Tuesday, July 28, 2020

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ
ಮಾನವೀಯ ಸೇವಾಕೈಂಕರ್ಯದ ಜನಸೇವಕ
ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾನವೀಯತೆಯ ಗುಣಧರ್ಮವನ್ನು ಹೊಂದಿದ ಸರಳ ವ್ಯಕ್ತಿತ್ವ ಸಹೃದಯಿ. ಮಾತಿಗೆ ನಿಂತರೆ ಎಂಥವರನ್ನು ಆಕರ್ಷಿಸಬಲ್ಲ ಮಾತುಗಾರಿಕೆ, ಒಟ್ಟಿನಲ್ಲಿ ಮಾತಿನ ಮಲ್ಲ. ಜನಸೇವೆಯಲ್ಲಿ ಜೀವನಸಂತಸ ಕಂಡ ಅಪರೂಪದ ಅಪೂರ್ವ ವ್ಯಕ್ತಿ ಇವರು. ಅಂದ ಹಾಗೆ, ಯಾರವರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಛಲಗಾರ ಬೇರೆ ಯಾರು ಅಲ್ಲ, ನಮ್ಮವರೆ ಆದ ರವೀಂದ್ರ ಶಾಹ ಅವರು. ಇಂದವರಿಗೆ ಹುಟ್ಟುಹಬ್ಬದ ಸಂಭ್ರಮ, ಸಡಗರ. ಈ ಸಡಗರಕ್ಕೊಂದು ಅಭಿಮಾನದ ನುಡಿರೂಪದ ಶುಭಾಶಯ ಕೋರಲು ತಡವಾಗಿ ಅಣಿಯಾಗಿದ್ದೇನೆ.
ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಒಲುಮೆಯ ಸಹೋದರ ರವೀಂದ್ರ ಶಾಹ ಅವರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತ ಅವರ ಕೆಲವೊಂದು ವಿಚಾರವನ್ನು ತಮಗೆಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತೇನೆ.

ಮೂಲತ: ಕನ್ನಡಿಗರಲ್ಲದಿದ್ದರೂ ನಿರರ್ಗಳವಾಗಿ ಕನ್ನಡ ಮಾತನಾಡುವ ಮಾತಿನ ಮಲ್ಲ ನಮ್ಮ ರವೀಂದ್ರ ಶಾಹ ಅವರು ಕಾಗದ ಕಾರ್ಖಾನೆಯ ನಿವೃತ್ತ ಉದ್ಯೋಗಿ ದಿ: ಜಗದೀಶ ಶಾಹ ಹಾಗೂ ಸುಸಂಸ್ಕೃತ ಗೃಹಿಣಿ ದಿ: ವಿದ್ಯಾದೇವಿ ದಂಪತಿಗಳ ಮುದ್ದಿನ ಮಗನಾಗಿದ್ದಾರೆ. ರವೀಂದ್ರ ಅವರಿಗೆ ಮಂಜು ಶಾಹ ಮತ್ತು ರಾಜೇಶ ಶಾಹ ಎಂಬ ಅಕ್ಕ ಮತ್ತು ಅಣ್ಣ ಹಾಗೂ ಕಿರಣ ಶಾಹ ಎಂಬ ಮಮತೆಯ ತಂಗಿ ಇದ್ದಾರೆ.

ಸುಸಂಸ್ಕೃತ ಮನೆತನದಲ್ಲಿ ಜನ್ಮವೆತ್ತ ನಮ್ಮ ರವೀಂದ್ರ ಅವರು ಬಾಲಕನಿರುವಾಗಲೆ ಚುರುಕುತನದ ಮೂಲಕ ಎಲ್ಲರ ಮನಸ್ಸು ಗೆದ್ದವರು. ಸಹೋದರ ಮತ್ತು ಸಹೋದರಿಯರಿಬ್ಬರ ಪ್ರೀತಿಯ ನೆರಳಲ್ಲಿ ಬೆಳೆದ ರವೀಂದ್ರ ಅವರು ತನ್ನ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಂಗೂರನಗರ ಹಿಂದಿ ಶಾಲೆಯಲ್ಲಿ ಪಡೆದು, ಆನಂತರ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದರು. ಮುಂದೆ ಬಂಗೂರನಗರ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದರು. ಕಾಲೇಜು ಜೀವನದಲ್ಲೆ ನಾಯಕತ್ವವನ್ನು ಬೆಳೆಸಿಕೊಂಡ ರವೀಂದ್ರ ಶಾಹ ಅವರು ಬಂಗೂರನಗರ ಪದವಿ ಕಾಲೇಜಿನ
ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಾರ್ಥಿ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿ, ವಿದ್ಯಾರ್ಥಿಗಳ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾದರು.
 

 ವಿದ್ಯಾರ್ಥಿ ದೆಸೆಯಲ್ಲಿರುವಾಗಲೆ ಅತ್ಯುತ್ತಮ ಕ್ರೀಡಾಪಟುವಾಗಿ, ಭಾಷಣಕಾರರಾಗಿ ಗಮನ ಸೆಳೆದಿರುವ ರವೀಂದ್ರ ಅವರು ಒಬ್ಬ ಸಮರ್ಥ ಸಾಂಸ್ಕೃತಿಕ ಪಟುವಾಗಿ ಎಲ್ಲರ ಮನೆಗೆದ್ದಿರುವುದು ಅವರ ವಿಶೇಷತೆಗಳಲ್ಲೊಂದು ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ.

ಕಾಲೇಜು ಶಿಕ್ಷಣ ಮುಗಿದ ಮೇಲೆ ಕಾಗದ ಕಾರ್ಖಾನೆಯಲ್ಲೆ ನೌಕರಿ ಗಿಟ್ಟಿಸಿದ ರವೀಂದ್ರ ಶಾಹ ಅವರು ಇದೀಗ ಕಾರ್ಖಾನೆಯ ಗೋಡೌನ್ ವಿಭಾಗದಲ್ಲಿ ಅಧಿಕಾರಿಯಾಗಿ ಎಲ್ಲರು ಮೆಚ್ಚುವಂತೆ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮೇಲಾಧಿಕಾರಿಗಳಿಗೆ ನೆಚ್ಚಿನವರಾಗಿ, ಸಹದ್ಯೋಗಿಗಳಿಗೆ ಆತ್ಮೀಯರಾಗಿ, ತನ್ನ ಕೈಕೆಳಗಿನ ಸಿಬ್ಬಂದಿಗಳಿಗೆ ಮನದಿಚ್ಚೆಯ ಅಣ್ಣನಾಗಿರುವ ರವೀಂದ್ರ ಶಾಹ ಅವರ ಗುಣಧರ್ಮವನ್ನು ಎಲ್ಲರು ಮೆಚ್ಚುತ್ತಾರೆ.

ವೃತ್ತಿ ಬದುಕಿನ ಜೊತೆಗೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುವ ರವೀಂದ್ರ ಶಾಹ ಅವರು ಬಿಜೆಪಿ ಮೂಲಕ ರಾಜಕೀಯಕ್ಕೆ ಎಂಟ್ರಿ ಹೊಡೆದು, ಆನಂತರ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿ, ಇತ್ತೀಚಿನ ಕೆಲ ವರ್ಷಗಳ ಹಿಂದೆ ಮರಳಿ ಮಾತೃಪಕ್ಷವಾದ ಬಿಜೆಪಿಗೆ ಸೇರಿ ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ. ಪಕ್ಷದ ತತ್ವ ಸಿದ್ದಾಂತಕ್ಕೆ ಅನುಗುಣವಾಗಿ ಸಮಾಜಮುಖಿಯಾಗಿರುವ ರವೀಂದ್ರ ಶಾಹ ಅವರು ಎಲ್ಲಿದ್ದರೂ ಅಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಅದು ಅವರ ಶಕ್ತಿ ಎಂದರೆ ತಪ್ಪಗಲಾರದು.

ಸಾಮಾಜಿಕ ಹೋರಾಟಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಜೊತೆಯಲ್ಲಿ ದಾರ್ಮಿಕ ಕಾರ್ಯಗಳಲ್ಲೂ ಸೈ ಎನಿಸಿಕೊಂಡವರು ನಮ್ಮ ಶಾಹ ಸಾಹೇಬ್ರು. ಅಂದ ಹಾಗೆ ನಗರದಲ್ಲಿ ವಿಶಿಷ್ಟವಾಗಿ ನಡೆಯುವ ಛಟ್ ಹಬ್ಬದ ಪೂಜಾ ಸಮಿತಿಯ ಅಧ್ಯಕ್ಷರಾಗಿ ಛಟ್ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಸಂಸ್ಕಾರಬದ್ದವಾಗಿ ನಡೆಸಿಕೊಂಡು ಬರುತ್ತಿರುವ ಕೀರ್ತಿ ನಮ್ಮ ರವೀಂದ್ರ ಅವರಿಗೆ ಸಲ್ಲಬೇಕು.

ವೈದಿಕ ಕಾರ್ಯದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ರವೀಂದ್ರ ಶಾಹ ಅವರು ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಅರಿತವರು. ಇಂಥಹ ಸಂದರ್ಭದಲ್ಲಿ ರವೀಂದ್ರ ಶಾಹ ಅವರ ಸಹಕಾರ ಅವಶ್ಯವಾಗಿರುತ್ತದೆ. ಇನ್ನೂ ಮುಂದುವರಿದು ಹೇಳುವುದಾದರೇ ಯಾವುದೇ ಸಭೆ, ಸಮಾರಂಭ, ಮದುವೆ ಇನ್ನಿತರ ಕಾರ್ಯಗಳಲ್ಲಿ ಊಟದ ವ್ಯವಸ್ಥೆಗೆ ಒಂದು ಹೊಸರೂಪ ಕೊಟ್ಟು ನಗರದ ಜನತೆಯ ಮನಗೆದ್ದಿರುವುದು ಸುಳ್ಳಲ್ಲ.
ಒಬ್ಬ ಆದರ್ಶ ಸಮಾಜಸೇವಕರಾಗಿ, ಅಪ್ಪಟ ರಾಜಕಾರಣಿಯಾಗಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪಟುವಾಗಿ ಗಮನ ಸೆಳೆದಿರುವ ರವೀಂದ್ರ ಶಾಹ ಅವರು ಎಲ್ಲರೊಂದಿಗೆ ಎಲ್ಲರಂತಿದ್ದು, ಸರಳ ಜೀವನ ನಡೆಸುವುದರ ಮೂಲಕ ಸ್ವಾಭಿಮಾನದ ಬದುಕು ನಡೆಸಿ, ಜೀವನ ಯಶಸ್ಸು ಕಂಡಿದ್ದಾರೆ.

ತಂದೆ ತಾಯಿಗಳ ಸಂಸ್ಕಾರ ಮತ್ತು ಅವರುಗಳ ಆಶೀರ್ವಾದ, ಸಹೋದರ, ಸಹೋದರಿಯರ ಮಾರ್ಗದರ್ಶನ ಮತ್ತು ವಾತ್ಸಲ್ಯ, ಮಮತೆಯ ಮಡದಿ ಅಂಜಲಿಯವರ ನಿರಂತರ ಪ್ರೋತ್ಸಾಹ, ಮಕ್ಕಳಾದ ಸಮೀಕ್ಷಾ, ಶ್ರೇಯಾ ಮತ್ತು ವಿರಾಟ್ ಅವರುಗಳ ಅಪ್ಪುಗೆಯ ಪ್ರೀತಿ, ವಾತ್ಸಲ್ಯ ರವೀಂದ್ರ ಶಾಹ ಅವರ ಜೀವನಯಶಸ್ಸಿನಲ್ಲಿ ಬಹುಮೂಲ್ಯ ಪಾತ್ರವನ್ನು ವಹಿಸಿದೆ.

ಅಹಂ ಇಲ್ಲದ ಸರಳತೆಯನ್ನು ಮೈಗೂಡಿಸಿಕೊಂಡ ಸಹೋದರ ರವೀಂದ್ರ ಶಾಹ ಅವರಿಗೆ ಮಗದೊಮ್ಮೆ ಹುಟ್ಟುಹಬ್ಬದ ಶುಭವನ್ನು ಕೋರುತ್ತಾ, ನೂರು ಕಾಲ ಸುಖವಾಗಿರಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್.

Tuesday, July 7, 2020

ನಮ್ಮೆಲ್ಲರ ಅಚ್ಚುಮೆಚ್ಚಿನ ಪೈ ಮಾಮಿ ಇನ್ನಿಲ್ಲ
ರೂಪಾ ಶ್ರೀಧರ ಪೈ ಅಸ್ತಂಗತ
ಅವರು ಸ್ವಂತ ಅಮ್ಮ ಅಲ್ಲದಿರಬಹುದು. ಆದರೆ ಅವರ ಮಕ್ಕಳಂತೆ ನನ್ನನ್ನು ಪ್ರೀತಿಸಿ, ಮುದ್ದಿಸಿ, ಹರಸಿ ಆಶೀರ್ವದಿಸಿದ ರೀತಿಯಂತು ಸದಾ ಸ್ಮರಣೀಯ. ಸಣ್ಣ ಜ್ವರ ಬಂದಿದೆ ಎಂದೂ ಗೊತ್ತಾದರೂ ಸಾಕು, ಸ್ವತ: ಅವರೆ ಮದ್ದು ಸಿದ್ದಪಡಿಸಿ, ಕೈಯಾರೆ ಔಷಧಿ ನೀಡಿ ಆರೈಕೆ ಮಾಡುವ ಅವರ ಗುಣಧರ್ಮವೆ ನಮಗೆಲ್ಲ ಅಕ್ಕರೆಯ ಅಮ್ಮನಾಗಲು ಕಾರಣವಾಯಿತು. ಅತ್ಯಂತ ವಾತ್ಸಲ್ಯಮಯಿ ಅಮ್ಮನಾಗಿದ್ದ ನಮ್ಮಮ್ಮ ಪೈ ಮಾಮಿ ಇಂದು ಅಸ್ತಂಗತರಾಗಿದ್ದಾರೆ. ಮನಸ್ಸಿಗೆ ಬಹಳ ನೋವಾನಿಸಿದೆ. ಪುಣ್ಯಕಾರ್ಯಗಳ ಮೂಲಕ ಜನಸ್ನೇಹಿಯಾಗಿ, ಮಾನವೀಯತೆಯ ಪ್ರತಿನಿಧಿಯಾಗಿ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದ ಪೈ ಮಾಮಿ ಇನ್ನಿಲ್ಲ ಎನ್ನುವುದನ್ನು ಜೀರ್ಣಿಸಲು ಅಷ್ಟು ಸುಲಭವಿಲ್ಲ. ಕರಿದ ತಿಂಡಿ ಮಾಡಿದಾಗಲೆಲ್ಲ ಕರೆದು ಉಣ ಬಡಿಸಿದ ಆ ದಿನಗಳು ಇನ್ನು ನೆನಪು ಮಾತ್ರ.

ವನಶ್ರೀನಗರದ ನಿವಾಸಿಯಾಗಿರುವ ಪೈ ಮಾಮಿ ಅಂದರೆ ರೂಪಾ ಶ್ರೀಧರ ಪೈ (ವ:70) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆಂದು ಧಾರವಾಡದಲ್ಲಿರುವ ಮಗಳ ಮನೆಗೆ ಹೋಗಿದ್ದ ಅವರು ಬುಧವಾರ ಸ್ವರ್ಗಸ್ಥರಾಗಿದ್ದಾರೆ.

ಅಗಲಿದ ಅಮ್ಮನ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತಾ, ಮರಳಿ ಜನ್ಮವೆತ್ತಿ ಬನ್ನಿ ಎಂಬ ಪ್ರಾರ್ಥನೆಯೊಂದಿಗೆ.

ದುಖ:ತೃಪ್ತ

ಸಂದೇಶ್.ಎಸ್.ಜೈನ್

 

Sunday, July 5, 2020

ನಮ್ಮ ನಿಮ್ಮೆಲ್ಲರ ಪ್ರೀತಿಯ ಅನಿಲ್ ಎಸ್.ಕೆ ಇನ್ನು ನೆನಪು ಮಾತ್ರ
ಅಗಲಿದ ಅನಿಲ್ ರಿಗೆ ಭಾವಪೂರ್ಣ ಶೃದ್ದಾಂಜಲಿ
ಎಂಥ ಶಾಕಿಂಗ್ ನ್ಯೂಸ್. ನಂಬಲಾಗುತ್ತಿಲ್ಲ. ಆದರೂ ಘಟನೆ ನಡೆದೆ ಹೋಗಿದೆ. ನಮ್ಮ ನಿಮ್ಮೆಲ್ಲರ ಪ್ರೀತಿಯ ಸ್ನೇಹಿತರು, ದಾಂಡೇಲಿ ನಗರದ ಸುಪ್ರಸಿದ್ದ ಡ್ಯಾನ್ಸರ್, ಅನಿಲ್ ಎಸ್.ಕೆ ಡ್ಯಾನ್ಸ್ ಅಕಾಡೆಮಿಯ ಸಂಸ್ಥಾಪಕ ಪ್ರವರ್ತಕರು ಆಗಿರುವ ಅನಿಲ್. ಎಸ್.ಕೆ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬರಸಿಡಿಲ ರೂಪದಲ್ಲಿ ಬಂದ ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.  ದಾಂಡೇಲಿಯ ಅದೇಷ್ಟೊ ಮಕ್ಕಳನ್ನು ನೃತ್ಯಗಾರರನ್ನಾಗಿ ಮಾಡಿ ಜಿಲ್ಲೆ, ರಾಜ್ಯಮಟ್ಟದವರೆಗೆ ಗುರುತಿಸುವಂತಾಗಲೂ ಕಾರಣೀಕರ್ತನಾದ ಅನಿಲ್. ಎಸ್.ಕೆ ಮಕ್ಕಳೊಂದಿಗೆ ಮಕ್ಕಳಂತಿದ್ದು, ಮಕ್ಕಳನ್ನು ಬೆಳೆಸಿ, ಪ್ರೋತ್ಸಾಹಿಸಿದ ರೀತಿಯನ್ನು ವರ್ಣಿಸಲು ಅಸಾಧ್ಯ. ಒಬ್ಬ ಪರಿಪಕ್ವ, ಆರೋಗ್ಯವಂತ ನವಚೈತನ್ಯದ 40 ವರ್ಷದ ಯುವಕ ಇನ್ನು ನೆನಪು ಮಾತ್ರ ಅಂದರೆ ಇದೆಂಥ ದುರ್ದೈವ್ಯ.

ಓ, ಭಗವಂತ ಯಾಕೆ ಹಿಂಗೆ ಮಾಡ್ತಿಯಾ, ನೂರಾರು ಕನಸುಗಳನ್ನಿಟ್ಟು ಕಠಿಣ ಪರಿಶ್ರಮದ ಸಾಧನೆಯ ಹಾದಿಯಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದ್ದ ನಮ್ಮ ಅನಿಲ್ ನ ವೇಗವನ್ನು ನಿಲ್ಲಿಸಿ ಬಿಟ್ಟಿಯಲ್ಲ. ಇವತ್ತು ನಗರದ ಸಾಂಸ್ಕೃತಿಕ ಕ್ಷೇತ್ರ ಬಹುದೊಡ್ಡ ಆಸ್ತಿಯನ್ನು ಕಳೆದುಕೊಂಡು ಬಡವಾಗಿದೆ. ನಗರದ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಹೊರಟಿದ್ದ ಅನಿಲ್ ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುವೆ.

ಸಾವು ಬರ್ಬೇಕು, ಆದ್ರೆ ಇಷ್ಟು ಸಣ್ಣ ವಯಸ್ಸಿನಲ್ಲಿ ಅಲ್ಲವೆ ಅಲ್ಲ. ಜೀವನದ ಕಹಿಯನ್ನುಂಡು ಸಿಹಿಯನ್ನು ಉಣ್ಣಲಾರಂಭಿಸುವಾಗ್ಲೆ ಅನಿಲ್ ನಮ್ಮನ್ನೆಲ್ಲ ಬಿಟ್ಟು ಬರಬಾರದ ಲೋಕಕ್ಕೆ ಹೊರಟು ಹೋಗಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಆದರೇನು, ನಮ್ಮ ಮುಂದೆ ಓಡಾಡಿಕೊಂಡಿದ್ದ ಅನಿಲ್ ಅವರಿಗೆ ಓಂ ಶಾಂತಿ ಬಿಟ್ಟು ಬೇರೆ ಏನನ್ನು ಹೇಳಲಾಗದು.

ಓಂ ಶಾಂತಿ.

ಮರಳಿ ಜನ್ಮವೆತ್ತಿ ಬನ್ನಿ,

ದುಖ:ತೃಪ್ತ ಗೆಳೆಯ

ಸಂದೇಶ್.ಎಸ್.ಜೈನ್

 

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...