ಸಹಿಷ್ಣುತೆಯ ಮನಸ್ಸಿನ ನಮ್ಮೂರ ವಿಷ್ಣುವಿಗೆ ಜನ್ಮದಿನದ ಸಂಭ್ರಮ
ಯುವ ನಾಯಕನಾಗಿ ಬೆಳೆಯುತ್ತಿರುವ ವಿಷ್ಣು ನಾಯರ್
ಆತ ಎಲ್ಲರಂತಲ್ಲ. ಒಂಥರ ಡಿಪರೆಂಟ್ ಎನ್ನಿ. ಇನ್ನೊಬ್ಬರ ನೋವಿಗೆ ತಡಮಾಡದೇ ಧಾವಿಸಿ, ಸ್ಪಂದಿಸುವ ಗುಣವಂತ. ಜಾತಿ, ಧರ್ಮವನ್ನು ಮೀರಿ ಅನ್ಯಾಯಕ್ಕೊಳಗಾದವರಿಗೆ ಧ್ವನಿಯಾಗಿ ನಿಲ್ಲುವ ಗಟ್ಟಿ ಮನಸ್ಸಿನ ಧೈರ್ಯಶಾಲಿ ಯುವಕ. ಸಣ್ಣ ಮನೆಯಲ್ಲಿ ವಾಸವಿದ್ದರೂ ದೊಡ್ಡ ಮನಸ್ಸಿನ ಹೃದಯವಂತ. ಒಟ್ಟಿನಲ್ಲಿ ಹೇಳುವುದಾದರೇ ಶ್ರಮ ಸಾಧನೆಯ ಮೂಲಕ ಬದುಕು ಕಟ್ಟಿಕೊಂಡ ಶ್ರಮಿಕ ಈತ. ಯಾರಿವನು? ಎಂಬ ಪ್ರಶ್ನಗೆ ಉತ್ತರ ಹುಡುಕಲು ಹೊರಡದಿರಿ. ಯಾಕೆಂದ್ರೆ ಆ ಪುಣ್ಯಾತ್ಮನ ಜೀವನದ ಯಶೋಗಾಥೆಯನ್ನು ಹೊತ್ತು ತಂದು ಬರೆಯಲು ಅಣಿಯಾಗಿದ್ದೇನೆ.
ಆತ ಬೇರೆ ಯಾರು ಅಲ್ಲ. ದಾಂಡೇಲಿಯ ವಿಜಯನಗರದ ನಿವಾಸಿ ಮೋಹನ ನಾಯರ್ ಹಾಗೂ ಶ್ರಮವಹಿಸಿ ದುಡಿಯುವ ಅಮ್ಮ ರೋಹಿಣಿ ದಂಪತಿಗಳ ಮಾನಸಪುತ್ರ ನಮ್ಮೂರ ಬೆಂಕಿಯ ಚೆಂಡು ವಿಷ್ಣು ನಾಯರ್. ಅಂದ ಹಾಗೆ ವಿಷ್ಣು ನಾಯರನಿಗೆ ಇಂದು ಜನ್ಮದಿನದ ಸಂಭ್ರಮ, ಸಡಗರ. ಈ ಶುಭ ಸಂದರ್ಭದಲ್ಲಿ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ ಮುಂದಿನ ಬರವಣಿಗೆಗೆ ಹೆಜ್ಜೆಯೂರಿದ್ದೇನೆ.
ನಮ್ಮ ವಿಷ್ಣು ನಾಯರನಿಗೆ ವಿದ್ಯಾ ಎಂಬ ಮುದ್ದಿನ ಅಕ್ಕ ಹಾಗೂ ವೀಣಾ ಎಂಬ ಅಕ್ಕರೆಯ ತಂಗಿ ಇದ್ದಾರೆ. ತೀವ್ರ ಬಡತನದ ಕುಟುಂಬದಲ್ಲಿ ಜನ್ಮವೆತ್ತರೂ, ಬೆವರು ಸುರಿಸಿ ಬದುಕು ಕಟ್ಟಿಕೊಂಡ ಶ್ರಮ ಸಾಧಕರ ಮನೆಯ ಹೆಮ್ಮೆಯ ಕುಡಿ ನಮ್ಮ ವಿಷ್ಣು ನಾಯರ್.
ಎಳೆಯ ಬಾಲಕಿನಿರುವಾಗ್ಲೆ ಅಗರಬತ್ತಿಯಂತಿದ್ದ ವಿಷ್ಣು ನಾಯರ್ ಬಗ್ಗೆ ಅವನ ಅಪ್ಪ, ಅಮ್ಮನಿಗೆ ಇವ ಹೆಂಗೆ ಬೆಳೆಯಬಹುದು. ಪತ್ಲ ಮಗು ಮುಂದೆ ಹೆಂಗೆ ಬೆಳೆಯಬಹುದೆಂಬುದೆ ದೊಡ್ಡ ಹೆಡಕ್ ಆಗಿತ್ತಂತೆ. ಆದರೂ ಇದ್ದದ್ದರಲ್ಲೆ ಬೆಳೆದ ನಮ್ಮ ವಿಷ್ಣು ನಾಯರ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಗೂರನಗರ ಸರಕಾರಿ ಕನ್ನಡ ಶಾಲೆಯಲ್ಲಿ ಪಡೆದು ಮುಂದೆ ಹಳೆದಾಂಡೇಲಿ ಸರಕಾರಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದನು.
ತನ್ನ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣದ ಸಮಯದಲ್ಲಿ ಮನೆ ಮನೆಗೆ ಪೇಪರ್ ಹಂಚುತ್ತಿದ್ದ ಇದೇ ವಿಷ್ಣು ನಾಯರ್ ಸಂಜೆಯಾಗುತ್ತಲೆ ತನ್ನ ಅಮ್ಮನಿಟ್ಟಿದ್ದ ಸಣ್ಣ ಟೀ ಅಂಗಡಿಯಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದನು. ಹೈಸ್ಕೂಲ್ ಮುಗಿದ ಮೇಲೆ ಕೇರಳದ ತಲಕಾಡುವಿನಲ್ಲಿ 3 ತಿಂಗಳ ಮೆಕಾನಿಕಲ್ ಇಂಜಿನಿಯರಿಂಗ್ ತರಬೇತಿಯನ್ನು ಪಡೆದುಕೊಂಡ. ಅಲ್ಲಿ ತರಬೇತಿ ಪಡೆದ ಮೇಲೆ ಅಲ್ಲೆ ಉದ್ಯೋಗದ ಅವಕಾಶ ಬಂದಿತ್ತಾದರೂ, ಹುಟ್ಟಿದ ದಾಂಡೇಲಿಯಲ್ಲೆ ಬದುಕು ಕಟ್ಟಿಕೊಳ್ಳುತ್ತೇನೆಂದು ನಿರ್ಧರಿಸಿ ದಾಂಡೇಲಿಗೆ ಬಂದು ಬಿಟ್ಟ ನಮ್ಮ ವಿಷ್ಣು ನಾಯರ್.
ದಾಂಡೇಲಿಗೆ ಬಂದ ವಿಷ್ಣು ನಾಯರ್ ಆರಂಭದಲ್ಲಿ ಅಲ್ಲಿ ಇಲ್ಲಿ ಎಂದು ಕೆಲಸ ಹುಡುಕಿ ಸುಸ್ತಾಗಿ, ಕೊನೆಗೊಮ್ಮೆ ರೇಣುಕಾ ಆಟೊಮೊಬೈಲ್ ಅಂಗಡಿಯನ್ನು ಪ್ರಾರಂಭಿಸಿದ. ಕೆಲ ವರ್ಷಗಳವರೆಗೆ ಈ ಅಂಗಡಿಯನ್ನು ನಡೆಸಿ, ಆನಂತರದಲ್ಲಿ ಕಾಗದ ಕಾರ್ಖಾನೆಯಲ್ಲಿ ನೌಕರಿ ಸಿಕ್ಕಿ ಈಗ ಅಲ್ಲೆ ನೌಕರಿ ಮಾಡುತ್ತಿದ್ದರೂ ತಾನು ಆರಂಭಿಸಿದ ಆಟೊಮೊಬೈಲ್ ಗ್ಯಾರೇಜನ್ನು ಈಗಲೂ ನಡೆಸಿಕೊಂಡು ಹೋಗುತ್ತಿದ್ದಾನೆ.
ಒಂದು ಕಡೆ ಸಣ್ಣದಾದ ಗ್ಯಾರೇಜ್, ಇನ್ನೊಂದು ಕಡೆ ದುಡಿಮೆಗೆ ತಕ್ಕ ಪಗಾರವಿರುವ ನೌಕರಿ. ಒಟ್ಟಿನಲ್ಲಿ ಸಂತೃಪ್ತಿಯ ನಿಟ್ಟುಸಿರು ನಮ್ಮ ವಿಷ್ಣು ಬ್ರದರಿಗೆ.
ಹೀಗೆ ಬದುಕಿಗೆ ಪರ್ಪೆಕ್ಟ್ ದಾರಿ ಹುಡುಕಿಕೊಂಡ ವಿಷ್ಣು ನಾಯರ್, ತಾನೊಬ್ಬನೇ ಬದುಕಿದರೇ ಸಾಲದು, ಅದರ ಜೊತೆ ಜೊತೆಗೆ ಇನ್ನೊಬ್ಬರ ಬದುಕಿಗೆ ನೆರವಾಗಬೇಕು, ಅದಕ್ಕಾಗಿ ಸಮಾಜ ಸೇವೆಯಲ್ಲಿ ನಿರತನಾಗಬೇಕೆಂದು ಬಯಸಿ, 2006 ರಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಳ್ಳಲಾರಂಭಿಸಿದನು. ಬಿಜೆಪಿಗೆ ಸೇರಿದವನೇ ಆರಂಭದಲ್ಲಿ ಬಿಜೆಪಿ ಯುವ ಮೋರ್ಚಾದ ಸಕ್ರೀಯ ಸದಸ್ಯನಾಗಿ ರಾಜಕೀಯ ದೀಕ್ಷೆಯನ್ನು ಪಡೆದನು. ಇಲ್ಲಿಂದ ಆರಂಭಗೊಂಡ ರಾಜಕೀಯ ನಡೆ, ಮುಂದೆ ಪಕ್ಷದ ಆಟೋ ಎನೌನ್ಸರ್ ಆಗಿ ಗಮನ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಹೀಗೆ ರಾಜಕೀಯವಾಗಿ ಹಂತ ಹಂತವಾಗಿ ಬೆಳೆದ ವಿಷ್ಣು ನಾಯರ್ ಮುಂದೆ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷನಾಗಿ, ಇದೀಗ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಇದರ ಜೊತೆ ಜೊತೆಗೆ ಈ ದೇಶ ಕಂಡ ಅಪ್ರತಿಮ ಹಾಗೂ ಎಂದು ಮರೆಯಲಾರದ ಧೀಮಂತ ವ್ಯಕ್ತಿತ್ವದ ಮಾಜಿ ಪ್ರಧಾನಿ ದಿ: ಅಟಲ್ ಬಿಹಾರಿ ವಾಜಪೇಯಿಯವರು ಕಾಲವಾದ ನಂತರ ಅವರ ಹೆಸರಲ್ಲಿ ಆರಂಭಿಸಿದ ಅಟಲ್ ಅಭಿಮಾನಿ ಸಂಘಟನೆಯನ್ನು ಹುಟ್ಟು ಹಾಕಿ ಅದರ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಈ ಸಂಘಟನೆಯ ಮೂಲಕ ಸಮಾಜದ ಹಲವಾರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಶೃದ್ದೆಯಿಂದ ಮಾಡುವುದರ ಮೂಲಕ ಭವಿಷ್ಯದ ಕೌನ್ಸಿಲರ್ ಎಂಬ ಬಿರುದಿಗೆ ಪಾತ್ರನಾಗಿದ್ದಾನೆ ನಮ್ಮೂರ ಬಿಸಿರಕ್ತದ ನವ ತರುಣ ವಿಷ್ಣು ನಾಯರ್.
ದಾಂಡೇಲಿಯಲ್ಲಿ ನಡೆಯುವ ಸಾಮಾಜಿಕ ಹೋರಾಟಗಳಲ್ಲಿ ಸಕ್ರೀಯನಾಗಿ ಭಾಗವಹಿಸುತ್ತಿರುವ ವಿಷ್ಣು ನಾಯರ್ ನಗರದ ದಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಸಕ್ರೀಯನಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮೂಲಕ ಎಲ್ಲರ ಪ್ರೀತಿ, ಅಭಿಮಾನಕ್ಕೆ ಪಾತ್ರನಾಗಿದ್ದಾನೆ.
ರಾಜಕೀಯವಾಗಿ ಹಂತ ಹಂತವಾಗಿ ಬೆಳೆಯುತ್ತಿರುವ ವಿಷ್ಣು ನಾಯರನ ಬೆಳವಣಿಗೆಗೆ ಅವನ ಅಪ್ಪ, ಅಮ್ಮನ ಆಶೀರ್ವಾದ, ಅಕ್ಕ, ತಂಗಿಯ ಸಹಕಾರ, ಗುರು ಹಿರಿಯರ ಆಶೀರ್ವಾದ, ಗೆಳೆಯರ ನಗುಮೊಗದ ಪ್ರೀತಿಯೆ ಬಹುಮೂಲ್ಯ ಕಾರಣವಾಗಿದೆ.
ತಾನು ಬೆಳೆಯುವುದರ ಜೊತೆಗೆ ಇನ್ನೊಬ್ಬರ ಬೆಳವಣಿಗೆಗೆ ಮತ್ತು ಒಳಿತಿಗಾಗಿ ಶ್ರಮಿಸುವ ಭವಿಷ್ಯದ ಭರವಸೆಯ ನಾಯಕ ವಿಷ್ಣು ನಾಯರನಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮವ
ಸಂದೇಶ್.ಎಸ್.ಜೈನ್