ಛಲಬಿಡದೆ ಯಶಸ್ಸಿನ ಬೆನ್ನೇರಿದ ನನ್ನ ತಮ್ಮ ಗಂಗಾಧರ ತಳವಾರ
ಜನ್ಮದಿನದ ಸಂಭ್ರಮದಲ್ಲಿ ನನ್ನ ಮುದ್ದು ತಮ್ಮ
ಜನ್ಮದಿನದ ಸಂಭ್ರಮದಲ್ಲಿ ನನ್ನ ಮುದ್ದು ತಮ್ಮ
ಅದೀರಲಿ. ನನ್ನೊಳವಿನ ಗಂಗ್ಯಾ ಅಂದ್ರೆ ಗಂಗಾಧರ ತಳವಾರನಿಗೆ ಇಂದು ಜನ್ಮದಿನದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಜನ್ಮದಿನದ ಸಂಭ್ರಮ ಸಡಗರದಲ್ಲಿರುವ ಗಂಗ್ಯಾ ನಿನಗೆ ಮನದಾಳದ ಹಾರ್ದಿಕ ಶುಭಾಶಯಗಳು. ಜೀವನದಲ್ಲಿ ಮೊದಲ ಬಾರಿಗೆ ತಂದೆಯಾಗಿ ಜನ್ಮದಿನವನ್ನು ಆಚರಿಸುವ ಭಾಗ್ಯವನ್ನು ಕಂಡ ಗಂಗಾಧರನಿಗೆ ಜೀವನದಲ್ಲಿ ಉನ್ನತಿಯನ್ನು ಪ್ರಾಪ್ತಿಸಲಿ ಎಂಬ ಆಶಯದೊಂದಿಗೆ ಮಗದೊಮ್ಮೆ ಶುಭ ಹಾರೈಕೆಗಳು.
ಅಲ್ಲಿ ಇಲ್ಲಿ ಎಂದು ಓಡಾಡುತ್ತಿದ್ದ ವೇಗದ ಯುವಕ ಗಂಗಾಧರ ಈತ ನಮ್ಮ ಗಾಂಧಿನಗರದ ಹಿರಿಯರು ಹಾಗೂ ವಾಲ್ಮೀಕಿ ಸಮಾಜದ ಪ್ರಮುಖರು ಆಗಿರುವ ಬೋರಪ್ಪ ತಳವಾರ ಅವರ ಮೂರು ಜನ ಮಕ್ಕಳಲ್ಲಿ ಒಬ್ಬ. ಮೊದಲನೆಯವರು ಅಣ್ಣ, ಆನಂತರ ಅಕ್ಕ, ಕೊನೆಯವನು ಈ ನಮ್ಮ ರಸಗುಲ್ಲ ಗಂಗ್ಯಾ ಎಂದು ಹೇಳಬೇಕೆಂದಿಲ್ಲ.
ದಾಂಡೇಲಿಯ ಆದರ್ಶ ಶಾಲೆ, ಪರಿಜ್ಞಾನಾಶ್ರಮ ಶಾಲೆ, ಬಂಗೂರನಗರ ಶಾಲೆಯಲ್ಲಿ ಪ್ರಾಥಮಿಕ, ಜೆವಿಡಿಯಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಪಡೆದು, ಆ ಬಳಿಕ ಅಲ್ಲಿ ಇಲ್ಲಿ ಎಂದು ಕಂಪ್ಯೂಟರ್ ಶಿಕ್ಷಣವನ್ನು ಪಡೆದುಕೊಂಡಿದ್ದ ಗಂಗಾಧರ ಕಲಿತ ವಿದ್ಯೆ ಹಾಳಾಗದಿರಲೆಂದು ಅವರಿವರ ಬಳಿ ಕಂಪ್ಯೂಟರ್ ಕೆಲಸ ಮಾಡಿಕೊಂಡು ಜೀವನವನ್ನು ಕಟ್ಟಿಕೊಂಡಿದ್ದ. ಇದರ ನಡುವೆಯೂ ಬಿ.ಕಾಂ ಪದವಿಯನ್ನು ಉನ್ನತ ಅಂಕಗಳೊಂದಿಗೆ ಪಡೆದ ಧನ್ಯತೆ ನಮ್ಮ ಗಂಗ್ಯಾನಿಗಿದೆ. ಆನಂತರ ಸರಕಾರದ ವಿವಿಧ ಉದ್ಯೋಗಗಳಿಗೆ ಸಾಲು ಸಾಲು ಅರ್ಜಿ ಹಾಕುತ್ತಿದ್ದ ಗಂಗಾಧರನಿಗೆ ಕಳೆದ ಕೆಲ ವರ್ಷಗಳ ಹಿಂದೆ ಆತನ ಛಲಬಿಡದ ಪರಿಶ್ರಮದ ಫಲವಾಗಿ ದಕ್ಷಿಣ ಭಾರತ ರೈಲ್ವೆ ವಲಯದಲ್ಲಿ ಉದ್ಯೋಗ ಪ್ರಾಪ್ತಿಯಾಯಿತು.
ಈ ಉದ್ಯೋಗದಿಂದ ಬದುಕು ಬದಲಾಯಿತಾದರೂ, ಗಂಗ್ಯಾನ ಮನಸ್ಸು, ಗುಣ, ಪ್ರೀತಿ, ಆತ್ಮೀಯತೆ ಎಂದೂ ಬದಲಾಗಲಿಲ್ಲ ಎನ್ನುವುದು ಗಂಗಾಧರ ಜೀವನಯೋಗ್ಯತೆಗೆ ಹೆಮ್ಮೆಯಿಂದ ನೀಡಬಹುದಾದ ಬಹುದೊಡ್ಡ ಪಟ್ಟ ಎಂದು ಹೇಳಲು ಒಂದಿಂಚು ಸಂಕೋಚಪಡಲಾರೆ. ಹೃದಯವಂತಿಕೆ, ಗುಣವಂತಿಕೆಯಲ್ಲಿ ನನ್ನನ್ನು ಮೀರಿ ಬೆಳೆದ ಗಂಗಾಧರ ಜೀವನದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡುವ ಸಮಯ ಸನಿಹದಲ್ಲಿದೆ ಎಂದು ಭಾವಿಸಿದವ ನಾನು.
ತಾನಷ್ಟೆ ಬದುಕುವುದಲ್ಲ, ತನ್ನ ಜೊತೆ ಇನ್ನೊಬ್ಬರ ಬದುಕಿಗೂ ನೆರವಾಗಬೇಕೆಂಬ ಮಾನವೀಯ ಸಹೃದಯವನ್ನು ಹೊತ್ತ ಗಂಗಾಧರ ಅಪ್ಪ, ಅಮ್ಮನಿಗೆ ಮುದ್ದಿನ ಮಗನಾಗಿ, ಅಕ್ಕ ಮತ್ತು ಅಣ್ಣನಿಗೆ ಅಕ್ಕರೆಯ ತಮ್ಮನಾಗಿ, ಪ್ರೀತಿಸಿ, ಮುದ್ದಿಸಿ ವರಿಸಿದ ಮಡದಿಗೆ ಮುದ್ದಿನ ಸಂಗಾತಿಯಾಗಿ, ಪುಟ್ಟ ಕಂದನಿಗೆ ಹೆಮ್ಮೆಯ ತಂದೆಯಾಗಿ, ಸಹಸ್ರ್ರಾರು ಗೆಳೆಯರಿಗೆ ಮಿಡುವ ಜೀವವಾಗಿರುವ ಗಂಗಾಧರ ನೀನು ನನ್ನ ಮನದೊಳಗಿನ ಹೃದಯದ ತಮ್ಮ ಎಂದು ಹೇಳಲು ಅಭಿಮಾನದ ಜೊತೆಗೆ ಬಿಗುಮಾನವಿದೆ.
ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಧಾರ್ಮಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಗಂಗಾಧರನ ಪರಿಶ್ರಮದ ಜೀವನ ಜೈತ್ರಾ ಯಾತ್ರೆಗೆ ಸತ್ಪುರುಷ ದಾಂಡೇಲಪ್ಪನ ಅನುಗ್ರಹ ಸದಾ ಇರಲಿ. ಜೀವನದಲ್ಲಿ ಆರೋಗ್ಯ, ಸಮೃದ್ದಿ, ನೆಮ್ಮದಿ ನನ್ನ ಗಂಗಾಧರನ ಆಸ್ತಿಯಾಗಲೆಂದು ಹಾರೈಸುತ್ತೇನೆ.
ಶುಭವಾಗಲಿ, ಬಾಳು ಬೆಳಕಾಗಲಿ.
ನಿಮ್ಮವ
ಸಂದೇಶ್.ಎಸ್.ಜೈನ್



 













 
 
