Tuesday, December 18, 2018

ಜೀವನ ಪಯಾಣದಲ್ಲಿ ಅರ್ಧಶತಕದತ್ತ ದಾಂಡೇಲಿಯ ತೆಂಡೂಲ್ಕರ್
ಸ್ವಚ್ಚ ಹೃದಯದ ಮಾನವೀಯತೆಯ ಅಣ್ಣ ನಮ್ಮ ಇಮಾಮ್ ಸರ್ವರಿಗೆ ಬರ್ತುಡೆ ಸಂಭ್ರಮ



ಜೀವನ ಪಯಾಣದಲ್ಲಿ ಅರ್ಧಶತಕದತ್ತ ದಾಂಡೇಲಿಯ ತೆಂಡೂಲ್ಕರ್
ಸ್ವಚ್ಚ ಹೃದಯದ ಮಾನವೀಯತೆಯ ಅಣ್ಣ ನಮ್ಮ ಇಮಾಮ್ ಸರ್ವರಿಗೆ ಬರ್ತುಡೆ ಸಂಭ್ರಮ
 
ಇವತ್ತು ನಾನು ಒಬ್ಬ ಡಿಫರೆಂಟ್ ವ್ಯಕ್ತಿತ್ವದ ಸರಳ ಸಹೃದಯಿಯೊಬ್ಬರನ್ನು ಪರಿಚಯಿಸಲು ಅತ್ಯಂತ ಹರ್ಷಿತ ಮನಸ್ಸಿನಿಂದ ಅಣಿಯಾಗಿದ್ದೇನೆ. ಜೀವನದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿ, ಕಣ್ಣೀರಲ್ಲಿ ಮಿಂದೆದ್ದು, ಕಷ್ಟದಿಂದ ಬದುಕು ಕಟ್ಟಿಕೊಂಡು ಇಷ್ಟದಂತೆ ಜೀವನ ನಡೆಸುತ್ತಿರುವ ಶ್ರಮಜೀವಿ ಅಂತಲೂ ಕರೆಯಬಹುದು, ಹಟಯೋಗಿಯಂತಲೂ ಕರೆಯಬಹುದು. ಒಟ್ಟಾರೆಯಾಗಿ ಹೇಳುವುದಾದರೇ ಸಮಾಜಮುಖಿ, ಜನಮುಖಿ ಹಾಗೂ ಮಾನವೀಯತೆಯ ಸಾಕಾರಮೂರ್ತಿ ಎಂದು ಕರೆಯಬಹುದಾದ ವಿಶಿಷ್ಟ ನಡವಳಿಕೆಯ ಕ್ರಿಯೇಟಿವ್ ವ್ಯಕ್ತಿ ಹಾಗೂ ನನ್ನ ದೊಡ್ಡಣ್ಣನಾಗಿರುವ ಸಾಧಕರೊಬ್ಬರ ಬಗ್ಗೆ ನನಗನಿಸಿದ್ದನ್ನು ಬರೆಯಲು ಹೊರಟಿದ್ದೇನೆ.

ಒಂದು ಕಾಲದಲ್ಲಿ ದಾಂಡೇಲಿಯಲ್ಲಿ ಕ್ರಿಕೆಟ್ ಆಟಕ್ಕೆ ಹೊಸ ಕಾಯಕಲ್ಪವನ್ನು ಕೊಟ್ಟ ಅತ್ಯದ್ಭುತ ಕ್ರಿಕೆಟ್ ಆಟಗಾರನೆಂಬ ಜನಪ್ರೀತಿಗಳಿಸಿದ ಆ ವ್ಯಕ್ತಿ ಬೇರೆ ಯಾರು ಅಲ್ಲ. ನಮ್ಮ ಕಣ್ಣ ಮುಂದೆ ಗ್ರೇ ಬಣ್ಣದ ಹೊಂಡಾ ಆಕ್ಟಿವೊ ದ್ವಿಚಕ್ರ ವಾಹನದಲ್ಲಿ ಸರಸರನೆ ಓಡಾಡುತ್ತಿರುವ ಮೆಚ್ಚಿನ ಹಾಗೂ ನೆಚ್ಚಿನ ನನ್ನಣ್ಣ ಇಮಾಮ್ ಸರ್ವರ್. 

ನಾನು ಬಹಳ ಇಷ್ಟಪಡುವ ಹಾಗೂ ಮುದ್ದಿಸುವ ಅಣ್ಣನಾಗಿರುವ ಇಮಾಮ್ ಸರ್ವರ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ನನಗ್ಯಾಕೆ ಅವರು ಬಹಳ ಇಷ್ಟವಾಗಲೂ ಕಾರಣವೆಂದರೇ, ಅವರು ಒಂದು ಸಮುದಾಯಕ್ಕೆ, ಒಂದು ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರೊಬ್ಬ ಸಮಾಜಮುಖಿಯಾದ ದಿ ಗ್ರೇಟ್ ಹೃದಯವಂತ. ಪಕ್ಕ ಹೃದಯಶ್ರೀಮಂತ. ಸಾಮಾಜಿಕ, ಕ್ರೀಡೆ ಹಾಗೂ ಮಾನವೀಯ ಸ್ಪಂದನೆಯಂತ ಕಾರ್ಯಗಳಿಗೆ ತಡವರಿಯದೆ ಸ್ಪಂದಿಸುವ ವಿಶಾಲ ಮನಸ್ಸಿನ ಹಿರೋ ಎನ್ನಲೇನು ಅಡ್ಡಿಯಿಲ್ಲ. ಇಂದವರು ಶ್ರೀಮಂತಿಕೆಯ ಸುಪ್ಪೊತ್ತಿಗೆಯಲ್ಲಿದ್ದರೂ ತಾನು ಬೆಳೆದು ಬಂದ ಹಾದಿ, ಕ್ರಮಿಸಿದ ದಾರಿ, ಸವೆಸಿದ ಶ್ರಮವನ್ನು ಸದಾ ಸ್ಮರಿಸಿಕೊಂಡು, ಅದುವೆ ಜೀವನ ಸಫಲತೆಗೆ ಪ್ರಮುಖ ಆಶೀರ್ವಾದ ಎಂದು ಭಾವಿಸಿ ಬದುಕುವ ಇಮಾಮ್ ಸರ್ವರ್ ಅವರ ಜೀವನ ಸನ್ನಡತೆ ನಮಗೆಲ್ಲರಿಗೂ ಅನುಕರಣೀಯ ಮತ್ತು ಅಭಿನಂದನಿಯ.

ನಮ್ಮ ಇಮಾಮ್ ಅವರೇನು ಶ್ರೀಮಂತಿಕೆಯ ಕುಟಂಬದಲ್ಲಿ ಹುಟ್ಟಿ ಬಂದವರಲ್ಲ. ಆದಾಗ್ಯೂ ಸಂಸ್ಕಾರಯುತವಾದ ಜೀವನ ನಡವಳಿಕೆಯ ದಾರ್ಶನಿಕ ಕುಟುಂಬದ ಹೆಮ್ಮೆಯ ಕುವರ ಈ ನಮ್ಮ ಇಮಾಮ್ ಸರ್ವರ್.  ಅವರಪ್ಪ ಒಂದು ಸಮಯದಲ್ಲಿ ನಗರ ಸಭೆಯಲ್ಲಿ ನೀರಾವರಿ ವಿಭಾಗದಲ್ಲಿ ಸೇವೆಯನ್ನು ಸಲ್ಲಿಸಿ, ನಿವೃತ್ತರಾಗಿ, ಸ್ವರ್ಗಸ್ಥರಾದ ಮಾರುತಿ ನಗರದ ನಿವಾಸಿಯಾಗಿದ್ದ ದಿಲಾವರ ಸರ್ವರ್ ಹಾಗೂ ಮಾತೃ ಹೃದಯದ ಗುಣಶೀಲವಂತೆ ಹಫೀಜಾ ಸರ್ವರ್ ದಂಪತಿಗಳ ಜೇಷ್ಟಪುತ್ರ ಇಮಾಮ್ ಸರ್ವರ್. ಅಂದ ಹಾಗೆ ಇಮಾಮ್ ಅವರಿಗೆ ಮಮ್ತಾಜ್, ರಾಜು, ರಜೀಯ ಎಂಬ ಸಹೋದರಿಯರು ಮತ್ತು ಓರ್ವ ಸಹೋದರರಿದ್ದಾರೆ.

ಎಳೆಯ ಬಾಲಕನಿರುವಾಗ್ಲೆ ಅಪ್ಪನ ಜೊತೆ ಅಪ್ಪನ ಕಾಯಕವಾದ ನೀರು ಸರಬರಾಜು ಕಾಯಕದಲ್ಲಿ  ಕಲಿಕೆಯ ಜೊತೆ ತೊಡಗಿಸಿಕೊಂಡು ಸಣ್ಣ ಪ್ರಾಯದಲ್ಲೆ ಶ್ರಮಜೀವನದ ಪಾಠವನ್ನು ಅರಿತವರು ಮತ್ತು ಜೀವನದಲ್ಲಿ ರೂಢಿಸಿಕೊಂಡವರು ಕೃಷ್ಣ ಸುಂದರ ಬಣ್ಣದ ನಮ್ಮ ಇಮಾಮ್ ಸರ್ವರ್ ಅವರು. 

ಹೀಗೆ ಬೆಳೆದ ಇಮಾಮ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಡಿ.ಎಫ್.ಎ ಶಾಲೆಯಲ್ಲಿ ಪಡೆದರು. ಆನಂತರ ಜೆವಿಡಿಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಹೈಸ್ಕೂಲ್ ಮುಗಿದ ಬಳಿಕ ಬಂಗೂರನಗರ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದು, ಮುಂದೆ ಬಂಗೂರನಗರ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದರು. ಆನಂತರ ಜೆ.ಓ.ಸಿ ಶಿಕ್ಷಣವನ್ನು ಪಡೆದ ಹೆಮ್ಮೆ ನಮ್ಮ ಇಮಾಮ್ ಅವರಿಗಿದೆ.

ದಾಂಡೇಲಿಯ ಸಚಿನ್ ತೆಂಡೂಲ್ಕರ್ :
ಈ ಮಾತನ್ನು ದಾಂಡೇಲಿಯ ಕ್ರಿಕೆಟ್ ಆಟಗಾರರು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಒಂದು ಕಡೆ ಕಿತ್ತು ತಿನ್ನುವ ಬಡತನವಾದರೇ, ಬಡತನವನ್ನು ಮೆಟ್ಟಿ ನಿಲ್ಲಬೇಕೆಂದು ಬಯಸಿ, ತಂದೆ ತಾಯಿಗೆ ಎಲ್ಲಿಯೂ ಹೊರೆಯಾಗಬಾರದೆಂದು ಭಾವಿಸಿ ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗಲೆ ದಾಂಡೇಲಿಯ ಸುಭಾಸನಗರ, ಅಂಬೇವಾಡಿ ಅಂಚೆ ಕಚೇರಿ ವ್ಯಾಪ್ತಿಗೆ ತಿಂಗಳಿಗೆ ರೂ: 50 ರಂತೆ ಸಂಬಳವನ್ನು ಪಡೆದು ನೀರು ಸರಬರಾಜು ಮಾಡುವ ಕಾಯಕದಲ್ಲಿ ನಿರತರಾದವರು ನಮ್ಮ ಇಮಾಮ್ ಅವರು.  ಚಳಿ, ಮಳೆಯೆನ್ನದೆ ಪ್ರತಿದಿನ ಮುಂಜಾನೆ ಬೆಳ್ಳಂ ಬೆಳಗ್ಗೆ 4 ಗಂಟೆಗೆ ಎದ್ದು ಬೆಳಿಗ್ಗೆ 6.30 ಗಂಟೆಯೊಳಗೆ ತಾನು ವಹಿಸಿದ ನೀರು ಬಿಡುವ ಕೆಲಸವನ್ನು ಶೃದ್ದೆಯಿಂದ ಮಾಡುವುದರ ಮೂಲಕ ಎಲ್ಲರ ಅಚ್ಚುಮೆಚ್ಚಿನ ಪ್ರೀತಿಗೆ ಪಾತ್ರರಾದವರು ನಮ್ಮ ಇಮಾಮಣ್ಣನವರು. 

ಇಂಥಹ ಶ್ರಮಜೀವಿ ಇಮಾಮ್ ಅವರು ಕೆಲಸ, ಓದು ಹೀಗೆ ಉಳಿದ ಸಮಯದಲ್ಲಿ ಬಹಳ ತೂಕದ ಬ್ಯಾಟನ್ನು ಎತ್ತಿಕೊಂಡು ಹೋಗುವುದು ಡಿ.ಎಫ್.ಎ ಮೈದಾನಕ್ಕೆ. ಡಿ.ಎಫ್.ಎ ಮೈದಾನದಲ್ಲಿ ಕ್ರಿಕೆಟ್ ಕಲಿಯಾಗಿ ವಿಜೃಂಭಿಸಿದ ರೀತಿ ಇನ್ನು ಹಲವರ ಕಣ್ಣಂಚಿನಲ್ಲಿ ಹಾಗೆ ಇದೆ. ಇಮಾಮ್ ಅವರ ಪ್ರಚಂಡ ಬ್ಯಾಟಿಂಗ್, ಕರಾರುವಕ್ಕಾದ ಪಿಲ್ಡಿಂಗ್ ಒಟ್ಟಿನಲ್ಲಿ ಸವ್ಯಸಾಚಿ ಆಟವನ್ನು ದಾಂಡೇಲಿಯ ಜನತೆ ನೋಡಿ ಸಂಭ್ರಮಿಸಿದ್ದಾರೆ, ಹರಸಿ ಆಶೀರ್ವದಿಸಿದ್ದಾರೆ. ತನ್ನ ಅದ್ಬುತವಾದ ಕ್ರಿಕೆಟ್ ಆಟದಿಂದಾಗಿ ದಾಂಡೇಲಿಯ ಅವರ ತಂಡವಾದ ಎನ್.ವೈ.ಎ ಕ್ರಿಕೆಟ್ ತಂಡ ಜಿಲ್ಲಾ ಮಟ್ಟದಲ್ಲಿ ಹಲವಾರು ಕಪ್ ಗಳನ್ನು ಮುಡಿಗೇರಿಸಿಕೊಂಡು ದಾಂಡೇಲಿಯ ಕ್ರೀಡಾಕೀರ್ತಿಯನ್ನು ಬೆಳೆಗಿಸಿರುವುದನ್ನು ಯಾರು ಮರೆಯುವಂತಿಲ್ಲ. ನಮ್ಮ ಇಮಾಮ್ ಅವರ ಆಟದ ಶೈಲಿ, ಮನೋಜ್ಞ ಬ್ಯಾಟಿಂಗ್ ಅವರನ್ನು ದಾಂಡೇಲಿಯ ಸಚಿನ್ ತೆಂಡೂಲ್ಕರ್ ಎಂದೆ ಎಲ್ಲರು ಕರೆಯುವಂತಾಯಿತು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಇಮಾಮ್ ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಗಮನ ಸೆಳೆದ ಅಗ್ರ ಕ್ರಿಕೆಟ್ ಆಟಗಾರರಾಗಿ ಅಪ್ರತಿಮ ಕ್ರೀಡಾಪಟುವಾಗಿ ದಾಂಡೇಲಿಯ ಮುಕುಟಕ್ಕೆ ಗರಿಯಾಗಿದ್ದನ್ನು ಯಾರು ಮರೆಯುವಂತಿಲ್ಲ. 

ಇನ್ನೂ ಮೀಸೆ ಮೂಡದ ಯುವಕ ಇಮಾಮ್ ಅವರು ಬ್ಯಾಟ್ ಹಿಡಿದು ಅಂಗಳಕ್ಕೆ ಬರುತ್ತಿದ್ದಂತೆಯೆ ಎದುರಾಳಿಗಳು ನಡುಗುತ್ತಿದ್ದರಂತೆ. ಒಂದು ಕಡೆ ರಕ್ಷಣಾತ್ಮಾಕ ಆಟ, ಇನ್ನೊಂದು ಕಡೆ ಅವಕಾಶ ಸಿಕ್ಕಿದಾಗಲೆಲ್ಲ ಹೊಡಿಬಡಿ ಆಟ ಇದು ನಮ್ಮ ಇಮಾಮ್ ಅವರು ಆಟದ ಕಾರ್ಯತಂತ್ರ. ಈ ಕಾರ್ಯತಂತ್ರವೆ ಎದುರಾಳಿ ತಂಡದ ಸಂಪೂರ್ಣ ತಂತ್ರ ವಿಫಲತೆಗೆ ಬಹುಮೂಲ್ಯ ಕಾರಣವಾಗುತ್ತಿತ್ತಂತೆ. ಒಬ್ಬ ಸ್ಮರಣೀಯ ಆಟಗಾರನಾಗಿದ್ದ ಇಮಾಮ್ ಅವರೇನಾದರೂ ಕಾಲೇಜು ವಿದ್ಯಾರ್ಥಿ ಸಮಯದಲ್ಲಿ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿರುತ್ತಿದ್ದರೇ ರಾಜ್ಯ, ರಾಷ್ಟ್ರದ ಕ್ರಿಕೆಟ್ ಆಟಗಾರರಾಗಿ ಗಮನ ಸೆಳೆಯಬಹುದಿತ್ತು. ಆದರೇನೂ ಎಲ್ಲದಕ್ಕೂ ಅವಕಾಶನೂ ಬೇಕು, ಲಕ್ ನೂ ಬೇಕಾಲ್ವೆ. ಅದೇನೆ ಇರಲಿ ದಾಂಡೇಲಿಗೆ ಮಾತ್ರ ಏಕೈಕ ಸಚಿನ್ ತೆಂಡೂಲ್ಕರ್ ನಮ್ಮ ಇಮಾಮ್ ಸರ್ವರ್ ಎನ್ನುವುದನ್ನು ಎಲ್ಲರೂ ಒಪ್ಪಬೇಕಾದ ವಿಚಾರ.

ಕ್ರಿಕೆಟ್ ಜೊತೆ ಜೊತೆಗೆ ಶಟಲ್ ಬ್ಯಾಡ್ಮಿಂಟನ್, ಕೇರಂ ಕ್ರೀಡೆಯಲ್ಲಿಯೂ ತನ್ನ ತಾಕತ್ತು ಪ್ರದರ್ಶಿಸಿ ಗಮನ ಸೆಳೆದ ಇಮಾಮ್ ಅವರು ಕಾಲೇಜು ಮುಗಿದ ಮೇಲೆ ತನ್ನ ನೀರು ಪೊರೈಸುವ ಕಾಯಕವನ್ನು ಮುಂದುವರೆಸುತ್ತಲೆ, ಉಳಿದ ಸಮಯದಲ್ಲಿ ಸ್ವತಂತ್ರ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿ ಮುನ್ನಡೆದರು.

ಅವರೆ ದುಡಿದು ಸಂಪಾದಿಸಿದ ಹಣದಲ್ಲಿ ಮಾರುತಿ ನಗರದ ತನ್ನ ಮನೆಯಲ್ಲೆ ಎಸ್.ಟಿ.ಡಿ ಬೂತನ್ನು ಪ್ರಾರಂಭಿಸಿದರು. ಇದು ಆರಂಭಿಸಿ ಸ್ವಲ್ಪ ತಿಂಗಳೊಳಗೆ ಕೆ.ಸಿ ವೃತ್ತದಲ್ಲಿ ಮತ್ತೊಂದು ಎಸ್.ಟಿ.ಡಿ ಬೂತನ್ನು ತೆರದು ಆ ಬಳಿಕ ಜಂಗಲ್ ಲಾಡ್ಜಸ್ ಬಳಿ ಎಸ್.ಟಿ.ಡಿ ಬೂತನ್ನು ತೆರದರು. ಇದು ಅವರ ಬದುಕಿನ ಲಯಕ್ಕೆ ಹೊಸ ತಿರುವನ್ನು ಕೊಟ್ಟಿತೆಂದೆ ಹೇಳಬಹುದು.
ಹೀಗೆ ಬೆಳೆದ ವ್ಯವಹಾರ ಅವರನ್ನು ಎಲ್ಲರ ಪರಿಚಯವನ್ನಾಗಿಸಲು ಸಹಕಾರಿಯಾಯಿತು. ಮುಂದೆ ದಿನ ಮುಂದುವರಿದಂತೆ ದಂಡೇಲಿಯ ಬಿ.ಎಸ್.ಎನ್.ಎಲ್ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿಕೊಂಡು ಅಲ್ಲಿ ಬಹುವರ್ಷಗಳವರೆಗೆ ಸೇವೆ ಸಲ್ಲಿಸಿದ ಫಲಶೃತಿ ಎಂಬಂತೆ, ತನ್ನ ಛಲದ ಶ್ರಮಕ್ಕೆ ಅನುಗುಣವಾಗಿ ಅಲ್ಲಿ ಉದ್ಯೋಗದಲ್ಲಿ ಖಾಯಂಮಾತಿ ದೊರೆಯಿತು. ಅಲ್ಲಿಂದ ಈವರೇಗೂ ಮುಂದೆ ನಿವೃತ್ತಿಯಾಗುವರೆಗೂ ನಮ್ಮ ಇಮಾಮ್ ಸರ್ವರ್ ಅವರು ಸರಕಾರಿ ನೌಕರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಸಲ್ಲಿಸಲಿದ್ದಾರೆ.

ಉದ್ಯೋಗದ ಜೊತೆ ಜೊತೆಗೆ ತನ್ನ ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದ ನಮ್ಮ ಇಮಾಮ್ ಅವರು ತನ್ನ ಸಹೋದರ ರಾಜು ಸರ್ವರ್ ಅವರಿಗೆ ಅಕ್ಕರೆಯ ಅಣ್ಣನಾಗಿ, ಒಬ್ಬ ಅತ್ಯುತ್ತಮ ಗೆಳೆಯನಾಗಿ ತಮ್ಮನ ಬದುಕಿಗೆ ಪ್ರೇರಣಾದಾಯಿಯಾಗಿ ಗಮನ ಸಳೆದಿದ್ದಾರೆ. ತಮ್ಮ ರಾಜು ಸರ್ವರ್ ಅವರಿಗೆ ಸ್ವಾವಲಂಬಿ ಬದುಕಿನ ನೀತಿ ಪಾಠವನ್ನು ಕಲಿಸಿ, ದಾಂಡೇಲಿಯಲ್ಲಿ ಬೆಳೆಯುತ್ತಿರುವ ಪ್ರವಾಸೋಧ್ಯಮಕ್ಕೆ ಅನುಗುಣವಾಗಿ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿ ಜಾನ್ ಪೊಲಾರ್ಡ್, ಆನಂತರ ಸ್ಟ್ಯಾನ್ಲಿ ಮೊಬೆನ್ ಅವರ ಗರಡಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಇಂಚು ಇಂಚನ್ನು ಅಭ್ಯಸಿಸಲು ನೆರವಾದರಲ್ಲದೇ ತಾನು ಈ ಚಟುವಟಿಕೆಯ ಪ್ರಾವೀಣ್ಯತೆಯನ್ನು ಕಲಿತರು. ಮುಂದೆ ರಾಜು ಸರ್ವರ್ ಅವರ ಹೆಸರಲ್ಲಿ ಹರೇಗಾಳಿಯಲ್ಲಿ ಪರಂಪರಾ ಕಾಟೇಜಸ್ ಎಂಬ ವಿಶಿಷ್ಟ ಹೋಂ ಸ್ಟೇ ಯೊಂದನ್ನು ನಿರ್ಮಿಸಲು ಮಾರ್ಗದರ್ಶನ ನೀಡಿ, ಹರಿಸ ಆಶೀರ್ವದಿಸಿದವರು ಇದೇ ನಮ್ಮ ಇಮಾಮ್ ಸರ್ವರ್ ಅವರು.

ಸಾಮಾಜಿಕವಾಗಿ ನಮ್ಮ ಇಮಾಮ್:
ಕ್ರೀಡೆ, ವೃತ್ತಿ, ಪ್ರವಾಸೋದ್ಯಮದ ನಡುವೆಯೂ ಸಾಮಾಜಿವಾಗಿ ಇಮಾಮ್ ಅವರು ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇಮಾಮ್ ಅವರು ಮಾರುತಿ ನಗರದ ಫೈಜಲ್ ಮಸೀದಿಯ ಕೋಶಾಧಿಕಾರಿಯಾಗಿ, ರೋಟರಿ ಕ್ಲಬಿನ ಪ್ರಮುಖ ಪದಾಧಿಕಾರಿಯಾಗಿ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಇದರ ಪ್ರಮುಖ ಪದಾಧಿಕಾರಿಯಾಗಿ,  ದಾಂಡೇಲಿ ಪ್ರವಾಸೋದ್ಯಮಿ ಸಂಘದ ಪದಾಧಿಕಾರಿಯಾಗಿ, ದಾಂಡೇಲಿ ವೈಲ್ಡ್ ಸೊಸೈಟಿಯ ಪದಾಧಿಕಾರಿಯಾಗಿ, ನಮ್ಮ ಗಾಂಧಿನಗರದ ಶ್ರೀ.ಗಣೇಶ ಹಿಂದು, ಮುಸ್ಲಿಂ, ಕ್ರೈಸ್ತ ಯುವಕ ಮಂಡಳದ ಮಾರ್ಗದರ್ಶಕರಾಗಿ ಸೇವೆಯನ್ನು ನಗುಮೊಗದಿಂದ ಸಲ್ಲಿಸುತ್ತಿದ್ದಾರೆ.

ಸಂಕಷ್ಟಕ್ಕೆ ಸ್ಪಂದಿಸುವ ಹೃದಯವಂತ :
ತಾನು ಕಣ್ಣೀರಲ್ಲಿ ಬದುಕು ಕಟ್ಟಿಕೊಂಡಿರುವುದನ್ನು ನೆನೆಸಿಕೊಳ್ಳುವ ಇಮಾಮ್ ಅವರು ಯಾರೆ ಸಂಕಷ್ಟದಲ್ಲಿದ್ದರೂ ತಕ್ಷಣ ಸ್ಪಂದಿಸುವ ಹೃದಯವಂತರಾಗಿ ನಮ್ಮ ಮುಂದಿದ್ದಾರೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಬಡವರ ಅನಾರೋಗ್ಯಕ್ಕೆ ಸ್ಪಂದನೆ, ಹೀಗೆ ಸಂಕಷ್ಟದಲ್ಲಿದ್ದವರಿಗೆ ತಕ್ಷಣ ಸ್ಪಂದಿಸುವ ಗುಣಶ್ರೀಮಂತಿಕೆಯನ್ನು ಹೊಂದಿರುವ ಇಮಾಮ್ ಅವರಿಗೆ ಇಮಾಮ್ ಅವರೆ ಸಾಟಿ.

ಜೀವನದಲ್ಲಿ ಹಲವಾರು ಅಡೆತಡೆಗಳನ್ನು ದಾಟಿ, ಶ್ರಮದ ಹಾದಿಯಲ್ಲಿ ಮುನ್ನಡೆದು, ಯಶಸ್ವಿಯಾಗಿ ನಗುಮೊಗದ ಜೀವನ ನಡೆಸುವ ನಗುಮೊಗದ ಹೃದಯಾದಣ್ಣ ನಮ್ಮ ಇಮಾಮ್ ಸರ್ವರ್ ಅವರ ಜೀವನಸಫಲತೆಗೆ ಅವರಪ್ಪ ಹಾಗೂ ಅವರಮ್ಮನ ಆಶೀರ್ವಾದ, ಸಹೋದರ, ಸಹೋದರಿಯರ ಪ್ರೀತಿ, ವಾತ್ಸಲ್ಯ, ಕೈ ಹಿಡಿದ ಪತ್ನಿ, ಹೆಜ್ಜೆಗೆ ಹೆಜ್ಜೆಯಾಗಿರುವ ಮೆಹರೂನ್ ಅವರ ಸಕಾಲಿಕ ಸ್ಪಂದನೆ, ಗೆಳೆಯಂತಿರುವ ಮಕ್ಕಳಾದ ಸಾಹೀಲ್ ಮತ್ತು ಸಭಾ ಅವರುಗಳ ಅಕ್ಕರೆ ಮತ್ತು ಅಭಿಮಾನದ ಪ್ರೀತಿ, ಬಂಧುಗಳ, ಗೆಳೆಯರ ಪ್ರೀತಿಯ ಸಹಕಾರ, ತನ್ನ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಹದ್ಯೋಗಿಗಳ ಮನದ ಪ್ರೀತಿಯೆ ಪ್ರಮುಖ ಕಾರಣ.

ಡೈನಮಿಕ್ ವ್ಯಕ್ತಿತ್ವದ ದಿ ಗ್ರೇಟ್ ಹೃದಯಶ್ರೀಮಂತ ನನ್ನಣ್ಣ ಇಮಾಮ್ ಸರ್ವರ್ ಅವರಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮವ
 
ಸಂದೇಶ್.ಎಸ್.ಜೈನ್
 

2 comments:

  1. Wish you many more happy returns of the day sir

    ReplyDelete
  2. Many many happy returns of the day bro, god bless you.

    ReplyDelete

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...