ಭವಿಷ್ಯದ ಸುಖಕ್ಕಾಗಿ 21 ದಿನಗಳ ತಪಸ್ಸು ಅತ್ಯಗತ್ಯ
ಬದುಕ್ಬೇಕಾಂದ್ರೆ ಹಿಂಗಿರ್ಲೇಬೇಕು.
ಬದುಕ್ಬೇಕಾಂದ್ರೆ ಹಿಂಗಿರ್ಲೇಬೇಕು.
ಆತ್ಮೀಯರೇ,
ನಾವು ಇನ್ನಷ್ಟು ವರ್ಷಗಳ ಕಾಲ ಬದುಕ್ಬೇಕಾಂದ್ರೆ 21 ದಿನಗಳ ತಪ್ಪಸ್ಸು ಅಂತ್ಲೆ ಹೇಳಿ ಅಥವಾ ತ್ಯಾಗ ಅಂತ್ಲೆ ಹೇಳಿ, ಅಥವಾ ತಾಳ್ಮೆ ಅಂತ್ಲೆ ಹೇಳಿ. ಏನು ಬೇಕಾದ್ರೂ ಹೇಳಿ, ಒಟ್ಟಿನಲ್ಲಿ ಏಪ್ರಿಲ್ 14 ರವರೆಗೆ ಕಡ್ಡಾಯವಾಗಿ ಮನೆಯಲ್ಲಿರುವುದೆ ಮುಂದಿನ ನಮ್ಮ ಬದುಕಿಗೆ ಉತ್ತಮ.
ಈಗ ಅದು, ಇದು, ಹಂಗಿದ್ರೆ ಚೆನ್ನ, ಹಿಂಗಿದ್ರೆ ಚೆನ್ನ. ಸರಕಾರ ಅದು ಮಾಡಿದ್ರೆ ಉತ್ತಮ, ಇದು ಮಾಡಿದ್ರೆ ಉತ್ತಮ ಎಂದು ಪುಂಗಿ ಊದುವ ಸಮಯವಲ್ಲ. ನೋಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಿಂಗಳಾನುಗಟ್ಟಲೆ ಉಪವಾಸ ಕೂತ್ಕೊಂಡಂತಹ ಶ್ರೇಷ್ಟ ಉದಾಹರಣೆ ನಮ್ಮಲ್ಲಿದೆ. ಎಂಥಹ ತ್ಯಾಗಕ್ಕೂ ಸಿದ್ದರಾಗುವ ನಾವು ಅದು ಇದು ಎನ್ನದೇ 21 ದಿನಗಳವರೆಗೆ ಮನೆಯೊಳಗಡೆನೆ ತೆಪ್ಪಗೆ ಇರುವುದು ಯೋಗ್ಯರ ಲಕ್ಷಣ ಎನ್ನುವುದಕ್ಕಿಂತಲೂ ಅಂಥವರು ಆಯುಷ್ಯ ಇರುವರೆಗೂ ಗಟ್ಟಿಯಾಗಿರುತ್ತಾರೆ. ಹಟ ಬಿಡದವ ಚಟ್ಟ ಏರುವುದರಲ್ಲಿ ಯಾವ ಸಂದೇಹನೂ ಇಲ್ಲ.
ಇದು ನಮ್ಮ ನಿಮ್ಮೆಲ್ಲರ ಬದುಕಿನ ಪ್ರಶ್ನೆ ಕಣ್ರೀ. ಮಾರ್ಕೆಟ್ ಓಪನ್ ಇದೆ, ಅಲ್ಲಿ ಕಿರಾಣಿ ಅಂಗಡಿ ತೆರೆದಿದೆ ಎಂದು ಆಗಾಗ ಹೊರಗಡೆ ಹೋಗಿ ಬರುವಂತಹ ರೂಢಿಯನ್ನು ಮಾಡುವುದೇ ಬೇಡ. ಮನೆಯಲ್ಲಿ ಏನಿದೆ, ಅದನ್ನೆ ತಿಂದು ಬಿದ್ಕೊಂಡಿರುವ. ಮನೆಯಲ್ಲೆ ಇರುವುದರಿಂದ ಮೈ ತುಂಬ ಕೆಲಸನೂ ಕಡಿಮೆ. ಹಾಗಿರುವಾಗ ಹೊಟ್ಟೆ ತುಂಬ ಊಟ ಮಾಡಬೇಕೆಂದಿಲ್ಲ. ಬೇಕಾದಷ್ಟು ಮಟ್ಟಿಗೆ ಊಟ-ತಿಂಡಿ ಹಿತಮಿತವಾಗಿ ಮಾಡುವುದೇ ಒಳಿತು.
ಟೊಮೆಟಾ ಇಲ್ಲದಿದ್ರೂ ಅಡುಗೆ ಮಾಡಬಹುದು. ಮೀನು ಇಲ್ಲದಿದ್ದರೂ ವೆಜ್ ತಿಂದು ಬದ್ಕಬಹುದು. ಅದೇಷ್ಟೊ ಜನರು ತನ್ನ ಜೀವನಾಯುಷ್ಯವಿಡಿ ಬರೀ ಬೆಳೆ ಸಾರಲ್ಲಿ ಊಟ ಮಾಡಿ ಬದುಕು ನಡೆಸ್ತಾರೆ. ಅಂತಹದ್ದರಲ್ಲಿ ಕೇವಲ 21 ದಿನ ಇದ್ದದ್ದನ್ನು ತಿಂದು ಇರ್ಲಿಕ್ಕೇನು ದಾಡಿ ಅಲ್ಲವೆ.
ಡೇಂಜರ್ ಸಿಚ್ವೇಶನ್ ನಲ್ಲಿ ನಾವಿದ್ದೇವೆ. ಇದರ ಗಂಭೀರತೆಯ ಅರಿವು ನಮಗೆಲ್ಲರಿಗೂ ಬೇಕಾಗಿದೆ. ನಮ್ಮ ಆಯುಷ್ಯಕ್ಕಾಗಿ ಪೊಲೀಸರು, ವೈದ್ಯರುಗಳು, ಆರೋಗ್ಯ ಸಿಬ್ಬಂದಿಗಳು, ತಾಲೂಕಾಡಳಿತ ಅಧಿಕಾರಿಗಳು, ಜಿಲ್ಲಾಡಳಿತ ಅಧಿಕಾರಿಗಳು ಟೊಂಕಕಟ್ಟಿ ಅವರ ಜೀವದ ಹಂಗು ತೊರೆದು ಶ್ರಮಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅವರಿಗೂ ಹೆಂಡತಿ-ಮಕ್ಕಳು, ಸಂಸಾರವಿಲ್ಲವೆ? ಎನ್ನುವುದನ್ನು ನಾವ್ಯಾಕೆ ಅರ್ಥ ಮಾಡಿಕೊಳ್ಳಲ್ಲ.
ದಯವಿಟ್ಟು ಡೊಂಟ್ ಕೇರ್ ಮಾಡದರಿ. ಈಗಂತೂ ಬಹುತೇಕರಿಗೆ ಪಡಿತರ ಉಚಿತ ಅಕ್ಕಿ ಸಿಗುತ್ತದೆ. ಬೇಜಾರಾದಾಗ ಒಂದು ದಿನ ಅನ್ನ ಮಾಡಿ, ಮತ್ತೊಂದು ದಿನ ಚಿತ್ರಾನ್ನ, ಒಗ್ಗರನೆ ಅನ್ನ, ಮಸಾಲೆ ಅನ್ನ ಮಾಡ್ಕೊಂಡು ತಿನ್ನಬಹುದು. ಒಟ್ಟಿನಲ್ಲಿ ಇದ್ದದ್ದನ್ನು ತಿಂದು ಬದುಕುವ. ಸಾಧ್ಯವಾದಷ್ಟು ಬೇಗನೆ ಬಾಂಬೆರವಾ, ಚಪಾತಿ ಹಿಟ್ಟು, ಅವಲಕ್ಕಿ, ವಿವಿಧ ಬೇಳೆ-ಕಾಳುಗಳು, ಟೊಮೆಟಾ, ಉಳ್ಳಗಡ್ಡಿ, ಆಲೂಗಡ್ಡೆ ತಂದಿಟ್ಟುಕೊಳ್ಳಿ. ಎಲ್ಲರ ಮನೆಯಲ್ಲಿ ಹಾಲಿನ ಪುಡಿ ತಂದಿಟ್ಟುಕೊಳ್ಳಿರಿ. ಇನ್ನೂ ತಲೆನೋವು, ನೋವು, ಬಿಪಿ ಶುಗರ್ ಹೀಗೆ ಮೊದಲಾದವುಗಳಿಗೆ ಬೇಕಾದ ಗುಳಿಗೆಗಳನ್ನು 1 ತಿಂಗಳು ಬೇಕಾಗುಷ್ಟರ ಮಟ್ಟಿಗೆ ತಂದಿಟ್ಟುಕೊಳ್ಳುವುದು ಉತ್ತಮವಾದರೂ ಮುಂದೆ ಬದುಕಬೇಕಾಂದ್ರೆ ತಂದಿಟ್ಟುಕೊಳ್ಳಲೆಬೇಕು. ಇದೆಲ್ಲಾ ಆದ್ಮೇಲೆ ಕಿರಾಣಿ ಅಂಗಡಿ ತೆರೆದಿಟ್ಟರೂ ಗ್ರಾಹಕರಿಲ್ಲದೇ ಅವರೆ ಅಂಗಡಿ ಬಂದ್ ಮಾಡುವಂತಾಗಬೇಕು.
ಅವರಿವರ ಸಲುವಾಗಿ ಎನ್ನುವುದಕ್ಕಿಂತ ಇನ್ನೊಬ್ಬರ ತಪ್ಪಿನಿಂದ ನಾವು ಸಾಯಬಾರದು. ಬಂಧುಗಳೇ, ನಮ್ಮ ಅಕ್ಕ-ಪಕ್ಕದ ಮನೆಗೆ ಕಳೆದ 1 ತಿಂಗಳಿನಿಂದ ಈಚೆಗೆ ವಿದೇಶದಿಂದ ಬಂದವರಿದ್ರೆ ಮುಲಾಜಿ ಇಲ್ಲದೇ ತಾಲೂಕಾಡಳಿತ, ಬೀಟ್ ಪೊಲೀಸ್ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದಯವಿಟ್ಟು ಮಾಹಿತಿ ನೀಡಿ. ಇನ್ನೊಬ್ಬ ಮಾಡುವ ತಪ್ಪಿಗೆ ನಾನ್ಯಾಕೆ, ನಾವ್ಯಾಕೆ ಸಾಯಬೇಕೆಂಬುವುದನ್ನು ಈಗಲೆ ಮನದಟ್ಟು ಮಾಡಿಕೊಳ್ಳಿ. ನೋಡಿ ವಿದೇಶದಿಂದ ಬಂದಿದ್ದಾನೆ ಎಂದರೆ ಅವನಿಗೆ ಸೋಂಕು ಇದೆ ಎಂಬುವುದು ಅರ್ಥವಲ್ಲ. ಆದರೆ ತಪಾಸಣೆ ಅತ್ಯಗತ್ಯ ಎನ್ನುವುದನ್ನು ಮನವರಿಕೆ ಮಾಡಬೇಕಾಗಿದೆ.
ದಯವಿಟ್ಟು ಕೊರೊನಾ ಸೋಂಕಿನ ಗಂಭೀರತೆಯನ್ನು ಅರಿಯಿರಿ. ಏಪ್ರಿಲ್ 21 ರವರೆಗೆ ಮನೆಯಲ್ಲೆ ಇದ್ದಕೊಂಡು ಸಾವಿನ ಕದ ಬಡಿಯುವ ಬದಲು ಕೊರೊನಾವನ್ನು ಹಿಮ್ಮೆಟ್ಟಿಸಿ ಜಯಭೇರಿ ಬಾರಿಸೋಣ. ಜೀವ ಇದ್ರೆ ಮುಂದೆ ಸಾಧಿಸಬಹುದು. ಜೀವನೇ ಇಲ್ಲದಿದ್ರೆ ಮುಂದೇನು? ಎಂಬ ಚಿಂತೆ ಮಾಡುವ ಬದಲು ಮನೆಯಲ್ಲೆ ಇದ್ದುಕೊಂಡು ಮಹಾಮಾರಿಯನ್ನು ಹೊಡೆದೂರುಳಿಸೋಣ.
ಕೊರೊನಾದಿಂದ ಸಾಯಲಾರೆ, ಕೊರೊನವನ್ನು ಒದ್ದೊಡಿಸುವೆ ಎಂಬ ಕೆಚ್ಚೆದೆ ನಮ್ಮೆಲ್ಲರಲ್ಲಿ ಬರಲೆನ್ನುವುದೆ ನನ್ನಯ ಪ್ರಾರ್ಥನೆ.
ನಿಮ್ಮವ
ಸಂದೇಶ್.ಎಸ್.ಜೈನ್
 

 
 
