Thursday, December 26, 2019

ವಿಜೃಂಭಣೆಯಿಂದ ಸಂಪನ್ನಗೊಂಡ ಶ್ರೀ.ಕೃಷ್ಣ ಮೂರ್ತಿಯ ಮಹಾಪೂಜೆ
ಅಪ್ಪನಿಗೆ ತಕ್ಕ ಮಗ-ಮಗನಿಗೆ ತಕ್ಕ ಅಪ್ಪ
 
ದಾಂಡೇಲಿ : ನಗರದ ವನಶ್ರೀನಗರದ ನಿವಾಸಿ, ಸ್ಥಳೀಯ ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ಎನ್.ಆರ್.ನಾಯ್ಕ ಅವರ ಮಗನಾದ 16 ವರ್ಷದ ಬಾಲಕ ಪ್ರಥಮ್ ನಾಯ್ಕ ತಂದೆಯ ಸಹಕಾರದಲ್ಲಿ ತಾನೆ ಸ್ವಂತ ತಯಾರಿಸಿದ ಶ್ರೀ.ಕೃಷ್ಣಾ ಮೂರ್ತಿಯ ಭವ್ಯ ಮಹಾಪೂಜಾ ಕಾರ್ಯಕ್ರಮವು ವಿಜೃಂಭಣೆಯಿಂದ ಬುಧವಾರ ರಾತ್ರಿ ಜರುಗಿತು.

ಕಳೆದ 5 ವರ್ಷಗಳಿಂದ ಪ್ರತಿವರ್ಷ ಶ್ರೀ.ಕೃಷ್ಣ ಮೂರ್ತಿಯನ್ನು ತಯಾರಿಸಿ, ಪೂಜಾ ಕೈಂಕರ್ಯವನ್ನು ನಡೆಸುತ್ತಿರುವ ಪ್ರಥಮ್ ಸ್ಥಳೀಯ ಬಂಗೂರನಗರ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಮಗನ ಧಾರ್ಮಿಕ ಬದ್ದತೆಗೆ ತಂದೆ ಎನ್.ಆರ್.ನಾಯ್ಕ ಅವರು ಮೂರ್ತಿ ತಯಾರಿಸಲು ಮತ್ತು ಅಂತಿಮ ಸ್ಪರ್ಷ ನೀಡಲು ವಿಶೇಷ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುವುದು ಈ ಕಾರ್ಯಕ್ರಮದ ಯಶಸ್ಸಿಗೆ ಬಹುಮೂಲ್ಯ ಕಾರಣವಾಗಿದೆ.

ಈ ವರ್ಷ ಕಳೆದ 18 ದಿನಗಳಿಂದ ಪ್ರತಿಷ್ಟಾಪಿಸಲ್ಪಟ್ಟ ಶ್ರೀ.ಕೃಷ್ಣಾ ಮೂರ್ತಿಗೆ ಪ್ರತಿದಿನ ಪೂಜೆ, ನೈವೇದ್ಯಗಳು ನಡೆದಿದ್ದು, ಇದರ ಜೊತೆಗೆ ಗುಮಟೆಪಾಂಗ್ ಮೂಲಕ ದೇವರನ್ನು ಒಲಿಸಿಕೊಳ್ಳುವ ಮತ್ತು ಜಿಲ್ಲೆಯ ಧಾರ್ಮಿಕ ಕಲೆಯನ್ನು ಉಳಿಸಿ, ಬೆಳೆಸುವ ಮಹತ್ವದ ಆಶಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಬುಧವಾರ ಮಹಾಪೂಜೆ ನೆರವೇರಿಸಲಾಗಿದ್ದು, ಈ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಿಗೆ ಸನ್ಮಾನಿಸಲಾಯಿತು. ಖ್ಯಾತ ನಾಟಕಕಾರ ಮುರ್ತುಜಾ ಆನೆಹೊಸೂರು, ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಪಟೇಲನಗರ ಉರ್ದು ಶಾಲೆಯ ಶಿಕ್ಷಕಿ ರಜಿಯಾ.ಆರ್.ಶೇಖ, ಜಿಲ್ಲಾ ಪ್ರಶಸ್ತಿ ವಿಜೇತ ಯುವ ಕವಿ ನರೇಶ ನಾಯ್ಕ, ಅರಣ್ಯ ಇಲಾಖೆಯ ಡಿಪ್ಪೋ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ ನಾಯ್ಕ ಅವರುಗಳನ್ನು ಎನ್.ಆರ್.ನಾಯ್ಕ ಹಾಗೂ ಗಣ್ಯರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ರೂವಾರಿ ಎನ್.ಆರ್.ನಾಯ್ಕ ಅವರು ಮಕ್ಕಳ ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾದಾಗ ಸುಶಿಕ್ಷಿತ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳ ಅಭಿರುಚಿಗೆ ತಕ್ಕಂತೆ ಅವರನ್ನು ಯೋಗ್ಯರನ್ನಾಗಿಸುವ ಕಾರ್ಯ ಹೆತ್ತವರು ಮಾಡಿದಾಗ ಸುಸಂಸ್ಕೃತ ಮತ್ತು ಆದರ್ಶ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಮಗ ಪ್ರಥಮ್ ಕಳೆದ 5 ವರ್ಷಗಳಿಂದ ಕೃಷ್ಣಾನ ಮಣ್ಣಿನ ಮೂರ್ತಿಯನ್ನು ತಯಾರಿಸುತ್ತಿದ್ದು, ತಯಾರಿಸಿದ ಮೂರ್ತಿಗೆ ಪೂಜೆಯನ್ನು ನೆರವೇರಿಸುವುದರ ಮೂಲಕ ಮಕ್ಕಳ ಕಾರ್ಯಕ್ಕೆ ಬೆಂಬಲ ನೀಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್.ಪಿ.ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತಿನ ಹಳಿಯಾಳ ತಾಲೂಕು ಅಧ್ಯಕ್ಷ ಉಪ್ಪೇಂದ್ರ ಘೋರ್ಪಡೆ, ಕೋಮಾರಪಂತ ಸಮಾಜದ ಪ್ರಮುಖರುಗಳಾದ ವಿ.ವಿ.ನಾಯ್ಕ, ಎಂ.ಎಸ್.ನಾಯ್ಕ, ಪೂಜಾ ನಾಯ್ಕ, ಶೀಲಾ ನಾಯ್ಕ, ಸಮಾಜ ಸೇವಕ ಸುರೇಶ ಕಾಮತ್, ಶಿಕ್ಷಕ ಸತೀಶ ನಾಯ್ಕ ಹಾಗೂ ಎನ್.ಆರ್.ನಾಯ್ಕ ಕುಟುಂಬಸ್ಥರು ಮತ್ತು ಸಮಾಜದ ನಾಗರೀಕರು, ಸ್ಥಳೀಯರು ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಕಂಡು ಬಂದ ಸಂದೇಶ ಇಷ್ಟೆ, ಅಪ್ಪನಿಗೆ ತಕ್ಕ ಮಗ-ಮಗನಿಗೆ ತಕ್ಕ ಅಪ್ಪ. ಇದ್ದರೇ ಹಿಂಗಿರಬೇಕು ನೋಡಿ. ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ಮಹೋನ್ನತ ಜವಾಬ್ದಾರಿ ಹೆತ್ತವರದ್ದು ಎನ್ನವುದನ್ನು ಮರೆಯುವ ಹಾಗಿಲ್ಲ.

ಎನ್.ಆರ್.ನಾಯ್ಕ  ಅವರಿಗೆ ಹಾಗೂ ಪ್ರಥಮನಿಗೆ ನನ್ನ ಕಡೆಯಿಂದ ದೊಡ್ಡ ಸಲಾಂ

ನಿಮ್ಮವ

ಸಂದೇಶ್.ಎಸ್.ಜೈನ್

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...