Saturday, March 30, 2019

ಮಾತೃ ಮನಸ್ಸಿನ ದಾಂಡೇಲಿಯ ಜನತೆಗೆ ಶತಕೋಟಿ ವಂದನೆಗಳು.
ನಿಮ್ಮೆಲ್ಲರ ಸಹಕಾರವಿರಲಿ-ನಿಮ್ಮ ಮನೆ ಮಗನ ಜೈನ್ ಇಡ್ಲಿ ಕೆಫೆಗೆ
  Opening Date: 31.03.2019
Place:  01. Near Patil Hospital,
            02. KSRTC Bus Stand, Near: Auto Stand 
           03. Haliyal Road Truck Terminal Center
          
Jain Idli Cafe centre time: 7 AM to 10 AM

 ಪ್ರತಿಸಲ ಏನಾದರೂ ಬರೆಯುತ್ತಿರುವ ನಾನಿಂದು ನನ್ನ ಬಗ್ಗೆಯೆ ಬರೆಯಲು ಹೊರಟಿದ್ದೇನೆ. ಸಂದೇಶ್ ಎಷ್ಟೊಂದು ಸ್ವಾರ್ಥಿ ಇದ್ದಾನಲ್ಲ ಅಂತಾ ದಯವಿಟ್ಟು ಅಂದ್ಕೊಬೇಡಿ. ನಾನಿವತ್ತು ಬರೆಯಲು ಹೊರಟಿರುವುದು ನನ್ನ ಬೆವರ ಹನಿಯ ಬಗ್ಗೆ ಎಂಬುವುದನ್ನು ವಿಸ್ತಾರವಾಗಿ ವಿವರಿಸಲು ಹೋಗೊದಿಲ್ಲ.

ಮುಕ್ತ ಮನಸ್ಸಿನಿಂದ ಹೇಳುವುದಾದರೇ, ನನ್ನ ಬದುಕಿನಲ್ಲಿ ನಾನು ಕಂಡಿರುವ ಸತ್ಯವನ್ನು ಬಿಚ್ಚಿಡಲೆ ಬೇಕು. ಹೆತ್ತಮ್ಮ ನನ್ನನ್ನು ಮುದ್ದಿನಿಂದ ಸಾಕಿದ್ದಾರೆ, ಬೆಳೆಸಿದ್ದಾರೆ. ಇಂದಿಗೂ ಕೈ ತುತ್ತು ಕೊಟ್ಟು ನನ್ನನ್ನು ಮುದ್ದಿಸುತ್ತಾರೆ. ಅಂತಹ ಅಮ್ಮನ ಪ್ರೀತಿ ಕೊಡುತ್ತಿರುವ ದಾಂಡೇಲಿಯ ಜನತೆಗೆ ಶಿರಬಾಗದೆ ನಾನೇನು ಮಾಡಲಿ. ನಾನು ಬಿದ್ದಾಗ, ಸೋತಾಗ ನನ್ನನ್ನು ಮಾತೃಹೃದಯದಿಂದ ಸಂತೈಸಿದ್ದೀರಿ. ಕಿಸೆಯಲ್ಲಿ ಪುಡಿಗಾಸು ಇಲ್ಲದಿದ್ದಾಗ ತಮ್ಮ ಬೆವರಿನ ಹಣಕೊಟ್ಟು ನನ್ನನ್ನು ಉಳಿಸಿದ್ದೀರಿ. ಎದ್ದಾಗ ಮತ್ತು ಬಿದ್ದಾಗಲೂ ನನ್ನನ್ನು ಕೈ ನೀಡಿ ಹರಸಿ, ಬೆಳೆಸಿದ ದಾಂಡೇಲಿಯ ಜನತೆಗೆ ಋಣಿಯಾಗಿದ್ದೇನೆ. ಆ ಕಾರಣಕ್ಕಾಗಿ ಇಡೀ ದೇಶದಲ್ಲೆ ಮಾತೃ ಹೃದಯ
ಗುಣ ಸಂಪನ್ನವಿರುವ ಪ್ರದೇಶವಿದ್ದರೇ ಅದು ನಮ್ಮ ಗಂಡುಮೆಟ್ಟಿನ, ಸೌಹಾರ್ಧತೆಯ ದಾಂಡೇಲಿ ಒಂದೆ ಎನ್ನುವುದನ್ನು ಎದೆ ತಟ್ಟಿ ಹೇಳಲು ನಾನ್ಯಾಕೆ ಅಂಜಲಿ. 

ದಾಂಡೇಲಿಯ ಸತ್ಪುರುಷ ದಾಂಡೇಲಪ್ಪನಿಗೆ, ಜೀವನದಿ ಕಾಳಿ ನದಿಗೆ ಮತ್ತು ದಾಂಡೇಲಿಯ ಪುಣ್ಯಭೂಮಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತಾ, ತಮ್ಮಲ್ಲೆರಲ್ಲಿ ನನ್ನ ವಿಚಾರಧಾರೆಯನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ.

ಜೈನ್ ಇಡ್ಲಿ ಕೆಫೆ:
ಆತ್ಮೀಯರೇ, ನನ್ನ ಬಹುದಿನಗಳ ಕನಸು ನಿಮ್ಮ ಸಹಕಾರದಿಂದ ಯಶಸ್ವಿಯಾಗಬಹುದೆಂದು ಭಾವಿಸಿಕೊಂಡಿದ್ದೇನೆ. ಹಲವಾರು ಕಡೆ ವಿವಿಧ ಕಾರ್ಯಕ್ರಮಗಳ ಅಡುಗೆ ತಯಾರಿಸಿದ ಸಂತೃಪ್ತಿ ನನಗಿದೆ. ಆ ಭರವಸೆ, ನಿಮ್ಮೆಲ್ಲರ ಪ್ರೀತಿ, ಅಪ್ಪುಗೆಯ ಅಕ್ಕರೆಯೆ ನನಗೆ ಜೈನ್ ಇಡ್ಲಿ ಕೆಫೆ ಎಂಬ ವಿನೂತನ ಉಪಾಹರ ಕೇಂದ್ರವನ್ನು ಸ್ಥಾಪಿಸಲು ಸಹಾಯವಾಗಿದೆ ಎಂದು ಭಾವಿಸಿದ್ದೇನೆ.

ಒತ್ತಡದ ನಡುವೆ ಎಲ್ಲರಿಗೂ ವೈಯಕ್ತಿಕವಾಗಿ ಭೇಟಿಯಾಗಿ ಹೇಳಲು ಆಗಲಿಲ್ಲ. ಅದಕ್ಕಾಗಿ ಈ ಮೂಲಕ ತಮ್ಮಲ್ಲರಿಗೂ ತಿಳಿಸುವ ಸಣ್ಣ ಯತ್ನ ಮಾಡಿದ್ದೇನೆ.

ಆತ್ಮೀಯರೇ, ದಿನಾಂಕ:31.03.2019 ರಂದು ಜೈನ್ ಇಡ್ಲಿ ಕೆಫೆ ಎಂಬ ಉಪಹಾರ ಕೇಂದ್ರ ಶುಭಾರಂಭಗೊಳ್ಳಲಿದೆ. ಅತ್ಯಂತ ಕಡಿಮೆದರ ಹೆಚ್ಚು ರುಚಿಕರ, ಮನೆಪಾಕ ಎಂಬ ದ್ಯೇಯದಡಿ ಈ ಕೇಂದ್ರವನ್ನು ಪ್ರಾರಂಭಿಸುತ್ತಿದ್ದೇನೆ. ಪ್ರತಿದಿನ ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಇಡ್ಲಿ ಕೆಫೆ ಕೇಂದ್ರ ತನ್ನ ಸೇವೆಯನ್ನು ನೀಡಲಿದೆ. ಪ್ರತಿ ದಿನ ವೆರೈಟಿ ಸಾಂಬರ್ ನಮ್ಮ ಸ್ಪೇಷಲಿಟಿ ಎಂಬ ಆಶಯವನ್ನು ಹೊತ್ತಿದ್ದೇನೆ. ಆರಂಭದಲ್ಲಿ ಅಂದರೆ ನಾಳೆ ದಿನಾಂಕ:31.03.2019 ರಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ದಾಂಡೇಲಿಯ ಪಾಟೀಲ್ ಆಸ್ಪತ್ರೆಯ ಬಳಿ, ಬಸ್ ನಿಲ್ದಾಣದ ಬಳಿಯಿರುವ ಆಟೋ ನಿಲ್ದಾಣದ ಸಮೀಪ ಮತ್ತು ಹಳಿಯಾಳ ರಸ್ತೆಯ ಟ್ರಕ್ ಟರ್ಮಿನಲ್ ಕೇಂದ್ರದ ಬಳಿ ಜೈನ್ ಇಡ್ಲಿ ಕೆಫೆ ಸೇವೆಯನ್ನು ಪ್ರಾರಂಭಿಸಲಿದೆ.

ನನ್ನ ಈ ಪ್ರಯತ್ನಕ್ಕೆ ತಮ್ಮೆಲ್ಲರ ಅಕ್ಕರೆಯ ಸಹಕಾರವಿರಲೆಂಬ ಗೌರವಪೂರ್ವಕ ಪ್ರಾರ್ಥನೆಯೊಂದಿಗೆ,

ನಿಮ್ಮವ

ಸಂದೇಶ್.ಎಸ್.ಜೈನ್



 


Saturday, March 23, 2019

 
 
 
ದಾಂಡೇಲಿ : ನಗರದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ದಾಂಡೇಲಿ ಶಿಕ್ಷಣ ಸಂಸ್ಥೆಯ ಸಂಯೋಜಕರಾದ ಕೆ.ಜಿ.ಗಿರಿರಾಜ ಅವರ ಸುಪುತ್ರ ಬಸವೇಶ ಗಿರಿರಾಜ (ವ:24) ಇವರು ಶನಿವಾರ ನಗರದಲ್ಲಿರುವ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ತನ್ನ ಜೀವನದ ಮಹತ್ವದ ಆಸೆಯಂತೆ ಅವರೆರಡು ಕಣ್ಣುಗಳನ್ನು ಅವರಿಚ್ಚೆಯಂತೆ ದಾನ ಮಾಡಿ ಮರಣದಲ್ಲೂ ಮಾನವೀಯತೆಯನ್ನು ಮೆರೆದರು.

ಹುಟ್ಟು ಪೋಲಿಯೋ ಪಿಡಿತರಾಗಿ ಎರಡು ಕಾಲು ಬಲಹೀನತೆಗೊಳಗಾಗಿದ್ದರು. ತನ್ನ ಕ್ರಿಯಾಶೀಲತೆಯಿಂದ ಗಮನ ಸೆಳೆದಿದ್ದ ಬಸವೇಶ ಅವರು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಅಚಲವಾದ ಗುರಿಯನ್ನಿಟ್ಟು ಮುನ್ನಡೆದವರು. ತಂದೆ ತಾಯಿ ಹಾಗೂ ಅಕ್ಕನ ಸಹಕಾರ, ಮಾರ್ಗದರ್ಶನದಲ್ಲಿ ಬಿ.ಕಾಂ ಪದವಿಯನ್ನು ಪೊರೈಸಿದ ಅವರು ಪದವಿ ಮುಗಿದ ಮೇಲೆ ಮನೆಯಲ್ಲೆ ಕೂತು ನವದಾನ್ಯ ಇನ್ನಿತರ ಅಗತ್ಯ ಆಹಾರ ವಸ್ತುಗಳನ್ನು ಸಿದ್ದಪಡಿಸಿ ಸ್ಥಳೀಯವಾಗಿ ಮಾರುಕಟ್ಟೆಯನ್ನು ಆರಂಭಿಸಿದ್ದರು. ಜೀವನದಲ್ಲಿ ಸಾಧಿಸಬೇಕೆಂದು ಪಣತೊಟ್ಟಿದ್ದ ಬಸವೇಶ ಅವರು ಕಿಡ್ನಿ ವೈಫಲ್ಯಕ್ಕೊಳಗಾಗಿ ಮೃತ ಪಟ್ಟಿದ್ದಾರೆ.

ಸೃಜನಾಶೀಲತೆಯನ್ನು ಮೈಗೂಡಿಸಿಕೊಂಡಿದ್ದ ನಾನು ಮೆಚ್ಚಿದ ಅಪರೂಪದ ಅಪೂರ್ವ ವ್ಯಕ್ತಿ ಬಸವೇಶ. ಅಪರೂಪಕ್ಕೊಮ್ಮೆ ಸಿಕ್ಕ ಕೂಡಲೆ ಆಂಕಲ್ ಎಂದು ಅಕ್ಕರೆಯಿಂದ ಮಾತನಾಡಿಸುತ್ತಿದ್ದ ಬಸವೇಶ ಅವರ ಅಗಲುವಿಕೆಯನ್ನು ಸಹಿಸಲಾಗದು. ವಿಕಲಚೇತನರಾಗಿದ್ದರೂ ಅವರಿಂದ ಮಹತ್ವದ ಕಾರ್ಯವನ್ನು ಮಾಡಿಸಬೇಕೆಂಬ ಹಂಬಲದಲ್ಲಿದ್ದವ ನಾನು. ಆ ಹಂಬಲವನ್ನು ಅವರಿಗೆ ತಿಳಿಸಿ, ಅವರು ಆ ದಿಸೆಯಲ್ಲಿ ಮುನ್ನಡೆದಿದ್ದರು. ಆದರೆ ವಿಧಿಯಾಟ ಅದಕ್ಕೆ ಅವಕಾಶ ನೀಡದಿರುವುದು ಮಾತ್ರ ನೋವಿನ ಸಂಗತಿ.

ಹೆತ್ತ ಮಗುವನ್ನು ಮೂರ್ನಾಲ್ಕು ವರ್ಷ ಮಗುವಿನಂತೆ ತಂದೆ ತಾಯಿಗಳು ಮುತುವರ್ಜಿಯಿಂದ ನೋಡಿಕೊಳ್ಳುವುದು ಸಹಜ. ಆದರೆ ನಮ್ಮ ಗಿರಿರಾಜ ದಂಪತಿಗಳು ಸುಪುತ್ರ ಬಸವೇಶರವರನ್ನು ಕಳೆದ 24 ವರ್ಷಗಳಿಂದ ಎಳೆಯ ಮಗುವಿನಂತ ಸಾಕಿ ಸಲಹಿದ್ದು ಮಾತ್ರ ರಿಯಾಲ್ ಗ್ರೇಟ್. ಅವರುಗಳ ಪುಣ್ಯ ಕಾರ್ಯಕ್ಕೆ ಶಿರಬಾಗುವೆ.

ನನ್ನ ಹೃದಯ ಮಿತ್ರ ಬಸವೇಶ ನಿಮ್ಮ ಅಗಲುವಿಕೆಯಿಂದ ನಾವು ನೊಂದಿದ್ದೇವೆ. ನಿಮ್ಮ ಆತ್ಮಕ್ಕೆ ಶಾಂತಿ ಪ್ರಾಪ್ತಿಯಾಗಲೆಂದು ಭಗವಂತನಲ್ಲಿ ಬೇಡುತ್ತೇವೆ.

ನೊಂದ ಹಾಗೂ ಸದಾ ನಿಮ್ಮ ನೆನೆಯುವ ಮನಸ್ಸು,


ಸಂದೇಶ್.ಎಸ್.ಜೈನ್


 

Wednesday, March 20, 2019

ಮನದ ಮಾತು
ಬಹಳ ದಿನಗಳಿಂದ ಬರೆಯಬೇಕು, ಬರೆಯಬೇಕು ಅನಿಸ್ತಿತ್ತು. ಆದರೆ ಅದು ಕೈಗೂಡಲೆ ಇಲ್ಲ. ಆದರೂ ಇವತ್ತು ಸ್ವಲ್ಪ ಹೊತ್ತು ಬಿಡುವು ಮಾಡಿಕೊಂಡು ನನ್ನ ಮನದ ಮಾತನ್ನು ತಮ್ಮುಂದೆ ಬಿಚ್ಚಿಡುವ ಸಣ್ಣ ಪ್ರಯತ್ನ ನಡೆಸಿದ್ದೇನೆ.

ಖಂಡಿತವಾಗಿ ಇದು ರಾಜಕೀಯ ದ್ವೇಶಕ್ಕಾಗಿ ಬರೆಯುತ್ತಿಲ್ಲ. ವಾಸ್ತವ ಅಂಶಗಳನ್ನು ವಿವರಿಸಬೇಕೆಂಬ ಹಂಬಲದಿಂದ ಬರೆಯಲು ಅಣಿಯಾಗಿದ್ದೇನೆ.

ದೇಶದ ಜನರು ಕೇಂದ್ರ ಸಭಾ ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿದ್ದಾರೆ. ವಿವಿಧ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ವೇಗದ ತಯಾರಿ ನಡೆಸಿವೆ. ಈ ಬಾರಿಯ ಚುನಾವಣೆ ಮೋದಿ ವರ್ಸಸ್ ಉಳಿದೆಲ್ಲ ಪಕ್ಷಗಳ ನಡುವೆ ಎಂದೇ ಹೇಳುವ ಮಟ್ಟಿಗೆ ನಡೆಯುತ್ತಿದೆ. ಎರಡನೆ ಬಾರಿ ಪ್ರಧಾನಿ ಗದ್ದುಗೆ ಏರಲು ಸಂಪೂರ್ಣ ಸಿದ್ದತೆ ನಡೆಸುತ್ತಿರುವ ಮೋದಿಯವರ ಪಡೆ ಒಂದೆಡೆಯಾದರೇ, ಏನೇ ಆಗಲಿ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಈ ಬಾರಿ ಸೋಲಿಸಲೆಬೇಕೆಂಬ ಹಠ ಕಾಂಗ್ರೆಸ್ ಹಾಗೂ ಉಳಿದ ಪಕ್ಷಗಳದ್ದಾಗಿದೆ.

ನನಗೆ ಮನಸ್ಸಿಗೆ ಬಹಳ ನೆಮ್ಮದಿ ತಂದಿದ್ದು, ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳ ವಿರುದ್ದ ವೈಮಾನಿಕ ದಾಳಿ. ಈ ದಾಳಿ ನಡೆಯುವ ಮುನ್ನ ಭಯೋತ್ಪಾದಕರ ಹುಟ್ಟು ಅಡಗಿಸಲು ಕೇಂದ್ರ ಸರಕಾರ ಸೇನೆಗೆ ನೀಡಿದ ಅಧಿಕಾರವನ್ನು ಮೆಚ್ಚಲೆಬೇಕು. ನಮ್ಮ ದೇಶದ ಸೈನಿಕರ ಪರಾಕ್ರಮವನ್ನು ಇಡೀ ವಿಶ್ವವೆ ಕೊಂಡಾಡಿರುವುದು ಸುಳ್ಳಲ್ಲ. ಆದರೆ ಇದು ಚುನಾವಣೆಯ ವಿಷಯವಾಗದಿರಲೆಂಬ ಮನವಿ ನನ್ನದು.

ಇನ್ನೂ ಕೆಚ್ಚೆದೆಯ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ದಿಟ್ಟ ನಿರ್ಧಾರಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ಅದರಲ್ಲೂ ಪ್ರಮುಖವಾಗಿ ನೋಟು ಬ್ಯಾನ್ ಒಂದು. ನೋಟು ಬ್ಯಾನ್ ನಿರ್ಧಾರ ಬಹಳ ಮಹತ್ವಪೂರ್ಣವಾದ ದಿಟ್ಟ ಹೆಜ್ಜೆಯೆಂದರೇ ತಪ್ಪಾಗಲಾರದು.

ನೋಟು ಬ್ಯಾನ್ ಆದ ಸಂದರ್ಭದಲ್ಲಿ ಎದುರಾಳಿ ಪಕ್ಷದವರು ಪ್ರತಿಭಟನೆ, ಹೋರಾಟ ಮಾಡಿರುವುದನ್ನು ನಾವು ನೋಡಿದ್ದೇವೆ. ಆ ಸಮಯದಲ್ಲಿ ಕೆಲವೊಂದು ಗೊಂದಲಗಳಿಂದ ಬಹುತೇಕ ಜನಸಾಮಾನ್ಯರಿಗೆ ತಕ್ಕಮಟ್ಟಿನ ತೊಂದರೆಯಾಗಿರುವುದಂತು ಸುಳ್ಳಲ್ಲ. ಅವೆಲ್ಲವುಗಳನ್ನು ಮೆಟ್ಟಿ ನಿಲ್ಲುವುದು ಸಣ್ಣ ಕಾರ್ಯವಲ್ಲ ಎನ್ನುವುದನ್ನು ಎಲ್ಲರು ಒಪ್ಪಿಕೊಳ್ಳಬೇಕು.

ನೋಟು ಬ್ಯಾನ್ ಉತ್ತಮವಾದ ನಿರ್ಧಾರವಾದರೂ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಎಡವಿದೆ ಎನ್ನುವುದು ಇಲ್ಲಿ ವಾಸ್ತವ ಸಂಗತಿ. ಅಕ್ರಮ ದಂಧೆ ಮತ್ತು ಕಳ್ಳ ಹಣ, ಖೋಟಾ ನೋಟು ಹಾವಳಿಯನ್ನು ನಿಯಂತ್ರಿಸುವುದೆ ಈ ನಿರ್ಧಾರದ ಪ್ರಮುಖ ಸಂಗತಿ.

ನೋಟು ಬ್ಯಾನ್ ಜಾರಿ ಎಡವಿದ್ದೆಲ್ಲಿ?
ಅಂದು ಪ್ರಧಾನಿ ನರೇಂದ್ರ ಮೋದಿಯವರು ಸಂಜೆಯಾಗುತ್ತಲೆ ನೋಟು ಬ್ಯಾನ್ ನಿರ್ಧಾರವನ್ನು ಪ್ರಕಟಿಸಿದರು. ಆ ಸಂದರ್ಭದಲ್ಲಿ ಅತ್ಯಂತ ಖುಷಿ ಪಟ್ಟವರಲ್ಲಿ ನಾನು ಒಬ್ಬ.

1.    ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೇ, ನೋಟು ಬ್ಯಾನ್ ಸಂದರ್ಭದಲ್ಲಿ ದೇಶದ ಎಲ್ಲ ಸಹಕಾರಿ ಸಂಘ, ಸಹಕಾರಿ ಬ್ಯಾಂಕ್ ಗಳಲ್ಲಿ ನಗದು ರೂಪದಲ್ಲಿದ್ದ ಹಣವನ್ನು ತಕ್ಷಣವೆ ಅಂದರೆ ಮರುದಿನ ಮಧ್ಯಾಹ್ನದೊಳಗಡೆ ಸಂಬಂಧಿಸಿದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಜಮಾ ಮಾಡಲು ಮತ್ತು ಮುಂದಿನ ಒಂದೆರಡು ತಿಂಗಳು ಯಾವುದೆ ಹಾಗೂ ಯಾರಿಂದಲೂ ಹಣವನ್ನು ಜಮಾ ಮಾಡಬಾರದೆಂದು ಕಟ್ಟುನಿಟ್ಟಿನ ಆದೇಶವನ್ನು ಮಾಡಬೇಕಿತ್ತು. ಆದರೆ ಆ ರೀತಿಯ ಆದೇಶವನ್ನು ಮಾಡದೇ ಇದ್ದ ಕಾರಣಕ್ಕೆ ಕಪ್ಪು ಹಣವುಳ್ಳವರು ತಮ್ಮ ಹಣವನ್ನು ಸಹಕಾರಿ ಸಂಘ, ಸೌಹಾರ್ಧ ಕೋ ಅಪರೇಟಿವ್ ಸಂಘ, ಸಹಕಾರಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುವುದರ ಮೂಲಕ ಪಾರಾಗಿ ಬಂದಿರುವುದಂತು ಗಮನಿಸಬೇಕಾದ ವಿಚಾರ. ನೋಟು ಬ್ಯಾನ್ ಸಮಯದಲ್ಲಿ ಅದೇಷ್ಟೊ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕ್ ಗಳು ನಿರೀಕ್ಷೆಗೂ ಮೀರಿ ಹಣ ಸಂಗ್ರಹಿಸಿ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನೋಟು ಬ್ಯಾನ್ ಘೋಷಣೆಯಾದ ನಂತರದ ದಿನಗಳಲ್ಲಿ ವೇಗವಾಗಿ ಜಮಾವನ್ನು ಮಾಡಿದೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಹಾಗಾಗಿ ದೇಶದ ಎಲ್ಲ  ಸಹಕಾರಿ ಸಂಘ, ಸೌಹಾರ್ಧ ಹಾಗೂ ಸಹಕಾರಿ ಬ್ಯಾಂಕ್ ಗಳನ್ನು ಆದಾಯ ತೆರಿಗೆ ಇಲಾಖೆ ಸೂಕ್ತವಾಗಿ ತನಿಖೆಗೊಳಪಡಿಸಿದ್ದಲ್ಲಿ ಇನ್ನೂ ಸಾವಿರಾರು ಕೋಟಿ ಹಣ ದೇಶದ ಬೊಕ್ಕಸಕ್ಕೆ ಜಮಾವಾಗಬಹುದು. ಹಾಗಾಗಿ ಮೋದಿಯವರ ನೋಟು ಬ್ಯಾನ್ ಉತ್ತಮವಾದ ನಿರ್ಧಾರವಾದರೂ ಅದನ್ನು ಜಾರಿಗೊಳಿಸುವಲ್ಲಿ ಹಿನ್ನಡೆ ಆಗಿದೆ ಎನ್ನುವುದು ಮುಖ್ಯ ವಿಚಾರ.

2.    ಕರೆಂಟ್ ಅಕೌಂಟ್ ಗಳಿಗೆ ನೋಟು ಜಮಾ: ದೇಶದ ಬಹುತೇಕ ಬ್ಯಾಂಕ್ ಗಳಲ್ಲಿದ್ದ ಉದ್ಯಮಿಗಳ, ಬಂಡವಾಳ ಶಾಹಿಗಳ, ವ್ಯವಹಾರೋದ್ಯಮಿಗಳ ಕರೆಂಟ್ ಅಕೌಂಟ್ ಗೆ ಬಹುತೇಕ ಕಡೆಗಳಲ್ಲಿ ನಿಷೇಧಿತ ರೂ:500/-, ರೂ:1000/- ನೋಟುಗಳು ಭಾರೀ ಪ್ರಮಾಣದಲ್ಲಿ ಜಮಾ ಮತ್ತು ವರ್ಗಾವಣೆಯಾಗಿದೆ ಎಂಬ ಮಾಹಿತಿಯಿದೆ. ಇನ್ನು ಕೆಲವರು ಹೇಳುವ ಪ್ರಕಾರ ಸರಕಾರಿ ಸೌಮ್ಯಕ್ಕೊಳಪಟ್ಟ ಇಲಾಖೆಗಳ ದೈನಂದಿನ ಹಣ ಸಂಗ್ರಹಣೆಯಲ್ಲೂ ವ್ಯಾಪಕವಾಗಿ ನಿಷೇಧಿತ ನೋಟುಗಳ ಬಳಕೆ ಮತ್ತು ಕೊಂಡು ಕೊಳ್ಳುವಿಕೆ ನಡೆದಿರಬಹುದೆ ಎಂಬ ಅನುಮಾವೂ ಬಹಳ ಜನರನ್ನು ಕಾಡುತ್ತಿದೆ. ಕರೆಂಟ್ ಅಕೌಂಟ್ ದಾರರ  ಅಕೌಂಟನ್ನು ತನಿಖೆಗೊಳಪಡಿಸುವುದು ಔಚಿತ್ಯಪೂರ್ಣವೂ ಹೌದು.

3.    ಇನ್ನೂ ನೋಟು ಬ್ಯಾನ್ ಮಾಡುವ ಒಂದೆರಡು ತಿಂಗಳ ಹಿಂದೆ ಮತ್ತು ಒಂದೆರಡು ತಿಂಗಳ ಆದ ಬಳಿಕ ಈ ದೇಶದ ಬಂಡವಾಳ ಶಾಹಿಗಳ, ಶಾಸಕರಾದಿಯಾಗಿ ರಾಜಕೀಯ ಮುಖಂಡರುಗಳ ಉಳಿತಾಯ ಖಾತೆ, ಕರೆಂಟ್ ಅಕೌಂಟ್ ಮತ್ತು ಬ್ಯಾಂಕ್ ಗಳಲ್ಲಿ ಹೊಂದಿದ್ದ ಲಾಕರ್ ಗಳ ಬಗ್ಗೆ ಸಮಗ್ರ ತನಿಖೆ ನಡೆಸಿದರೇ ಕೆಲವೊಂದು ವಾಸ್ತವಗಳು ಹೊರಬೀಳಬಹುದಾಗಿದೆ.

4.    ರೂ: 500 ಅಷ್ಟೆ ಜಮಾವಿದ್ದ ಬಡವರ ಉಳಿತಾಯ ಖಾತೆಗಳಲ್ಲಿ ನೋಟು ಬ್ಯಾನ್ ಘೋಷಣೆಯಾದ ಬಳಿಕ ಏಕಾಏಕಿ ರೂ:50,000/- ಜಮಾ ಆಗಿದೆ. ಜಮಾ ಆದ ಬಳಿಕ ರೂ: 45 ರಿಂದ 48 ಸಾವಿರ ಡ್ರಾ ಮಾಡಲಾಗಿದೆ ಎಂಬ ಮಾತುಗಳು ಆವಾಗ ಹರಿದಾಡುತ್ತಿತ್ತು. ಅದು ಎಲ್ಲಿಂದ ಬಂದಿರಬಹುದೆನ್ನುವುದು ತನಿಖೆಯಿಂದ ಮಾತ್ರ ತಿಳಿಯಲು ಸಾಧ್ಯ.

ಹೀಗೆ ಈ ಮೇಲೆ ತಿಳಿಸಿದ ವಿಚಾರಗಳ ಬಗ್ಗೆ ಸಮಗ್ರ ತನಿಖೆ ಮಾಡಿಸಿದ್ದಲ್ಲಿ ಮಾತ್ರ ನೋಟು ಬ್ಯಾನ್ ನಿರ್ಧಾರ ಇನ್ನೂ ಅತ್ಯುತ್ತಮ ಎಂದು ಖಡಖಂಡಿತವಾಗಿ ಹೇಳಬಹುದಾಗಿದೆ.

ಭೃಷ್ಟಚಾರ ನಿಯಂತ್ರಣಕ್ಕೆ ಒಂದೆ ಮಾರ್ಗ- ಚುನಾವಣೆಯ ವ್ಯವಸ್ಥೆಗೆ ಹೊಸತನವನ್ನು ನೀಡುವುದೆ ಒಳಿತು.

ಸರಕಾರಗಳು ಯಾವುದೇ ಕ್ರಮ ಕೈಗೊಳ್ಳಲಿ, ಯೋಜನೆಯನ್ನು ರೂಪಿಸಲಿ ಆದರೆ ಎಲ್ಲಿಯವರೆಗೆ ನಮ್ಮ ಚುನಾವಣಾ ವ್ಯವಸ್ಥೆಗೆ ಹೊಸ ಆಯಾಮವನ್ನು ನೀಡಲಾಗುವುದಿಲ್ಲವೊ ಅಲ್ಲಿವರೆಗೆ ಭೃಷ್ಟಚಾರ ನಿಯಂತ್ರಣ ಅಸಾಧ್ಯ ಎನ್ನುವುದು ಒಪ್ಪಿಕೊಳ್ಳಲೆಬೇಕು.

ಚುನಾವಣೆ ವ್ಯವಸ್ಥೆಗೆ ಹೊಸ ರೂಪ ನೀಡುವುದು ಅತ್ಯವಶ್ಯ: ಹೀಗಾದರೆ ಹೇಗೆ
ಚುನಾವಣಾ ಆಯೋಗ ಚುನಾವಣೆಗೂ 6 ತಿಂಗಳು ಇರುವಾಗಲೆ ಮುಂದೆ ಆರು ತಿಂಗಳೊಳಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆಸಬಹುದಾಗಿದೆ ಎಂದು ಘೋಷಣೆಯನ್ನು ನೀಡಬೇಕು. ಈ 6 ತಿಂಗಳಲ್ಲಿ ಚುನಾವಣೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡುವಂತಾಗಬೇಕು. ಆರು ತಿಂಗಳ ಬಳಿಕ ಒಂದು ದಿನ ಚುನಾವಣೆಯ ದಿನವನ್ನು ಘೋಷಿಸಬೇಕು.  ಚುನಾವಣಾ ದಿನವನ್ನು ಘೋಷಣೆ ಮಾಡಿ ಕೇವಲ ಒಂದು ವಾರದೊಳಗಡೆ ನಾಮಪತ್ರ ಸಲ್ಲಿಸಲು ಅವಕಾಶವಿರಬೇಕು. ನಾಮಪತ್ರ ಸಲ್ಲಿಸಿ ಹಿಂಪಡೆಯಲು 2 ದಿನ ಮಾತ್ರ ಅವಕಾಶ ನೀಡಬೇಕು. ನಾಮಪತ್ರ ಪರಿಶೀಲನೆ ಸೇರಿ ಮುಂದೆ 5 ದಿನದೊಳಗಡೆ ಚುನಾವಣೆ ನಡೆಯುವಂತಹ ವ್ಯವಸ್ಥೆಯನ್ನು ರೂಪಿಸುವುದು ಬಹು ಉತ್ತಮ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಂದ ಇದ್ದ ಬಿದ್ದ ದಾಖಲಾತಿಗಳನ್ನು ಪಡೆಯುದಕ್ಕಿಂತ ಅಭ್ಯರ್ಥಿ ಹಾಗೂ ಅಭ್ಯರ್ಥಿಯ ಕುಟುಂಬದವರ ಆಧಾರ್  ಕಾರ್ಡ್, ಮತದಾರನ ಗುರುತಿನ ಚೀಟಿ, ರೇಶನ್ ಕಾರ್ಡ್ ಮತ್ತು ಪಾನ್ ಕಾರ್ಡನ್ನು ಹಾಗೂ ಒಂದು ಬಾಂಡ್ ಪೇಪರನ್ನು ಪಡೆದುಕೊಳ್ಳುವುದು. ಯಾವುದೇ ಕಾರಣಕ್ಕೂ ಮನೆಪ್ರಚಾರಕ್ಕೆ ಅವಕಾಶ ನೀಡದೆ, ಕೇವಲ ಧ್ವನಿ ವರ್ಧಕದ ಮೂಲಕ ಎರಡು ದಿನದ ಪ್ರಚಾರಕ್ಕೆ ಅವಕಾಶ ನೀಡಿ, ಚುನಾವಣೆಯ ದಿನವೆ ಮತಗಟ್ಟೆಯ ಹೊರಗಡೆ ತಮ್ಮ ತಮ್ಮ ಅಭ್ಯರ್ಥಿಗಳ ಬಗ್ಗೆ ಪ್ರಚಾರಕ್ಕೆ ಅವಕಾಶ ನೀಡುವುದು.

ಮನೆ ಮನೆ ಪ್ರಚಾರದ ಅವಶ್ಯಕತೆ ಈಗಿಲ್ಲ: ಈಗ ಕಾಲ ಬದಲಾಗಿದೆ. ತಾಂತ್ರಿಕಯುಗಕ್ಕೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಒಗ್ಗಿಕೊಂಡಿದ್ದಾರೆ. ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ಸಾಮಾಜಿಕ ಜಾಲತಾಣಗಳ ಬಳಕೆ ವ್ಯಾಪಕವಾಗಿದೆ. ಹಾಗಾಗಿ ಮನೆ ಮನೆ ಪ್ರಚಾರ ಯಾಕೆ ಬೇಕು. ಮನೆ ಮನೆ ಚುನಾವಣಾ ಪ್ರಚಾರ ಮಾಡಲು ಅವಕಾಶವಿತ್ತಲ್ಲಿ ವಿವಿಧ ಆಮಿಷಗಳನ್ನು ಒಡ್ಡಿ ಮತಗಳನ್ನು ಕೊಂಡುಕೊಳ್ಳುವ ಅಕ್ರಮಗಳು ನಡೆಯುವ ಸಾಧ್ಯತೆಗಳಿರುತ್ತದೆ. ಹೀಗಿರುವಾಗ ಮನೆ ಮನೆ ಪ್ರಚಾರವೆ ಇಲ್ಲದಾಗ ಹೇಗೆ ತಾನೆ ಮತದಾರರಿಗೆ ಆಮಿಷ ಒಡ್ಡಲು ಸಾಧ್ಯ ಅಲ್ಲವೆ.

ಪಟ ಪಟ್ ಚುನಾವಣೆ ನಡೆಯುವ ದಿನಮಾನ ತ್ವರಿತಗತಿಯಲ್ಲಿ ಬರಲಿ. ಆ ರೀತಿಯಾದಾಗ ಮಾತ್ರ ಈ ದೇಶದ ಬಹುದೊಡ್ಡ ಸಮಸ್ಯೆ ಭೃಷ್ಟಚಾರವನ್ನು ಮೆಟ್ಟಿ ನಿಲ್ಲಬಹುದಾಗಿದೆ ಎಂಬ ಮನದ ಅಭಿಪ್ರಾಯ ನನ್ನದು.

ನಿಮ್ಮವ

ಸಂದೇಶ್.ಎಸ್.ಜೈನ್,
Dandeli. Uttarkannada dist, Karnataka.-581325.
9620595555.
email: sandesh.kanyady55@gmail.com
blog: sandeshnewspage@blogspot.com





 

Saturday, March 16, 2019

ದಾಂಡೇಲಿಯ ಮಕ್ಕಳ ಪಾಲಿಗೆ ಮಹೋನ್ನತ ಭಾಗ್ಯ.
ಮಗದೊಮ್ಮೆ ಅಂತರಾಷ್ಟ್ರೀಯ ಖ್ಯಾತಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಶ್ರೀ. ರೋಶನಲಾಲ್ ನಹರ್ ದಾಂಡೇಲಿಗೆ
ಸಮ್ಮರ್ ಬ್ಯಾಡ್ಮಿಂಟನ್ ಕೋಚಿಂಗ್ ಕ್ಯಾಂಪ್ ನಮ್ಮ - ನಿಮ್ಮ ದಾಂಡೇಲಿಯಲ್ಲಿ
 

ಬಹುಷ: ಇದು ದಾಂಡೇಲಿಯ ಮಕ್ಕಳ ಪಾಲಿಗೆ ಮಹೋನ್ನತ ಬಾಗ್ಯ ಎಂದರೆ ಅತಿಶಯೋಕ್ತಿ ಎನಿಸದು. ಮಕ್ಕಳೆಲ್ಲಾ ಪರೀಕ್ಷೆಯ ಬ್ಯುಜಿ ಶೆಡ್ಯೂಲಿನಲ್ಲಿದ್ದಾರೆ. ಎಕ್ಸಾಂ ಮುಗಿದ ಮೇಲೆ ಏನ್ಮಾಡೋದು ಎಂಬ ಚಿಂತೆ, ಈ ಬಾರಿ ನಮ್ಮೂರ ಮಕ್ಕಳಿಗೆ ಬೇಡವೆ ಬೇಡ. ಅದಕ್ಕಾಗಿಯೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಸನ್ ಸಮ್ಮರ್ ಬ್ಯಾಡ್ಮಿಂಟನ್ ಕೋಚಿಂಗ್ ಕ್ಯಾಂಪನ್ನು ಪ್ರಸ್ತುತ ಪಡಿಸುತ್ತಿದೆ.

ಭಾರತ ಕಂಡ ಅತ್ಯುತ್ತಮ ಹಾಗೂ ಕ್ರೀಡಾಸ್ಪೂರ್ತಿ ಮೆರೆದ ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದ ಅನನ್ಯ ಪ್ರತಿಭೆಗಳ ಮುಖ್ಯ ತರಬೇತುದಾರರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಶ್ರೀ. ರೋಶನಲಾಲ್ ನಹರ್ ಅವರು ಈ ಬಾರಿ ಮಗದೊಮ್ಮೆ ದಾಂಡೇಲಿಯ ಮಕ್ಕಳಿಗೆ ಬ್ಯಾಡ್ಮಿಂಟನ್ ಕೋಚಿಂಗ್ ನೀಡಲು ಆಗಮಿಸುತ್ತಿದ್ದಾರೆ. ಕಳೆದ 14 ವರ್ಷಗಳಿಂದ ರಾಷ್ಟ್ರೀಯ ಕ್ಯಾಂಪ್ ಗಳನ್ನು ಯಶಸ್ವಿಯಾಗಿ ಸಂಘಟಿಸಿದ ಕೀರ್ತಿಗೆ ಭಾಜನರಾಗಿರುವ ಭಾರತ ಬ್ಯಾಡ್ಮಿಂಟನ್ ತಂಡದ ಕೋಚ್ ಆಗಿ ಗಣನೀಯ ಕ್ರೀಡಾಸೇವೆ ನೀಡಿದ ಶ್ರೀ.ರೋಶನಲಾಲ್ ಅವರು ತನ್ನ ಅತ್ಯುತ್ತಮವಾದ ತರಬೇತಿಯಿಂದಾಗಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆಗೆ ಪಾತ್ರರಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ವಿವಿಧ ಪ್ರಶಸ್ತಿಗಳು, ಸನ್ಮಾನ ಪತ್ರಗಳು ಅವರನ್ನು ಅರಸಿ ಬಂದಿವೆ.  ನಮ್ಮೂರ ಮಕ್ಕಳನ್ನು ತರಬೇತಿ ನೀಡುವುದರ ಮೂಲಕ ಆಶೀರ್ವದಿಸಲು ಬರುತ್ತಿರುವ ಶ್ರೀ. ರೋಶನಲಾಲ್ ಅವರಿಗೆ ಅಭಿಮಾನದ ಸ್ವಾಗತ.

ಇದೇ ಬರುವ ದಿನಾಂಕ: 22.03.2019 ರಿಂದ 06.04.2019 ರವರೆಗೆ ದಾಂಡೇಲಿಯ ಸುಭಾಸನಗರದ ಒಳ ಕ್ರೀಡಾಂಗಣದಲ್ಲಿ ಸಮ್ಮರ್ ಬ್ಯಾಡ್ಮಿಂಟನ್ ಕ್ಯಾಂಪ್ ನಡೆಯಲಿದ್ದು, ಆಸಕ್ತರು ಈ ಕೂಡಲೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ.

ಮಾರ್ಚ್ : 22 ರಿಂದ ಆರಂಭವಾಗುವ ಕೋಚಿಂಗ್ ಕ್ಯಾಂಪಿನಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 7.30 ಗಂಟೆಯವರೆಗೆ ದೈಹಿಕ ಪಿಟ್ನೇಸ್ ನಡೆಯಲಿದೆ. ಆ ಬಳಿಕ ಬೆಳಿಗ್ಗೆ 9.30 ರಿಂದ 11.30 ಗಂಟೆಯವರೆಗೆ ಮತ್ತು ಸಂಜೆ 4.30 ರಿಂದ 7.30 ಗಂಟೆಯವರೆಗೆ ಬ್ಯಾಡ್ಮಿಂಟನ್ ಕೋಚಿಂಗ್ ನಡೆಯಲಿದೆ. 
 
ಇದೊಂದು ಅಪೂರ್ವ ಅವಕಾಶ. ಈ ಅವಕಾಶ ಎಲ್ಲರಿಗೂ, ಎಲ್ಲ ಕಡೆ ಸಿಗಲು ಸಾಧ್ಯವೆ ಇಲ್ಲ. ಇಂತಹದ್ದರಲ್ಲಿ ದಾಂಡೇಲಿಯಲ್ಲಿ ಮಹತ್ವದ ಕ್ಯಾಂಪ್ ನಡೆಯುತ್ತಿರುವುದು ನಿಜಕ್ಕೂ ದಾಂಡೇಲಿಗೆ ಹೆಮ್ಮೆ, ನಮ್ಮೂರ ಮಕ್ಕಳ ಪುಣ್ಯವೆ ಸರಿ.
ಹಾಗದ್ರೆ ತಡವೇಕೆ, ಕೂಡಲೆ ತಮ್ಮ ಹೆಸರನ್ನು ನೊಂದಾಯಿಸಿ, ಹೆಚ್ಚಿನ ಮಾಹಿತಿಗಾಗಿ
 
ನವೀನ್ ಕಾಮತ್ ಮೊ: 9591618850
ಗುರು ಮಠಪತಿ ಮೊ: 9916010060
ಕುಮಾರ್ ಕರಗಯ್ಯ ಮೊ: 9845730069
 
ಬನ್ನಿ, ನಮ್ಮೂರ ಮಕ್ಕಳನ್ನು ಕ್ರೀಡಾಕ್ಷೇತ್ರದ ಮಹೋನ್ನತ ಆಸ್ತಿಯನ್ನಾಗಿಸೋಣ.
 
ನಿಮ್ಮವ
 
ಸಂದೇಶ್.ಎಸ್.ಜೈನ್






 

Friday, March 15, 2019


ಛಲಗಾರ್ತಿ ಅಮ್ಮ ಸುಶೀಲಮ್ಮ ಇನ್ನಿಲ್ಲ
ದಾಂಡೇಲಿ:  ನಗರದ ವನಶ್ರೀನಗರದ ನಿವಾಸಿ, ಹೋರಾಟಗಾರ್ತಿ ಸುಶೀಲಮ್ಮ ಸ್ಯಾಮುವೆಲ್ ಬೈಲಾ (ವ:93) ಶುಕ್ರವಾರ ರಾತ್ರಿ ದೈವದೀನರಾದರು.

ವಿವಿಧ ಜನಪರ ಹೋರಾಟಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದ ಸುಶೀಲಮ್ಮ ಅವರು ಹಿಂದೊಮ್ಮೆ ನಗರ ಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ಮೃತರು ಯುವ ಸಮಾಜ ಸೇವಕ ಬರ್ನಾಡ್ ಬೈಲಾ ಸೇರಿದಂತೆ ಐದು ಹೆಣ್ಣು, ಮೂವರು ಗಂಡು ಮಕ್ಕಳನ್ನು ಹಾಗೂ 35 ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.

ಛಲಗಾರ್ತಿಯಾಗಿದ್ದ ಅಮ್ಮ ಸುಶೀಲಮ್ಮ ನಮಗೆಲ್ಲಾ ತಾಯಿಯ ಪ್ರೀತಿಯನ್ನು ನೀಡಿದವರು. ಬಹಳ ಆತ್ಮೀಯವಾಗಿದ್ದ ಸುಶೀಲಮ್ಮನವರ ನಿಧನ ನಮಗೆಲ್ಲಾ ಅತೀವ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಪ್ರಾಪ್ತಿಯಾಗಲೆಂಬ ಪ್ರಾರ್ಥನೆ.

ಸಂದೇಶ್.ಎಸ್.ಜೈನ್


Thursday, March 7, 2019

ದಾಂಡೇಲಿ : ನಗರದ ಸುಭಾಸನಗರದ ನಿವಾಸಿ ಪ್ರಿಯಾಂಕ ಪೌಲ್ ಫರ್ನಾಂಡೀಸ್ ಇವರು ಧಾರವಾಡದ ಎಸ್ ಡಿ ಎಂ ಇನ್ಯೂಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಇಲ್ಲಿ ಎಂ.ಎಸ್ಸಿ ನರ್ಸಿಂಗ್ (ಮೆಡಿಕಲ್ ಸರ್ಜಿಕಲ್ ನರ್ಸಿಂಗ್ ) ಸ್ನಾತ್ತಕೋತ್ತರ ಪದವಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಗಣನೀಯ ಸಾಧನೆಗೈದಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಪ್ರಿಯಾಂಕ ಪೌಲ್ ಫರ್ನಾಂಡೀಸ್ ಇವರು ದಾಂಡೇಲಿ ನಗರಸಭೆಯ ಸಿಬ್ಬಂದಿ ಪ್ರೆಸಿಲ್ಲಾ ಫರ್ನಾಂಡೀಸ್ ಹಾಗೂ ಸಮಾಜ ಸೇವಕ ಪೌಲ್ ಫರ್ನಾಂಡೀಸ್ ಇವರ ಸುಪುತ್ರಿಯಾಗಿದ್ದಾರೆ. ಇವರು ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯ ಹಾಗೂ ಬಂಗೂರ ನಗರ ಪಿ.ಯು ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುತ್ತಾರೆ.  ಪ್ರಿಯಾಂಕರ ಸಾಧನೆಗೆ ಅಂಬೇವಾಡಿ ಚರ್ಚಿನ ಧರ್ಮಗುರುಗಳಾದ ರೆ|| ಫಾ|| ಗ್ರೇಗೊರಿ ಡಿಸೋಜ ಹಾಗೂ ಹಳೆ ದಾಂಡೇಲಿ ಚರ್ಚಿನ ಧರ್ಮಗುರುಗಳಾದ ಇಗ್ನೇಷಿಯಸ್ ಡಿಸೋಜ, ನಗರಸಭೆಯ ಸಿಬ್ಬಂದಿ ವರ್ಗ, ಹಾಗೂ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.                                                                                 

ಪ್ರತಿಭಾವಂತೆ ಪ್ರಿಯಾಂಕ ಪೌಲ್ ಫರ್ನಾಂಡೀಸ್ ಅವರ ಶ್ರಮ ಸಾಧನೆಗೆ ಅಭಿಮಾನದ ಅಭಿನಂದನೆಗಳು. ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭಾಶಯಗಳು.

ಸಂದೇಶ್.ಎಸ್.ಜೈನ್

 

Monday, March 4, 2019


ದಾಂಡೇಲಿ: ಆಹಾ: ಒಂದೆಡೆ ಬಿಸಿಲು, ದಟ್ಟ ಕಾನನನ ಮಧ್ಯೆ ಏರಿಳಿದು ವರ್ಷಕ್ಕೊಮ್ಮೆ ದರ್ಶನ ನೀಡುವ ಕವಳೇಶ್ವರನ ದರ್ಶನ ಪಡೆಯುವ ಭಕ್ತರ ಮನತಣಿಸಲು ಮತ್ತು ನೀರಿನ ದಾಹ ತಣಿಸಲು ಕಳೆದ 19 ವರ್ಷಗಳಿಂದ ಶುದ್ದ ಕುಡಿಯುವ ನೀರು ಹಾಗೂ ಬೆಲ್ಲವನ್ನು ವಿತರಿಸುವ ಕಾಯಕಕ್ಕೆ ಇಳಿಯುವುದರ ಮೂಲಕ ಭಕ್ತರ ನೀರಿನ ದಾಹ ತಣಿಯಲು ಕೈಗೊಂಡ ದಾಂಡೇಲಿಯ ರಾಜೇಶ ಜುವ್ಹೆಲ್ಲರ್ಸ್ ಮಾಲಕ ಹಾಗೂ ಯುವ ಸಮಾಜ ಸೇವಕ ರಾಜೇಶ ವೆರ್ಣೇಕರ ಅವರು ಕೈಗೊಂಡ ಈ ಸೇವಾ ಕೈಂಕರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ 19 ವರ್ಷಗಳಿಂದ ಈ ಸೇವೆಯನ್ನು ನೀಡುತ್ತಾ ಬಂದಿರುವ ರಾಜೇಶ ವೆಣರ್ೇಕರ ಅವರ ಈ ಸೇವೆಯ ಹಿಂದೆ ಬಲವಾದ ಕಾರಣವಿದೆ. ಹೌದು, 1999 ರಲ್ಲಿ ಕವಳೇಶ್ವರನ ದರ್ಶನಕ್ಕೆ ಕುಟುಂಬ ಸಮೇತರಾಗಿ ಹೋದ ಸಂದರ್ಭದಲ್ಲಿ ನೀರಿಗಾಗಿ ಹಪಹಪಿಸುತ್ತಿರುವುದನ್ನು ನೋಡಿ, ಮುಂದಿನ ವರ್ಷದಿಂದ ಈ ಸಮಸ್ಯೆಗೆ ಪರಿಹಾರವನ್ನು ನೀಡಬೇಕು, ದಣಿದು ಬರುವ ಭಕ್ತರಿಗೆ ತತಕ್ಷಣವೆ ಕುಡಿಯುವ ನೀರು ಸಿಗಬೇಕೆಂದು ಚಿಂತಿಸಿ 2000 ನೇ ವರ್ಷದಿಂದ ರಾಜೇಶ ವೆರ್ಣೇಕರ ಅವರು ತನ್ನ ಗಳೆಯರ ಹಾಗೂ ತನ್ನ ಸಂಸ್ಥೆಯ ಸಿಬ್ಬಂದಿಗಳ ಜೊತೆಗೂಡಿ ದಣಿವರಿದು ಬಂದ ಭಕ್ತರಿಗೆ ಶುದ್ದ ಕುಡಿಯುವ ನೀರು ಹಾಗೂ ಬೆಲ್ಲದ ವ್ಯವಸ್ಥೆಯನ್ನು ಮಾಡುವುದರ ಮೂಲಕ ಭಕ್ತಾಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಈ ವರ್ಷವೂ ಸೋಮವಾರ ಅತ್ಯಂತ ವ್ಯವಸ್ಥಿತವಾಗಿ, ಶಿಸ್ತುಬದ್ದವಾಗಿ ನೀರು ಮತ್ತು ಬೆಲ್ಲವನ್ನು ವಿತರಿಸುವ ಮೂಲಕ ರಾಜೇಶ ವೆರ್ಣೇಕರ ಹಾಗೂ ಅವರ ತಂಡ ಗಮನ ಸೆಳೆದಿದೆ.

ಇದು ನಿರಂತರ:
ರಾಜೇಶ ವೆರ್ಣೇಕರ 
ಮಹಾ ಶಿವರಾತ್ರಿಯಂದು ಕವಳೇಶ್ವರ ಸನ್ನಿಧಿಗೆ ಬರುವ ಭಕ್ತಾಭಿಮಾನಿಗಳಿಗೆ ನೀರು ಮತ್ತು ಬೆಲ್ಲ ವನ್ನು ವಿತರಿಸುವ ಕಾರ್ಯ ಮಹಾಶಿವರಾತ್ರಿಯಂದು ನಿರಂತರವಾಗಿ ನಡೆಯಲಿದೆ. ಇದು ಶಿವನ ಸೇವೆ ಎಂದು ರಾಜೇಶ ವೆರ್ಣೇಕರ ಅವರು ಪತ್ರಿಕೆಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ದುರ್ಗಮ ಕಾಡಿನೊಳಗೊಡೆ ಏರಿಳಿದು ಕವಳೇಶ್ವರ ದರ್ಶನ ಪಡೆಯುವ ಭಕ್ತರ ಮನ ತಣಿಸಲು ಆರಂಭಿಸಿದ ರಾಜೇಶ ವೆರ್ಣೇಕರ ಹಾಗೂ ಅವರ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ನಿಮ್ಮವ

ಸಂದೇಶ್.ಎಸ್.ಜೈನ್
 




 

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...