Tuesday, November 27, 2018

ಸಹನಾಮೂರ್ತಿ ಶೇಖರಣ್ಣನಿಗೆ ಜನ್ಮದಿನದ ಸಂಭ್ರಮ
                                                   ಜೀವನ ಸವಾರಿಯಲ್ಲಿ ಯಶಸ್ಸಿನ ನಡೆಯತ್ತ ಶೇಖರ ಪೂಜಾರಿ




ಸಹನಾಮೂರ್ತಿ ಶೇಖರಣ್ಣನಿಗೆ ಜನ್ಮದಿನದ ಸಂಭ್ರಮ
ಜೀವನ ಸವಾರಿಯಲ್ಲಿ ಯಶಸ್ಸಿನ ನಡೆಯತ್ತ ಶೇಖರ ಪೂಜಾರಿ

ಅವರೊಬ್ಬರು ಸಾಂಸ್ಕೃತಿಕ ಮನಸ್ಸನ್ನು ಹೊಂದಿರುವ ಬಹುದೊಡ್ಡ ಕಲಾಭಿಮಾನಿ. ಕೆಲಸದಲ್ಲಿ ಸದಾ ಬ್ಯುಜಿಯಿದ್ದರೂ ಸಾಮಾಜಿಕ, ಧಾರ್ಮಿಕ, ಕ್ರೀಡಾ ಹೀಗೆ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳಿಗೆ ಬ್ಯುಜಿ ಶೆಡ್ಯೂಲ್ ನಡುವೆಯು ಈಜಿಯಾಗಿ ಹೋಗಿ ಬರುತ್ತಾರೆ ಮತ್ತು ಅಷ್ಟೆ ಪ್ರೀತಿಯಿಂದ ಪ್ರೋತ್ಸಾಹಿಸುತ್ತಾರೆ. ಜೀವನದಲ್ಲಿ ಅನೇಕ ಎಡರು-ತೊಡರುಗಳನ್ನು ಮೆಟ್ಟಿ ಒಬ್ಬ ಸಮರ್ಥ ಬ್ಯುಜಿನೆಸ್ ಮ್ಯಾನ್ ಆಗಿ ಗಮನ ಸೆಳೆದವರು. ಜೀವನದಲ್ಲೆಂದೂ ಯಾರ ಬಳಿಯೂ ಕೋಪಿಸಿಕೊಳ್ಳದ, ವಿಶೇಷವಾಗಿ ಮುದ್ದಿನ ಮಡದಿಯ ಜೊತೆಯೂ ಒಂದು ದಿನವೂ ಸಿಟ್ಟು ಪ್ರದರ್ಶಿಸದ ಸಹನಾಮೂರ್ತಿ ಇವರು. ಇವರ್ಯಾರು ಅಂದುಕೊಂಡಿರಿ. ನನ್ನಷ್ಟೆ ಹೈಟಿರುವ ನನಗಿಂತ ಹೆಚ್ಚು ಸ್ಮಾರ್ಟ್ ಇರುವ ನನ್ನಣ್ಣ ಶೇಖರ ಪೂಜಾರಿಯವರು. ಅಂದ್ರೆ ದಾಂಡೇಲಿಯ ಖ್ಯಾತ ಬುಕ್ ಸ್ಟಾಲ್ ಆಗಿರುವ ಶೇಖರ್ ಸ್ಟೋರ್ ಮಾಲಿಕರಾದ ಹೈಟ್ ಕಮ್ಮಿ ಪೈಟ್ ಜಾದಾ ಎಂಬಂತಿರುವ ಸಿಂಗಂ ಎಂದೆ ಹೇಳಬಹುದಾದ ಎಲ್ಲರ ಮೆಚ್ಚಿನ ಶೇಖರಣ್ಣ. ಇಂದು ನನ್ನ ಪೇಸ್ ಬುಕ್ ಪುಟ ಅವರಿಗಾಗಿ ಅರ್ಪಣೆ.

ಇಂದು ನಮ್ಮ ಶೇಖರಣ್ಣನಿಗೆ ಹುಟ್ಟುಹಬ್ಬದ ಸಂಭ್ರಮ. ಅವರ ಜೀವನದಲ್ಲಿ ಅತ್ಯಂತ ಹರ್ಷದ ಹುಟ್ಟುಹಬ್ಬ ಈ ಭಾರಿಯದ್ದಾಗಿದೆ. ನನಗೆ ಅವರ ಬಗ್ಗೆ ಬಹಳ ಲವ್ವ್ ಕಣ್ರೀ. ಯಾಕ್ಗೊತ್ತಾ ಅವರು ನಮ್ಮೂರಿನವರು. ಎಷ್ಟಾದರೂ ನಮ್ಮೂರಿನವರಂದ್ರೆ ಸ್ವಲ್ಪ ಪ್ರೀತಿ ಜಾಸ್ತಿನೆ ಅಲ್ವೆ. ಅದೀರಲಿ, ಜನ್ಮದಿನದ ಈ ಶುಭ ಸಂದರ್ಭದಲ್ಲಿ ನನ್ನಣ್ಣ ಶೇಖರಣ್ಣನವರಿಗೆ ತುಂಬು ಹೃದಯದಿಂದ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಈಗ ಶೇಖರಣ್ಣ ಎಲ್ಲಿಯವರು, ಹೇಗಿದ್ದರೂ, ಹೆಂಗಾದರೂ ನೋಡೆ ಬಿಡೋಣ ಅಲ್ವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾವುಂದ ಗ್ರಾಮದಲ್ಲಿ ಜನ್ಮವೆತ್ತ ಹೆಮ್ಮೆಯ ಕುಡಿ ನಮ್ಮ ಶೇಖರಣ್ಣ. ಅಲ್ಪ-ಸ್ವಲ್ಪ ಕೃಷಿ ಜಮೀನಿನಲ್ಲೆ ಬದುಕು ಕಟ್ಟಿಕೊಂಡಿದ್ದ ಸುಸಂಸ್ಕೃತ ಮನಸ್ಸಿನ ನಾರಾಯಣ ಪೂಜಾರಿ ಹಾಗೂ ಎಲ್ಲರಿಗೂ ಮುದ್ದು ಮಾಡುವ ಸ್ವಚ್ಚ ಹೃದಯದ ಸಿದ್ದು ದಂಪತಿಗಳ ಹೆಮ್ಮೆಯ ಸುಪುತ್ರ ಈ ನಮ್ಮ ಶೇಖರಣ್ಣ. ಶೇಖರಣ್ಣ ನೋಡಲು ಕುಳ್ಳಗೆ ಇದ್ದರೂ ಹಿರಿಮಗ ಅಂದ್ರೆ ಜೇಷ್ಟಪುತ್ರ. ನಮ್ಮ ಶೇಖರಣ್ಣ ಅವರಿಗೆ ಜನಾರ್ಧನ ಎಂಬ ಮಮತೆಯ ತಮ್ಮ ಇದ್ದಾರೆ.

ಶೇಖರಣ್ಣನವರ ಕುಟುಂಬವೇನೂ ಬಹಳ ಶ್ರೀಮಂತಿಕೆಯ ಕುಟುಂಬವಂತೂ ಅಲ್ಲವೆ ಅಲ್ಲ. ಒಟ್ಟಿನಲ್ಲಿ ಊಟಕ್ಕೇನೂ ಬರಗಾಲವಿಲ್ಲದ ಕುಟುಂಬವೆನ್ನಿ. ಹೊಲದಲ್ಲಿ ಬಂದದ್ದು ಮನೆಗಷ್ಟೆ ಸೀಮಿತ. ಮಾರಾಲಂತೂ ಉಳಿಯುತ್ತಿರಲಿಲ್ಲ. ಹಾಗಾಗಿ ಅವರಪ್ಪ ಹೊಲ ಚಟುವಟಿಕೆಯ ಜೊತೆಗೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಒಟ್ಟಿನಲ್ಲಿ ಮಕ್ಕಳಿಬ್ಬರಿಗೂ ಏನೂ ಕೊರತೆಯಾಗದಂತೆ ಜೋಪಾನವಾಗಿ ಬೆಳೆಸಿದ ಹೆಮ್ಮೆ ನಾರಾಯಣ ದಂಪತಿಗಳಿಗಿದೆ.

ನಮ್ಮ ಶೇಖರಣ್ಣ ಅವರು ನೋಡಲು ನನ್ನಂತೆ ಸ್ವಲ್ಪ ಗಿಡ್ಡನಾಗಿದ್ದರೂ ನನಗಿಂತಲೂ ಹೆಚ್ಚು ಚುರುಕು. ಅದು ಪುಟಾಣಿ ಮಗುವಾಗಿದ್ದಾಗ ಬಹಳ ಸ್ಮಾರ್ಟ್ ಆಗಿದ್ದ ಶೇಖರಣ್ಣನವರನ್ನು ಕೆಳಗಡೆ ಬಿಡುತ್ತನೆ ಇರಲಿಲ್ಲವಂತೆ. ಅವರಿವರೆಂದು ಎತ್ತಿ ಮುದ್ದಾಡುವವರೇ ಜಾಸ್ತಿ. ಅಷ್ಟು ಸ್ಮಾರ್ಟ್ ಇದ್ದವರು ನಮ್ಮ ಶೇಖರಣ್ಣನವರು. ಈಗಲೂ ಸ್ಮಾರ್ಟೆ ಇದ್ದಾರೆ ಬಿಡಿ.

ನಮ್ಮ ಶೇಖರಣ್ಣ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಸರಕಾರಿ ಹಿ.ಪ್ರಾ.ಶಾಲೆ ನಾವುಂದಲ್ಲೆ ಪಡೆದು ಮುಂದೆ ಹೈಸ್ಕೂಲ್ ಶಿಕ್ಷಣವನ್ನು ಸಹ ನಾವುಂದದಲ್ಲಿದ್ದ ಸರಕಾರಿ ಪ್ರೌಢಶಾಲೆಯಲ್ಲಿ ಪಡೆದರು. ವಿದ್ಯಾರ್ಥಿಯಾಗಿರುವಾಗಲೆ ಸುಮ್ಮನೆ ಕೂರುವ ವ್ಯಕ್ತಿ ನಮ್ಮ ಶೇಖರಣ್ಣವಲ್ಲ. ಮನೆಯಲ್ಲಿದ್ದ ದನ ಕರುಗಳಿಗೆ ನೀರುಣಿಸಿ, ಹಸಿರ ಮೇವು ತಂದು, ಹಾಲು ಕರೆದು ಶಾಲೆಗೆ ಹೋಗುವ ರೂಢಿಯನ್ನು ಹೊಂದಿದ್ದರು. ಶಿಕ್ಷಣದ ಖರ್ಚಿಗಾಗಿ ತಮ್ಮ ಸ್ವಂತ ಸ್ವಲ್ಪ ಜಾಗದಲ್ಲಿ ವೀಳ್ಯದೆಲೆ, ತರಕಾರಿ ಕೃಷಿ ಮಾಡಿ, ಅದರಲ್ಲಿ ಬಂದ ಬೆಳೆಯನ್ನು ಮಾರಿ ಶಿಕ್ಷಣವನ್ನು ಪಡೆದ ಧನ್ಯತೆ ನಮ್ಮ ಶೇಖರಣ್ಣ ಅವರಿಗಿದೆ. ಇನ್ನೂ ವಿದ್ಯಾರ್ಥಿಯಾಗಿರುವಾಗ ಅತ್ಯುತ್ತಮ ಕಬಡ್ಡಿ ಅಟಗಾರರಾಗಿ ಊರಲ್ಲಿ ಹೆಸರನ್ನು ಗಳಿಸಿಕೊಂಡಿದ್ದರು. ಮೂರ್ತಿ ಚಿಕ್ಕದಾದರೂ ಕಬಡ್ಡಿ ರೈಡಿಂಗ್ ಮಾಡುತ್ತಿರುವಾಗ ಯಾರೇ ಹಿಡಿದರೂ ದಬಕ್ಕನೆ ಹಾರಿ ಅವರನ್ನು ಓಟ್ ಮಾಡುತ್ತಿದ್ದ ರೀತಿಯನ್ನು ಇನ್ನೂ ಅವರೂರಿನ ಗೆಳೆಯರು ನೆನಪಿಸಿಕೊಳ್ಳುತ್ತಾರೆ.

ಹೈಸ್ಕೂಲ್ ಆದ ನಂತರ ಮುಂದೆ ಪಿಯುಸಿ ಮಾಡುತ್ತೇನೆಂದವರೂ ಯಾಕೋ ಏನೋ ದಾಂಡೇಲಿಯಲ್ಲಿದ್ದ ಸಂಬಂಧಿಕರ ಕಿರಾಣಿ ಅಂಗಡಿಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡಲು ಎರಡು ಜೊತೆ ಬಟ್ಟೆಯೊಂದಿಗೆ ಬಂದವರು ನಮ್ಮ ಶೇಖರಣ್ಣ ಅವರು.

ಇನ್ನೂ ಹದಿನೇಳು ವಯಸ್ಸು ಮುಗಿಯದ ಯುವಕ ಶೇಖರ ಅವರು ದಾಂಡೇಲಿಗೆ ಬಂದು ದಾಂಡೇಲಿಯಲ್ಲಿ ತನ್ನ ಸಂಬಂಧಿಕರ ಕಿರಾಣಿ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಸ್ವಲ್ಪ ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ಆನಂತರ ಸ್ವತಂತ್ರವಾಗಿ ಏನಾದರೂ ಮಾಡಬೇಕೆಂದು ಸಂಕಲ್ಪಿಸಿಕೊಂಡು ಒಂದು ಕಾಲದಲ್ಲಿ ಹೆಸರಾಂತ  ಯಕ್ಷಗಾನ ಕಲಾವಿದರಾಗಿದ್ದ, ದೇವರ ಮನಸ್ಸನ್ನು ಹೊಂದಿದ್ದ ದಿ: ವಿಠ್ಠಲ ರಾವ್ ಅವರ ಸಂತೋಷ್ ಹೊಟೆಲ್ ಕಟ್ಟಡದಲ್ಲೆ ಒಂದು ಸಣ್ಣ ಅಂಗಡಿಯನ್ನು ಶೇಖರ್ ಅವರಿಗೆ ಅಲ್ಪ ಮೊತ್ತಕ್ಕೆ ಬಾಡಿಗೆಗೆ ನೀಡಿ ಒಂದು ಅಂಗಡಿ ಮಾಡಿಕೊ ಎಂದು ಆಶೀರ್ವದಿಸಿದರು. ನಾನು ಈ ಸಂದರ್ಭದಲ್ಲಿ ದಿ: ವಿಠ್ಠಲ ರಾವ್ ಅವರನ್ನು ಸ್ಮರಿಸಿಕೊಳ್ಳಲು ಬಯಸುತ್ತೇನೆ. ಬಹುತೇಕ ಜನರನ್ನು ದಾಂಡೇಲಿಗೆ ಕರೆಯಿಸಿ ಅವರಿಗೆ ಬದುಕು ಕೊಟ್ಟ ದಿ: ವಿಠ್ಠಲ ರಾವ್ ಅವರ ಹೃದಯವಂತಿಕೆಗೆ ಶಿರಬಾಗಿ ನಮಿಸಿಯೆ ಮುಂದುವರಿಯುತ್ತೇನೆ.

ತನ್ನ ಮಕ್ಕಳನ್ನು ಪ್ರೀತಿಸಿದಂತೆ ದಿ: ವಿಠ್ಠಲ ರಾವ್ ಅವರು ಶೇಖರಣ್ಣನವರನ್ನ ಪ್ರೀತಿಸಿ, ಬೆಳೆಸಿ, ಪ್ರೋತ್ಸಾಹಿಸಿದರು. ಸಂತೋಷ್ ಹೋಟೆಲ್ ಕಟ್ಟಡದಲ್ಲಿ ಒಂದು ಸಣ್ಣ ಅಂಗಡಿಯನ್ನಿಟ್ಟುಕೊಂಡು ಪಾನ್ ಅಂಗಡಿಯ ಜೊತೆಗೆ ಬುಕ್ ಸ್ಟಾಲನ್ನು ಪ್ರಾರಂಭಿಸಿ, ಹಂತ ಹಂತವಾಗಿ ಆರ್ಥಿಕ ಪ್ರಗತಿ ಸಾಧಿಸಿ ಮುನ್ನಡೆದವರು ನಮ್ಮ ಶೇಖರಣ್ಣನವರು. ಹೀಗೆ ಇಲ್ಲಿ ಬಹಳ ವರ್ಷಗಳವರೆಗೆ ಅಂಗಡಿಯನ್ನಿಟ್ಟುಕೊಂಡು ಪ್ರಗತಿ ಸಾಧಿಸಿದ ಶೇಖರಣ್ಣನವರು ಅವರ ವ್ಯವಹಾರ ಬೆಳೆದಂತೆ ಅವರಿಗೆ ದೊಡ್ಡ ಅಂಗಡಿಯ ಅವಶ್ಯಕತೆಯಿತ್ತು.

ಇದಾದ ಬಳಿಕ ವಿಘ್ನೇಶ್ವರ ಗ್ಯಾಸ್ ಏಜೆನ್ಸಿಯವರ ಕಟ್ಟಡದಲ್ಲಿ ದೊಡ್ಡ ಅಂಗಡಿಯನ್ನು ಬಾಡಿಗೆಗೆ ಪಡೆದುಕೊಂಡ ಶೇಖರಣ್ಣ ನವರು ಅಲ್ಲೆ ತಮ್ಮ ಹೆಸರಿನ ಅಂದ್ರೆ ಶೇಖರ್ ಸ್ಟೋರ್ಸ್ ಎಂಬ ಬುಕ್ ಸ್ಟಾಲನ್ನು ಪ್ರಾರಂಭಿಸಿ ವರ್ಷಗಳು ಬಹಳ ಉರುಳಿವೆ. ತನ್ನ ಕಠಿಣ ಪರಿಶ್ರಮ, ನಿರಂತರ ಪ್ರಯತ್ನ, ಸಾಧನೆಯ ಮೂಲಕ ಶೇಖರ್ ಸ್ಟೋರ್ಸ್ ಇಂದು ದಾಂಡೇಲಿಯಲ್ಲಿ ಜನಖ್ಯಾತಿ ಪಡೆದ ಬುಕ್ ಸ್ಟಾಲ್ ಆಗಿ ಗಮನ ಸೆಳೆಯುತ್ತಿದೆ.

ಅತ್ಯುತ್ತಮ ವ್ಯಾಪಾರಸ್ಥರಾಗಿ, ಗ್ರಾಹಕರೊಂದಿಗೆ ಉತ್ತಮ ಬಾಂದವ್ಯ ಹಾಗೂ ಉತ್ತಮ ಸಂವಹನ ಸಂಪರ್ಕವನ್ನು ಸಾಧಿಸಿರುವ ಶೇಖರಣ್ಣ ನವರು ತನ್ನ ಈ ವ್ಯವಹಾರಕ್ಕೆ ತನ್ನ ತಮ್ಮನಾದ ಜನಾರ್ಧನ ರವರನ್ನು ಬಳಸಿಕೊಂಡು, ರಾಮ ಲಕ್ಷ್ಮಣನಿಗೆ ಆಸರೆಯಾದಂತೆ ತಮ್ಮನಿಗೂ ಆಸರೆಯಾದ ಧನ್ಯತೆಯನ್ನು ಹೊಂದಿದ್ದಾರೆ.

ವ್ಯಾಪಾರಸ್ಥರು ವ್ಯಾಪಾರ ಬಿಟ್ಟರೇ, ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆ ಬಹುತೇಕರಿಗಿದೆ. ಆದ್ರೆ ಅದು ತಪ್ಪು. ಒತ್ತಡದ ನಡುವೆಯೂ ಸಮಾಜಮುಖಿ ಚಟುವಟಿಕೆಗಳಿಗೆ ಶೇಖರಣ್ಣ ನಂತಹ ವ್ಯಾಪಾರಸ್ಥರು ಸಹಕರಿಸುತ್ತಿರುವುದನ್ನು ನಾವು ನೀವೆಲ್ಲರೂ ಮೆಚ್ಚಲೆಬೇಕು.

ತನ್ನ ವ್ಯವಹಾರದ ಜೊತೆ ಬೆಳ್ಳಂ ಬೆಳಗ್ಗೆ ಶಟ್ಲ್ ಬ್ಯಾಟ್ ಹಿಡಿದು ಬ್ಯಾಡ್ಮಿಂಟನ್ ಅಂಗಳಕ್ಕಿಳಿಯುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಶೇಖರಣ್ಣನವರು ಅತ್ಯುತ್ತಮ ಕ್ರೀಡಾಪಟುವಾಗಿ ಗಮನ ಸೆಳೆಯುತ್ತಿದ್ದಾರೆ. ಶಟ್ಲ್ ಆಡಲು ಹೈಟ್ ಬೇಕೆಂಬುವುದಿಲ್ಲ. ಹೈಟ್ ಕಡಿಮೆಯಿದ್ದರೂ ಟೆಕ್ನಿಕ್ ಬೇಕು ಅನ್ನುವ ಶೇಖರ ಅವರ ಆಟದ ವೈಖರಿ ಅತೀ ಹೆಚ್ಚು ಮನರಂಜನೆ ಕೊಡುವುದರಲ್ಲಿ ಯಾವ ಅನುಮಾನವು ಇಲ್ಲ.

ಸಮಾಜಮುಖಿಯಾಗಿ ನಮ್ಮ ಶೇಖರಣ್ಣ:
ಹೌದು ಕಣ್ರೀ. ಒತ್ತಡದ ನಡುವೆಯೂ ನಮ್ಮ ಶೇಖರಣ್ಣ ಸಮಾಜಮುಖಿಯಾಗಿ ಇರುವುದೆ ನಮ್ಮ ಭಾಗ್ಯ. ಉದ್ಯಮಿ ಹಾಗೂ ಡೈನಮಿಕ್ ಪರ್ಸನಾಲಿಟಿಯ ಎಸ್.ಪ್ರಕಾಶ ಶೆಟ್ಟಿಯವರ ಅಧ್ಯಕ್ಷತೆಯ ಕಲಾಶ್ರೀ ಸಂಸ್ಥೆಯ ಸಕ್ರೀಯ ಪದಾಧಿಕಾರಿಯಾಗಿ ಹಾಗೂ ದಾಂಡೇಲಿ ಬ್ಯಾಡ್ಮಿಂಟನ್ ಅಸೊಶಿಯೇಶನ್ ಇದರ ಪದಾಧಿಕಾರಿಯಾಗಿ ತನ್ನ ಕೊಡುಗೆಯನ್ನು ಸದ್ದಿಲ್ಲದೆ ನೀಡುತ್ತಿರುವ ಶೇಖರಣ್ಣ ಅವರು ನನಗೆ ಗೊತ್ತಿರುವ ಪ್ರಕಾರ ಸಂಕಷ್ಟದಲ್ಲಿರುವ ಹಾಗೂ ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವನ್ನು ನೀಡುತ್ತಾ ಬಂದಿದ್ದಾರೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವ ಅವರ ಸೇವಾ ಔದಾರ್ಯಕ್ಕೆ ಬಿಗ್ ಸೆಲ್ಯೂಟ್ ಹೇಳಲೆಬೇಕು.

ತುಳುನಾಡ ಹೆಮ್ಮೆಯ ಕುವರ ನಮ್ಮ ಶೇಖರಣ್ಣ ಅವರಿಗೆ ತುಳುವಲ್ಲಿ ಹೇಳುವುದಾದರೇ ಪೊರ್ಲಕಂಟುದ ಮೊಕ್ಯೆದ ಜವನೆ. ಶೇಖರಣ್ಣೆ ಪಿಟಿ ಪಿಟಿ ನಡುಪ್ಪನೈನು ತೂವರನೆ ಒಂಜಿ ಪೊರ್ಲು. ಹೀಗಿರುವ ನಮ್ಮ ಶೇಖರಣ್ಣ ನವರ ಜೀವನ ಕಷ್ಟದಿಂದ ಇಷ್ಟದ ಕಡೆಗೆ ಸಾಗುತ್ತಿದೆ. ಇದಕ್ಕವರ ಪ್ರಾಮಾಣಿಕ ದುಡಿಮೆ, ಬೆವರ ಹನಿಯೆ ಪ್ರಮುಖ ಕಾರಣ.

ಈ ವರ್ಷ ಅವರಿಗೆ ಜೀವನದಲ್ಲಿ ಅತ್ಯಂತ ಮಹತ್ವದ ವರ್ಷವಾಗಿದೆ. ಜೀವನದಲ್ಲಿ ಯಾವುದು ಅಸಾಧ್ಯವೆಂದೂ ಬಗೆದಿದ್ದರೋ ಅದೇ  ಸಾಧ್ಯವಾಗಿದೆ. ಅವರ ಪ್ರಾಂಜಲ ಮನಸ್ಸಿನ ಪ್ರಾಮಾಣಿಕ ಪ್ರಯತ್ನಕ್ಕೆ ಭಗವಂತ ದಿವ್ಯ ಆಶೀರ್ವಾದವನ್ನು ನೀಡಿ ಹರಸಿ, ಆಶೀರ್ವದಿಸಿದ್ದಾನೆ. ಒಂದು ರೀತಿಯಲ್ಲಿ ಹೇಳುವುದಾದರೇ ಅತ್ಯಂತ ಸಂತಸದ ವರ್ಷ ಈ ವರ್ಷ ಶೇಖರಣ್ಣವರದ್ದಾಗಿದೆ.

ಜೀವನದಲ್ಲಿ ಹಲವಾರು ನೋವು-ನಲಿವುಗಳನ್ನು ಉಂಡು, ಶ್ರಮವಹಿಸಿ ಪ್ರಗತಿಯೆಡೆಗೆ ಹೆಜ್ಜೆಯನ್ನೂರಿದ ಶೇಖರಣ್ಣನವರ ಜೀವನದ ಯಶಸ್ವಿ ಸವಾರಿಗೆ ಅವರಪ್ಪ ಹಾಗೂ ಅವರಮ್ಮನ ಆಶೀರ್ವಾದ, ಒಡಹುಟ್ಟಿದ ತಮ್ಮನ ಸಹಕಾರ, ಕೈ ಹಿಡಿದ ಪತ್ನಿ, ಶಾಂತ ಸ್ವಭಾವದ ಶಾಂತ ರವರ ಅಕ್ಕರೆಯ ಅಭಿಮಾನದ ವಾತ್ಸಲ್ಯ, ಭವಿಷ್ಯದ ಕನಸು ನನಸಾಗಿಸಲು ಜನ್ಮವೆತ್ತ ಮುದ್ದಿನ ಮಗಳು ತನಿಶಾಳ ಮುಗುಳ್ನಗೆ, ಕುಟುಂಬಸ್ಥರ, ಬಂಧುಗಳ, ಗೆಳೆಯರ ಪ್ರೀತಿ ಸಹಕಾರವೂ ಪ್ರಮುಖ ಕಾರಣ.

ನನ್ನ ಪ್ರೀತಿಯ ಅಣ್ಣ ಶೇಖರಣ್ಣ ನಿಮಗೆ ಮಗದೊಮ್ಮೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮವ

ಸಂದೇಶ್.ಎಸ್.ಜೈನ್

 


2 comments:

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...