Thursday, June 27, 2019

ಕೈ ಮುಗಿದು ಬೇಡುವೆ, ದಯವಿಟ್ಟು ಈ ಬರಹವನ್ನು ಓದಿ
ಎಲ್ಲರ ಮೆಚ್ಚಿನ ಸುಭಾನ.ಐ. ಖುದ್ದನವರ ಇನ್ನಿಲ್ಲ
ಮಾರಕ ಕ್ಯಾನ್ಸರಿಗೆ ಬಲಿಯಾದ ಸುಭಾನ
ಪುಟ್ಟ ಕಂದಮ್ಮಗಳನ್ನು ಬಿಟ್ಟು ಹೋದ ಸುಭಾನ
ಆ ಕಂದಮ್ಮಗಳ ಭವಿಷ್ಯ ಕಟ್ಟೋಣ ಬನ್ನಿ.
ಅತ್ಯಂತ ನೋವಿನಿಂದಲೆ ಬರೆಯಲು ಅಣಿಯಾಗಿದ್ದೇನೆ ಬಂಧುಗಳೇ. ಕೆಲವೊಬ್ಬರ ಜೀವನವೆ ಹೀಗೆ, ಬಡವನಾಗಿದ್ದರೂ ಬೆವರು ಸುರಿಸಿ ದುಡಿದು, ಭವಿಷ್ಯದ ಕನಸುಗಳನ್ನು ಬೆನ್ನತ್ತಿ ಶ್ರಮಿಸುವ ಶ್ರಮಸಾಧಕರಲ್ಲಿ ಅನೇಕರು ಯಶಸ್ವಿಯಾದರೇ, ಇನ್ನೂ ಅನೇಕರು ವಿಧಿಯ ಕ್ರೂರತ್ವಕ್ಕೆ ಬಲಿಯಾಗುತ್ತಿರುವುದು ಮಾತ್ರ ದುರಂತ.

ಇಂಥಹ ದುರಂತ ಅಂತ್ಯವನ್ನು ಕಂಡವರು ನಮ್ಮ ದಾಂಡೇಲಿಯ ಶ್ರಮ ಜೀವಿ ಸುಭಾನ .ಐ. ಖುದ್ದುನವರ. ಮಾರಕ ಕ್ಯಾನ್ಸರಿಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಸುಭಾನ ಅವರನ್ನು ನೋಡಲು ಕೆಲ ದಿನಗಳ ಹಿಂದೆ ಅವರ ಮನೆಗೆ ಭೇಟಿ ನೀಡಿ, ಅವರ ಬಗ್ಗೆ ಹಾಗೂ ಅವರೆರಡು ಪುಟ್ಟ ಕಂದಮ್ಮಗಳ ಬಗ್ಗೆ ತಮ್ಮೆಲ್ಲರ ಸಹಾಯದ ನಿರೀಕ್ಷೆಯನ್ನಿಟ್ಟು ಸಾಮಾಜಿಕ ಜಾಲತಾಣದಲ್ಲಿ ಬರೆಯಬೇಕೆಂದು ಹಂಬಲಿಸಿದ್ದೆ. ಆದರೆ ನನ್ನ ಕ್ಯಾರ್ಲೆಸ್ ಸ್ವಭಾವದಿಂದಾಗಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆಯಲಾಗಲಿಲ್ಲ. ಇಂದು ಕಂಪ್ಯೂಟರ್ ಮುಂದೆ ಕೂತು ಅವರ ಬಗ್ಗೆ ಬರೆಯಲು ಅಣಿಯಾಗುವ ಮುಂಚೆ ಅವರ ಮೊಬೈಲಿಗೆ ಕರೆ ಮಾಡಿದರೇ ನಮ್ಮ ಸುಭಾನಿ ಇಂದು ಮುಂಜಾನೆ ಮೃತಪಟ್ಟರೆನ್ನುವ ಅಘಾತಕಾರಿ ಸುದ್ದಿ ನನಗೆ ತಡೆದುಕೊಳ್ಳಲಾಗಲಿಲ್ಲ. ಈ ಹಿಂದೆಯೆ ಅವರ ಬಗ್ಗೆ ಬರೆಯಬೇಕಾಗಿದ್ದ ನಾನು ಅವರ ಇಹಲೋಕ ತ್ಯಜಿಸಿದ ಮೇಲೆ ಬರೆಯಬೇಕಾಯಿತಲ್ಲ ಎಂಬ ನೋವಿನೊಂದಿಗೆ ಬರೆಯಲು ಹೊರಟಿದ್ದೇನೆ. ಅದು ಸುಭಾನಿಯವರ ಕುಟುಂಬಕ್ಕೆ ನೀವೆಲ್ಲರೂ ಸಾಧ್ಯವಾದಷ್ಟು ಮಟ್ಟಿಗೆ ಆರ್ಥಿಕ ಆಸರೆಯಾಗಬೇಕೆಂಬ ವಿನಮ್ರ ಪ್ರಾರ್ಥನೆಯ ಮನವಿಯೊಂದಿಗೆ,

ಬಂಧುಗಳೇ, ನಮ್ಮ ಸುಭಾನ ಅವರು ದಾಂಡೇಲಿ ಸಮೀಪದ ಹಾಲಮಡ್ಡಿ ನಿವಾಸಿಯಾಗಿದ್ದವರು. ಅಂದ ಹಾಗೆ ಅವರು ಸೆಂಟ್ರಿಂಗ್ ಚಾಲಕರಾಗಿ ಟ್ರ್ಯಾಕ್ಸ್ ಓಡಿಸುತ್ತಿದ್ದರು. ಕಳೆದ 10 ವರ್ಷಗಳಿಂದ ಕಾಗದ ಕಾರ್ಖಾನೆಯಲ್ಲಿ ಕ್ಯಾಜುವಲ್ ಕಾರ್ಮಿಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಹಾಗಾಗಿ ಅವರು ಪೇಪರ್ ಮಿಲ್ಲಿನ ಸ್ಟಾಪ್ ಕ್ವಾಟ್ರಸ್ ನಿವಾಸಿಯಾಗಬೇಕಾಯಿತು.

ಕಾಗದ ಕಾರ್ಖಾನೆಯ ಕೆಲಸದ ಜೊತೆಗೆ ತನ್ನ ಸಂಸಾರದ ರಥವನ್ನು ಸಾಗಿಸಲು ಸೆಂಟ್ರಿಂಗ್ ಡ್ರೈವರ್ ಆಗಿಯೂ ಕೆಲಸ ಮಾಡುತ್ತಿದ್ದವರು ಇದೇ ನಮ್ಮ ಸುಭಾನಿಯವರು. ಒಟ್ಟಿನಲ್ಲಿ ಯಾರ ಹಂಗಿಲ್ಲದೇ ಕಷ್ಟವಾದರೂ ಇಷ್ಟದಂತೆ ಬದುಕನ್ನು ಕಟ್ಟಿಕೊಂಡವರು ಇವರಾಗಿದ್ದರು.

ಆದರೆ ವಿಧಿಯಾಟಕ್ಕೆ ತಡೆ ಒಡ್ಡುವವರು ಯಾರು:?
ಆದರೆ ವಿಧಿಯಾಟಕ್ಕೆ ತಡೆ ಒಟ್ಟುವವರು ಯಾರು ಎಂಬ ಮಮ್ಮಲ ಮರುಗುವ ಪ್ರಶ್ನೆಗೆ ಉತ್ತರ ಎಲ್ಲಿದೆಯಲ್ಲವೆ. ನಮ್ಮ ಸುಭಾನಿಯವರಿಗೆ ಕಳೆದ ಏಳೆಂಟು ತಿಂಗಳ ಹಿಂದೆ ಒಮ್ಮೆಲೆ ಅನಾರೋಗ್ಯ ಕಾಡಿಸಿತು. ದಿನದಿಂದ ದಿನಕ್ಕೆ ರೋಗ ಉಲ್ಬಣಗೊಳ್ಳಲು ಪ್ರಾರಂಭವಾಯಿತು. ಎಲ್ಲ ತಪಾಸಣೆಯಾದ ಬಳಿಕ ಗೊತ್ತಾಗಿದ್ದು, ನಮ್ಮ ಸುಭಾನಿಯವರು ಮಾರಕ ಕ್ಯಾನ್ಸರಿಗೆ ತುತ್ತಾಗಿದ್ದರೆ ಎನ್ನುವುದನ್ನು ಅವರ ಮಡದಿ ಹಾಗೂ ಕುಟುಂಬಸ್ಥರಿಗೆ ಅರಗಿಸಿಕೊಳ್ಳಲೆ ಆಗಿಲ್ಲ. ಆದರೂ ಸಾವರಿಸಿಕೊಂಡು ಅವರ ಮಡದಿ ಮತ್ತು ಕುಟುಂಬಸ್ಥರು ದೇವರ ಮೇಲೆ ಭಾರ ಹಾಕಿ ಸಣ್ಣ ಮಗುವಿನಂತೆ ಜೋಪನವಾಗಿ ಸುಭಾನಿಯವರನ್ನು ನೋಡಿಕೊಳ್ಳಲಾರಂಭಿಸಿದರು.

ಆದರೆ ಮಡದಿ, ತಾಯಿ ಹಾಗೂ ಕುಟುಂಬಸ್ಥರ ಸೇವೆ ಸಾಕೆಂದು ವಿಧಿ ನಮ್ಮ ಸುಭಾನಿಯವರನ್ನು ಇಂದು ಬೆಳಗ್ಗೆ ತನ್ನೆಡೆಗೆ ಕರೆದುಕೊಂಡಿದ್ದಾನೆ. ಕಳೆದ ಒಂದು ವರ್ಷದಿಂದ ಮಾನಸಿಕ ಬಳಲಿರುವ ಸುಭಾನಿಯವರ ಕುಟುಂಬದಲ್ಲಿ ಈಗಿರುವುದು ಕಣ್ಣೀರು ಬಿಟ್ಟರೇ ಬೇರೆ ಏನಿಲ್ಲ ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ.

ಸುಭಾನಿಯವರು ಕಾಗದ ಕಾರ್ಖಾನೆಯ ಕಾರ್ಮಿಕನಾಗಿರುವುದರಿಂದ ಚಿಕಿತ್ಸೆ ವೆಚ್ಚ ಇ.ಎಸ್.ಐ ನಿಂದ ದೊರೆತಿದೆ. ಇಲ್ಲಿ ಅದು ಮುಖ್ಯವಲ್ಲ. ಬದಲಾಗಿ ಈಗ ನಮ್ಮ ಮುಂದೆ ಸುಭಾನಿ ಇಲ್ಲ. ಆದರೆ ಸುಭಾನಿಯವರ ಎರಡು ಕಣ್ಣುಗಳು ನಮ್ಮ ಮುಂದಿವೆ. ಆ ಎರಡು ಕಣ್ಣುಗಳನ್ನು ಸಮಾಜದ ಆಸ್ತಿಯನ್ನಾಗಿಸಬೇಕಾದ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಎರಡು ಪುಟ್ಟ ಹೆಣ್ಮಕ್ಕಳ ತಂದೆ ನಮ್ಮ ಸುಭಾನಿ:
ಸುಭಾನಿಯವರಿಗೆ ಇಬ್ಬರು ಹೆಣ್ಮಕ್ಕಳು. ಮೊದಲನೆಯವಳು ಜಾಫೀರ, ಈಕೆ ಹಾಲಮಡ್ಡಿಯಲ್ಲಿರುವ ಸರಕಾರಿ ಕನ್ನಡ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದಾಳೆ. ಇನ್ನೊಬ್ಬಳು ಜೋಯಾ, ಈಕೆ ಅದೇ ಶಾಲೆಯಲ್ಲಿ 1 ನೇ ತರಗತಿ ಓದುತ್ತಿದ್ದಾಳೆ. ಆದರೆ ಇಂದು ಈ ಎರಡು ಪುಟ್ಟ ಕಂದಮ್ಮಗಳು ಅಪ್ಪನಿಲ್ಲದೇ ನೊಂದುಕೊಂಡಿವೆ.

ಈ ಮಕ್ಕಳ ಮುಂದಿನ ಭವಿಷ್ಯ ಹೇಗೆ ಎಂಬ ಚಿಂತೆ ಸುಭಾನಿಯವರ ಮಡದಿ ಮತ್ತು ತಾಯಿಗಿದೆ. ಈ ಎರಡು ಪುಟ್ಟ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಆರ್ಥಿಕವಾಗಿ ಆಸರೆಯಾಗಬೇಕಾಗಿದೆ. ಆ ಕಾರಣಕ್ಕಾಗಿ ಸಹಾಯವನ್ನು ಪ್ರಾರ್ಥಿಸಿ ಈ ಬರಹವನ್ನು ನಿಮ್ಮ ಮುಂದಿಟಿದ್ದೇನೆ.

ಸುಭಾನಿಯವರು ಮೃತ ಪಟ್ಟಿರಬಹುದು, ಆದರೆ ನೀವು ಅವರ ಮಕ್ಕಳ ಉನ್ನತಿಗಾಗಿ, ಭವಿಷ್ಯಕ್ಕಾಗಿ ಧನ ಸಹಾಯ ಮಾಡುವುದಾದರೇ ಮೃತಪಟ್ಟಿರುವ ಸುಭಾನಿಯವರ ಉಳಿತಾಯ ಖಾತೆಯ ವಿವರವನ್ನು ಈ ಕೆಳಗೆ ನೀಡಿದ್ದೇನೆ.
 
1). SUBHANI.I.KHUDDUNAVAR
SB A/C No: 1812500101126701
KARNATAKA BANK, BRANCH: DANDELI,
IFSC CODE: KARB 0000181.

2). SUBHANI.I.KHUDDUNAVAR
SB A/C No: 622020875664
IFSC CODA: KSCB 0016001

MOBILE NO: 8970820619
 
 

ನಿಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿ ನಾವಿದ್ದೇವೆ. ಚಿಗುರುವ ಕನಸುಗಳನ್ನು ಚಿವುಟದೇ ಅದನ್ನು ಸಂರಕ್ಷಿಸಿ ರಾಷ್ಟ್ರದ ಆಸ್ತಿಯನ್ನಾಗಿಸುವ ಅಳಿಲ ಸೇವೆಯ ಮೂಲಕ ಮಹತ್ಕಾರ್ಯ ಮಾಡೋಣ.

ಕೊನೆಯದಾಗಿ ಶ್ರಮವಹಿಸಿ ಬದುಕು ಕಟ್ಟಿಕೊಂಡು, ವಿಧಿವಶರಾದ ಸುಭಾನಿಯವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತವಾಗಲಿ.

ನಿಮ್ಮವ

ಸಂದೇಶ್.ಎಸ್.ಜೈನ್

 

Tuesday, June 25, 2019

ಹರಸಿ-ಆಶೀರ್ವದಿಸಿದ ತಮಗೆಲ್ಲರಿಗೂ ಗೌರವದ ಕೃತಜ್ಞತೆಗಳು
ನಿನ್ನೆ ನನ್ನ ಹುಟ್ಟುಹಬ್ಬದ ದಿನ. ನನ್ನ ಹುಟ್ಟುಹಬ್ಬಕ್ಕೆ ಸಾಕಷ್ಟು ಜನ ಹರಸಿ, ಆಶೀರ್ವದಿಸಿದ್ದಾರೆ. ನನ್ನನ್ನು ಹೆತ್ತು ಹೊತ್ತು ಸಾಕಿ, ಸಲಹಿದ ಅಪ್ಪ, ಅಮ್ಮನ ಪಾದಗಳಿಗೆ ನಮಿಸುವೆ. ಕುಟುಂಬದ ಹಿರಿಯರ ಆಶೀರ್ವಾದ, ಕುಟುಂಬದವರೆಲ್ಲರ ಪ್ರೀತಿಗೆ ಋಣಿಯಾಗಿದ್ದೇನೆ.

ಸರಿ ಸುಮಾರು 425 ಕಿ.ಮೀ ದೂರದಿಂದ ಬಂದ ನನ್ನನ್ನು ದಾಂಡೇಲಿಗನನ್ನಾಗಿಸಿ, ಸಲಹುತ್ತಿರುವ ದಾಂಡೇಲಿ ಜನತೆಗೆ ಕೋಟಿ ಕೋಟಿ ಪ್ರಣಾಮಗಳು. ನನ್ನ ಹುಟ್ಟುಹಬ್ಬಕ್ಕೆ ಹಿರಿಯರು-ಕಿರಿಯವರೆನ್ನದೇ ಶುಭ ಹಾರೈಸಿದ್ದೀರಿ, ಪ್ರೋತ್ಸಾಹಿಸಿದ್ದೀರಿ, ಆಶೀರ್ವದಿಸಿದ್ದೀರಿ. ನಿಮ್ಮ ಈ ಅಮೂಲ್ಯ ಪ್ರೀತಿಗೆ ಶರಣಾಗಿದ್ದೇನೆ.

ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹವೆ ನನಗೆ ಅದಮ್ಯ ಶಕ್ತಿ. ತಪ್ಪಿದಾಗ ತಿದ್ದಿದ್ದೀರಿ, ಒಳ್ಳೆಯ ಕಾರ್ಯ ಮಾಡಿದಾಗ ಅಪ್ಪಿಕೊಂಡಿದ್ದೀರಿ. ಒಟ್ಟಿನಲ್ಲಿ ನಿಮ್ಮೆಲ್ಲರ ಮನೆ ಹುಡುಗನಾಗಿ ಬೆಳೆಸಿದ್ದೀರಿ. ಇದು ದಾಂಡೇಲಪ್ಪನ ಹಾಗೂ ದಾಂಡೇಲಿಯ ಮಣ್ಣಿನ ಮಹಿಮೆ.

ಶುಭ ಕೋರಿದವರೆಲ್ಲರಿಗೂ ವೈಯಕ್ತಿಕವಾಗಿ ಕೃತಜ್ಞತೆ ಹೇಳಲಾಗಿಲ್ಲ. ಕ್ಷಮಿಸಿ. ನಿಮ್ಮೆಲ್ಲರ ಪ್ರೀತಿ, ವಾತ್ಸಲ್ಯಕ್ಕೆ ಮಗದೊಮ್ಮೆ ಮನದಾಳದ ವಂದನೆಗಳು.

ನನ್ನನ್ನು ಸಹಿಸಿ, ಸಲಹುತ್ತಿರುವ ಪತ್ನಿ ಪದ್ಮಶ್ರೀ ಹಾಗೂ ನನ್ನ ಆಸ್ತಿ ಮಗ ಸುಯೋಗನಿಗೆ ಕೃತಜ್ಞತೆಗಳು.

ಎಂದೆಂದೂ ನಿಮ್ಮವನೇ,

ಸಂದೇಶ್.ಎಸ್.ಜೈನ್

 

Monday, June 24, 2019

ಹಿರಿತನದಲ್ಲೂ ಶ್ರಮಯೋಗಿಯಾಗಿರುವ ಶ್ರೀ.ಹನೀಫ್ ಸಾಬ ಸೈಯದ ಅವರು ನಮಗೆ ಸ್ಪೂರ್ತಿ
ಆತ್ಮೀಯರೇ, ಏನೊ ಮನಸ್ಸಿಗೆ ಅನ್ನಿಸ್ತು. ಅನಿಸಿದ್ದನ್ನು ಮಾಡೆ ಬಿಡೋಣವೆಂದು ಇಂದು ಅಂದರೆ ದಿನಾಂಕ: 24.06.2019 ರಂದು ದಾಂಡೇಲಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ನಮ್ಮ ಜೈನ್ ಇಡ್ಲಿ ಕೆಫೆ ಬಳಿ, ಕಳೆದ 30 ವರ್ಷಗಳಿಂದ ಆಟೋ ಚಲಾಯಿಸುವುದರ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡ ಹಿರಿಯ ಆಟೋ ಚಾಲಕರಾದ ಶ್ರೀ ಹನೀಫ್ ಸಾಬ ಸೈಯದವರನ್ನು ನಿಮ್ಮ ಜೈನ್ ಇಡ್ಲಿ ಕೆಫೆ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
 
ಹಿರಿತನದಲ್ಲೂ ಶ್ರಮಯೋಗಿಯಾಗಿರುವ ಶ್ರೀ.ಹನೀಫ್ ಸಾಬ ಸೈಯದ ಅವರು ನಮಗೆ ಸ್ಪೂರ್ತಿ. ಅವರ ಬೆವರ ಹನಿಯ ಶ್ರಮ ಸಾಧನೆಗೆ ನಮ್ಮದೊಂದು ಚಿಕ್ಕ ಮತ್ತು ಚೊಕ್ಕ ಗೌರವ.
 
ಕಡೆಯ ಮಾತು, ಮಾನವೀಯ ಸ್ಪಂದನೆಯಿರುವ ಸಹೃದಯಿ ಗುಣವುಳ್ಳ ನಮ್ಮ ದಾಂಡೇಲಿಯ ಆಟೋ ಚಾಲಕರನ್ನು ಗೌರವಿಸೋಣ, ಪ್ರೀತಿಸೋಣ ಎಂಬ ವಿನಮ್ರ ಪ್ರಾರ್ಥನೆಯೊಂದಿಗೆ,
 
ನಿಮ್ಮವ
 
ಸಂದೇಶ್.ಎಸ್.ಜೈನ್

 

Friday, June 21, 2019

ನೂತನ ಲಯನ್ಸ್ ಸಾರಥಿಗಳಿಗೆ ಹಾರ್ದಿಕ ಶುಭಾಶಯಗಳು
ದಾಂಡೇಲಿಯ ಲಯನ್ಸ್ ಕ್ಲಬಿನ ನೂತನ ಸಾಲಿಗೆ ಅಧ್ಯಕ್ಷರಾಗಿ ಜನಪ್ರಿಯ ದಕ್ಷ ವಲಯ ಅರಣ್ಯಾಧಿಕಾರಿ ಮಹೇಶ.ಸಿ.ಹಿರೇಮಠ, ಕಾರ್ಯದರ್ಶಿಯಾಗಿ ಸೊಪ್ಟೆಕ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕರು ಹಾಗೂ ಅದರ ಅಧ್ಯಕ್ಷರಾಗಿರುವ ಯುವ ಉದ್ಯಮಿ ಸೈಯದ ಇಸ್ಮಾಯಿಲ್ ತಂಗಳ್ ಮತ್ತು ಖಜಾಂಚಿಯಾಗಿ ಜನಮನದ ಗೆಳೆಯರು ಹಾಗೂ ಉದ್ಯಮಿಗಳು ಆಗಿರುವ ಉದಯ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
 
 
ಇವರುಗಳ ಸಾರಥ್ಯದಲ್ಲಿ, ಹಿರಿಯರ ಮಾರ್ಗದರ್ಶನದಲ್ಲಿ ದಾಂಡೇಲಿಯ ಲಯನ್ಸ್ ಕ್ಲಬ್ ಜನಪರ ಕಾರ್ಯಚಟುವಟಿಕೆಗಳಿಂದ ದಾಂಡೇಲಿಯ ಹಿರಿಮೆ-ಗರಿಮೆಯನ್ನು ಹೆಚ್ಚಿಸುವಂತಾಗಲೆಂದು ಶುಭ ಹಾರೈಸುವ,

ನಿಮ್ಮವ

ಸಂದೇಶ್.ಎಸ್.ಜೈನ್

 

Tuesday, June 11, 2019

ಇದು ನಮ್ಮ ದಾಂಡೇಲಿಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ
ಖ್ಯಾತ ಮಕ್ಕಳ ತಜ್ಞ ಡಾ: ರಾಜನ್ ದೇಶಪಾಂಡೆಯವರ ನೇತೃತ್ವದಲ್ಲಿ ತಜ್ಞ 19 ವೈದ್ಯರುಗಳಿಂದ ಆರೋಗ್ಯ ಸೇವೆ
ಜೂನ್:16 ರಂದು ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ 
ದಾಂಡೇಲಿ:  ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್, ಧಾರವಾಡದ ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರ ಇವರ ಸಹಯೋಗದೊಂದಿಗೆ ಕಳೆದ ವರ್ಷದಂತೆ ಈ ವರ್ಷವೂ ಜೂನ್ 16 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಇದರ ಆಸ್ಪತ್ರೆಯಲ್ಲಿ  0 ದಿಂದ 12 ವಯಸ್ಸಿನ ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆಯೆಂದು ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿಯವರು ಹೇಳಿದರು.

ಅವರು ಕಾಗದ ಕಾರ್ಖಾನೆಯ ಸ್ಪೋಟ್ಸ & ವೆಲ್ಪೇರ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿಬಿರದ ದಿನವೆ ರಂಗನಾಥ ಅಡಿಟೋರಿಯಂನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಶಿಬಿರದಲ್ಲಿ ಭಾಗವಹಿಸುವವರು ತಮ್ಮ ಮಕ್ಕಳ ಹೆಸರನ್ನು ನೊಂದಯಿಸಬಹುದಾಗಿದೆ.

ಖ್ಯಾತ ಮಕ್ಕಳ ತಜ್ಞ ಡಾ: ರಾಜನ್ ದೇಶಪಾಂಡೆಯವರ ನೇತೃತ್ವದಲ್ಲಿ ನಡೆಯುವ ಈ ಶಿಬಿರದಲ್ಲಿ ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲ ಜನರು ತಮ್ಮ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬಹುದಾಗಿದೆ. ದಾಂಡೇಲಿ ನಗರ ಪ್ರದೇಶದ ಹೊರಗಿನ ಹಳ್ಳಿ ಜನರಿಗೆ ಅನುಕೂಲವಾಗಲೆಂದು 4 ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಶಿಬಿರದಲ್ಲಿ ಭಾಗವಹಿಸುವವರಿಗೆ ಚಹಾ ಮತ್ತು ತಿಂಡಿಯ ವ್ಯವಸ್ಥೆ ಇರುತ್ತದೆ. ವಿವಿಧ ತಜ್ಞ 19 ವೈದ್ಯರುಗಳು ಭಾಗವಹಿಸುತ್ತಿರುವ ಶಿಬಿರದ ಪ್ರಯೋಜನವನ್ನು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಂತೆ ರಾಜೇಶ ತಿವಾರಿ ತಿಳಿಸಿದ್ದಾರೆ.

ಶಿಬಿರದ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಡಾ: ಪ್ರದೀಪ ಜೋಶಿ, ಮೊ: 9916910444 ಮತ್ತು ರಾಜೇಶ ತಿವಾರಿ, ಮೊ: 9742257466 ಇವರಿಗೆ ಸಂಪರ್ಕಿಸುವಂತೆ ಕೋರಲಾಗಿದೆ.

ಬನ್ನಿ, ನಮ್ಮ ಮಕ್ಕಳು ನಮ್ಮ ಸೌಭಾಗ್ಯ. ಮಕ್ಕಳ ಆರೋಗ್ಯ ಸಂರಕ್ಷಣೆ ನಮ್ಮ ಜವಾಬ್ದಾರಿ. ಮನೆಬಾಗಿಲಿಗೆ ಬಂದ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವ ಪಾಲುದಾರರಾಗೋಣ ಬನ್ನಿ,

ನಿಮ್ಮವ

ಸಂದೇಶ್.ಎಸ್.ಜೈನ್







 

Thursday, June 6, 2019

ಸ್ನೇಹಶೀಲ ವ್ಯಕ್ತಿತ್ವದ ಗುಣವಂತ ವೈದ್ಯ ಡಾ: ಗೌಸ ಸೈಯದ್
ಜನ್ಮದಿನದ ಸಂಭ್ರಮದಲ್ಲಿ ಮೆಚ್ಚಿನ ಮತ್ತು ನೆಚ್ಚಿನ ವೈದ್ಯ ಡಾ: ಸೈಯದ್ 
 



ಬಹಳ ಒತ್ತಡದಲ್ಲಿದ್ದೇನೆ. ಈ ಒತ್ತಡದ ನಡುವೆಯೂ ನನ್ನವರ ಬಗ್ಗೆ ಎರಡಕ್ಷರ ಬರೆಯದಿದ್ದರೇ ಖಂಡಿತಾ ನಾನು ನನ್ನವರ ಪ್ರೀತಿಯನ್ನು ಮರೆತೆನೆಂದೆ ಅರ್ಥ. ಆದರೂ ಗಡಿಬಿಡಿಯ ನಡುವೆಯೂ ನನ್ನ ಹೃದಯದ ಸಹೋದರರೊಬ್ಬರ ಬಗ್ಗೆ ಕೆಲ ಅಕ್ಷರಗಳನ್ನು ಪದಗಳ ರೂಪದಲ್ಲಿ ಬರೆಯಲು ಹೊರಟಿದ್ದೇನೆ.
 
ಅವರೊಬ್ಬರು ಸರಳ ಸಜ್ಜನಿಕೆಯ ಮತ್ತು ಅಷ್ಟೇ ಸ್ನೇಹಪರತೆಯ ಗುಣವಂತಿಗೆಯ ವೈದ್ಯ. ಅವರು ಬೇರೆ ಯಾರು ಅಲ್ಲರಿ, ನಮ್ಮ ದಾಂಡೇಲಿಯ ಇ.ಎಸ್.ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯಕ್ಕೆ ಸೇರಿ ಬಹಳಷ್ಟು ವರ್ಷಗಳ ಕಾಲ ವೈದ್ಯ ಸೇವೆಯನ್ನು ನೀಡಿ ಕಳೆದ ವರ್ಷ ಇ.ಎಸ್.ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಪದೋನ್ನತಿಗೊಂಡಿರುವ ಹೃದಯವಂತ ವೈದ್ಯ ಡಾ: ಗೌಸ್ ಸೈಯದ್.
 
ಅಂದ ಹಾಗೆ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪರೋಪಕಾರಿ ವೈದ್ಯರಾದ ಡಾ: ಗೌಸ್ ಸೈಯದ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 
 
ಬಿಜಾಪುರದ ಆಲ್ ಅಮೀಮ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿಯನ್ನು ಪಡೆದ ಜಂಟ್ಲಮ್ಯಾನ್ ಡಾಕ್ಷರ್ ನಮ್ಮ ಸೈಯದ್ ಸರ್ ಅವರು. ಎಳೆಯ ಬಾಲಕನಿರುವಾಗ್ಲೆ ಮಾತು ಕಡಿಮೆ, ಯೋಚನೆ, ಹೊಸತನಗಳ ಅವಿಷ್ಕಾರದಲ್ಲಿ ಮುಳುಗಿ ಬೀಳುತ್ತಿದ್ದ ಸೈಯದ್ ಸರ್ ಅವರ ನಡವಳಿಕೆಯನ್ನು ನೋಡಿದ್ದ ಅವರ ತಂದೆ ಮಗ ಕಲಿಕೆಯಲ್ಲಿ ಎಷ್ಟೇ ಬ್ರಿಲಿಯಂಟ್ ಇದ್ದರೂ ಮಾತು ಕಡಿಮೆಯಿರುವ ಈತ ಜೀವನದಲ್ಲಿ ಮುಂದೆ ಬರುವುದು ಹೇಗೆ ಎಂಬ ಚಿಂತೆ. ಆದರೆ ಸೈಯದ ಅವರ ತಾಯಿಗೆ ಮಾತ್ರ ಮಗ ಮುಂದೆ ದೊಡ್ಡ ಪದವಿಗೆ ಹೋಗುತ್ತಾನೆಂಬ ಅಚಲವಾದ ನಂಬಿಕೆ. ವಿದ್ಯಾರ್ಥಿ ದೆಸೆಯಲ್ಲಿರುವಾಗ್ಲೆ ಅತ್ಯುತ್ತಮ ಕ್ರೀಡಾಪಟುವಾಗಿ ಗಮನ ಸೆಳೆದಿದ್ದ ಡಾ: ಸೈಯದ್ ಅವರು ನೋಡ್ಲಿಕ್ಕೂ ಸ್ವಲ್ಪ ಹೆಚ್ಚು ಸ್ಮಾರ್ಟ್ ಇದ್ದರೂ ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ.
 
ಹೀಗೆ ಬೆಳೆದ ಸೈಯದ್ ಅವರು ಅವರ ತಾಯಿಯ ಅಚಲವಾದ ನಂಬಿಕೆಯನ್ನು ಉಳಿಸುವುದರ ಮೂಲಕ ಅವರ ಕುಟುಂಬದ ಹಿರಿಮೆ ಗರಿಮೆಯನ್ನು ಹೆಚ್ಚಿಸುವಲ್ಲಿ ಬಹುಮೂಲ್ಯ ಪಾತ್ರ ವಹಿಸಿದ್ದಾರೆ. ಸೈಕಲನ್ನೇರಿ ಶಾಲಾ-ಕಾಲೇಜು ಮುಗಿಸಿದ  ಸೈಯದ ಅವರೇನು ಶ್ರೀಮಂತಿಕೆಯ ಕುಟುಂಬದಿಂದ ಬಂದವರಲ್ಲ. ಶ್ರಮದ ಸಾಧನೆಯಿಂದ ಬೆವರ ಹನಿಯಿಂದ ಜೀವನದಲ್ಲಿ ಉನ್ನತಿಯ ಸ್ಥಾನಕ್ಕೇರಿದವರು.
 
ಅಂದ ಹಾಗೆ ನನಗನಿಸಿದ ಪ್ರಕಾರ ಡಾ: ಸೈಯದ್ ಅವರು ಈಗಲೂ ಅವರದ್ದು ಮಾತು ಕಡಿಮೆಯೆ. ಆದರೆ ಅವರ ಸುಂದರ ಮನಸ್ಸಿನ, ಸಂಸ್ಕಾರಯುತವಾದ ನಗು ಮಾತ್ರ ಅವರ ವ್ಯಕ್ತಿತ್ವಕ್ಕೆ ಶೋಭೆಯನ್ನು ತಂದುಕೊಟ್ಟಿದೆ ಎಂದರೆ ಅತಿಶಯೋಕ್ತಿ ಎನಿಸದು.
 
ಇ.ಎಸ್.ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿದ್ದರೂ, ಎಲ್ಲಿಯೂ ಅಹಂನ್ನು ಪ್ರದರ್ಶಿಸದೇ ಸಾಮಾನ್ಯರಲ್ಲಿ, ಸಾಮಾನ್ಯರಾಗಿರುವ ಡಾ: ಸೈಯದ ಅವರ ಗುಣ ವಿಶೇಷತೆಗೆ ಬಿಗ್ ಸೆಲ್ಯೂಟ್ ಹೇಳಲೆಬೇಕು.
ಒಬ್ಬ ಸೃಜನಶೀಲ ವೈದ್ಯರೊಬ್ಬರನ್ನು ದಾಂಡೇಲಿಗೆ ಬರಮಾಡಿಸಿ, ದಾಂಡೇಲಿಯವರನ್ನಾಗಿಸಿಕೊಂಡ ದಾಂಡೇಲಪ್ಪನಿಗೆ ನೂರೆಂಟು ನಮನಗಳನ್ನು ಸಲ್ಲಿಸಲೆಬೇಕು.
 
ಡಾಕ್ಟ್ರೇ, ನಾನು ನನಗನಿಸಿದ್ದನ್ನು ಬರೆದಿದ್ದೇನೆ. ಏನಾದರೂ ಹೆಚ್ಚು ಕಡಿಮೆ ಇದ್ದರೇ ಕ್ಷಮೆಯಿರಲಿ. ನಿಮಗೆ ಮೊಬೈಲ್ ಕರೆ ಮಾಡಿ ಕೇಳುವಷ್ಟು ಸಮಯ ನನ್ನಲ್ಲಿರಲಿಲ್ಲ. ಹಾಗಾಂತ ಹೇಳಿ ನಾನಂತೂ ದೊಡ್ಡ ಮನುಷ್ಯನಲ್ಲ. ನಾಳೆ ಗ್ರಾಹಕರಿಗೆ ಇಡ್ಲಿ ಕೊಡಬೇಕೆಂದ್ರೆ ನಾನಿನ್ನೂ ಮನೆಗೆ ಹೋಗಿ ಮಸಾಲೆ ರೆಡಿ ಮಾಡಬೇಕು. ಹಾಗಾಗಿ ಮುಂದಿನ ವರ್ಷ ನಿಮ್ಮ ಹುಟ್ಟುಹಬ್ಬವನ್ನು ನಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾಡೋಣ.
 
ಮತೋಮ್ಮೆ, ಮಗದೊಮ್ಮೆ ನಿಮಗೆ ಶುಭವಾಗಲಿ ಎಂಬ ಶುಭ ಪ್ರಾರ್ಥನೆಯೊಂದಿಗೆ,

ನಿಮ್ಮವ

ಸಂದೇಶ್.ಎಸ್.ಜೈನ್
 

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...