ಸರಕಾರಿ ಕೆಲಸವಾದ್ರೇನೂ, ಜೀವ ಪಣಕ್ಕಿಟ್ಟು ದುಡಿಯುವುದು ಗ್ರೇಟ್ ಅಲ್ವೆ.
ಪೊಲೀಸ್ ಧ್ವಜ ದಿನಾಚರಣೆಯ ನಿಮಿತ್ತ ಪೊಲೀಸರಿಗೊಂದು ಸಲಾಂ
ಬರಹ: ಸಂದೇಶ್.ಎಸ್.ಜೈನ್, ದಾಂಡೇಲಿ.



ಕೆಲಸ ಯಾವುದಾದರೇನೂ?. ಒಟ್ಟಿನಲ್ಲಿ ಸರಕಾರಿ ಕೆಲಸವಾದ್ರೆ ಆಯ್ತೆಂಬ ಅಪೇಕ್ಷೆ ಬಹುಜನರಿಗಿದೆ. ಅದು ತಪ್ಪೆಂಬುವುದು ನನ್ನ ಅಭಿಪ್ರಾಯವಲ್ಲ. ಆದರೆ ಕೆಲವು ಸರಕಾರಿ ಕೆಲಸವಾದರೂ ಎಷ್ಟು ಕಷ್ಟ ಎಂಬುವುದರ ಅರಿವು ಸರಕಾರಿ ಕೆಲಸ ಗಿಟ್ಟಿಸಿಕೊಂಡ ಮನೆಯವರಿಗೆ ಸರಿಯಾಗಿ ತಿಳಿದಿರಬಹುದು.
ನೋಡಿ ಸ್ವಾಮಿ, ಉದ್ಯೋಗದಲ್ಲಿ ಭದ್ರತೆಯಿರಬಹುದು, ಆದರೆ ಕೆಲವೊಂದು ಸರಕಾರಿ ಕೆಲಸಗಳಲ್ಲಿ ಜೀವಭದ್ರತೆ ಇರಬಹುದೆ ಎಂಬುವುದನ್ನು ಒಮ್ಮೆ ಯೋಚಿಸಿ ನೋಡೋಣ. ವಿಶೇಷವಾಗಿ ಗಡಿ ಕಾಯುವ ಸೈನಿಕರು, ನಮ್ಮ ಸಮಾಜದ ಶಾಂತಿ ಕಾಯುವ ಪೊಲೀಸರು ಮತ್ತು ದೇಶವನ್ನು ಕಾಡುತ್ತಿರುವ ಮಹಾಮಾರಿ ರೋಗಗಳಿಗೆ ತುತ್ತಾದವರನ್ನು ತಪಾಸಣೆಗೈಯುವ ಮತ್ತು ಅವರುಗಳ ಆರೋಗ್ಯ ಸಂರಕ್ಷಿಸುವ ಸರಕಾರಿ ವೈದ್ಯರುಗಳು, ದಾದಿಯರು, ಇತ್ತ ಇಡೀ ಊರೇ ಮುಳುಗಲಿ, ಆದ್ರೆ ಗಂಟೆ ನಿಲ್ಲದಂತೆ ಪ್ರತಿನಿತ್ಯ ಊರು ಸ್ವಚ್ಚ ಮಾಡುವ ಪೌರಕಾರ್ಮಿಕರ ಕೆಲಸ ನಿಜಕ್ಕೂ ಅತ್ಯಂತ ಸರ್ವಶ್ರೇಷ್ಟ ಮತ್ತು ಜೀವಭದ್ರತೆಯಿಲ್ಲದ ಕೆಲಸ ಎನ್ನುವುದನ್ನು ಎಲ್ಲರು ಒಪ್ಪಿಕೊಳ್ಳಬೇಕು. ಜೀವಕ್ಕೆ ಭದ್ರತೆಯಿಲ್ಲದೇ ಕರ್ತವ್ಯ ನಿರ್ವಹಿಸುತ್ತಿರುವ ಇವರ ಸೇವಾತತ್ಪರತೆಗೆ ಮನದುಂಬಿ ಕೃತಜ್ಞತೆಗಳು.
ಕಳೆದ ಕೆಲ ತಿಂಗಳುಗಳಿಂದ ಇಡೀ ಪ್ರಪಂಚವನ್ನೆ ಕಾಡಿಸುತ್ತಿರುವ ಮಹಾಮಾರಿ ಕೊರೊನಾದ ವಿರುದ್ದ ಕಾಲಿಗೆ ಚಕ್ರ ಕಟ್ಟಿ ಶೃದ್ದೆಯಿಂದ ಕೆಲಸ ನಿರ್ವಹಿಸುತ್ತಿರುವವರು ಇವರುಗಳೆ ಅಲ್ಲವೆ. ದುಡ್ಡಿದ್ದಾಗ, ಸಹಜ ಸ್ಥಿತಿಯಲ್ಲಿರುವಾಗ ಖಾಸಗಿ ಆಸ್ಪತ್ರೆಗೆ ದುಂಬಾಲು ಬೀಳುತ್ತಿರುವ ಮಧ್ಯಮ ವರ್ಗದವರಿಂದ ಹಿಡಿದು ಸಿರಿವಂತರನ್ನು ಸಹ ಸರಕಾರಿ ಆಸ್ಪತ್ರೆಗೆ ಎಳೆದು ತಂದ ಕೊರೊನಾ ಸೋಂಕು ನಿವಾರಣೆಗೆ ಇವರೆಲ್ಲರ ಶ್ರಮ ಸಾರ್ಥಕವಾಗಲಿ.
ತನ್ನ ಮಡದಿ, ಮಕ್ಕಳು, ತಂದೆ, ತಾಯಿ ಸಂಸಾರ ಇವೆಲ್ಲವೂ ಇದ್ದರೂ ಕರ್ತವ್ಯವೇ ನಮ್ಮ ಮೊದಲ ಗುರಿಯೆಂದು ಸೇವೆ ಸಲ್ಲಿಸುತ್ತಿರುವ ಪೊಲೀಸರು, ವೈದ್ಯರುಗಳು, ದಾದಿಯರು, ಸೈನಿಕರುಗಳು, ಪೌರ ಕಾರ್ಮಿಕರುಗಳ ಸೇವಾ ಮನಸ್ಸು ಅಭಿನಂದಾರ್ಹವಾದುದು. ಇಂದು ಪೊಲೀಸ್ ಧ್ವಜ ದಿನಾಚರಣೆ. ಈ ನಿಟ್ಟಿನಲ್ಲಿ ಪೊಲೀಸರ ಬಗ್ಗೆ ನಾಲ್ಕಾಕ್ಷರವಾದರೂ ಬರೆಯಬೇಕೆಂಬ ಹಂಬಲ ಮತ್ತು ತುಡಿತ ನನ್ನದು.
ಹೌದು ಬಂಧುಗಳೆ, ಪೊಲೀಸರು ಲಾಠಿ ಎತ್ತಿದರೇ ನಾವು ಬೈಯುತ್ತೇವೆ. ಆದ್ರೆ ಲಾಠಿ ಯಾಕೆ ಎತ್ತಿದ್ದಾರೆ ಎನ್ನುವುದನ್ನು ನಾವು ಅರಿಯುವ ಗೋಜಿಗೆ ಹೋಗುವುದಿಲ್ಲ. ಒಂದಂತು ನಿಜ, ಪೊಲೀಸರು ರಾಕ್ಷಸರಲ್ಲ. ಅವರು ಸಹ ನಮ್ಮಂತೆ ಮನುಷ್ಯರು. ಅವರಲ್ಲಿಯೂ ಮಾನವೀಯತೆಯಿದೆ, ಸಮಾಜದ ಬಗ್ಗೆ ವಿಶೇಷವಾದ ಕಾಳಜಿಯಿದೆ ಎನ್ನುವುದನ್ನು ತಿಳಿಯುವುದೇಕೆ, ನಾವು ಈಗಾಗಲೆ ನೋಡಿದ್ದೇವೆ. ಗಟಾರದಲ್ಲಿ ಹಂದಿ ಬಿದ್ದರೂ ಮೊದಲು ಅದರ ವಾಸನೆ ಬಡಿಯುವುದು ಪೊಲೀಸರಿಗೆ ಎನ್ನುವುದು ನಮ್ಮ ಗಮನಕ್ಕಿರಲಿ. ಕೊರೊನಾ ಸೋಂಕು ನಿವಾರಣೆಗಾಗಿ ಭಾರತ ಲಾಕ್ ಡೌನ್ ಇದ್ದು, ಈ ಸಂದರ್ಭದಲ್ಲಿ ನಿರ್ಗತಿಕರು, ಬಿಕ್ಷುಕರು ಅನ್ನ ಆಹಾರವಿಲ್ಲದೇ ವಿಲ ವಿಲ ಒದ್ದಾಡುತ್ತಿದ್ದಾಗ ಅಂಥವರುಗಳಿಗೆ ಮೊದಲು ತಿನ್ನಲು ಆಹಾರ ಒದಗಿಸಿ, ಉಳಿದವರಿಗೆ ಸ್ಫೂರ್ತಿಯಾದವರು ಇದೇ ನಮ್ಮ ಲಾಠಿ ಹಿಡಿದ ಪೊಲೀಸರು.
ಇದ್ದದ್ದನ್ನು ಇದ್ದ ಹಾಗೆ ಹೇಳಬೇಕಾದರೇ, ನನ್ನ ಪ್ರಕಾರ ಪೊಲೀಸರು ತನ್ನ ಇತಿ ಮಿತಿಯನ್ನು ದಾಟಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಊರಿಂದ ಇನ್ನೊಂದು ಊರಿಗೆ ಹೋದಾಗ ನಮ್ಮ ಹಣ ಕಳೆದು ಹೋದರೇ, ಆ ಸಂದರ್ಭದಲ್ಲಿ ಮರಳಿ ಊರು ಸೇರಬೇಕಾದರೇ ಆ ಊರಿನ ಪೊಲೀಸರೆ ಮಾನವೀಯ ಸಹಾಯ ಮಾಡುವುದು ಎನ್ನುವುದನ್ನು ನಾವು ಮರೆಯುವಂತಿಲ್ಲ. ತನ್ನ ಕೆಲಸ ಏನು, ಅದರಂತೆ ಮಾಡುತ್ತೇನೆಂದು ಹಟ ಹಿಡಿದು ಅದೇ ರೀತಿಯಿದ್ದಲ್ಲಿ ಇಂದು ಸಮಾಜದ ಸ್ವಸ್ಥ ಉನ್ನತಿಯೆಡೆಗೆ ಸಾಗಲು ಸಾಧ್ಯವಾದಿತೆ? ಖಂಡಿತಾ ಇಲ್ಲ. ಅದೇಷ್ಟೊ ಗಂಡ-ಹೆಂಡತಿ, ಹೆತ್ತವರು-ಮಕ್ಕಳು, ಸಹೋದರರು ಹಾಗೂ ಸಹೋದರಿಯರು ಮತ್ತು ನೆರೆಹೊರೆಯವರ ನಡುವೆ ನಡೆಯುವ ವಾಗ್ವಾದಗಳು ಪೊಲೀಸ್ ಮೆಟ್ಟಿಲೇರಿ ಅದು ಎಫ್.ಐ.ಆರ್ ಆಗ್ಬೇಕೆಂದು ಆಗ್ರಹವಿತ್ತಾದರೂ, ಎರಡು ಕಡೆಯವರನ್ನು ಮನವೊಲಿಸಿ, ಅವರಿವರುಗಳ ತಪ್ಪಿಗೆ ಪೊಲೀಸರೆ ಕೈಮುಗಿದು, ಅವರುಗಳನ್ನು ಸಮಾಧಾನಪಡಿಸಿ, ರಾಜಿ ಮಾಡಿಸಿ, ಸಮಾಜದಲ್ಲಿರುವ ಸಂಘರ್ಷವನ್ನು ಹೋಗಲಾಡಿಸಿ ಸಾಮಾರಸ್ಯದ ಸಮಾಜ ಸೃಷ್ಟಿಗೆ ಕಾರಣರಾಗುತ್ತಿರುವವರು ಸಹ ನಮ್ಮ ಪೊಲೀಸರೆ. ಈ ಬಗ್ಗೆ ಎಲ್ಲ ಪೊಲೀಸ್ ಠಾಣೆಗೆ ಹೋಗಿ ರಾಜಿ ಸಂಧಾನದ ಮುಚ್ಚಳಿಕೆ ಪತ್ರಗಳ ರಾಶಿ ರಾಶಿ ಪೈಲು ನೋಡಿದರೇ ಅದರ ನಿಜ ಅರಿವಾಗಲು ಸಾಧ್ಯವಿದೆ.
ಕೊರೊನಾವಿರಲಿ, ಬರಗಾಲವಿರಲಿ, ಪ್ರವಾಹವಿರಲಿ ಒಟ್ಟಿನಲ್ಲಿ ಸಂಕಷ್ಟದ ಸಮಯದಲ್ಲೂ ಪೊಲೀಸರಿಗೆ ಸಂಕಷ್ಟ, ಇನ್ನೂ ದೀಪಾವಳಿ ಇರಲಿ, ಕ್ರಿಸ್ ಮಸ್, ರಂಝಾನ್ ಇರಲಿ, ನಮ್ಮ ಪೊಲೀಸರಿಗೆ ಯಾವ ಹಬ್ಬನೂ ಇಲ್ಲ. ಎಟ್ ಲಿಸ್ಟ್ ಹಬ್ಬದ ದಿನವೂ ತನ್ನ ಮಡದಿ-ಮಕ್ಕಳ ಜೊತೆ ಸಂತೃಪ್ತಿಯಿಂದ, ಸಮಾಧಾನದಿಂದ ಊಟ ಮಾಡಲು ಆಗದಂತಹ ಕರ್ತವ್ಯ ನಮ್ಮ ಪೊಲೀಸರದ್ದು. ಹೆಂಡತಿ ತುಂಬು ಗರ್ಭಿಣಿಯಾಗಿ ಹೆರಿಗೆ ನೋವು ಬಂದಾಗಲೂ ತನ್ನ ಮುದ್ದಿನ ಮಡದಿಯ ಬಳಿ ಇರಲಾಗದೇ ಯಾತನೆ ಅನುಭವಿಸುವ ಪೊಲೀಸರ ಸ್ಥಿತಿ ಮನಕಲುಕುವಂತಹದ್ದೆ ಆಗಿದೆ. ಹೆತ್ತಮ್ಮ ಅನಾರೋಗ್ಯ ಪೀಡಿತಳಾಗಿ ಅಸ್ಪತ್ರೆಗೆ ಸೇರಿಸಿ, ಊರಿಂದ ಸುದ್ದಿ ಬಂದು, ಊರಿಗೆ ಹೊರಡುವಷ್ಟರಲ್ಲಿ ತಾಯಿಯ ಮರಣದ ಸುದ್ದಿ ಬರಸಿಡಿಲಿನಂತೆ ಬರುವಾಗ ಎಂಥಹ ಮಗನಿಗೂ ಹೇಗಾಗಬೇಡ ಅಲ್ಲವೆ. ತನ್ನ ಪ್ರೀತಿಯ ಮಕ್ಕಳು ಅಪ್ಪ ನಮ್ಮನ್ನು ಜಾತ್ರೆಗೆ ಕರ್ಕೊಂಡು ಹೋಗು ಎಂದು ಒತ್ತಾಯಿಸುತ್ತಿರುವಾಗ ಜಾತ್ರೆ ಮುಗಿದ ಮರುದಿನ ಜಾತ್ರೆಯ ಸಂತೆಗೆ ಕರೆದುಕೊಂಡು ಹೋಗಿ ಮಾರಟವಾಗದೇ ಉಳಿದ ಪೀಪಿ, ಬಲೂನ್ ಹೀಗೆ ಆಟದ ಸಾಮಾಗ್ರಿಗಳನ್ನು ಖರೀದಿಸಿ ಕೊಟ್ಟಾಗ ಅದುವೆ ಪೊಲೀಸ್ ಮಕ್ಕಳಿಗೆ ಬಹುದೊಡ್ಡ ಕಾಣಿಕೆ. ಜನಜಂಗುಲಿಯ ಮಧ್ಯೆ ಜಾತ್ರೆಗೆ ಹೋಗುವುದೇ ಮಜ. ಆದ್ರೆ ನಮ್ಮ ಪೊಲೀಸರಿಗೆ ಜನಜಂಗುಲಿ ಮುಗಿದ ಮೇಲೆ ಜಾತ್ರೆಯ ಸಂತೆ ನೋಡುವುದು, ತೊಟ್ಟಿಲಲ್ಲಿ ಕೂತ್ಕೊಳ್ಳಲು ಭಾಗ್ಯ ಸಿಗುವುದು ಎನ್ನುವುದು ಸತ್ಯ ಸಂಗತಿ. ಪೊಲೀಸಪ್ಪನ ಮಡದಿ ತಲೆನೋವಿದೆ ಬರುವಾಗ ಗುಳಿಗೆ ತನ್ನಿ ಎಂದು ಕರೆ ಮಾಡಿ ತಿಳಿಸಿದ್ರೆ, ಹೊತ್ತಲ್ಲದ ಹೊತ್ತಿಗೆ ಗುಳಿಗೆ ತೆಕೊಂಡು ಹೋಗುವುದರೊಳಗೆ ಆಕೆಯ ತಲೆ ನೋವು ವಾಸಿಯಾಗಿರುವ ಉದಾಹರಣೆಗಳು ಎಲ್ಲ ಪೊಲೀಸ್ ಮನೆಯ ವಾಸ್ತವ ಸ್ಥಿತಿ.
ಸ್ನೇಹಿತರೇ, ಈಗ ನಮ್ಮನ್ನು ಕೊರೊನಾ ತತ್ತರಿಸುವಂತೆ ಮಾಡಿದೆ. ಕೊರೊನಾ ಸೋಂಕಿತರು ಇರಬಹುದು, ಶಂಕಿತರು ಇರಬಹುದು. ಅವರಾಗೆ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾದರೇ ಓಕೆ. ಇಲ್ಲದಿದ್ದರೇ ಅಂಥವರುಗಳನ್ನು ಹುಡುಕಿ ಅವರನ್ನು ಆಸ್ಪತ್ರೆಗೆ ಸೇರಿಸುವಲ್ಲಿಯೂ ಮತ್ತು ಆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ.
ನಮಗೆ ನಮ್ಮ ವಾಹನ ನಿಲ್ಲಿಸಿದ್ರೂ, ನಮಗೆ ಲಾಠಿಯೇಟು ಕೊಟ್ರೂ ಎಂದು ಹಿಂದಿನಿಂದ ಪೊಲೀಸರಿಗೆ ಬೈಯುವ ಬದಲು, ಇನ್ನಾದರೂ ನಾವು ಕಾನೂನು ರೀತಿಯಲ್ಲಿ ಬದುಕು ಕಟ್ಟಿಕೊಂಡರೆ ಅದುವೆ ನಿಜವಾದ ಜೀವನವಾಗುತ್ತೆ ಮತ್ತು ನಮ್ಮನ್ನು ಕಾಯುವ ಪೊಲೀಸರಿಗೆ ಗೌರವ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ದ್ವಜ ದಿನಾಚರಣೆಯ ನಿಮಿತ್ತ ಈ ರೀತಿಯ ಪ್ರತಿಜ್ಞೆ ಮಾಡೋಣ.
ಏನಾಂತೀರಿ,
ನಿಮ್ಮವ
ಸಂದೇಶ್.ಎಸ್.ಜೈನ್
ಮೊ: 9620595555