸ್ಸಿನ ವೀರಸಾಮ್ರಾಟ್ ಸತೀಶ ಬೆಂಡೆಯವರಿಗೆ ಹಾರ್ದಿಕ ಶುಭಾಶಯಗಳು.

ನನ್ನ ಅವರ ಪರಿಚಯವಾಗಿ ಬಹಳಷ್ಟು ವರ್ಷಗಳು ಸಂದವು. ಆಗ 2007 ನೇ ವರ್ಷ ನಾನು ದೇಶಪಾಂಡೆ ರುಡ್ಸೆಟಿನ ದಾಂಡೇಲಿ ಶಾಖೆಯ ಯೋಜನಾಧಿಕಾರಿಯಾಗಿದ್ದೆ. ಅವರು ಸದಾ ಇರುತ್ತಿದ್ದ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಹೋಗುತ್ತಿದ್ದರೂ ಅವರ ಪರ್ಸನಾಲಿಟಿ ನೋಡಿ, ಈ ಮನುಷ್ಯ ಸ್ವಲ್ಪ ಸೊಕ್ಕಿನ ಮನುಷ್ಯ, ಕೋಪಿಷ್ಟ ಅಂದುಕೊಂಡು ಅವರಿಂದ ಸ್ವಲ್ಪ ದೂರವಿದ್ದೆ. ಅದು ಅವರ ತಪ್ಪಲ್ಲ. ಒಂದು ವ್ಯಕ್ತಿಯ ಪರ್ಸನಾಲಿಟಿ ನೋಡಿ ಅವರ ವ್ಯಕ್ತಿತ್ವವನ್ನು ಅಳೆಯುವ ಮನಸ್ಸು ನಮ್ಮದಾಗಬಾರದು. ಆಗ ನಾನು ಹಾಗೆ ಮಾಡಿದ್ದೆ. ಆದರೆ ದಿನ ಉರುಳಿದಂತೆ ಅವರ ಬಳಿ ಮಾತಾಡಲು ಪ್ರಾರಂಭಿಸಿದೆ, ಅವರ ಜೊತೆ ಉತ್ತಮ ಸಂಬಂಧವನ್ನಿಟ್ಟುಕೊಳ್ಳಲು ಆರಂಭಿಸಿದೆ. ಆವಾಗ್ಲೆ ತಿಳಿಯಿತು ನೋಡಿ, ಸತೀಶ ಬೆಂಡೆಯವರು ಒಬ್ಬ ಗ್ರೇಟ್ ಹೃದಯವಂತ ಎನ್ನುವುದು. ಅಲ್ಲಿಂದ ನನ್ನ ಅವರ ನಡುವಿನ ಸಹೋದರತ್ವದ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗತೊಡಗಿತು.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಮ್ಮ ಬೆಂಡೆಯವರ ಬಗ್ಗೆ ನನಗಿನಿಸಿದ್ದನ್ನು ಬರೆಯಲು ಅಣಿಯಾಗಿದ್ದೇನೆ. ನಮ್ಮ ಸತೀಶ ಬೆಂಡೆಯವರು ಹೊರಗಿನವರಲ್ಲ. ಅವರು ಮೂಲತ: ಹಳಿಯಾಳದವರು. ಅವರಪ್ಪ ಉದ್ಯೋಗವನ್ನರಸಿ ದಾಂಡೇಲಿಯ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿಗೆ ಬಂದು ಇಲ್ಲೆ ಸಟ್ಲಾದವರು. ಶಿಸ್ತಿನ ಸಿಪಾಯಿ, ನಿಜ ಹೇಳಬೇಕಾಂದ್ರೆ ಮಿಲಿಟ್ರಿ ಸಿಸ್ಟಂನ್ನು ಜೀವನದಲ್ಲಿ ಆಳವಡಿಸಿಕೊಂಡ ಸರಳ ಹಾಗೂ ನೇರ ನಡೆ ನುಡಿಯ ಮನೋಹರ ವಿಠ್ಠಲ ಬೆಂಡೆ ಹಾಗೂ ಸರ್ವರಿಗೂ ಅಮ್ಮನೆ ಆಗಿರುವ ಶುಭ್ರ ಬಿಳಿ ಬಣ್ಣದ ಅಮ್ಮ ಶಾಲಿನಿ.ಎಂ.ಬೆಂಡೆ ದಂಪತಿಗಳ ಜೇಷ್ಟ ಪುತ್ರ ನಮ್ಮ ಸತೀಶ ಬೆಂಡೆಯವರು. ಅಂದ ಹಾಗೆ ಸತೀಶ ಬೆಂಡೆಯವರಿಗೆ ಸಂದ್ಯಾ, ಸ್ಮಿತಾ ಮತ್ತು ಸಂಗೀತಾ ಎಂಬ ಮೂವರು ಸಹೋದರಿಯರಿದ್ದಾರೆ.

ಈ ಕುಟುಂಬಕ್ಕೆ ಒಬ್ಬನೆ ಒಬ್ಬ ಮಗ ಅಪ್ಪನಂತೆ ದಷ್ಟ ಪುಷ್ಟ ಪರ್ಸನಾಲಿಟಿಯ ಸತೀಶ ಅವರು. ಬಾಲಕನಿರುವಾಗ್ಲೇ ಎತ್ತಿಕೊಳ್ಳಲು ಆಗದೆ ಸತೀಶ ಅವರ ತಾಯಿ ಹೆಣಗಾಡುತ್ತಿದ್ದಾರಂತೆ. ಅದರ ಅರ್ಥ ವೈಟ್ ಜಾಸ್ತಿ ಇದ್ದರೂ ಎನ್ನುವುದನ್ನು ಹೆಚ್ಚು ವಿವರಿಸುವ ಅಗತ್ಯವಿಲ್ಲ ಬಿಡಿ. ಮೊದಲೆ ಬೆಂಡೆ ಪ್ಯಾಮಿಲಿ ಅಂದ್ರೆ ಕರಿದ ತಿಂಡಿ, ತುಪ್ಪ, ಬೆಣ್ಣೆ ಅವರ ಅಡುಗೆ ಮನೆಯ ಪ್ರಮುಖ ಆಸ್ತಿಯಾಗಿದ್ದವು. ಇವೆಲ್ಲವೂ ಇದ್ದ ಮೇಲೆ ಸತೀಶ ಅವರು ಎಲ್ಲರಿಗಿಂತ ದುಪ್ಪಟ್ಟು ವೈಟ್ ಜಾಸ್ತಿ ಇರ್ಲೆಬೇಕಾಲ್ವೆ.

ಅದೀರಲಿ, ನಮ್ಮ ಸತೀಶ ಬೆಂಡೆಯವರು ಎಳೆಯ ಪ್ರಾಯದಲ್ಲೆ ಚುರುಕಿನ ಬಾಲಕರಾಗಿದ್ದವರು. ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಗೂರನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಮುಂದೆ ಜೆವಿಡಿಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದರು. ಆನಂತರ ಬಂಗೂರನಗರ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮಾಡಿ, ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದರು. ಆನಂತರ ಮೂಲತ: ಹಳಿಯಾಳದವರಾದ ಕಾರಣ, ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂದು ಹಂಬಲಿಸಿ, ಕೃಷಿ ವಿಷಯದಲ್ಲಿ ಡಿಪ್ಲೋಂ ಕೋರ್ಸನ್ನು ಮಾಡಿದರು.

ಅತ್ಯುತ್ತಮ ಕ್ರೀಡಾಪಟು ನಮ್ಮ ಬೆಂಡೆಯವರು:

ಶಾಲಾ/ಕಾಲೇಜು ಅವಧಿಯಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿ ಗಮನ ಸೆಳೆದವರು ನಮ್ಮ ಸತೀಶ ಬೆಂಡೆಯವರು. ಅತ್ಯುತ್ತಮ ವಾಲಿಬಾಲ್ ಆಟಗಾರರಾಗಿ ಶಾಲಾ/ಕಾಲೇಜಿನ ತಂಡವನ್ನು ಅನೇಕ ಪಂದ್ಯಾವಳಿಗಳಲ್ಲಿ ಜಯಭೇರಿ ಬಾರಿಸಿದ ಹೆಮ್ಮೆ ನಮ್ಮ ಸತೀಶ ಅವರಿಗಿದೆ. ಕ್ರಿಕೆಟ್, ಖೋಖೊ, ರನ್ನಿಂಗ್ ರೇಸ್, ಲಾಂಗ್ ಜಂಪ್ ಇವೆಲ್ಲವೂ ಅವರ ಇಷ್ಟದ ಕ್ರೀಡೆಗಳಾಗಿದ್ದವು. ಆಳೆತ್ತರದ ಪರ್ಸನಾಲಿಟಿಯಾದರೂ ಅತ್ಯುತ್ತಮ ಹಾಡುಗಾರರಾಗಿ, ಭಾಷಣಕಾರರಾಗಿ ವಿದ್ಯಾರ್ಥಿ ದೆಸೆಯಲ್ಲೆ ಎಲ್ಲರ ಗಮನ ಸೆಳೆದವರು ಇದೇ ನಮ್ಮ ನಗುಮೊಗದ ಸತೀಶ ಬೆಂಡೆಯವರು.

ಕಿಂಗ್ ಆಗಬೇಕಾದವರು ಕಿಂಗ್ ಮೇಕರ್ ಆಗಿ, ಅದೇ ರೀತಿ ಮುಂದುವರಿಯುತ್ತಿರುವವರು ನಮ್ಮ ಸತೀಶ ಬೆಂಡೆಯವರು:
ಸತೀಶ ಬೆಂಡೆಯವರು ಅವರ ನಡೆ ನುಡಿಯ ಪ್ರಕಾರ ಯಾವತ್ತೋ ಅವರು ಕಿಂಗ್ ಆಗಬೇಕಿತ್ತು. ಆದರೆ ಅವರಿಗೆ ಅದು ಇಷ್ಟವಿರಲಿಲ್ಲ. ಬಂಗೂರನಗರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗುವ ಎಲ್ಲ ಅವಕಾಶ ಸತೀಶ ಅವರಿಗೆ ಬಂದಿತ್ತಾದರೂ ಅದನ್ನು ಅವರು ಸ್ವೀಕರಿಸದೇ ಅವರ ಜೀವದ ಗೆಳೆಯನನ್ನು ವಿದ್ಯಾರ್ಥಿ ನಾಯಕನನ್ನಾಗಿಸಿ ಕಿಂಗ್ ಮೇಕರ್ ಆಗಿ ಶ್ರಮಿಸಿದ ರೀತಿ ಅತ್ಯಂತ ಶ್ಲಾಘನೀಯ. ಹಾಗಾಗಿ ಅವರು ಈವರೇಗೂ ಕಿಂಗ್ ಆಗದೇ ಕಿಂಗ್ ಮೇಕರ್ ಆಗಿ ಎಲೆಮರೆ ಕಾಯಿಯಂತೆ ಕೆಲಸ ಮಾಡುವುದರ ಮೂಲಕ ಸರ್ವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅವರ ಕೆಲಸ, ಶೃದ್ದೆಯನ್ನು ಜನ ಸ್ಮರಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದ್ರೆ ದೇವರು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವುದು ಮಾತ್ರ ಸತ್ಯ ಕಣ್ರೀ.

ಅಮ್ಮನ ಮಡಿಲಲ್ಲಿದ್ದುಕೊಂಡೆ ಬದುಕು ಕಟ್ಟಿಕೊಂಡ ಸಹೃದಯಿ ನಮ್ಮ ಬೆಂಡೆಯವರು:

ಸತೀಶ ಬೆಂಡೆಯವರಿಗೆ ಅವರ ಪರ್ಸನಾಲಿಟಿ ಮತ್ತು ಕ್ರಿಯಾಶೀಲತೆಗೆ ಅನುಗುಣವಾಗಿ ಅವರಿಗೆ ಬೆಂಗಳೂರು ಮತ್ತು ಮಹರಾಷ್ಟ್ರದಲ್ಲಿ ಉದ್ಯೋಗದ ಬಹುದೊಡ್ಡ ಆಫರ್ ಬಂದಿತ್ತು. ಆದರೆ ಆ ಎಲ್ಲ ಅವಕಾಶಗಳನ್ನು ನಯವಾಗಿ ತಿರಸ್ಕರಿಸಿ, ಬದುಕಿದರೇ ಗಂಜಿ ನೀರು ಕುಡಿದಾದರೂ ಅಮ್ಮನ ಮಡಿಲಲ್ಲೆ ಇದ್ದುಕೊಂಡು ಬದುಕು ಕಟ್ಟಿಕೊಳ್ಳುತ್ತೇನೆಂದು ಅಚಲ ಗುರಿಯಿಟ್ಟುಕೊಂಡು ಜೀವನವನ್ನು ಕಟ್ಟಿದವರು ನಮ್ಮ ಸತೀಶ ಅವರು. ಇದರ ಫಲಶೃತಿ ಎಂಬಂತೆ, ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನಲ್ಲಿ ಉನ್ನತ ಉದ್ಯೋಗ ಅವರಿಗೆ ಲಭಿಸಿತು.  ಕಾಗದ ಕಾರ್ಖಾನೆಯ ಇನ್ಸ್ಟ್ರುಮೆಂಟ್ ವಿಭಾಗದಲ್ಲಿ ಅಧಿಕಾರಿಯಾಗಿ ಸೇರಿ ಇದೀಗ ಮುಂಭಡ್ತಿಗೊಂಡು ಉನ್ನತ ಹುದ್ದೆಯಲ್ಲಿ ಇರುವ ಸತೀಶ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಹಿರಿಯ ಅಧಿಕಾರಿಗಳ ಪ್ರೀತಿ, ವಾತ್ಸಲ್ಯಕ್ಕೆ ಪಾತ್ರರಾಗಿದ್ದಾರೆ.

38 ವರ್ಷಗಳಿಂದ ಸಾರ್ಥಕ ರಾಜಕೀಯ ಸೇವೆಯಲ್ಲಿ ನಮ್ಮ ಸತೀಶಣ್ಣ:
ನಮ್ಮ ಸತೀಶ ಬೆಂಡೆಯವರಿಗೆ ಅವರ ಮುತ್ತಾತನ ಕಾಲದಿಂದಲೂ ಸಚಿವ ದೇಶಪಾಂಡೆಯವರ ಕುಟುಂಬದ ಜೊತೆ ಉತ್ತಮ ಒಡನಾಟ. ಹಾಗಾಗಿ ಸಹಜವಾಗಿಯೆ ಸತೀಶ ಬೆಂಡೆಯವರು ಸಚಿವ ಆರ್.ವಿ.ದೇಶಪಾಂಡೆಯವರ ಅತ್ಯಂತ ಹತ್ತಿರದ ನಿಕಟವರ್ತಿಯಾಗತೊಡಗಿದರು. 1980 ರಲ್ಲೆ ವೃತ್ತಿಯ ಜೊತೆಗೆ ದೇಶಪಾಂಡೆಯರ ಅಭಿಮಾನಿಯಾಗಿ ಸಕ್ರೀಯ ರಾಜಕಾರಣಕ್ಕೆ ದುಮುಕಿದ ಸತೀಶ ಬೆಂಡೆಯವರು ಈವರೇಗೂ ಚುನಾವಣಾ ರಾಜಕೀಯಕ್ಕಿಳಿಯಲಿಲ್ಲ. ಸಚಿವ ದೇಶಪಾಂಡೆಯವರ ಚುನಾವಣಾ ಸಮಯದಲ್ಲಿ ಶಕ್ತಿಮೀರಿ ದುಡಿಯುವುದರ ಮೂಲಕ ಸಚಿವ ದೇಶಪಾಂಡೆಯವರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ ಅವರ ಅಪ್ಪುಗೆ ಮತ್ತು ಒಪ್ಪುಗೆಗೆ ಪಾತ್ರರಾದವರು ನಮ್ಮ ಸತೀಶ ಬೆಂಡೆಯವರು.
ರಾಜಕೀಯವಾಗಿ ಎಲ್ಲಿಯೂ ಹುದ್ದೆಯ ವ್ಯಾಮೋಹಕ್ಕೆ ಬಲಿಯಾಗದೇ, ನಿಸ್ವಾರ್ಥ ರಾಜಕಾರಣ ಮಾಡುತ್ತಾ ಬಂದಿರುವ ಸತೀಶ ಅವರು ನಗರ ಸಭಾ ಚುನಾವಣೆಯಲ್ಲಿ ಬಹಳಷ್ಟು ಜನರನ್ನು ಸಕ್ರೀಯ ಚುನಾವಣಾ ರಾಜಕಾರಣಕ್ಕೀಳಿಯುವಂತೆ ಮಾಡಿ ಅವರ ಗೆಲುವಿಗೆ ಪ್ರಾಮಾಣಿಕವಾಗಿ ದುಡಿದ ಮೇರು ವ್ಯಕ್ತಿತ್ವದ ಕ್ಲೀನ್ ಇಮೇಜಿನ ಅಪೂರ್ವ  ರಾಜಕಾರಣಿ ಎನ್ನುವುದು ಸತ್ಯ.

ಸಾಮಾಜಿಕ ರಂಗದಲ್ಲಿ ಬೆಂಡೆ:
ರಾಜಕೀಯದ ಜೊತೆ ಜೊತೆಗೆ ಸಾಮಾಜಿಕ ರಂಗದಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮೂಲಕ ಸ್ನೇಹಜೀವಿಯಾಗಿರುವ ಸತೀಶ ಬೆಂಡೆಯವರು ಸಂಕಷ್ಟಕ್ಕೊಳಗಾದವರಿಗೆ ತಕ್ಷಣ ಸ್ಪಂದಿಸುವುದರ ಮೂಲಕ ಬಹಳಷ್ಟು ಜನರ ಕಣ್ಣೀರನ್ನು ಒರೆಸಿದ ಧನ್ಯತೆಗೆ ಪಾತ್ರರಾಗಿದ್ದಾರೆ.

ಅಮ್ಮನೊಟ್ಟಿಗೆ ಇನ್ನು ಪುಟ್ಟ ಮಗು ನಮ್ಮ ಸತೀಶ ಬೆಂಡೆ:
ಅವರಮ್ಮ ಶಾಲಿನಿಯವರಿಗೆ ನಮ್ಮ ಸತೀಶ ಅವರು ಇನ್ನು ಪುಟ್ಟು ಮಗುವಿದ್ದಂತೆ. ನಮ್ಮ ಸತೀಶ ಬೆಂಡೆಯವರು ಈಗಲೂ ಅಮ್ಮನಿಗೆ ಪುಟ್ಟ ಮಗುವಿನಂತೆ ಇರುವುದನ್ನು ನೋಡುವುದೆ ಒಂದು ಸೊಬಗು. ಅಮ್ಮ-ಮಗನ ಆತ್ಮೀಯತೆ, ಅವರ ನಡುವಿನ ಸೊಗಸಾದ ನಗುವಿನಾಟವನ್ನು ಕಣ್ತುಂಬಿಕೊಳ್ಳುವುದೆ ಒಂದು ಸಂಭ್ರಮ.

ವೃತ್ತಿ, ರಾಜಕೀಯ ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನ ವರ್ಚಸ್ಸಿನ ಮೂಲಕ ದಾಂಡೇಲಿಗರ ಮನಗೆದ್ದ ಸತೀಶ ಬೆಂಡೆಯವರು ಜೀವನದ ಮಹತ್ವದ ಗುರಿಯನ್ನು ಈಡೇರಿಸಿಕೊಂಡು ಶ್ರಮದ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಜೀವನದಲ್ಲಿ ಇನ್ನೊಬ್ಬರ ಒಳಿತಿಗಾಗಿ ಹಲವಾರು ನೋವುಗಳನ್ನು ಉಂಡರೂ, ಶ್ರಮದ ಹಾದಿಯಲ್ಲಿ ಮುನ್ನಡೆದು ಯಶಸ್ಸಿನ ರಾಜದಾರಿಯಲ್ಲಿ ಪಯಾಣಿಸುತ್ತಿರುವ ಸತೀಶ ಬೆಂಡೆಯವರ ಜೀವನ ಯಶಸ್ಸಿಗೆ ಅವರಪ್ಪ, ಅವರಮ್ಮನ ಆಶೀರ್ವಾದ, ಸದಾ ನಗುವಿನ ಮೂಲಕವೆ ಸತೀಶ ಅವರಿಗೆ ಆಸರೆಯಾಗುತ್ತಿರುವ ಅವರ ಪ್ರೀತಿಯ ಧರ್ಮಪತ್ನಿ  ಸಂಜನಾ ಬೆಂಡೆಯವರ ಪ್ರೋತ್ಸಾಹ, ಮಕ್ಕಳಾದ ಅಶೀಶ್ ಮತ್ತು ಪ್ರೇಮ್ ಅವರುಗಳ ಅಕ್ಕರೆಯ ಪ್ರೀತಿ, ಸಹೋದರಿಯರ, ಕುಟುಂಬಸ್ಥರ, ಗೆಳೆಯರ ಸಹಕಾರ, ಪ್ರೋತ್ಸಾಹವು ಕಾರಣ.

ಎಲ್ಲರ ಮನಗೆದ್ದ ಹೃದಯಸಾಮ್ರಾಟ್ ಸತೀಶಣ್ಣ ಮಗದೊಮ್ಮೆ ತಮಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮವ

ಸಂದೇಶ್.ಎಸ್.ಜೈನ್




 

Tuesday, December 25, 2018


ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದಿಂದ ಕ್ರಿಸ್ಮಸ್ ನಿಮಿತ್ತ ಹದಿನೈದು ಅಡಿ ಎತ್ತರದ ನಕ್ಷತ್ರ
ದಾಂಡೇಲಿ : ಸರ್ವಧರ್ಮಿಯರನ್ನು ಒಳಗೊಂಡು ಸರ್ವ ಧರ್ಮಗಳ ಹಬ್ಬ ಹರಿದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುವ ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದವರು ಡಿ:24 ರಂದು ರಾತ್ರಿ ಹದಿನೈದು ಅಡಿ ಎತ್ತರದ ನಕ್ಷತ್ರವನ್ನು ರಚಿಸಿ, ಅದಕ್ಕೆ ವಿದ್ಯುತ್ ಆಲಂಕಾರವನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಯುವಕ ಮಂಡಳದ ಸರ್ವಧರ್ಮ ಸಮನ್ವಯತೆಯ ಕಾರ್ಯಕ್ಕೆ ನಗರದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

 

Sunday, December 23, 2018

ನನಗೆ ಮಾರ್ಗದರ್ಶಕರಾಗಿ ಆಶೀರ್ವದಿಸುತ್ತಿದ್ದ ಪ್ರಭು ಅಂಕಲ್ ಇನ್ನಿಲ್ಲ
ಅಸ್ತಂಗತರಾದ ಮಂಜುನಾಥ ನಾಗಪ್ಪ ಪ್ರಭು

ದಾಂಡೇಲಿ : ಬಹಳ ನೋವು ಮತ್ತು ಅತ್ಯಂತ ದುಖ:ದಿಂದ ಇವತ್ತು ಬರೆಯಲು ಹೊರಟಿದ್ದೇನೆ. ಕಳೆದೆರಡು ವರ್ಷಗಳ ಹಿಂದೆ ನಾನು ನನ್ನ ಬಾಡಿಗೆ ಮನೆಯನ್ನು ವನಶ್ರೀನಗರದ ದಿ: ರಘುನಾಥ ಗವಸ ಅವರ ಮನೆಗೆ ಸ್ಥಳಾಂತರಿಸಿದ್ದೇನು. ನನ್ನ ಬಾಡಿಗೆ ಮನೆಯ ಪಕ್ಕದಲ್ಲಿದ್ದವರೇ ನಿನ್ನೆ ದಿನ ದಿನ ನನ್ನಂತಹ ಅನೇಕರಿಗೆ ಮಾರ್ಗದರ್ಶನ ನೀಡಿ ಹರಸಿ, ಆಶೀರ್ವದಿಸುತ್ತಿದ್ದ ಪ್ರಭು ಅಂಕಲ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಇಹಲೋಕವನ್ನು ತ್ಯಜಿಸಿದರು ಎನ್ನುವುದನ್ನು ಬಹಳ ನೋವಿನ ಮನಸ್ಸಿನಿಂದ ಹೇಳಬಯಸುತ್ತೇನೆ.

ಅಂದ ಹಾಗೆ ಅವರಿಗೆ ವಯಸ್ಸು 72 ದಾಟಿ 73 ನಡೆಯುತ್ತಿದೆ. ಕಂಪ್ಯೂಟರ್ ಮತ್ತು ತಂತ್ರಜ್ಞಾನದ ವಿಚಾರದಲ್ಲಿ ಅವರ ಐದು ಪರ್ಸೆಂಟ್ ನಾನಿರಲಿಲ್ಲ ಎನ್ನುವುದು ಅಷ್ಟೆ ಸತ್ಯದ ವಿಚಾರ. ನನ್ನ ಪ್ರತಿಯೊಂದು ಬರಹಗಳನ್ನು ಓದಿ ನನ್ನನ್ನು ಹರಸುತ್ತಿದ್ದ ರೀತಿ ಇನ್ನು ನೆನಪು ಮಾತ್ರ. ನಮ್ಮ ಶ್ರೀ ಗಣೇಶ ಹಿಂದು, ಮುಸ್ಲಿಂ, ಕ್ರೈಸ್ತ ಯುವಕ ಮಂಡಳದ ಕಾರ್ಯವೈಖರಿಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿಯನ್ನು ಪಡೆದುಕೊಂಡು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದ ಅವರ ಸಮಾಜಮುಖಿ ಮನಸ್ಸು ಮನಗೆಲ್ಲಾ ಅನುಕರಣೀಯ.
ಕೆಪಿಸಿಯ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿದ್ದರೂ, ಯುವಕರನ್ನು ನಾಚಿಸುವಂತೆ ಓಡಾಡುತ್ತಿದ್ದ ಪ್ರಭು ಅಂಕಲ್ ಇಂದು ನಮ್ಮ ಜೊತೆ ಇಲ್ಲ. ಈ ವಿಚಾರವನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ನಮ್ಮ ತಂದೆ ತಾಯಿ ಕೊಡುವಂತೆಯೆ ಪ್ರೀತಿ, ಆಶೀರ್ವಾದವನ್ನು ಧಾರೆಯೆರೆಯುತ್ತಿದ್ದ ಪ್ರಭು ಅಂಕಲ್ ಅವರ ವ್ಯಕ್ತಿತ್ವ, ಅವರ ಸನ್ನಡತೆ ಮತ್ತು ಜೀವನಾದರ್ಶಗಳು ಸದಾ ಅಮರ, ಅಮರ, ಅಮರ.

ಒಬ್ಬ ಬೆಸ್ಟ್ ಪ್ರೆಂಡ್, ಒಬ್ಬ ಗೈಡರ್, ಒಬ್ಬ ಫಿಲೋಸಫರ್, ಒಬ್ಬ ಸಂಸ್ಕಾರಯುತ ನಡವಳಿಕೆಯ ದಾರ್ಶನಿಕ ಮನುಜನನ್ನು ಕಳೆದುಕೊಂಡ ನೋವು ನನಗಾಗುತ್ತಿದೆ. ಹೇ ದೇವರೇ, ನಮ್ಮ ಒಳಿತನ್ನೆ ಬಯಸುವ ಮಾನವೀಯತೆಯ ಸಕಾರಮೂರ್ತಿಯನ್ನು ನಮ್ಮ ಜೊತೆ ಇರಲಾರದೇ ಬಹುಬೇಗ ಕರೆಸಿಕೊಳ್ಳುತ್ತಿ ಯಾಕೆ? ಎಂಬ ಮಮ್ಮಲ ಮರುಗುವ ಪ್ರಶ್ನೆಗೆ ಉತ್ತರಿಸುವಿಯಾ. ಭಗವಂತ ಅಲ್ಪ ಸಮಯದಲ್ಲೆ ಕೊನೆಯ ಉಸಿರು ಇರುವವರೆಗೆ ನೆನಪಿಸಿಕೊಳ್ಳಬೇಕಾದ ಸ್ವಚ್ಚ ಹೃದಯದ ಗುಣವಂತನನ್ನು ಪರಿಚಯಿಸಿ, ಅಷ್ಟು ಬೇಗ ಎಳೆದುಕೊಂಡು ಹೋದಿಯಲ್ಲ ಎಂಬ ನೋವು ಕೊನೆ ತನಕ ನನ್ನನ್ನು ಕಾಡಿಸದಿರದು.

ಏನೇ ಇರಲಿ. ಹುಟ್ಟು ಸಾವು ನಿಶ್ಚಿತ. ಜೀವನದಲ್ಲೆಂದೂ ಯಾರಿಗೂ ನೋವು ಕೊಡದೇ ಸಮಾಜಮುಖಿಯಾಗಿ, ಸ್ವಾಭಿಮಾನಿಯಾಗಿ ಬಂಗಾರದ ಬದುಕು ಸಾಗಿಸಿದ ಪ್ರಭು ಅಂಕಲ್ ಅವರ ಜೀವನ ನಡೆ ನಮಗೆಲ್ಲಾ ಸ್ಪೂರ್ತಿ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಪ್ರಾಪ್ತಿಸಲಿ ಎಂಬ ಪ್ರಾರ್ಥನೆಯೊಂದಿಗೆ.

ಮಗದೊಮ್ಮೆ ಹುಟ್ಟಿ ಬನ್ನಿ ಪ್ರಭು ಅಂಕಲ್ ಎಂಬ ಪ್ರಾರ್ಥನೆಯೊಂದಿಗೆ,

ದುಖತೃಪ್ತ ನಿಮ್ಮವ

ಸಂದೇಶ್.ಎಸ್.ಜೈನ್
 

Friday, December 21, 2018

ಪ್ರಾಮಾಣಿಕ ಪೌರ ಕಾರ್ಮಿಕ ನಮ್ಮ ಯಹೋನ (ವಿಜಯಕುಮಾರ್) ನಿಗೆ ಜನ್ಮದಿನದ ಸಂಭ್ರಮ
ಕಷ್ಟವಾದರೂ ಇಷ್ಟಪಟ್ಟು ಕೆಲಸ ಮಾಡುವ ಶ್ರಮಯೋಗಿ
 




 ಪ್ರಾಮಾಣಿಕ ಪೌರ ಕಾರ್ಮಿಕ ನಮ್ಮ ಯಹೋನ (ವಿಜಯಕುಮಾರ್) ನಿಗೆ ಜನ್ಮದಿನದ ಸಂಭ್ರಮ
ಕಷ್ಟವಾದರೂ ಇಷ್ಟಪಟ್ಟು ಕೆಲಸ ಮಾಡುವ ಶ್ರಮಯೋಗಿ
ಆತನೂರು ಮೂಲತ: ಆಂಧ್ರಪ್ರದೇಶ. ಆದರೆ ಅವನ ಮುತ್ತಾತ ಉದ್ಯೋಗವನ್ನರಸಿ ದಾಂಡೇಲಿಗೆ ಬಂದವರು. ಹಾಗೆ ದಾಂಡೇಲಿಗೆ ಬಂದವರು ದಾಂಡೇಲಿಯ ಖಾಯಂ ನಿವಾಸಿಯಾದರು. ಹಾಗಾಗಿ ಆ ಯುವಕನ ಜನ್ಮಭೂಮಿ ಒಡಲ ಕಾಳಿ ನದಿಯ ದಂಡೆಯಲ್ಲಿರುವ ದಾಂಡೇಲಿಯಲ್ಲಾಯ್ತು. ಅವನಪ್ಪ ಒಬ್ಬ ಪ್ರಾಮಾಣಿಕ ಪೌರಕಾರ್ಮಿಕ. ಊರೀಡಿ ಸ್ವಚ್ಚ ಮಾಡುವ ಕಾಯಕವನ್ನು ಹೊಂದಿದ್ದ ಅವನಪ್ಪ ಕೆಲಸದಲ್ಲಿರುವಾಗಲೆ ಇಹಲೋಕ ತ್ಯಜಿಸಿದ್ದರು. ಅವನಪ್ಪ ಮೃತಪಟ್ಟ ನಂತರ ಅಪ್ಪನ ಕೆಲಸ ಅವನಮ್ಮನಿಗೆ ಒಲಿದು ಬಂತು. ಪುಟಾಣಿ ಮೂವರು ಮಕ್ಕಳನ್ನು ಕೆಲಸದ ಒತ್ತಡದ ನಡುವೆಯೂ ದೊಡ್ಡವನರನ್ನಾಗಿಸಿದ ಹೆಮ್ಮೆ ಆ ಯುವಕನ ಅಮ್ಮನಿಗಿದೆ. ಅಮ್ಮನ ಕಷ್ಟವನ್ನು ನೋಡಿ, ಒಂಬತ್ತನೆ ವಯಸ್ಸಿನಲ್ಲೆ ಅಡುಗೆ ಮನೆಯ ಜವಾಬ್ದಾರಿಯನ್ನು ತಾನೆ ಹೊತ್ತುಕೊಂಡು, ತನ್ನಿಬ್ಬರು ತಮ್ಮಂದಿರರಿಗೆ ಉಣಬಡಿಸಿ ಶಾಲೆಗೆ ಹೋಗುವುದನ್ನು ರೂಢಿ ಮಾಡಿಕೊಂಡಿದ್ದ. ಆದರೂ ಅವನೇನೂ ಬಹಳ ಓದಲಿಲ್ಲ. ತಲೆಗೆ ಹತ್ತುವುದೆ ಇಲ್ಲವೆಂದು ಶಾಲೆ ಬಿಟ್ಟು ಅಲ್ಲಿ ಇಲ್ಲಿ ಕೆಲಸ ಮಾಡಿ, ಇದೀಗ ಕಳೆದೆರಡು ವರ್ಷಗಳಿಂದ ದಾಂಡೇಲಿ ನಗರ ಸಭೆಯಲ್ಲಿ ಹೊರಗುತ್ತಿಗೆ ಪೌರಕಾರ್ಮಿಕನಾಗಿ ಅತ್ಯಂತ ಗೌರವ, ಅಭಿಮಾನದಿಂದ ತನ್ನ ಸೇವೆಯನ್ನು ಸಲ್ಲಿಸಿ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಇಷ್ಟೆಲ್ಲಾ ಓದಿದ ಮೇಲೆ ಬಹಳ ಜನ ಕೇಳಬಹುದು. ಅವನ್ಯಾರು ಎಂದು ಅಲ್ಲವೆ?. ಅವನ್ಯಾರು ಅಲ್ಲ. ಮುಂಜಾನೆ ನಾಲ್ಕು ಗಂಟೆಗೆದ್ದು, ನಗರ ಸಭೆಯ ನಗರ ಸ್ವಚ್ಚತಾ ಕಾರ್ಯಕ್ಕಿಳಿಯುವ ಬಿಸಿರಕ್ತದ ನವತರುಣ. ಬಹಳಷ್ಟು ಸಲ ಸ್ವಚ್ಚತೆಯ ಸಂದರ್ಭದಲ್ಲಿ ಮಾತಿನ ಭರದಲ್ಲಿ ಹಿಗ್ಗಾ ಮುಗ್ಗಾ ಮಾತಾಡಿದ್ದು ಇದೆ. ಆದರೇ ಯಾರು ಬೈಯ್ದರೂ, ತಲೆಕೆಡಿಸಿಕೊಳ್ಳದೇ, ಅವರಿಗೆ ಮರು ಬೈಯದೆ ತನ್ನ ಪಾಡಿಗೆ ತಾನು ಕೆಲಸ ಮಾಡುವ ಆ ಯುವಕನೆ ಇವತ್ತಿನ ನನ್ನ ಬರಹದ ಪ್ರಮುಖ ಹಿರೋ ಮಿಸ್ಟರ್ ಯಾಹೋನಾ (ವಿಜಯಕುಮಾರ್) ಓಬಲೇಶ ಹರಿಜನ.

ಅವನ ದಾಖಲೆಯ ಪ್ರಕಾರ ಹೆಸರು ವಿಜಯಕುಮಾರ್, ಆದರೆ ಯಹೋನಾ ಎಂಬ ಹೆಸರಿನಲ್ಲಿ ಪ್ರಚಲಿತನಿದ್ದಾನೆ. ನನ್ನ ಹೆಮ್ಮೆಯ ಗೆಳೆಯ ಯಹೋನಾನಿಗೆ ಇಂದು ಜನ್ಮದಿನದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿಯೆ ಅವನ ಬಗ್ಗೆ ನನಗನಿದ್ದನ್ನು ಬರೆಯಲು ಅಣಿಯಾಗಿದ್ದೇನೆ.

ನಮ್ಮ ಯಹೋನಾ ಪೌರಕಾರ್ಮಿಕರಾಗಿದ್ದ ಸ್ವರ್ಗಸ್ಥರಾದ ಓಬಲೇಶ ಹರಿಜನ ಹಾಗೂ ಹಾಲಿ ಪೌರ ಕಾರ್ಮಿಕರಾಗಿರುವ ಪುಷ್ಪಾ ದಂಪತಿಗಳ ಹಿರಿಮಗ. ಯಹೋನಾನಿಗೆ ಮೂರು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ ಅಜಯ್ ಹಾಗೂ ಹೈಸ್ಕೂಲ್ ಓದುತ್ತಿರುವ ಆಕಾಶ ಎಂಬಿಬ್ಬರು ತಮ್ಮಂದಿರರು.

ನಮ್ಮ ಯಹೋನಾನು ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಗೂರನಗರ ಸರಕಾರಿ ಶಾಲೆಯಲ್ಲಿ ಪಡೆದು, ಮುಂದೆ ಪರಿಜ್ಞಾನಾಶ್ರಮ ಹೈಸ್ಕೂಲಿನಲ್ಲಿ ಎಂಟನೆ ತರಗತಿಯವರೆಗೆ ಓದಿ, ಮುಂದೆ ತಲೆಗೆ ಹತ್ತದ ಶಿಕ್ಷಣ ಯಾಕೆಂದು ಬಗೆದು ಕೂಲಿ ಕೆಲಸ ಮಾಡಲು ಪ್ರಾರಂಭಿಸಿದ. ಆರಂಭದ ಸ್ವಲ್ಪ ವರ್ಷಗಳವರೆಗೆ ಅಲ್ಲಿ ಇಲ್ಲಿ ಎಂದು ಮನೆಕೆಲಸ ಕೂಲಿ ಕೆಲಸ ಮಾಡುತ್ತಾ ಬೆಳೆದ ಈ ಯುವಕ ಮುಂದೆ ಕೆಲ ವರ್ಷಗಳವರೆಗೆ ಕೊಲ್ಲಾಪುರದಲ್ಲಿ ಗೌಂಡಿ ಕೆಲಸವನ್ನು ಮಾಡಲಾರಂಭಿಸಿದ. ಈ ಸಂದರ್ಭದಲ್ಲಿ ಅವನ ತಮ್ಮ ಅಜಯ್ ಅಪಘಾತವೊಂದರಲ್ಲಿ ಸಿಲುಕಿ ಒಂದು ಕಾಲು ಸಂಪೂರ್ಣ ತುಂಡಾಗಿ, ಸಾವು ಬದುಕಿನ ನಡುವೆ ಹೋರಾಟ ಮಾಡುವುದನ್ನು ಮನಗಂಡು ಕೊಲ್ಲಾಪುರದ ಗೌಂಡಿ ಕೆಲಸವನ್ನು ಬಿಡಬೇಕಾಯ್ತು. ತಮ್ಮ ಅಜಯ್ ನಿಗೆ ಎಲ್ಲ ರೀತಿಯ ಆರೋಗ್ಯ, ಮಾನಸಿಕ ನೆರವನ್ನು ನೀಡಿ, ಅಣ್ಣನಾದರೂ ತಂದೆಯ ಸ್ಥಾನದಲ್ಲಿ ನಿಂತೂ ಈಗಲೂ ತಮ್ಮ ಅಜಯನ ಎಲ್ಲಾ ಆರೋಗ್ಯಸೇವೆಯನ್ನು ಮಾಡುತ್ತಾ, ಅಮ್ಮನ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿರುವುದು ಇದೇ ನಮ್ಮ ಯಹೋನಾ.

ತಮ್ಮನನ್ನು ಮುದ್ದಿನಿಂದ ಎತ್ತಿಕೊಂಡು ಹೋಗಿ ಕಾಲಕಾಲಕ್ಕೆ ಚಿಕಿತ್ಸೆ ನೀಡಿಸುವ ಜವಾಬ್ದಾರಿಯನ್ನು ನಿಷ್ಟೆಯಿಂದ ನಿಭಾಸುತ್ತಾ ಬರುತ್ತಿರುವ ಯಹೋನಾನ ಸಹೋದರತ್ವದ ಬಾಂದವ್ಯಕ್ಕೆ ಬೆಲೆ ಕಟ್ಟಲಾರದು.

ಹೀಗೆ ದಿನ ಉರುಳಿದಂತೆ, ತಮ್ಮನ ಆರೋಗ್ಯ ಸೇವೆಯ ಜೊತೆಗೆ, ಏನಾದರೂ ಕೆಲಸ ಮಾಡಬೇಕೆಂದು ಹಂಬಲಿಸಿ, ಕಳೆದೆರಡು ವರ್ಷಗಳಿಂದ ದಾಂಡೇಲಿ ನಗರ ಸಭೆಯಲ್ಲಿ ಹೊರಗುತ್ತಿಗೆ ಆಧಾರದಡಿ ಪೌರಕಾರ್ಮಿಕನಾಗಿ ಎಲ್ಲರಿಗೂ ಇಷ್ಟವಾಗುವಂತೆ ಕೆಲಸವನ್ನು ಮಾಡುತ್ತಾ ಬಂದಿರುವವನು ಇದೇ ನಮ್ಮ ಯಹೋನಾ.

ಎಂಥಹ ಸಂದರ್ಭದಲ್ಲಿಯೂ ಧಾವಿಸಿ ಬರುವ ನನ್ನ ಮುದ್ದು ತಮ್ಮ :
ಯಹೋನಾ ನಮ್ಮ ಗಾಂಧಿನಗರದ ಶ್ರೀ ಗಣೇಶ ಹಿಂದು, ಮುಸ್ಲಿಂ, ಕ್ರೈಸ್ತ ಯುವಕ ಮಂಡಳದ ಸಕ್ರೀಯ ಪದಾಧಿಕಾರಿ. ಹಾಗಾಗಿ ನನಗೆ ಅವನ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ. ನನ್ನ ಏನೇ ಕೆಲಸವಿದ್ದರೂ ಮತ್ತು ಎಂಥಹ ಸಂದರ್ಭದಲ್ಲಿಯೂ ಧಾವಿಸಿ ಬಂದು ಸಹಾಯ ಮಾಡುವ ಯಹೋನಾನ ಗುಣವಂತಿಕೆಯನ್ನು ಶ್ಲಾಘಿಸಲೆಬೇಕು.  ತಪ್ಪು ಮಾಡಿದಾಗ ನಾನು ಬೈಯ್ದರು ಒಂದು ದಿನವೂ ಎದುರು ಮಾತನಾಡದೇ ಅಣ್ಣನ ಗೌರವವನ್ನು ನೀಡುತ್ತಿರುವ ಯಹೋನಾ ನಮ್ಮ ಗಣಪತಿ ಮಂಡಳದ ಎಲ್ಲರಿಗೂ ಇಷ್ಟವಾದ ವ್ಯಕ್ತಿಯಾಗಿದ್ದಾನೆ.

ಆಸ್ತಿ, ಅಂತಸ್ತನ್ನೆಂದು ಬಯಸದ ಯಹೋನಾ ತಾನು ಬದುಕ ಬೇಕು, ಉಳಿದವರು ಖುಷಿಯ ಜೀವನ ಮಾಡಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದಾನೆ. ಜೀವನದ ಮಹತ್ವದ ಆಸೆಯಾದ ಗುಡಿಸಲು ಮನೆಯಿಂದ ಹೊಸ ಮನೆಗೆ ಹೋಗಬೇಕೆಂಬ ಕನಸನ್ನು ಅಮ್ಮನ ಸಹಕಾರದಲ್ಲಿ ಸಕಾರಗೊಳಿಸಿದ ಸಂಭ್ರಮ ನಮ್ಮ ಯಹೋನನಿಗಿದೆ.

ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿ, ದಿಟ್ಟವಾಗಿ ಬದುಕು ಕಟ್ಟಿಕೊಂಡಿರುವ ಯಹೋನಾನ ಜೀವನ ಯಶಸ್ಸಿಗೆ ಅವನಮ್ಮನ ಆಶೀರ್ವಾದ, ಕುಟುಂಬಸ್ಥರ ಮಾರ್ಗದರ್ಶನ, ಗೆಳೆಯರ, ಬಂಧುಗಳ ಪ್ರೀತಿ, ಸಹಕಾರವು ಪ್ರಮುಖ ಕಾರಣ.

ಯಹೋನಾ ನಿನಗೆ ಮಗದೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು. ಶುಭವಾಗಲಿ ಲವ್ಲಿ ತಮ್ಮ

ನಿಮ್ಮವ

ಸಂದೇಶ್.ಎಸ್.ಜೈನ್

 

Wednesday, December 19, 2018

ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಕ್ಷೇತ್ರದ ಮೇರು ಪ್ರತಿಭೆ ನಮ್ಮ ವಿಜಯಕುಮಾರ್
ಪ್ರತಿಭೆಗಳ ಪಾಲಿಗೆ ಜಯದ ಬೆಳಕನ್ನು ನೀಡುವ ವಿಜಯಕುಮಾರ್



ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಕ್ಷೇತ್ರದ ಮೇರು ಪ್ರತಿಭೆ ನಮ್ಮ ವಿಜಯಕುಮಾರ್ಪ್ರತಿಭೆಗಳ ಪಾಲಿಗೆ ಜಯದ ಬೆಳಕನ್ನು ನೀಡುವ ವಿಜಯಕುಮಾರ್
ಬಹಳ ಹೆಮ್ಮೆ ಮತ್ತು ಅಭಿಮಾನದಿಂದ ಬರೆಯಲು ಅಣಿಯಾಗಿದ್ದೇನೆ. ತನ್ನೆಲ್ಲಾ ಸ್ವಾರ್ಥವನ್ನು ಬದಿಗಿತ್ತು, ನಿಸ್ವಾರ್ಥ ಮನಸ್ಸಿನಿಂದ ಸಮಾಜ ಸೇವೆ ಮಾಡುವುದರ ಮೂಲಕ ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಕುವರನಾದ  ಸಾಂಸ್ಕೃತಿಕ ಶಕ್ತಿ ಮತ್ತು ಶಕ್ತಿವಂತ ಕಲಾವಿದ ಹಾಗೂ ಸಾವಿರಾರು ಕಲಾಪ್ರತಿಭೆಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದ ಗ್ರೇಟ್ ಪರ್ಸನಾಲಿಟಿಯ ಯುವಕ, ಒಲವಿನ ಸಹೋದರ, ಅರ್ವದ ಅಣ್ಣನೆಂದೆ ಜನಪ್ರೀತಿಗಳಿಸಿದ ನನ್ನವರೆ ಆಗಿರುವ ವಿಜಯಕುಮಾರ್ ಜೈನ್ ಅವರಿಗೆ ಹಾಗೂ ಅವರ ಕಲಾಸೇವೆಗೆ ಈ ಬರಹ ಅರ್ಪಣೆ.


ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಆಮಂತ್ರಣ ಪರಿವಾರದ ಮೂಲಕ ರಾಜ್ಯವ್ಯಾಪಿ ಗಮನ ಸೆಳೆದ ಹಳ್ಳಿಗಾಡಿನ ಈ ಯುವಕ ಬೇರೆ ಯಾರು ಅಲ್ಲ. ಬೆಳ್ತಂಗಡಿ ತಾಲೂಕಿನ ನಾವರ ಗ್ರಾಮದ ಕೃಷಿಕ ಮನೆತನದ ಹೆಮ್ಮೆಯ ಕುಡಿ. ಅಂದ ಹಾಗೆ ಸಾಂಸ್ಕೃತಿಕ ಕ್ಷೇತ್ರದ ಸೊಗಸುಗಾರ, ಮೋಡಿಗಾರ, ಮಾತುಗಾರ ನಮ್ಮ ವಿಜಯಣ್ಣನಿಗೆ ಇಂದು ಜನ್ಮದಿನದ ಸಂಭ್ರಮ. ಈ ಸಂಭ್ರಮಕ್ಕೆ ನನ್ನದೊಂದು ನುಡಿರೂಪದ ಗೌರವಪೂರ್ವಕ ಶುಭಾಶಯ.

ಪ್ರಥಮವಾಗಿ ವಿಜಯಣ್ಣನಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ, ಬರವಣಿಗೆಗೆ ಸಿದ್ದನಾಗಿದ್ದೇನೆ. ಅಂದ ಹಾಗೆ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ನಾವರ ಗ್ರಾಮದ ಶ್ರಮಜೀವಿ ರೈತ ಕೊರಗು ಹೆಗ್ಡೆ ಮತ್ತು ಆದರ್ಶ ಮಾತೆ ಜಯವತಿ ದಂಪತಿಗಳ ಮುದ್ದಿನ ಮಗ ಈ ನಮ್ಮ ವಿಜಯಕುಮಾರ್ ಅವರು. ವಿಜಯಕುಮಾರ್ ಅವರಿಗೆ ಸ್ವರ್ಗಸ್ಥರಾದ ಸುಜಾತ ಎಂಬ ಅಕ್ಕ ಇದ್ದರು. ಅಣ್ಣ ವೀರೇಂದ್ರ ಕುಮಾರ್. ನಮ್ಮ ವಿಜಯಕುಮಾರ್ ಅವರು ಕಿರಿಮಗ ಎಂಬ ಸಲುಗೆಯ, ಮಮತೆಯ ಪ್ರೀತಿಗೆ ಪಾತ್ರರಾದವರು.

ವಿಜಯಕುಮಾರ್ ಕುಟುಂಬ ಆರ್ಥಿಕವಾಗಿ ಶ್ರೀಮಂತಿಕೆಯ ಕುಟುಂಬವಲ್ಲ. ಒಂದು ರೀತಿಯಲ್ಲಿ ಹೇಳುವುದಾದರೇ ನನ್ನ ಹಾಗೆ, ಅಂದರೆ ನಾವೆಲ್ಲ ಜೈನ ಧರ್ನಕ್ಕೆ ಸೇರಿದ ಹೆಮ್ಮೆಯ ಜೈನದಲಿತರೆನ್ನುವುದನ್ನು ಅತ್ಯಂತ ಅಭಿಮಾನದಿಂದ ಹೇಳಲು ನಾನ್ಯಾಕೆ ಹಿಂಜರಿಯಲಿ ಅಲ್ವೆ. ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ, ಗದ್ದೆ ಚಟುವಟಿಕೆಯನ್ನು ಮಾಡುವುದರ ಮೂಲಕ ಸಂಸಾರವನ್ನು ಸಂತೃಪ್ತಿಯಿಂದ ನಡೆಸಿದ ಧನ್ಯತೆ ಕೊರಗು ಹೆಗ್ಡೆಯವರಿಗಿದೆ. 

ನಮ್ಮ ವಿಜಯಕುಮಾರ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಪಿಲ್ಯದಲ್ಲಿರುವ ಸರಕಾರಿ ಹಿ.ಪ್ರಾಥಮಿಕ ಶಾಲೆಯಲ್ಲಿ ಪಡೆದು, ಮುಂದೆ ಅಳದಂಗಡಿ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಮುಂದೆ ಓದಬೇಕೆಂಬ ಉತ್ಕಟ ಬಯಕೆ ಅವರಿಗಿತ್ತಾದರೂ ಬಡತನದ ವಕ್ರದೃಷ್ಟಿ ಅವರ ಮುಂದಿನ ಶಿಕ್ಷಣಕ್ಕೆ ಅಡ್ಡಿಯಾಯಿತು. ಹಾಗಾಗಿ ಕಾಲೇಜು ಮೆಟ್ಟಿಲೇರುವ ಅವರ ಕನಸು ಕೊನೆಗೂ ಈಡೇರಲೆ ಇಲ್ಲ.

ಬಾಲ್ಯದಲ್ಲೆ ಮಿಂಚಿದ್ದ ಬಾಲಕ:

ವಿಜಯಕುಮಾರ್ ಅವರು ತನ್ನ ಶಾಲಾ ದಿನಗಳಲ್ಲೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಮುಂದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಾಟಕ, ನೃತ್ಯ, ಛದ್ಮವೇಶಗಳಂತಹ ಕಾರ್ಯಕ್ರಮಗಳಲ್ಲಿ ಮಿಂಚಿದ ಸಾಧನೆ ಮಾಡಿ ಶಿಕ್ಷಕರ ಮನ ಗೆದ್ದಿರುವುದು ಇಲ್ಲಿ ಉಲ್ಲೇಖನೀಯ.

ಮುಂದೆ ಓದಲು ಆಗಲಿಲ್ಲ. ಹಾಗಾದ್ರೆ ಮುಂದೇನು ಮಾಡಲಿ ಎಂಬ ಯೋಚನೆಯಿಲ್ಲದ ಆ ಬಾಲಕ ಮೊದಲು ಇಳಿದಿದ್ದು ತನ್ನ ಬಾಲ್ಯದಲ್ಲೆ ರೂಢಿಗತ ಮಡಿಕೊಂಡು ಬಂದಿದ್ದ ಹೊಲ, ಗದ್ದೆಯ ಕೆಲಸವನ್ನು ಮಾಡಲು. ಹೀಗೆ ಮುಂದುವರಿದ ಅವರ ಕೃಷಿ ಬದುಕು ಕಾಲಕ್ರಮೇಣ ಅದರ ಜೊತೆ ಜೊತೆಯಲ್ಲಿ ಹೈನುಗಾರಿಕೆಯನ್ನು ಮಾಡುವಂತಾಯಿತು. ಆದರೂ ದುಡಿಮ ಜಾಸ್ತಿ ಗಳಿಕೆ ಕಡಿಮೆ ಎಂಬಂತೆ ಬದುಕು ಕಂಡವರು ನಮ್ಮ ವಿಜಯಕುಮಾರ್ ಅವರು.

ಸ್ವ ಉದ್ಯೋಗದ ಕಡೆಗೆ ಹೆಜ್ಜೆಯಿಟ್ಟ ವಿಜಯಣ್ಣ:
ದಿನ ಉರುಳಿದಂತೆ ಕೃಷಿ ಚಟುವಟಿಕೆಯ ಜೊತೆಗೆ ಉಳಿದ ಸಮಯದಲ್ಲಿ ಇನ್ನೇನಾದರೂ ಮಾಡಬೇಕೆಂದು ಬಯಸಿ, ಮೊದಲೆ ತನಗೆ ಅರಿವಿಲ್ಲದಂತೆ ಬಂದಿದ್ದ ಬ್ಯಾನರ್ ಕಲೆಯನ್ನು ಮುಂದುವರಿಸಬೇಕೆಂದು ಚಿಂತಿಸಿ, ಅಳದಂಗಡಿಯಲ್ಲೊಂದು ಕಂಪ್ಯೂಟರ್ ಅಂಗಡಿಯನ್ನು ಪ್ರಾರಂಭಿಸಿದರು. ಎಲ್ಲಿಯೂ ಕಂಪ್ಯೂಟರ್ ತರಬೇತಿ ಪಡೆಯದ ಚಿಗುರು ಮೀಸೆಯ ಯುವಕ ವಿಜಯಕುಮಾರ್ ಸ್ವಂತ ಕಂಪ್ಯೂಟರ್ ಖರೀದಿಸಿ ಕಂಪ್ಯೂಟರ್ ಕಲಿತಿರುವುದು ಅವರ ಸತತ ಪ್ರಯತ್ನ ಮತ್ತು ಅವರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. 

ಹೀಗೆ ಮುಂದುವರಿದ ಅವರ ಸ್ವ ಉದ್ಯೋಗ ತಕ್ಕಮಟ್ಟಿನ ಯಶಸ್ಸನ್ನು ಕಂಡುಕೊಂಡಿತು. ಬರಣಿಗೆಯ ಹುಚ್ಚನ್ನು ಮೈಗೂಡಿಸಿಕೊಂಡಿದ್ದ ವಿಜಯಕುಮಾರ್ ಅವರು ಪತ್ರಕರ್ತರಾಗಿಯೂ ಪತ್ರಿಕಾ ರಂಗಕ್ಕೆ ಇಳಿದರು.

ಹೆಮ್ಮೆಯ ಪತ್ರಕರ್ತರಾಗಿ ವಿಜಯಕುಮಾರ್ :
ಆರಂಭದಲ್ಲಿ ಸುದ್ದಿ ಬಿಡುಗಡೆ, ಹೊಸದಿಗಂತ, ಸಂಯುಕ್ತ ಕರ್ನಾಟಕ, ಜನಬಿಂಬ ಮೊದಲಾದ ಪತ್ರಿಕೆಗಳಿಗೆ ವರದಿಗಾರರಾಗಿ ಸೇವೆಯನ್ನು ಸಲ್ಲಿಸಿದ ವಿಜಯಕುಮಾರ್ ಅವರು ದಿನ ಉರುಳಿದಂತೆ ವಾರದ ಡಂಗುರ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸಿದರು. ಆನಂತರ ಚೇತನ ವಾರಪತ್ರಿಕೆಯ ಉಪ ಸಂಪಾದಕರಾಗಿ, ವಿಜಯವಾಹಿನಿ ಪತ್ರಿಕೆಯ ಸಂಪಾದಕರಾಗಿ, ಸುದ್ದಿ ದಿಗಂತ ಪತ್ರಿಕೆಯ ಉಪ ಸಂಪಾದಕರಾಗಿ ಸೇವೆಯನ್ನು ಸಲ್ಲಿಸಿದ ಧನ್ಯತೆ ನಮ್ಮ ವಿಜಯಕುಮಾರ್ ಅವರಿಗಿದೆ.

ಪತ್ರಕರ್ತರಾಗಿ ತನ್ನ ನೈಜ ವಾಸ್ತವ ವರದಿಗಳ ಮೂಲಕ ಸಮಾಜದ ಅಂಕು ಡೊಂಕುಗಳ ಬಗ್ಗೆ ಬೆಳಕು ಚೆಲ್ಲಿದ ಘನ ಕಾರ್ಯವನ್ನು ಮಾಡಿದ ಶ್ರೇಯಸ್ಸು ವಿಜಯಕುಮಾರ್ ಸಂಪಾದಿಸಿಕೊಂಡಿದ್ದಾರೆ. ತನ್ನ ಹರಿತವಾದ ಬರವಣಿಗೆಯ ಮೂಲಕ ಅನ್ಯಾಯಗಳನ್ನು ದಿಟ್ಟವಾಗಿ ಎದುರಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿರುವ ವಿಜಯಕುಮಾರ್ ಅವರ ವರದಿಗಾರಿಕೆಯನ್ನು ತಾಲೂಕಿನ ಜನತೆ ಎಂದು ಮರೆಯಲಾರರು.

ಅಪೂರ್ವ ಸಂಘಟಕ ನಮ್ಮ ವಿಜಯಕುಮಾರ್ :
ವಿಜಯಕುಮಾರ್ ಅಂದ್ರೆ ಒಬ್ಬ ಅಸಾಮಾನ್ಯ ಮತ್ತು ಅಪೂರ್ವ ಸಂಘಟಕ ಎಂದೆ ಕರೆಯಬಹುದಾದ ಹೆಸರು ಕಣ್ರೀ. ಕೆಲಸದ ಒತ್ತಡದ ನಡುವೆಯು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ತನ್ನನ್ನು ತಾನು ತೊಡಗಿಸಿಕೊಂಡಿರುವ ವಿಜಯಕುಮಾರ್ ಅವರ ಸಮಾಜಮುಖಿ ಕಾರ್ಯವನ್ನು ಕೊಂಡಾಡಲೆಬೇಕು. ಬಹಳ ವರ್ಷಗಳ ಹಿಂದೆ ನಡೆದ ನಾವರ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿಯಾಗಿ ದೇವಸ್ಥಾನದ ಕಾರ್ಯಚಟುವಟಿಕೆಗಳನ್ನು ಸುಗಮ ರೀತಿಯಲ್ಲಿ ಮುಂದುವರೆಸಿಕೊಂಡು ಊರ ಹಿರಿಯರ ವಾತ್ಸಲ್ಯಕ್ಕೆ ಪಾತ್ರರಾದವರು ಇದೇ ನಮ್ಮ ವಿಜಯಕುಮಾರ್ ಅವರು. ಕಳೆದ 15 ವರ್ಷಗಳ ಹಿಂದೆ ಅವರ ಹುಟ್ಟೂರು ನಾವರ ಗ್ರಾಮದಲ್ಲಿ ಶಾರದೋತ್ಸವ ಸಮಿತಿಯನ್ನು ಪ್ರಾರಂಭಿಸಿ ಅದರ ಪ್ರಧಾನ ಸಂಚಾಲಕರಾಗಿ, ಊರ ಜನರನ್ನು ಒಂದುಗೂಡಿಸಿ ಶಾರದೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳುವುದರ ಮೂಲಕ ನಾವರ ಜನರ ಪ್ರಾಣವಾಗಿದ್ದಾರೆ.

ಇದರ ಜೊತೆ ಜೊತೆಯಲ್ಲೆ ನಾವರ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾಗಿ, ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರಾಗಿ, ಅಭಿನಯ ಯುವಕ ಮಂಡಳದ ಸಂಸ್ಥಾಪಕ ಅಧ್ಯಕ್ಷರಾಗಿ, ಆಳ್ವಾಸ್ ನುಡಿಸಿರಿಯ ಅಳದಂಗಡಿ ಘಟಕದ ಕಾರ್ಯದರ್ಶಿಯಾಗಿ, ಲಯನ್ಸ್ ಕ್ಲಬಿನ ಸದಸ್ಯರಾಗಿ, ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಹೀಗೆ ಇನ್ನೂ ಅನೇಕ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ಸಮರ್ಪಣಾಭಾವದಿಂದ ತೊಡಗಿಸಿಕೊಂಡ ಸಂಭ್ರಮ ವಿಜಯಕುಮಾರ್ ಅವರದ್ದಾಗಿದೆ. 

ಆಟೋ ರಿಕ್ಷಾ ಚಾಲಕರ/ಮಾಲಕರ ಸಂಘದ ಗೌರವಾಧ್ಯಕ್ಷರಾಗಿ ವಿಜಯಕುಮಾರ್:

ಅಳದಂಗಡಿಯ ಶ್ರಮಜೀವಿಗಳಾದ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷರಾಗಿ ಕಳೆದ 4 ವರ್ಷಗಳಿಂದ ಸಂಘದ ಮಹೋನ್ನತ ಪ್ರಗತಿಗೆ ಶಕ್ತಿಮೀರಿ ಶ್ರಮಿಸುವುದರ ಮೂಲಕ ನನ್ನೆಲ್ಲ ಆಟೋ ಸಹೋದರರ ನೆಚ್ಚಿನ ದೊಡ್ಡಣ್ಣನಾಗಿ ವಿಜಯಕುಮಾರ್ ಅವರು ಅವರೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ಪ್ರತಿಭೆಗಳಿಗೆ ಅರಮನೆಯಾದ ಆಮಂತ್ರಣ ಪರಿವಾರ:
ತಾನಷ್ಟೆ ಬೆಳೆದರೇ ಸಾಲದು, ಬೆಳೆಯುವ ಪ್ರತಿಭೆಗಳನ್ನು ಹುಡುಕಿ, ಆ ಪ್ರತಿಭೆಗಳಿಗೆ ಸಂಪೂರ್ಣ ಸಹಕಾರವನ್ನು ನೀಡಿ, ಅವುಗಳನ್ನು ಸಮಾಜದ ಆಸ್ತಿಯನ್ನಾಗಿಸಬೇಕೆಂಬ ಮಹತ್ವದ ಸಂಕಲ್ವವನ್ನು ತೊಟ್ಟ ವಿಜಯಕುಮಾರ್ ಅವರು ಪ್ರತಿಭೆಗಳ ಲೋಕನ್ನೆ ಸೃಷ್ಟಿಸಿ ರಾಜ್ಯಮಟ್ಟದವರೆಗೆ ಗಮನ ಸೆಳೆದ ಆಮಂತ್ರಣ ಪರಿವಾರ ಎಂಬ ನಿತ್ಯನೂತನವಾದ ಸಂಸ್ಥೆಯೊಂದನ್ನು ಪ್ರಾರಂಭಿಸಿ ಬೆಳ್ತಂಗಡಿ ತಾಲೂಕಿನ ಮಹತ್ವದ ಆಸ್ತಿಯಾಗಿದ್ದಾರೆಂಬುವುದನ್ನು ಹರ್ಷಿತ ಮನಸ್ಸಿನಿಂದ ಹೇಳಬಯಸುತ್ತೇನೆ.

ಸಾವಿರಕ್ಕೂ ಹೆಚ್ಚು ಕಲಾವಿದರುಗಳಿಗೆ ಸನ್ಮಾನ- ಇದು ಆಮಂತ್ರಣಕ್ಕೊಂದು ಹೆಮ್ಮೆ
ಆಮಂತ್ರಣ ಪರಿವಾರದ ಮೂಲಕ ಗೆಳೆಯರ, ಹಿತೈಷಿಗಳ ಸರ್ವ ಸಹಕಾರವನ್ನು ಪಡೆದು, ಎಲ್ಲರ ಒಪ್ಪಿಗೆ ಮತ್ತು ಅಪ್ಪುಗೆಯ ನಂತರವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ವಿಜಯಕುಮಾರ್ ಅವರು ಆಮಂತ್ರ್ರಣ ಪರಿವಾರದ ಮೂಲಕ ಈವರೇಗೆ ಸಾವಿರಕ್ಕೂ ಮಿಕ್ಕಿ ಯುವ ಕಲಾವಿದರುಗಳನ್ನು, ಯುವ ಪ್ರತಿಭೆಗಳನ್ನು ಗುರುತಿಸಿ, ಸನ್ಮಾನಿಸಿ, ಅವರ ಕಲಾಸೇವೆಗೆ ಜೀವಶಕ್ತಿಯನ್ನು ತುಂಬುವ ದಿವ್ಯಕಾರ್ಯವನ್ನು ಮಾಡಿದ ಹೆಗ್ಗಳಿಕೆ ನಮ್ಮ ವಿಜಯಕುಮಾರ್ ಅವರಿಗಿದೆ.

ರಾಜ್ಯಮಟ್ಟದ ಆಮಂತ್ರಣ ಪರಿವಾರ ಆವಾರ್ಡಿಗೆ ಮೂರು ವರ್ಷದ ಸಂಭ್ರಮ:

ಆಮಂತ್ರಣ ಪರಿವಾರದ ಮೂಲಕ ಕಳೆದ ಮೂರು ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುವ ರಾಜ್ಯಮಟ್ಟದ ಆಮಂತ್ರಣ ಪರಿವಾರ ಆವಾರ್ಡ್ ಎಂಬ ಅದ್ದೂರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವ ವಿಜಯಕುಮಾರ್ ಅವರು ನಿಜಕ್ಕೂ ಒಬ್ಬ ಅಸಾಮಾನ್ಯ ವ್ಯಕ್ತಿತ್ವದ ಪರಿಪೂರ್ಣ ಕಲಾಪುರುಷ ಎಂದೆ ಹೇಳಬಹುದು. ಆಮಂತ್ರಣ ಪರಿವಾರದ ವರ್ಣರಂಜಿತ ಕಾರ್ಯಕ್ರಮಗಳನ್ನು ನೋಡುವುದೆ ಒಂದು ಭಾಗ್ಯ.

ಮಾತುಗಾರ ವಿಜಯಕುಮಾರ್ :
ನಮ್ಮ ವಿಜಯಕುಮಾರ್ ಅವರೊಬ್ಬ ಪ್ರಚಂಡ ವಾಗ್ಮಿಯಾಗಿ ಗಮನ ಸೆಳೆದಿದ್ದಾರೆ. ತಾಲೂಕಿನ ಬಹುತೇಕ ಕಾರ್ಯಕ್ರಮಗಳ ನಿರೂಪಣೆಯ ಜವಾಬ್ದಾರಿ ನಮ್ಮ ವಿಜಯಕುಮಾರ್ ಅವರಿಗೆ ಮಾಮುಲಿ. ಈವರೇಗೆ ಸಾವಿರಕ್ಕೂ ಮಿಕ್ಕಿ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿ ಕಾರ್ಯಕ್ರಮಗಳ ಶೋಭೆಯನ್ನು ಹೆಚ್ಚಿಸಿದ್ದಾರೆ.

ಮಕ್ಕಳೊಂದಿಗೆ ಮಕ್ಕಳಂತಿರುವ ವಿಜಯಣ್ಣ:
ವಿಜಯಕುಮಾರ್ ಅವರನ್ನು ಎಲ್ಲರು ಇಷ್ಟಪಡುತ್ತಾರೆ. ಪುಟಾಣಿ ಮಕ್ಕಳಂತೂ ಅತ್ಯಂತ ಹೆಚ್ಚು ಮುದ್ದಿಸುತ್ತಾರೆ. ಮಕ್ಕಳ ಜೊತೆ ಮಕ್ಕಳಂತೆ, ಮಕ್ಕಳ ಇಷ್ಟಕ್ಕೆ ಅನುಗುಣವಾಗಿ ಅವರ ಆಸಕ್ತಿಗೆ ಪ್ರೋತ್ಸಾಹಿಸುವ ವಿಜಯಕುಮಾರ್ ಅವರ ಹೃದಯಗುಣವಂತಿಕೆಯೆ ಮಕ್ಕಳಿಗೆ ಬಹು ಇಷ್ಟವಾಗಲು ಕಾರಣ.

ಅರಸರ ಆಶೀರ್ವಾದವೆ ಶ್ರೀರಕ್ಷೆ ಎನ್ನುವ ವಿಜಯಕುಮಾರ್:
ಅರಸ ಮನೆತನದ ಭವ್ಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಧರ್ಮಶೃದ್ದೆಯಿಂದ ಅರುವ ಅರಮನೆಯ ಅರಸರಾದ ಪೂಜ್ಯ ಡಾ: ತಿಮ್ಮಣ್ಣರಸರಾದ ಡಾ: ಪದ್ಮಪ್ರಸಾದ ಅಜಿಲರವರ ದಿವ್ಯ ಆಶೀರ್ವಾದವೆ ತನ್ನ ಸಾಧನೆಗೆ ಮತ್ತು ಕಲಾಸೇವೆಗೆ ಶ್ರೀರಕ್ಷೆ ಎನ್ನುವ ವಿಜಯಕುಮಾರ್ ಅವರು ಅರಸರ ಎಲ್ಲ ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿ ಭಾಗವಹಿಸಿ ಸೇವೆ ಮಾಡುತ್ತಿದ್ದಾರೆ.

ಹರೀಶ ಪೂಂಜಾ ಅವರಂದಂತೆ ಸಾಂಸ್ಕೃತಿಕ ರಾಯಭಾರಿ :

ಕಳೆದ ಕೆಲ ತಿಂಗಳ ಹಿಂದೆ ಶಾಸಕ ಹರೀಶ ಪೂಂಜಾ ರವರು ಅಳದಂಗಡಿ ಅರಮನೆಗೆ ಸಾಂಸ್ಕೃತಿಕ ರಾಯಭಾರಿ ಅಂತಾ ಯಾರನ್ನಾದರೂ ನೇಮಕ ಮಾಡುವುದಾದರೇ ಅದಕ್ಕೆ ಸೂಕ್ತ ವ್ಯಕ್ತಿ ನಮ್ಮ ವಿಜಯಕುಮಾರ್ ಎಂದಿದ್ದರು. ಈ ಮಾತು ಅಕ್ಷರಶ: ಸತ್ಯ. ನಮ್ಮ ವಿಜಯಕುಮಾರ್ ಅವರು ಒಬ್ಬ ಸಮರ್ಥ ಸಂಘಟಕರಾಗಿ, ಅತ್ಯುತ್ತಮ ಸಾಂಸ್ಕೃತಿಕ ರಾಯಭಾರಿಯಾಗಿ ಗಮನಾರ್ಹ ಕಾರ್ಯವನ್ನು ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿಯೆ ಶಾಸಕ ಹರೀಶ ಪೂಂಜಾ ರವರಿಗೆ ವಿಜಯಕುಮಾರ್ ಅವರ ಮೇಲೆ ಎಲ್ಲಿಲ್ಲದ ಪ್ರೀತಿ, ಮಮತೆಯಿದೆ.

ನೋವನ್ನು ನುಂಗಿ ಎಲ್ಲರನ್ನು ನಗಿಸುವ ಕಲಾವಿದ:
ತನ್ನೆಲ್ಲಾ ನೋವನ್ನು ನುಂಗಿಕೊಂಡು, ಇನ್ನೊಬ್ಬರನ್ನು ನಗಿಸುವ ವಿಜಯಕುಮಾರ್ ಅವರು ಅತ್ಯುತ್ತಮ ಕಲಾವಿದರು ಹೌದು. ಈವರೇಗೆ ನಾಲ್ಕು ನಾಟಕಗಳನ್ನು ರಚಿಸಿರುವ ವಿಜಯಕುಮಾರ್ ಅವರು ಸಾಕಷ್ಟು ನಾಟಕಗಳಲ್ಲಿ ಅಭಿನಮಯಿಸಿ ಅತ್ಯುತ್ತಮ ನಾಟಕ ಕಲಾವಿದರಾಗಿ ಗಮನ ಸೆಳೆಯುವ ಪ್ರದರ್ಶನವನ್ನು ನೀಡಿದ್ದಾರೆ. ಜೀವನದಲ್ಲಿ ಹಲವಾರು ಕಷ್ಟ, ನಷ್ಟಗಳನ್ನು ಅನುಭವಿಸಿದ್ದರೂ ತನ್ನ ನೋವನ್ನು ತಾನೆ ನುಂಗಿಕೊಂಡು, ಇನ್ನೊಬ್ಬರಿಗಾಗಿ ಜೀವನ ಸವೆಸುವ ವಿಜಯಕುಮಾರ್ ಅವರ ಸಾಧನೆ, ಪರಿಶ್ರಮವನ್ನು ಗಮನಿಸಿ ರಾಜ್ಯೋತ್ಸವದಂತಹ ಮಹೋನ್ನತ ಪ್ರಶಸ್ತಿಯನ್ನು ಒದಗಿಸಿಕೊಟ್ಟು ತಾಲೂಕಿನ ಸಾಂಸ್ಕೃತಿಕ ಲೋಕಕ್ಕೆ ಹೊಸಶಕ್ತಿಯನ್ನು ನೀಡಬೇಕೆಂಬುವುದೆ ನನ್ನಯ ಆಗ್ರಹವಾಗಿದೆ.

ಅವಕಾಶ, ಅರ್ಹತೆ ಎಲ್ಲವೂ ಇದ್ದರೂ ಅನೇಕ ಬಾರಿ ಅದೃಷ್ಟ ಅವರಿಗೆ ಕೈಕೊಟ್ಟಿತ್ತಾದರೂ ಅದಕ್ಕೆಂದೂ ಎದೆಗುಂದದೇ ಸಾಧಿಸಿ, ಮೇಲೆದ್ದು ಬರುವೆನೆಂದು ಪಣತೊಟ್ಟು ಯಶಸ್ಸಿನೆಡೆಗೆ ಶರವೇಗದ ಹೆಜ್ಜೆಯನ್ನಿಟ್ಟಿರುವ ವಿಜಯಕುಮಾರ್ ಅವರ ಜೀವನನಡೆ, ಸಾಂಸ್ಕೃತಿಕ ನಡೆ ಅನುಕರಣೀಯ. ವಿಜಯಕುಮಾರ್ ಅವರ ಅನುಪಮ ಸಾಧನೆಯನ್ನು ಪರಿಗಣಿಸಿ ನಾಡಿನ ವಿವಿಧ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.

ಜೀವನದಲ್ಲಿ ಹಲವಾರು ಅಡೆ ತಡೆಗಳನ್ನು ದಾಟಿ, ಕಲೆ, ಸಂಸ್ಕೃತಿ, ಪತ್ರಿಕೆ ಹೀಗೆ ನಾನಾ ಕ್ಷೇತ್ರಗಳಲ್ಲಿ ದಣಿವರಿಯದೆ ಶ್ರಮಿಸುವ ಕಾಯಕಯೋಗಿ ವಿಜಯಕುಮಾರ್ ಅವರ ಸಾಧನೆಗೆ ಅವರಪ್ಪ, ಅವರಮ್ಮನ ಆಶೀರ್ವಾದ, ಅಣ್ಣ ವೀರೇಂದ್ರಕುಮಾರ್ ಅವರ ಮಾರ್ಗದರ್ಶನ, ಬಂಧುಗಳ, ಗೆಳೆಯರ, ಹಿರಿಯರ ಪ್ರೋತ್ಸಾಹ, ಸಹಕಾರವು ಪ್ರಮುಖ ಕಾರಣ.

ಎಲ್ಲರ ಮನಗೆದ್ದ ಸಾಹಸಿ, ಹೃದಯಸಾಮ್ರಾಟ್ ವಿಜಯಕುಮಾರ್ ಅವರಿಗೆ ಮಗದೊಮ್ಮೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮವ

ಸಂದೇಶ್.ಎಸ್.ಜೈನ್
 

Tuesday, December 18, 2018

ಸಾಧು ಸ್ವಭಾವದ ಮನದ ಗೆಳೆಯ ಸಜ್ಜನ್
ಜನ ಮೆಚ್ಚಿದ ಸಜ್ಜನನಿಗೆ ಜನ್ಮದಿನದ ಸಂಭ್ರಮ 
 

ಸಾಧು ಸ್ವಭಾವದ ಮನದ ಗೆಳೆಯ ಸಜ್ಜನ್ಜನ ಮೆಚ್ಚಿದ ಸಜ್ಜನನಿಗೆ ಜನ್ಮದಿನದ ಸಂಭ್ರಮ
ಆತ ಜೀವದ ಹಾಗೂ ಮನದ ಗೆಳೆಯ. ಆತನಿಗೆ ಎಲ್ಲರು ಬೇಕು. ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಯಾವುದೇ ಕಾರ್ಯಕ್ರಮಗಳಿರಲೀ, ಅಂಥಹ ಕಾರ್ಯಕ್ರಮಗಳಿಗೆ ತುಂಬು ಮನಸ್ಸಿನಿಂದ ಸಹಾಯ ಮಾಡುವ ಗುಣವಂತ. ಹೈಟ್ ಕಮ್ ಪೈಟ್ ಜಾದ ಎಂಬಂತಹ ಪರ್ಸನಾಲಿಟಿ. ಆದರೆ ಹೈಟ್ ನನ್ನಷ್ಟೆ ಆದರೂ ನನಗಿಂತ ಸ್ಮಾರ್ಟ್. ಬಿಡುವಿನ ಸಮಯದಲ್ಲಿ ಟ್ರಕ್ಕಿಂಗ್ ಹೋಗುವ ಉತ್ಕಟ ಹವ್ಯಾಸವನ್ನಿಟ್ಟುಕೊಂಡ ಯಶಸ್ವಿ ಸ್ವಾವಲಂಬಿ ಯುವಕ. ತನಗ್ಯಾರು ಮೋಸ ಮಾಡಿದರೂ, ಅವರಿಗೆಂದು ಕೆಡುಕನ್ನು ಬಯಸದ ಸುಯೋಗ್ಯ ಮನಸ್ಸಿನ ಆಕರ್ಷಕ ಶೈಲಿಯ ಹೃದಯವಂತ ಬೇರೆ ಯಾರು ಅಲ್ಲ. ನನ್ನ ಬೆಸ್ಟ್ ಪ್ರೆಂಡ್ ಸಜ್ಜನ್.
 
ದಾಂಡೇಲಿಯ ಇತಿಹಾಸದಲ್ಲೆ ಮೊದಲ ಬಾರಿಗೆ ಮತ್ತು ಒಂದೆ ಒಂದು ಇರುವಂತಹ ಅತ್ಯಗತ್ಯವಾಗಿ ಬೇಕಾದ ವೀಲ್ ಅಲೈನಮೆಂಟ್ ಶಾಪನ್ನು ಹೊಂದಿರುವ ಹೆಮ್ಮೆಯನ್ನು ಹೊಂದಿರುವ ಗ್ಲೋಬ್ ವೀಲ್ ಅಲೈನಮೆಂಟ್ ಇದರ ಮಾಲಕ ಸಜ್ಜನನಿಗೆ ಇಂದು ಬರ್ತುಡೆ ಸಂಭ್ರಮ. ಈ ಖುಷಿಗೆ ನನ್ನದೊಂದು ಪದಗುಚ್ಚಗಳ ರೂಪದ ಕೇಕನ್ನು ಪ್ರಿಯ ಓದುಗರಿಗೆ ಉಣಬಡಿಸಲು ಮುಂದಾಗಿದ್ದೇನೆ.
 
ಮನದಿ ಗೆಳೆಯ ಸಜ್ಜನ್ ನಿನಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಈ ಸಂದರ್ಬದಲ್ಲಿ ಮುಂದಿನ ವರ್ಷದ ಜನ್ಮದಿನದ ಸಂಭ್ರಮದಲ್ಲಿ ನಿನ್ನ ಮಗಳಿಗೊಂದು ಮುದ್ದಾದ ತಮ್ಮ ಬರಲೆಂಬ ಹಾರೈಕೆಯೊಂದಿಗೆ ಬರವಣಿಗೆ ಮುಂದುವರಿಸುತ್ತೇನೆ.
ಅಂದ ಹಾಗೆ ಕೇರಳದಿಂದ ಬದುಕು ಕಟ್ಟಿಕೊಳ್ಳಲು ದಾಂಡೇಲಿಗೆ ಬಂದು ಬಂದು, ಇಲ್ಲಿ ಸ್ವತಂತ್ರ ಸ್ವಾವಲಂಬಿಯಾಗಿ ಬದುಕು ನಡೆಸಿ, ಅಪ್ಪಟ ಕಾಂಗ್ರೆಸ್ಸಿಗರಾಗಿ, ಆ ಪಕ್ಷದ ಬ್ಲಾಕ್ ಸಮಿತಿಯ ಪ್ರಮುಖ ಪದಾಧಿಕಾರಿಯಾಗಿ, ಗುತ್ತಿಗೆದಾರರಾಗಿ ಗುಂಡು ಗುಂಡಗೆಯಂತಿರುವ ನಮ್ಮ ಹಿರೋ ಸತ್ಯನ್ ಹಾಗೂ ಎಲ್ಲರ ಮುದ್ದಿನ ಅಮ್ಮನಾದ ರಮಾ ಅವರ ಮುದ್ದಿನ ಮಗ ಈ ನಮ್ಮ ಸಜ್ಜನ್. ನಮ್ಮ ಸಜ್ಜನನಿಗೆ ಕವಿತಾ ಎಂಬ ಒಲವಿನ ತಂಗಿ ಇದ್ದಾರೆ.
 
ಸಜ್ಜನ್ ತನ್ನ ಪ್ರಾಥಮಿಕ ಶಿಕ್ಷಣವನ್ನು ರೊಟರಿ ಶಾಲೆಯಲ್ಲಿ ಮಾಡಿ ಮುಂದೆ ಜೆವಿಡಿಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದು, ಆನಂತರ ಜಿ.ಟಿ. & ಟಿ.ಸಿ ಡಿಪ್ಲೋಂ ಪದವಿಯನ್ನು ಮಾಡಿದ ಧನ್ಯತೆಯನ್ನು ಹೊಂದಿದ್ದಾನೆ. ಡಿಪ್ಲೋಂ ಆದ ಬಳಿಕ ಕೇರಳ, ಮೆಡ್ರಾಸ್, ಪುಣೆಯಲ್ಲಿ ಉದ್ಯೋಗದ ಅವಕಾಶ ಬಂದಿತ್ತಾದರೂ ಅದನ್ನೆಲ್ಲವುಗಳನ್ನು ನಯವಾಗಿ ತಿರಸ್ಕರಿಸಿ, ತಂದೆ ತಾಯಿಯ ಜೊತೆಯಿದ್ದುಕೊಂಡೆ ಬದುಕು ನಡೆಸುತ್ತೇನೆಂದು ಪಣ ತೊಟ್ಟ ಸಜ್ಜನ್ ಇಂದು ತನ್ನ ಯಶಸ್ವಿ ಉದ್ಯಮಿಯಾಗಿ ಗಮನ ಸೆಳೆದಿರುವುದಕ್ಕೆ ಪ್ರಾಮಾಣಿಕ ಶ್ರಮವಿದೆ ಎಂದೇ ಹೇಳಬಹುದು.
 
ಕಾಲೇಜು ಮುಗಿದ ಬಳಿಕ ಆರಂಭದ ಸ್ವಲ್ಪ ವರ್ಷ ಅಪ್ಪನ ವ್ಯವಹಾರವನ್ನು ನೋಡಲಾರಂಭಿಸಿದ ಸಜ್ಜನ್ ಕಾಲಕ್ರಮೇಣ ಸ್ವಂತ ಉದ್ಯಮವನ್ನು ಮಾಡಬೇಕೆಂದು ಚಿಂತಿಸಿ, ಸ್ವಂತ ಉದ್ಯಮದ ಕಡೆಗೆ ಲಕ್ಷ್ಯ ಕೊಟ್ಟ ಪರಿಣಾಮ ಇಂದು ನಗರದ ಕುಳಗಿ ರಸ್ತೆಯಲ್ಲಿ ಗ್ಲೋಬ್ ವೀಲ್ ಅಲೈನಮೆಂಟ್ ಕೇಂದ್ರ ಅತ್ಯುತ್ತಮ ಸೇವಾ ಕೇಂದ್ರವಾಗಿ ದಾಂಡೇಲಿ, ಹಳಿಯಾಳ ಮತ್ತು ಜೊಯಿಡಾ ತಾಲೂಕಿನಲ್ಲಿ ಮನೆಮಾತಾಗಿರುವುದು ಸುಳ್ಳಲ್ಲ.
 
ವೀಲ್ ಅಲೈನಮೆಂಟ್ ಉದ್ಯಮದ ಜೊತೆ ಜೊತೆಗೆ ವಾಶಿಂಗ್ ಸೆಂಟರನ್ನು ಪ್ರಾರಂಭಿಸಿ ಅದರಲ್ಲೂ ಸೈ ಎನಿಸಿಕೊಂಡು ಎಲ್ಲರ ಗಮನ ಸೆಳೆದಿರುವುದು ನಿಜಕ್ಕೂ ಹೆಮ್ಮೆ ತರುವಂತಹದ್ದೆ ಆಗಿದೆ. ಹೀಗೆ ತನ್ನ ಉದ್ಯಮದ ಮೂಲಕ ಯಶಸ್ಸಿನೆಡೆಗೆ ದಿಟ್ಟ ಹೆಜ್ಜೆಯಿಟ್ಟ ಸಜ್ಜನ್ ಇದೀಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೈಯಾಡಿಸಿಕೊಂಡು ಆರಂಭದಲ್ಲೆ ಗೆಲುವಿನ ನಗೆ ಬೀರಿರುವುದು ಸಜ್ಜನನ ವ್ಯವಹಾರ ಪ್ರೌಢಿಮೆಗೆ ಸಾಕ್ಷಿ ಎಂದರೆ ತಪ್ಪೇನಿಲ್ಲ.
 
ನಿರುದ್ಯೋಗಿ ಯುವಕರಿಗೆ ಉದ್ಯೋಗದಾಸರೆ ನೀಡಿದ ಯುವಕ ಸಜ್ಜನ್:
ತನ್ನ ಉದ್ಯಮವನ್ನು ಮುನ್ನಡೆಸಲು ಮತ್ತು ಅಲ್ಲಿ ಕಾರ್ಯ ನಿರ್ವಹಿಸುವ ಸಲುವಾಗಿ ಏಳೆಂಟು ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ನೀಡಿ ಅವರ ಬದಕನ್ನು ಹಸನಾಗಿಸಿದ ಧನ್ಯತೆ ನಮ್ಮ ಸಜ್ಜನನಿಗಿದೆ.
 
ಗೆಳೆಯರ ಅಚ್ಚುಮೆಚ್ಚಿನ ಗೆಳೆಯ ಸಜ್ಜನ್:
ತನ್ನ ವ್ಯವಹಾರದ ನಡುವೆಯೂ ಗೆಳೆಯರ ಅಚ್ಚುಮೆಚ್ಚಿನ ಗೆಳೆಯರಾಗಿ, ಗೆಳೆಯರ ಕಷ್ಟ ಸುಖಗಳಿಗೆ ಸ್ಪಂದಿಸುವ ಸಜ್ಜನನ ಈ ಗುಣವೆ ಅವನ ವ್ಯಕ್ತಿತ್ವಕ್ಕೆ ದರ್ಪಣವಿದ್ದಂತೆ. ಗೆಳೆಯರ ಜೊತೆ ಟ್ರಕ್ಕಿಂಗ್, ಚಾರಣ ಹೋಗುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಸಜ್ಜನ್ ಗೆಳೆಯರ ಯಾವುದೇ ಕಾರ್ಯಕ್ರಮಗಳಿದ್ದರೂ ತನ್ನ ಮನೆಯ ಕಾರ್ಯವೆಂಬಂತೆ ಅಲ್ಲಿ ಮುಂದೆ ನಿಂತು ಕಾರ್ಯಕ್ರಮದ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಸಜ್ಜನನ ಗುಣ ಎಲ್ಲರನ್ನು ಮೆಚ್ಚುವಂತೆ ಮಾಡದಿರಲು ಸಾಧ್ಯವೆ.
 
ಎಲ್ಲರಲ್ಲಿಯೂ ಎಲ್ಲರಂತಿರುವ ಸ್ವಾಭಿಮಾನಿ ಹಿರೋ ಸಜ್ಜನನ ಜೀವನಯಶಸ್ಸಿಗೆ ಅಪ್ಪ, ಅಮ್ಮನ ಆಶೀರ್ವಾದ, ತಂಗಿಯ ಪ್ರೋತ್ಸಾಹ, ಪ್ರೀತಿಸಿ, ಮುದ್ದಿಸಿ ಕೈಹಿಡಿದ ಪತ್ನಿ ಜ್ಯೋತಿಯವರ ಸಕಾಲಿಕ ಸ್ಪಂದನೆ, ಮುದ್ದು ಕಂದಮ್ಮ ಆರಾಧ್ಯಳ ಅಪ್ಪುಗೆಯ ಪ್ರೀತಿ, ಬಂಧುಗಳ, ಗೆಳೆಯರ ಸಹಕಾರವು ಪ್ರಮುಖ ಕಾರಣ.
 
ಮುದ್ದಿನ ಗೆಳೆಯ ಸಜ್ಜನ್ ಮಗದೊಮ್ಮೆ ಹ್ಯಾಪಿ ಬರ್ತುಡೆ ಡಿಯರ್.
 
ನಿಮ್ಮವ
 
ಸಂದೇಶ್.ಎಸ್.ಜೈನ್
 

ಜೀವನ ಪಯಾಣದಲ್ಲಿ ಅರ್ಧಶತಕದತ್ತ ದಾಂಡೇಲಿಯ ತೆಂಡೂಲ್ಕರ್
ಸ್ವಚ್ಚ ಹೃದಯದ ಮಾನವೀಯತೆಯ ಅಣ್ಣ ನಮ್ಮ ಇಮಾಮ್ ಸರ್ವರಿಗೆ ಬರ್ತುಡೆ ಸಂಭ್ರಮ



ಜೀವನ ಪಯಾಣದಲ್ಲಿ ಅರ್ಧಶತಕದತ್ತ ದಾಂಡೇಲಿಯ ತೆಂಡೂಲ್ಕರ್
ಸ್ವಚ್ಚ ಹೃದಯದ ಮಾನವೀಯತೆಯ ಅಣ್ಣ ನಮ್ಮ ಇಮಾಮ್ ಸರ್ವರಿಗೆ ಬರ್ತುಡೆ ಸಂಭ್ರಮ
 
ಇವತ್ತು ನಾನು ಒಬ್ಬ ಡಿಫರೆಂಟ್ ವ್ಯಕ್ತಿತ್ವದ ಸರಳ ಸಹೃದಯಿಯೊಬ್ಬರನ್ನು ಪರಿಚಯಿಸಲು ಅತ್ಯಂತ ಹರ್ಷಿತ ಮನಸ್ಸಿನಿಂದ ಅಣಿಯಾಗಿದ್ದೇನೆ. ಜೀವನದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿ, ಕಣ್ಣೀರಲ್ಲಿ ಮಿಂದೆದ್ದು, ಕಷ್ಟದಿಂದ ಬದುಕು ಕಟ್ಟಿಕೊಂಡು ಇಷ್ಟದಂತೆ ಜೀವನ ನಡೆಸುತ್ತಿರುವ ಶ್ರಮಜೀವಿ ಅಂತಲೂ ಕರೆಯಬಹುದು, ಹಟಯೋಗಿಯಂತಲೂ ಕರೆಯಬಹುದು. ಒಟ್ಟಾರೆಯಾಗಿ ಹೇಳುವುದಾದರೇ ಸಮಾಜಮುಖಿ, ಜನಮುಖಿ ಹಾಗೂ ಮಾನವೀಯತೆಯ ಸಾಕಾರಮೂರ್ತಿ ಎಂದು ಕರೆಯಬಹುದಾದ ವಿಶಿಷ್ಟ ನಡವಳಿಕೆಯ ಕ್ರಿಯೇಟಿವ್ ವ್ಯಕ್ತಿ ಹಾಗೂ ನನ್ನ ದೊಡ್ಡಣ್ಣನಾಗಿರುವ ಸಾಧಕರೊಬ್ಬರ ಬಗ್ಗೆ ನನಗನಿಸಿದ್ದನ್ನು ಬರೆಯಲು ಹೊರಟಿದ್ದೇನೆ.

ಒಂದು ಕಾಲದಲ್ಲಿ ದಾಂಡೇಲಿಯಲ್ಲಿ ಕ್ರಿಕೆಟ್ ಆಟಕ್ಕೆ ಹೊಸ ಕಾಯಕಲ್ಪವನ್ನು ಕೊಟ್ಟ ಅತ್ಯದ್ಭುತ ಕ್ರಿಕೆಟ್ ಆಟಗಾರನೆಂಬ ಜನಪ್ರೀತಿಗಳಿಸಿದ ಆ ವ್ಯಕ್ತಿ ಬೇರೆ ಯಾರು ಅಲ್ಲ. ನಮ್ಮ ಕಣ್ಣ ಮುಂದೆ ಗ್ರೇ ಬಣ್ಣದ ಹೊಂಡಾ ಆಕ್ಟಿವೊ ದ್ವಿಚಕ್ರ ವಾಹನದಲ್ಲಿ ಸರಸರನೆ ಓಡಾಡುತ್ತಿರುವ ಮೆಚ್ಚಿನ ಹಾಗೂ ನೆಚ್ಚಿನ ನನ್ನಣ್ಣ ಇಮಾಮ್ ಸರ್ವರ್. 

ನಾನು ಬಹಳ ಇಷ್ಟಪಡುವ ಹಾಗೂ ಮುದ್ದಿಸುವ ಅಣ್ಣನಾಗಿರುವ ಇಮಾಮ್ ಸರ್ವರ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ನನಗ್ಯಾಕೆ ಅವರು ಬಹಳ ಇಷ್ಟವಾಗಲೂ ಕಾರಣವೆಂದರೇ, ಅವರು ಒಂದು ಸಮುದಾಯಕ್ಕೆ, ಒಂದು ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರೊಬ್ಬ ಸಮಾಜಮುಖಿಯಾದ ದಿ ಗ್ರೇಟ್ ಹೃದಯವಂತ. ಪಕ್ಕ ಹೃದಯಶ್ರೀಮಂತ. ಸಾಮಾಜಿಕ, ಕ್ರೀಡೆ ಹಾಗೂ ಮಾನವೀಯ ಸ್ಪಂದನೆಯಂತ ಕಾರ್ಯಗಳಿಗೆ ತಡವರಿಯದೆ ಸ್ಪಂದಿಸುವ ವಿಶಾಲ ಮನಸ್ಸಿನ ಹಿರೋ ಎನ್ನಲೇನು ಅಡ್ಡಿಯಿಲ್ಲ. ಇಂದವರು ಶ್ರೀಮಂತಿಕೆಯ ಸುಪ್ಪೊತ್ತಿಗೆಯಲ್ಲಿದ್ದರೂ ತಾನು ಬೆಳೆದು ಬಂದ ಹಾದಿ, ಕ್ರಮಿಸಿದ ದಾರಿ, ಸವೆಸಿದ ಶ್ರಮವನ್ನು ಸದಾ ಸ್ಮರಿಸಿಕೊಂಡು, ಅದುವೆ ಜೀವನ ಸಫಲತೆಗೆ ಪ್ರಮುಖ ಆಶೀರ್ವಾದ ಎಂದು ಭಾವಿಸಿ ಬದುಕುವ ಇಮಾಮ್ ಸರ್ವರ್ ಅವರ ಜೀವನ ಸನ್ನಡತೆ ನಮಗೆಲ್ಲರಿಗೂ ಅನುಕರಣೀಯ ಮತ್ತು ಅಭಿನಂದನಿಯ.

ನಮ್ಮ ಇಮಾಮ್ ಅವರೇನು ಶ್ರೀಮಂತಿಕೆಯ ಕುಟಂಬದಲ್ಲಿ ಹುಟ್ಟಿ ಬಂದವರಲ್ಲ. ಆದಾಗ್ಯೂ ಸಂಸ್ಕಾರಯುತವಾದ ಜೀವನ ನಡವಳಿಕೆಯ ದಾರ್ಶನಿಕ ಕುಟುಂಬದ ಹೆಮ್ಮೆಯ ಕುವರ ಈ ನಮ್ಮ ಇಮಾಮ್ ಸರ್ವರ್.  ಅವರಪ್ಪ ಒಂದು ಸಮಯದಲ್ಲಿ ನಗರ ಸಭೆಯಲ್ಲಿ ನೀರಾವರಿ ವಿಭಾಗದಲ್ಲಿ ಸೇವೆಯನ್ನು ಸಲ್ಲಿಸಿ, ನಿವೃತ್ತರಾಗಿ, ಸ್ವರ್ಗಸ್ಥರಾದ ಮಾರುತಿ ನಗರದ ನಿವಾಸಿಯಾಗಿದ್ದ ದಿಲಾವರ ಸರ್ವರ್ ಹಾಗೂ ಮಾತೃ ಹೃದಯದ ಗುಣಶೀಲವಂತೆ ಹಫೀಜಾ ಸರ್ವರ್ ದಂಪತಿಗಳ ಜೇಷ್ಟಪುತ್ರ ಇಮಾಮ್ ಸರ್ವರ್. ಅಂದ ಹಾಗೆ ಇಮಾಮ್ ಅವರಿಗೆ ಮಮ್ತಾಜ್, ರಾಜು, ರಜೀಯ ಎಂಬ ಸಹೋದರಿಯರು ಮತ್ತು ಓರ್ವ ಸಹೋದರರಿದ್ದಾರೆ.

ಎಳೆಯ ಬಾಲಕನಿರುವಾಗ್ಲೆ ಅಪ್ಪನ ಜೊತೆ ಅಪ್ಪನ ಕಾಯಕವಾದ ನೀರು ಸರಬರಾಜು ಕಾಯಕದಲ್ಲಿ  ಕಲಿಕೆಯ ಜೊತೆ ತೊಡಗಿಸಿಕೊಂಡು ಸಣ್ಣ ಪ್ರಾಯದಲ್ಲೆ ಶ್ರಮಜೀವನದ ಪಾಠವನ್ನು ಅರಿತವರು ಮತ್ತು ಜೀವನದಲ್ಲಿ ರೂಢಿಸಿಕೊಂಡವರು ಕೃಷ್ಣ ಸುಂದರ ಬಣ್ಣದ ನಮ್ಮ ಇಮಾಮ್ ಸರ್ವರ್ ಅವರು. 

ಹೀಗೆ ಬೆಳೆದ ಇಮಾಮ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಡಿ.ಎಫ್.ಎ ಶಾಲೆಯಲ್ಲಿ ಪಡೆದರು. ಆನಂತರ ಜೆವಿಡಿಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಹೈಸ್ಕೂಲ್ ಮುಗಿದ ಬಳಿಕ ಬಂಗೂರನಗರ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದು, ಮುಂದೆ ಬಂಗೂರನಗರ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದರು. ಆನಂತರ ಜೆ.ಓ.ಸಿ ಶಿಕ್ಷಣವನ್ನು ಪಡೆದ ಹೆಮ್ಮೆ ನಮ್ಮ ಇಮಾಮ್ ಅವರಿಗಿದೆ.

ದಾಂಡೇಲಿಯ ಸಚಿನ್ ತೆಂಡೂಲ್ಕರ್ :
ಈ ಮಾತನ್ನು ದಾಂಡೇಲಿಯ ಕ್ರಿಕೆಟ್ ಆಟಗಾರರು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಒಂದು ಕಡೆ ಕಿತ್ತು ತಿನ್ನುವ ಬಡತನವಾದರೇ, ಬಡತನವನ್ನು ಮೆಟ್ಟಿ ನಿಲ್ಲಬೇಕೆಂದು ಬಯಸಿ, ತಂದೆ ತಾಯಿಗೆ ಎಲ್ಲಿಯೂ ಹೊರೆಯಾಗಬಾರದೆಂದು ಭಾವಿಸಿ ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗಲೆ ದಾಂಡೇಲಿಯ ಸುಭಾಸನಗರ, ಅಂಬೇವಾಡಿ ಅಂಚೆ ಕಚೇರಿ ವ್ಯಾಪ್ತಿಗೆ ತಿಂಗಳಿಗೆ ರೂ: 50 ರಂತೆ ಸಂಬಳವನ್ನು ಪಡೆದು ನೀರು ಸರಬರಾಜು ಮಾಡುವ ಕಾಯಕದಲ್ಲಿ ನಿರತರಾದವರು ನಮ್ಮ ಇಮಾಮ್ ಅವರು.  ಚಳಿ, ಮಳೆಯೆನ್ನದೆ ಪ್ರತಿದಿನ ಮುಂಜಾನೆ ಬೆಳ್ಳಂ ಬೆಳಗ್ಗೆ 4 ಗಂಟೆಗೆ ಎದ್ದು ಬೆಳಿಗ್ಗೆ 6.30 ಗಂಟೆಯೊಳಗೆ ತಾನು ವಹಿಸಿದ ನೀರು ಬಿಡುವ ಕೆಲಸವನ್ನು ಶೃದ್ದೆಯಿಂದ ಮಾಡುವುದರ ಮೂಲಕ ಎಲ್ಲರ ಅಚ್ಚುಮೆಚ್ಚಿನ ಪ್ರೀತಿಗೆ ಪಾತ್ರರಾದವರು ನಮ್ಮ ಇಮಾಮಣ್ಣನವರು. 

ಇಂಥಹ ಶ್ರಮಜೀವಿ ಇಮಾಮ್ ಅವರು ಕೆಲಸ, ಓದು ಹೀಗೆ ಉಳಿದ ಸಮಯದಲ್ಲಿ ಬಹಳ ತೂಕದ ಬ್ಯಾಟನ್ನು ಎತ್ತಿಕೊಂಡು ಹೋಗುವುದು ಡಿ.ಎಫ್.ಎ ಮೈದಾನಕ್ಕೆ. ಡಿ.ಎಫ್.ಎ ಮೈದಾನದಲ್ಲಿ ಕ್ರಿಕೆಟ್ ಕಲಿಯಾಗಿ ವಿಜೃಂಭಿಸಿದ ರೀತಿ ಇನ್ನು ಹಲವರ ಕಣ್ಣಂಚಿನಲ್ಲಿ ಹಾಗೆ ಇದೆ. ಇಮಾಮ್ ಅವರ ಪ್ರಚಂಡ ಬ್ಯಾಟಿಂಗ್, ಕರಾರುವಕ್ಕಾದ ಪಿಲ್ಡಿಂಗ್ ಒಟ್ಟಿನಲ್ಲಿ ಸವ್ಯಸಾಚಿ ಆಟವನ್ನು ದಾಂಡೇಲಿಯ ಜನತೆ ನೋಡಿ ಸಂಭ್ರಮಿಸಿದ್ದಾರೆ, ಹರಸಿ ಆಶೀರ್ವದಿಸಿದ್ದಾರೆ. ತನ್ನ ಅದ್ಬುತವಾದ ಕ್ರಿಕೆಟ್ ಆಟದಿಂದಾಗಿ ದಾಂಡೇಲಿಯ ಅವರ ತಂಡವಾದ ಎನ್.ವೈ.ಎ ಕ್ರಿಕೆಟ್ ತಂಡ ಜಿಲ್ಲಾ ಮಟ್ಟದಲ್ಲಿ ಹಲವಾರು ಕಪ್ ಗಳನ್ನು ಮುಡಿಗೇರಿಸಿಕೊಂಡು ದಾಂಡೇಲಿಯ ಕ್ರೀಡಾಕೀರ್ತಿಯನ್ನು ಬೆಳೆಗಿಸಿರುವುದನ್ನು ಯಾರು ಮರೆಯುವಂತಿಲ್ಲ. ನಮ್ಮ ಇಮಾಮ್ ಅವರ ಆಟದ ಶೈಲಿ, ಮನೋಜ್ಞ ಬ್ಯಾಟಿಂಗ್ ಅವರನ್ನು ದಾಂಡೇಲಿಯ ಸಚಿನ್ ತೆಂಡೂಲ್ಕರ್ ಎಂದೆ ಎಲ್ಲರು ಕರೆಯುವಂತಾಯಿತು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಇಮಾಮ್ ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಗಮನ ಸೆಳೆದ ಅಗ್ರ ಕ್ರಿಕೆಟ್ ಆಟಗಾರರಾಗಿ ಅಪ್ರತಿಮ ಕ್ರೀಡಾಪಟುವಾಗಿ ದಾಂಡೇಲಿಯ ಮುಕುಟಕ್ಕೆ ಗರಿಯಾಗಿದ್ದನ್ನು ಯಾರು ಮರೆಯುವಂತಿಲ್ಲ. 

ಇನ್ನೂ ಮೀಸೆ ಮೂಡದ ಯುವಕ ಇಮಾಮ್ ಅವರು ಬ್ಯಾಟ್ ಹಿಡಿದು ಅಂಗಳಕ್ಕೆ ಬರುತ್ತಿದ್ದಂತೆಯೆ ಎದುರಾಳಿಗಳು ನಡುಗುತ್ತಿದ್ದರಂತೆ. ಒಂದು ಕಡೆ ರಕ್ಷಣಾತ್ಮಾಕ ಆಟ, ಇನ್ನೊಂದು ಕಡೆ ಅವಕಾಶ ಸಿಕ್ಕಿದಾಗಲೆಲ್ಲ ಹೊಡಿಬಡಿ ಆಟ ಇದು ನಮ್ಮ ಇಮಾಮ್ ಅವರು ಆಟದ ಕಾರ್ಯತಂತ್ರ. ಈ ಕಾರ್ಯತಂತ್ರವೆ ಎದುರಾಳಿ ತಂಡದ ಸಂಪೂರ್ಣ ತಂತ್ರ ವಿಫಲತೆಗೆ ಬಹುಮೂಲ್ಯ ಕಾರಣವಾಗುತ್ತಿತ್ತಂತೆ. ಒಬ್ಬ ಸ್ಮರಣೀಯ ಆಟಗಾರನಾಗಿದ್ದ ಇಮಾಮ್ ಅವರೇನಾದರೂ ಕಾಲೇಜು ವಿದ್ಯಾರ್ಥಿ ಸಮಯದಲ್ಲಿ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿರುತ್ತಿದ್ದರೇ ರಾಜ್ಯ, ರಾಷ್ಟ್ರದ ಕ್ರಿಕೆಟ್ ಆಟಗಾರರಾಗಿ ಗಮನ ಸೆಳೆಯಬಹುದಿತ್ತು. ಆದರೇನೂ ಎಲ್ಲದಕ್ಕೂ ಅವಕಾಶನೂ ಬೇಕು, ಲಕ್ ನೂ ಬೇಕಾಲ್ವೆ. ಅದೇನೆ ಇರಲಿ ದಾಂಡೇಲಿಗೆ ಮಾತ್ರ ಏಕೈಕ ಸಚಿನ್ ತೆಂಡೂಲ್ಕರ್ ನಮ್ಮ ಇಮಾಮ್ ಸರ್ವರ್ ಎನ್ನುವುದನ್ನು ಎಲ್ಲರೂ ಒಪ್ಪಬೇಕಾದ ವಿಚಾರ.

ಕ್ರಿಕೆಟ್ ಜೊತೆ ಜೊತೆಗೆ ಶಟಲ್ ಬ್ಯಾಡ್ಮಿಂಟನ್, ಕೇರಂ ಕ್ರೀಡೆಯಲ್ಲಿಯೂ ತನ್ನ ತಾಕತ್ತು ಪ್ರದರ್ಶಿಸಿ ಗಮನ ಸೆಳೆದ ಇಮಾಮ್ ಅವರು ಕಾಲೇಜು ಮುಗಿದ ಮೇಲೆ ತನ್ನ ನೀರು ಪೊರೈಸುವ ಕಾಯಕವನ್ನು ಮುಂದುವರೆಸುತ್ತಲೆ, ಉಳಿದ ಸಮಯದಲ್ಲಿ ಸ್ವತಂತ್ರ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿ ಮುನ್ನಡೆದರು.

ಅವರೆ ದುಡಿದು ಸಂಪಾದಿಸಿದ ಹಣದಲ್ಲಿ ಮಾರುತಿ ನಗರದ ತನ್ನ ಮನೆಯಲ್ಲೆ ಎಸ್.ಟಿ.ಡಿ ಬೂತನ್ನು ಪ್ರಾರಂಭಿಸಿದರು. ಇದು ಆರಂಭಿಸಿ ಸ್ವಲ್ಪ ತಿಂಗಳೊಳಗೆ ಕೆ.ಸಿ ವೃತ್ತದಲ್ಲಿ ಮತ್ತೊಂದು ಎಸ್.ಟಿ.ಡಿ ಬೂತನ್ನು ತೆರದು ಆ ಬಳಿಕ ಜಂಗಲ್ ಲಾಡ್ಜಸ್ ಬಳಿ ಎಸ್.ಟಿ.ಡಿ ಬೂತನ್ನು ತೆರದರು. ಇದು ಅವರ ಬದುಕಿನ ಲಯಕ್ಕೆ ಹೊಸ ತಿರುವನ್ನು ಕೊಟ್ಟಿತೆಂದೆ ಹೇಳಬಹುದು.
ಹೀಗೆ ಬೆಳೆದ ವ್ಯವಹಾರ ಅವರನ್ನು ಎಲ್ಲರ ಪರಿಚಯವನ್ನಾಗಿಸಲು ಸಹಕಾರಿಯಾಯಿತು. ಮುಂದೆ ದಿನ ಮುಂದುವರಿದಂತೆ ದಂಡೇಲಿಯ ಬಿ.ಎಸ್.ಎನ್.ಎಲ್ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿಕೊಂಡು ಅಲ್ಲಿ ಬಹುವರ್ಷಗಳವರೆಗೆ ಸೇವೆ ಸಲ್ಲಿಸಿದ ಫಲಶೃತಿ ಎಂಬಂತೆ, ತನ್ನ ಛಲದ ಶ್ರಮಕ್ಕೆ ಅನುಗುಣವಾಗಿ ಅಲ್ಲಿ ಉದ್ಯೋಗದಲ್ಲಿ ಖಾಯಂಮಾತಿ ದೊರೆಯಿತು. ಅಲ್ಲಿಂದ ಈವರೇಗೂ ಮುಂದೆ ನಿವೃತ್ತಿಯಾಗುವರೆಗೂ ನಮ್ಮ ಇಮಾಮ್ ಸರ್ವರ್ ಅವರು ಸರಕಾರಿ ನೌಕರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಸಲ್ಲಿಸಲಿದ್ದಾರೆ.

ಉದ್ಯೋಗದ ಜೊತೆ ಜೊತೆಗೆ ತನ್ನ ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದ ನಮ್ಮ ಇಮಾಮ್ ಅವರು ತನ್ನ ಸಹೋದರ ರಾಜು ಸರ್ವರ್ ಅವರಿಗೆ ಅಕ್ಕರೆಯ ಅಣ್ಣನಾಗಿ, ಒಬ್ಬ ಅತ್ಯುತ್ತಮ ಗೆಳೆಯನಾಗಿ ತಮ್ಮನ ಬದುಕಿಗೆ ಪ್ರೇರಣಾದಾಯಿಯಾಗಿ ಗಮನ ಸಳೆದಿದ್ದಾರೆ. ತಮ್ಮ ರಾಜು ಸರ್ವರ್ ಅವರಿಗೆ ಸ್ವಾವಲಂಬಿ ಬದುಕಿನ ನೀತಿ ಪಾಠವನ್ನು ಕಲಿಸಿ, ದಾಂಡೇಲಿಯಲ್ಲಿ ಬೆಳೆಯುತ್ತಿರುವ ಪ್ರವಾಸೋಧ್ಯಮಕ್ಕೆ ಅನುಗುಣವಾಗಿ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿ ಜಾನ್ ಪೊಲಾರ್ಡ್, ಆನಂತರ ಸ್ಟ್ಯಾನ್ಲಿ ಮೊಬೆನ್ ಅವರ ಗರಡಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಇಂಚು ಇಂಚನ್ನು ಅಭ್ಯಸಿಸಲು ನೆರವಾದರಲ್ಲದೇ ತಾನು ಈ ಚಟುವಟಿಕೆಯ ಪ್ರಾವೀಣ್ಯತೆಯನ್ನು ಕಲಿತರು. ಮುಂದೆ ರಾಜು ಸರ್ವರ್ ಅವರ ಹೆಸರಲ್ಲಿ ಹರೇಗಾಳಿಯಲ್ಲಿ ಪರಂಪರಾ ಕಾಟೇಜಸ್ ಎಂಬ ವಿಶಿಷ್ಟ ಹೋಂ ಸ್ಟೇ ಯೊಂದನ್ನು ನಿರ್ಮಿಸಲು ಮಾರ್ಗದರ್ಶನ ನೀಡಿ, ಹರಿಸ ಆಶೀರ್ವದಿಸಿದವರು ಇದೇ ನಮ್ಮ ಇಮಾಮ್ ಸರ್ವರ್ ಅವರು.

ಸಾಮಾಜಿಕವಾಗಿ ನಮ್ಮ ಇಮಾಮ್:
ಕ್ರೀಡೆ, ವೃತ್ತಿ, ಪ್ರವಾಸೋದ್ಯಮದ ನಡುವೆಯೂ ಸಾಮಾಜಿವಾಗಿ ಇಮಾಮ್ ಅವರು ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇಮಾಮ್ ಅವರು ಮಾರುತಿ ನಗರದ ಫೈಜಲ್ ಮಸೀದಿಯ ಕೋಶಾಧಿಕಾರಿಯಾಗಿ, ರೋಟರಿ ಕ್ಲಬಿನ ಪ್ರಮುಖ ಪದಾಧಿಕಾರಿಯಾಗಿ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಇದರ ಪ್ರಮುಖ ಪದಾಧಿಕಾರಿಯಾಗಿ,  ದಾಂಡೇಲಿ ಪ್ರವಾಸೋದ್ಯಮಿ ಸಂಘದ ಪದಾಧಿಕಾರಿಯಾಗಿ, ದಾಂಡೇಲಿ ವೈಲ್ಡ್ ಸೊಸೈಟಿಯ ಪದಾಧಿಕಾರಿಯಾಗಿ, ನಮ್ಮ ಗಾಂಧಿನಗರದ ಶ್ರೀ.ಗಣೇಶ ಹಿಂದು, ಮುಸ್ಲಿಂ, ಕ್ರೈಸ್ತ ಯುವಕ ಮಂಡಳದ ಮಾರ್ಗದರ್ಶಕರಾಗಿ ಸೇವೆಯನ್ನು ನಗುಮೊಗದಿಂದ ಸಲ್ಲಿಸುತ್ತಿದ್ದಾರೆ.

ಸಂಕಷ್ಟಕ್ಕೆ ಸ್ಪಂದಿಸುವ ಹೃದಯವಂತ :
ತಾನು ಕಣ್ಣೀರಲ್ಲಿ ಬದುಕು ಕಟ್ಟಿಕೊಂಡಿರುವುದನ್ನು ನೆನೆಸಿಕೊಳ್ಳುವ ಇಮಾಮ್ ಅವರು ಯಾರೆ ಸಂಕಷ್ಟದಲ್ಲಿದ್ದರೂ ತಕ್ಷಣ ಸ್ಪಂದಿಸುವ ಹೃದಯವಂತರಾಗಿ ನಮ್ಮ ಮುಂದಿದ್ದಾರೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಬಡವರ ಅನಾರೋಗ್ಯಕ್ಕೆ ಸ್ಪಂದನೆ, ಹೀಗೆ ಸಂಕಷ್ಟದಲ್ಲಿದ್ದವರಿಗೆ ತಕ್ಷಣ ಸ್ಪಂದಿಸುವ ಗುಣಶ್ರೀಮಂತಿಕೆಯನ್ನು ಹೊಂದಿರುವ ಇಮಾಮ್ ಅವರಿಗೆ ಇಮಾಮ್ ಅವರೆ ಸಾಟಿ.

ಜೀವನದಲ್ಲಿ ಹಲವಾರು ಅಡೆತಡೆಗಳನ್ನು ದಾಟಿ, ಶ್ರಮದ ಹಾದಿಯಲ್ಲಿ ಮುನ್ನಡೆದು, ಯಶಸ್ವಿಯಾಗಿ ನಗುಮೊಗದ ಜೀವನ ನಡೆಸುವ ನಗುಮೊಗದ ಹೃದಯಾದಣ್ಣ ನಮ್ಮ ಇಮಾಮ್ ಸರ್ವರ್ ಅವರ ಜೀವನಸಫಲತೆಗೆ ಅವರಪ್ಪ ಹಾಗೂ ಅವರಮ್ಮನ ಆಶೀರ್ವಾದ, ಸಹೋದರ, ಸಹೋದರಿಯರ ಪ್ರೀತಿ, ವಾತ್ಸಲ್ಯ, ಕೈ ಹಿಡಿದ ಪತ್ನಿ, ಹೆಜ್ಜೆಗೆ ಹೆಜ್ಜೆಯಾಗಿರುವ ಮೆಹರೂನ್ ಅವರ ಸಕಾಲಿಕ ಸ್ಪಂದನೆ, ಗೆಳೆಯಂತಿರುವ ಮಕ್ಕಳಾದ ಸಾಹೀಲ್ ಮತ್ತು ಸಭಾ ಅವರುಗಳ ಅಕ್ಕರೆ ಮತ್ತು ಅಭಿಮಾನದ ಪ್ರೀತಿ, ಬಂಧುಗಳ, ಗೆಳೆಯರ ಪ್ರೀತಿಯ ಸಹಕಾರ, ತನ್ನ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಹದ್ಯೋಗಿಗಳ ಮನದ ಪ್ರೀತಿಯೆ ಪ್ರಮುಖ ಕಾರಣ.

ಡೈನಮಿಕ್ ವ್ಯಕ್ತಿತ್ವದ ದಿ ಗ್ರೇಟ್ ಹೃದಯಶ್ರೀಮಂತ ನನ್ನಣ್ಣ ಇಮಾಮ್ ಸರ್ವರ್ ಅವರಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮವ
 
ಸಂದೇಶ್.ಎಸ್.ಜೈನ್
 

Sunday, December 16, 2018

ಕರಾವಳಿಯ ಅಜಾತಶತ್ರು ಪ್ರತಾಪ್ ಸಿಂಹ ನಾಯಕ
ಬೆಳ್ತಂಗಡಿ ಜನತೆಯ ಪ್ರೀತಿಗೆ ಪಾತ್ರರಾದ ಹೃದಯಶ್ರೀಮಂತ ನಮ್ಮ ಪ್ರತಾಪ












 ಕರಾವಳಿಯ ರಾಜಕೀಯ ಕ್ಷೇತ್ರದ ಅಜಾತಶತ್ರು ಪ್ರತಾಪ್ ಸಿಂಹ ನಾಯಕ
ಬೆಳ್ತಂಗಡಿ ಜನತೆಯ ಪ್ರೀತಿಗೆ ಪಾತ್ರರಾದ ಹೃದಯಶ್ರೀಮಂತ ನಮ್ಮ ಪ್ರತಾಪ


ನಾನವರನ್ನು ಬಹಳ ಹತ್ತಿರದಿಂದ ಬಲ್ಲೆ. ಅವರಿಗೆ ನನ್ನ ಪರಿಚಯವಿದ್ದಿರಬಹುದು. ಒಟ್ಟಿನಲ್ಲಿ ನನ್ನ ಅವರ ಭೇಟಿ ಹತ್ತನ್ನೆರಡು ವರ್ಷಗಳ ಹಿಂದಿನದು ಬಿಡಿ. ನನ್ನ ಪರಿಚಯ ಇರ್ಲೇಬೇಕೆಂದು ಹಟ ಹಿಡಿಯಲೇನೂ ನಾನು ದೊಡ್ಡ ಮನುಷ್ಯನಲ್ಲ. ಆದಾಗ್ಯೂ ನಾನು ಬೆಳ್ತಂಗಡಿಯಿಂದ ಉದ್ಯೋಗವನ್ನರಸಿ ದಾಂಡೇಲಿಗೆ ಬಂದು ಬಹಳ ವರ್ಷಗಳ ನಂತರ ಪೇಸ್ ಬುಕ್ ಪುಟದಲ್ಲಿ ನನ್ನ ಗೆಳೆಯರಾದವರು ಅವರು. ನನ್ನ ಬಹುತೇಕ ಬರಹಗಳಿಗೆ ಕಮೆಂಟ್ಸ್ ಕೊಡಲು ಅವರಿಗೆ ಸಮಯವಿಲ್ಲದಾದರೂ ಲೈಕ್ ಅಂತೂ ಮಾಡಿಯೆ ಮಾಡ್ತಾರೆ. ಒಬ್ಬ ಸ್ತುರದ್ರೂಪಿ ಪರ್ಸನಾಲಿಟಿಯ ಯೋಗ್ಯ ವ್ಯಕ್ತಿ, ಸುಯೋಗ್ಯ ರಾಜಕಾರಣಿ. ಅವರ ಹೆಸರು ಪ್ರತಾಪ ಆದರೆ ಇನ್ನೊಬ್ಬರ ನೋವಿಗಾಗಿ ಪಶ್ಚಾತಾಪ ಪಟ್ಟು ಸಹಾಯ ಮಾಡಲು ಧಾವಿಸುವ ಪರೋಪಕಾರಿ ಗುಣಸ್ವಭಾವದ ವಕೀಲರು ಹೌದು. ಅನೇಕ ಬಡವರಿಗೆ ಉಚಿತವಾಗಿ ನ್ಯಾಯಸೇವೆಯನ್ನು ನೀಡಿದ ಧನ್ಯತೆ ಅವರಿಗಿದೆ. ಅವರ ಸಾರ್ಥಕ ಸೇವೆಯ ಬಗ್ಗೆ ನನಗಂತೂ ಅಪಾರ ಗೌರವವಿದೆ.

ಇಂತಹ ವ್ಯಕ್ತಿ ಯಾರಿರಬುದೆಂದು ನನ್ನ ಅನೇಕ ಗೆಳೆಯರು ಇವತ್ತು ಪ್ರಶ್ನೆ ಮಾಡಿಯೆ ಮಾಡುತ್ತಾರೆ. ಪ್ರಿಯ ಸ್ನೇಹತರೇ, ನಾವು ಎಲ್ಲೆ ಹೋದರೂ ನಮಗೆ ಜನ್ಮಕೊಟ್ಟ ತಾಯಿ ನೆಲವನ್ನು ಮರೆಯುವುದುಂಟೆ. ನಮ್ಮ ತಾಯಿ ನೆಲದ ಸಾಧಕರೆ ನಮಗೆ ದಿವ್ಯಪ್ರೇರಣೆ. ಇಂತಹ ಪ್ರೇರಣಾದಾಯಿ ವ್ಯಕ್ತಿತ್ವದ ನಿಸ್ವಾರ್ಥ ರಾಜಕಾರಣಿ, ಸಮಾಜ ಸೇವಕ, ರೋಟರಿಯೆನ್, ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡ ಹೃದಯವಂತ ಬೇರೆ ಯಾರು ಅಲ್ಲ, ನಮ್ಮ ತುಳುನಾಡಿನ ಬೆಳ್ತಂಗಡಿ ತಾಲೂಕಿನಲ್ಲಿ ಜನಸೇವೆ ಮಾಡುತ್ತಿರುವ ಜನಮಾನಸದ ವಕೀಲ, ಜನಪ್ರಿಯ ರಾಜಕಾರಣಿ, ಇನ್ನೊಬ್ಬರಿಗಾಗಿ ದುಡಿಯುವ, ಶ್ರಮಿಸುವ ಹಟಯೋಗಿ, ಕುರ್ಚಿಗಾಗಿ ಹಂಬಲಿಸದೇ ಪಕ್ಷ ಕಟ್ಟಿದ ಸೇನಾನಿ, ಬಿಜೆಪಿಯ ನಿಷ್ಟಾವಂತ ಯೋಧ ನಮ್ಮವರೇ ಆಗಿರುವ ಪ್ರತಾಪ್ ಸಿಂಹ ನಾಯಕ ಅವರು.

ಇಂದವರಿಗೆ ಜನ್ಮದಿನದ ಸಂಭ್ರಮ. ನಾನು ಪ್ರೈಮರಿ ಶಾಲೆಗೆ ಹೋಗುತ್ತಿರುವಾಗ್ಲೆ ನಮ್ಮ ಬೆಳ್ತಂಗಡಿ ತಾಲೂಕಿನ ಅತ್ಯಂತ ಸ್ಮಾರ್ಟ್ ಹಾಗೂ ಡೈನಮಿಕ್ ರಾಜಕಾರಣಿ ಎಂಬ ಹೆಸರನ್ನು ಗಳಿಸಿಕೊಂಡಿದ್ದ ಇದೇ ಪ್ರತಾಪ್ ಸಿಂಹ ನಾಯಕರವರಿಗೆ ಇಂದು ಜನ್ಮದಿನದ ಸಂಭ್ರಮ, ಸಡಗರ. ಈ ಸಂಭ್ರಮ, ಸಡಗರಕ್ಕೆ ನನ್ನದೊಂದು ನುಡಿರೂಪದ ಶುಭಾಶಯ.

ಅಂದ ಹಾಗೆ ಅವರಪ್ಪ ಒಂದುಕಾಲದಲ್ಲಿ ಬೆಳ್ತಂಗಡಿ ತಾಲೂಕಿನ ಸುಪ್ರಸಿದ್ದ ವಕೀಲರಾಗಿದ್ದವರು. ಹಾಗಾಗಿ ರಕ್ತಗತವಾಗಿ ಅವರ ಮಗ ನಮ್ಮ ಪ್ರತಾಪ್ ಸಿಂಹರವರು ಸಹ ಯಶಸ್ವಿ ವಕೀಲರಾಗಿ ತಾಲೂಕಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆಯ ನಿವಾಸಿಯಾಗಿರುವ ಪ್ರತಾಪ್ ಸಿಂಹ ನಾಯಕರವರು ಉಜಿರೆಯ ಎಸ್.ಡಿ.ಎಂ ಹೈಸ್ಕೂಲ್ ಹಾಗೂ ಎಸ್.ಡಿ.ಎಂ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ. ಪದವಿ ಶಿಕ್ಷಣ ಮುಗಿದ ಮೇಲೆ ಕಾನೂನು ಪದವಿಯನ್ನು ಪಡೆದು ಅಪ್ಪನ ವಕೀಲಿ ವೃತ್ತಿಗೆ ಸಹಾಯವನ್ನು ಮಾಡಲಾರಂಭಿಸಿದ ಈ ಯುವಕ ಅಲ್ಪ ವರ್ಷದಲ್ಲೆ ಈ ವೃತಿಯಲ್ಲಿ ಅನುಪಮ ಹೆಸರನ್ನು ಗಳಿಸಿಕೊಂಡಿರುವುದಕ್ಕೆ ಸ್ವತ: ಅವರ ತಂದೆಯೆ ಹೆಮ್ಮೆ ಪಟ್ಟಿದ್ದರಂತೆ.

ಶಾಲಾ/ಕಾಲೇಜು ವಿದ್ಯಾರ್ಥಿಯಾಗಿರುವಾಗ ನಮ್ಮ ಪ್ರತಾಪ್ ಸಿಂಹರವರು ಮೊದಲೆ ಹೈಟ್ ಪರ್ಸನಾಲಿಟಿಯ ಚಂದದ ಯುವಕ ಬೇರೆ. ಅದರಲ್ಲೂ ಅವರು ಅಪ್ರತಿಮ ಕ್ರೀಡಾಪಟುವಾಗಿ ಗಮನಾರ್ಹ ಸಾಧನೆ ಮಾಡಿದ್ದರು. ವಾಲಿಬಾಲ್, ಕ್ರಿಕೆಟ್ ಅವರ ಆಸಕ್ತಿಯ ಕ್ರೀಡೆಗಳಾಗಿದ್ದವು. ಲಾಂಗ್ ಜಂಪ್, ಅಥ್ಲೇಟಿಕ್ ಅವರ ಪ್ರಮುಖ ಇಷ್ಟದ ಕ್ರೀಡೆಗಳಾಗಿದ್ದವು.

ಎಬಿವಿಪಿ ಮೂಲಕ ಸಂಘಟನೆಗಿಳಿದ ಬೆಳ್ತಂಗಡಿಯ ಸಿಂಹ:
ಅಂದು ಪ್ರತಾಪ್ ಸಿಂಹ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಮೂಲಕ ಸಕ್ರೀಯ ಸಂಘಟನೆಕ್ಕಿಳಿದರು. ವಿದ್ಯಾರ್ಥಿಗಳನ್ನು ಸಂಘಟಿಸಿಕೊಂಡು ಎಬಿವಿಪಿಯನ್ನು ತಾಲೂಕಿನಲ್ಲಿ ಬಲವರ್ಧನೆಗೊಳಿಸಲು ಅವರು ಶ್ರಮಿಸಿದ ಬಗೆ ಅದು ನಿಜಕ್ಕೂ ಶ್ಲಾಘನೀಯ.

ವೃತ್ತಿಯ ಜೊತೆಗೆ ರಾಜಕೀಯಕ್ಕೆ ಎಂಟ್ರಿ:
ಮೊದಲೆ ಎಬಿವಿಪಿ ಸಂಘಟನೆಯ ರುಚಿ, ಆರ್.ಎಸ್.ಎಸ್ ಸಂಘಟನೆಯ ಸಕ್ರೀಯ ಕಾರ್ಯಕರ್ತರಾಗಿ ಗಮನ ಸೆಳೆದಿದ್ದ ನಮ್ಮೂರ ಸಿಂಹ ಪ್ರತಾಪ್ ಸಿಂಹ ಅವರು ಕಾಲಕ್ರಮೆಣ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ಯುವ ಮೋರ್ಚಾದ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ದಿನ ಮುಂದುವರಿದಂತೆ ಪಕ್ಷದ ಪ್ರಧಾನ ಘಟಕದ ಪ್ರಮುಖ ಜವಾಬ್ದಾರಿಗೆ ಪಾತ್ರರಾದರು. ಹೀಗೆ ಬೆಳೆದ ಅವರ ರಾಜಕೀಯ ಕೆರಿಯರ್ ತಾಲೂಕಿನ ಬಿಜೆಪಿ ಘಟಕದ ಅಧ್ಯಕ್ಷರಾಗುವತ್ತಾ ಮಂದುವರಿಯಿತು. ಬಹುವರ್ಷಗಳ ಕಾಲ ಪಕ್ಷದ ತಾಲೂಕು ಘಟಕದ ಅಧ್ಯಕ್ಷರಾಗಿ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಸದ್ದು ಮತ್ತು ಸುದ್ದಿಯಿಲ್ಲದೆ ಅವರು ಪರಿಶ್ರಮಿಸಿದ ರೀತಿ ಮಾತ್ರ ಅವರ ದಿಟ್ಟ ನಾಯಕತ್ವಕ್ಕೆ ದೊರೆತ ಬಹುದೊಡ್ಡ ಫಲ ಎಂದೆ ಹೇಳಬಹುದು. 

ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಸಿಂಹ:
ಬಿಜೆಪಿಯ ಅಗ್ರ ಬೆಳವಣಿಗೆಗೆ ಶ್ರಮವಹಿಸಿ ಸಾಧನೆಗೈದ ಪ್ರತಾಪ್ ಸಿಂಹ ಅವರ ಪಕ್ಷ ಸಂಘಟನೆ ಮತ್ತು ಅವರ ಸಮಾಜಮುಖಿ ಕಾರ್ಯವನ್ನು ಗಮನಿಸಿದ ಪಕ್ಷದ ರಾಜ್ಯ ನಾಯಕರು ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನಿಯೋಜಿಸಿದರು. ನಮ್ಮ ಪ್ರತಾಪ್ ಸಿಂಹ ಅವರ ಜಿಲ್ಲಾಧ್ಯಕ್ಷತೆಯ ಅವಧಿಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಧೂಳೆಬ್ಬಿಸಿ ವಿಜಾಯಪತಾಕೆಯನ್ನು ಹಾರಿಸಿರುವುದನ್ನು ಯಾರು ಮರೆಯುವಂತಿಲ್ಲ. ಈಗಲೂ ಜಿಲ್ಲಾ ಘಟಕದ ಸಾರಥಿಯಾಗಿ ಪಕ್ಷ ಸಂಘಟನೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ.

ಬಿಜೆಪಿ ನೀಡಿದ ಎಲ್ಲ ಅವಕಾಶಗಳನ್ನು ಹಾಗೂ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ ಹೃದಯವಂತ ಪ್ರತಾಪ್ ಸಿಂಹ ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯ ವಿದಾನ ಪರಿಷತ್ ಸದಸ್ಯರಾಗುವ ದಿನ ದೂರವಿಲ್ಲ ಎಂಬ ಮಾತು ನಿಜವಾಗುವ ಸ್ಪಷ್ಟ ಲಕ್ಷಣ ದೊರೆಯುತ್ತಿದೆ. ಅದು ಅವರ ಶ್ರಮ ಸಾಧನೆಗೆ ಸಿಗಲಿರುವ ಮಹೋನ್ನತ ವರಪ್ರಸಾದ ಎಂದೆ ಹೇಳಬಹುದು.

ಜನಜಾಗೃತಿ ವೇದಿಕೆಯಲ್ಲಿ ನಮ್ಮ ಪ್ರತಾಪ್ ಜೀ:
ಶ್ರೀ.ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು ಜನಜಾಗೃತಿ ವೇದಿಕೆಯ ಆರಂಭದಿಂದ ಹಿಡಿದು ಈವರೇಗೂ ಹಾಗೂ ಮುಂದೆಯೂ ಅದರ ಸಕ್ರೀಯ ಪದಾಧಿಕಾರಿಯಾಗಿ ವ್ಯಸನಮುಕ್ತ ಸಮಾಜ ನಿರ್ಮಾಣದ ಗುರಿಯೆಡೆಗೆ ದಿಟ್ಟ ಹೆಜ್ಜೆಯಿಟ್ಟವರು ಈ ನಮ್ಮ ಸಿಂಹ ಪ್ರತಾಪ್ ಅವರೆನ್ನಿ. ಜನಜಾಗೃತಿ ವೇದಿಕೆಯ ತಾಲೂಕು ಮಟ್ಟದ ಅಧ್ಯಕ್ಷರಾಗಿ, ಇದೀಗ ರಾಜ್ಯಮಟ್ಟದ ಜನಜಾಗೃತಿ ವೇದಿಕೆಯ ಪ್ರಮುಖ ಪದಾಧಿಕಾರಿಯಾಗಿ ಸೇವೆಯನ್ನು ನೀಡುತ್ತಿದ್ದಾರೆ.

ಊರಿನ ಅಭಿವೃದ್ಧಿ, ಜ್ವಲಂತ ಸಮಸ್ಯೆಗಳು ಬಂದಾಗ ಜಾತಿ, ಧರ್ಮ, ಪಕ್ಷವನ್ನು ಮೀರಿ ಸಮಾಜಮುಖಿಯಾಗಿ, ಜನಮುಖಿಯಾಗಿ ತನ್ನ ಇರುವಿಕೆಯನ್ನು ಪ್ರದರ್ಶಿಸುತ್ತಾ, ಊರಿನ ಪ್ರಗತಿಗಾಗಿ ಅಹರ್ನಿಶಿ ಶ್ರಮಿಸುವ ಸ್ವಚ್ಚ ಹೃದಯದ ಗ್ರೇಟ್ ಹೃದಯವಂತ ರಾಜಕಾರಣಿ ನಮ್ಮ ಪ್ರತಾಪ್ ಜೀ ಯವರೆನ್ನುವುದನ್ನು ಹೇಳಲು ಅಭಿಮಾನವೆನಿಸುತ್ತದೆ. ತಾಲೂಕಿನಲ್ಲಿರುವ ರೊಟರಿ ಕ್ಲಬ್ ಇರಬಹುದು, ಇನ್ನಿತರ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮೂಲಕ ಸಂಘ ಜೀವಿಯಾಗಿ ಬದುಕುತ್ತಿರುವ ಸರಳ, ಸಜ್ಜನಿಕೆಯ ಪ್ರತಾಪ್ ಸಿಂಹ ಅವರು ನಮ್ಮವರೆಂದು ಹೇಳಿಕೊಳ್ಳಲು ಹರ್ಷವೆನಿಸುತ್ತದೆ.

ವೃತಿ, ಸೇವೆ, ರಾಜಕಾರಣ ಇವೆಲ್ಲವುಗಳನ್ನು ಸಮಾನವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಬೆಳ್ತಂಗಡಿ ತಾಲೂಕಿನ ಕ್ಲೀನ್ ಇಮೇಜಿನ ಪ್ರತಾಪ್ ಸಿಂಹ ನಾಯಕ ಅವರ ಶ್ರಮ ಸಾಧನೆ, ಅವರ ಬದುಕು ಮತ್ತು ಆದರ್ಶ ನಮಗೆಲ್ಲಾ ಪ್ರೇರಣೆ.
ತಾಲೂಕಿನ ಜನಪ್ರಿಯ ಶಾಸಕ ಹರೀಶ ಪೂಂಜಾ ಅವರಿಗೆ ಅಣ್ಣನ ಸ್ಥಾನದಲ್ಲಿ ನಿಂತು ಹರಸುವ, ಮುದ್ದಿಸುವ ನಮ್ಮ ಪ್ರತಾಪ್ ಸಿಂಹ ನಾಯಕರವರಿಗೆ ಮಗದೊಮ್ಮೆ ಜನ್ಮದಿನದ ಶುಭಾಶಯಗಳು.

ಆದಷ್ಟು ಶೀಘ್ರ ವಿಧಾನ ಪರಿಷತ್ ಸದಸ್ಯತ್ವ ಅಥವಾ ಬಹುದೊಡ್ಡ ಸ್ಥಾನ ಮಾನಗಳು ತಮ್ಮನ್ನು ಅರಸಿ ಬರಲೆನ್ನುವ ಹರಕೆ ಹಾರೈಕೆಯೊಂದಿಗೆ,

ನಿಮ್ಮವ

ಸಂದೇಶ್.ಎಸ್.ಜೈನ್

Mo: 9620595555
Email: sandesh.kanyady55@gmail.com



ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...