Wednesday, March 20, 2019

ಮನದ ಮಾತು
ಬಹಳ ದಿನಗಳಿಂದ ಬರೆಯಬೇಕು, ಬರೆಯಬೇಕು ಅನಿಸ್ತಿತ್ತು. ಆದರೆ ಅದು ಕೈಗೂಡಲೆ ಇಲ್ಲ. ಆದರೂ ಇವತ್ತು ಸ್ವಲ್ಪ ಹೊತ್ತು ಬಿಡುವು ಮಾಡಿಕೊಂಡು ನನ್ನ ಮನದ ಮಾತನ್ನು ತಮ್ಮುಂದೆ ಬಿಚ್ಚಿಡುವ ಸಣ್ಣ ಪ್ರಯತ್ನ ನಡೆಸಿದ್ದೇನೆ.

ಖಂಡಿತವಾಗಿ ಇದು ರಾಜಕೀಯ ದ್ವೇಶಕ್ಕಾಗಿ ಬರೆಯುತ್ತಿಲ್ಲ. ವಾಸ್ತವ ಅಂಶಗಳನ್ನು ವಿವರಿಸಬೇಕೆಂಬ ಹಂಬಲದಿಂದ ಬರೆಯಲು ಅಣಿಯಾಗಿದ್ದೇನೆ.

ದೇಶದ ಜನರು ಕೇಂದ್ರ ಸಭಾ ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿದ್ದಾರೆ. ವಿವಿಧ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ವೇಗದ ತಯಾರಿ ನಡೆಸಿವೆ. ಈ ಬಾರಿಯ ಚುನಾವಣೆ ಮೋದಿ ವರ್ಸಸ್ ಉಳಿದೆಲ್ಲ ಪಕ್ಷಗಳ ನಡುವೆ ಎಂದೇ ಹೇಳುವ ಮಟ್ಟಿಗೆ ನಡೆಯುತ್ತಿದೆ. ಎರಡನೆ ಬಾರಿ ಪ್ರಧಾನಿ ಗದ್ದುಗೆ ಏರಲು ಸಂಪೂರ್ಣ ಸಿದ್ದತೆ ನಡೆಸುತ್ತಿರುವ ಮೋದಿಯವರ ಪಡೆ ಒಂದೆಡೆಯಾದರೇ, ಏನೇ ಆಗಲಿ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಈ ಬಾರಿ ಸೋಲಿಸಲೆಬೇಕೆಂಬ ಹಠ ಕಾಂಗ್ರೆಸ್ ಹಾಗೂ ಉಳಿದ ಪಕ್ಷಗಳದ್ದಾಗಿದೆ.

ನನಗೆ ಮನಸ್ಸಿಗೆ ಬಹಳ ನೆಮ್ಮದಿ ತಂದಿದ್ದು, ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳ ವಿರುದ್ದ ವೈಮಾನಿಕ ದಾಳಿ. ಈ ದಾಳಿ ನಡೆಯುವ ಮುನ್ನ ಭಯೋತ್ಪಾದಕರ ಹುಟ್ಟು ಅಡಗಿಸಲು ಕೇಂದ್ರ ಸರಕಾರ ಸೇನೆಗೆ ನೀಡಿದ ಅಧಿಕಾರವನ್ನು ಮೆಚ್ಚಲೆಬೇಕು. ನಮ್ಮ ದೇಶದ ಸೈನಿಕರ ಪರಾಕ್ರಮವನ್ನು ಇಡೀ ವಿಶ್ವವೆ ಕೊಂಡಾಡಿರುವುದು ಸುಳ್ಳಲ್ಲ. ಆದರೆ ಇದು ಚುನಾವಣೆಯ ವಿಷಯವಾಗದಿರಲೆಂಬ ಮನವಿ ನನ್ನದು.

ಇನ್ನೂ ಕೆಚ್ಚೆದೆಯ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ದಿಟ್ಟ ನಿರ್ಧಾರಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ಅದರಲ್ಲೂ ಪ್ರಮುಖವಾಗಿ ನೋಟು ಬ್ಯಾನ್ ಒಂದು. ನೋಟು ಬ್ಯಾನ್ ನಿರ್ಧಾರ ಬಹಳ ಮಹತ್ವಪೂರ್ಣವಾದ ದಿಟ್ಟ ಹೆಜ್ಜೆಯೆಂದರೇ ತಪ್ಪಾಗಲಾರದು.

ನೋಟು ಬ್ಯಾನ್ ಆದ ಸಂದರ್ಭದಲ್ಲಿ ಎದುರಾಳಿ ಪಕ್ಷದವರು ಪ್ರತಿಭಟನೆ, ಹೋರಾಟ ಮಾಡಿರುವುದನ್ನು ನಾವು ನೋಡಿದ್ದೇವೆ. ಆ ಸಮಯದಲ್ಲಿ ಕೆಲವೊಂದು ಗೊಂದಲಗಳಿಂದ ಬಹುತೇಕ ಜನಸಾಮಾನ್ಯರಿಗೆ ತಕ್ಕಮಟ್ಟಿನ ತೊಂದರೆಯಾಗಿರುವುದಂತು ಸುಳ್ಳಲ್ಲ. ಅವೆಲ್ಲವುಗಳನ್ನು ಮೆಟ್ಟಿ ನಿಲ್ಲುವುದು ಸಣ್ಣ ಕಾರ್ಯವಲ್ಲ ಎನ್ನುವುದನ್ನು ಎಲ್ಲರು ಒಪ್ಪಿಕೊಳ್ಳಬೇಕು.

ನೋಟು ಬ್ಯಾನ್ ಉತ್ತಮವಾದ ನಿರ್ಧಾರವಾದರೂ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಎಡವಿದೆ ಎನ್ನುವುದು ಇಲ್ಲಿ ವಾಸ್ತವ ಸಂಗತಿ. ಅಕ್ರಮ ದಂಧೆ ಮತ್ತು ಕಳ್ಳ ಹಣ, ಖೋಟಾ ನೋಟು ಹಾವಳಿಯನ್ನು ನಿಯಂತ್ರಿಸುವುದೆ ಈ ನಿರ್ಧಾರದ ಪ್ರಮುಖ ಸಂಗತಿ.

ನೋಟು ಬ್ಯಾನ್ ಜಾರಿ ಎಡವಿದ್ದೆಲ್ಲಿ?
ಅಂದು ಪ್ರಧಾನಿ ನರೇಂದ್ರ ಮೋದಿಯವರು ಸಂಜೆಯಾಗುತ್ತಲೆ ನೋಟು ಬ್ಯಾನ್ ನಿರ್ಧಾರವನ್ನು ಪ್ರಕಟಿಸಿದರು. ಆ ಸಂದರ್ಭದಲ್ಲಿ ಅತ್ಯಂತ ಖುಷಿ ಪಟ್ಟವರಲ್ಲಿ ನಾನು ಒಬ್ಬ.

1.    ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೇ, ನೋಟು ಬ್ಯಾನ್ ಸಂದರ್ಭದಲ್ಲಿ ದೇಶದ ಎಲ್ಲ ಸಹಕಾರಿ ಸಂಘ, ಸಹಕಾರಿ ಬ್ಯಾಂಕ್ ಗಳಲ್ಲಿ ನಗದು ರೂಪದಲ್ಲಿದ್ದ ಹಣವನ್ನು ತಕ್ಷಣವೆ ಅಂದರೆ ಮರುದಿನ ಮಧ್ಯಾಹ್ನದೊಳಗಡೆ ಸಂಬಂಧಿಸಿದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಜಮಾ ಮಾಡಲು ಮತ್ತು ಮುಂದಿನ ಒಂದೆರಡು ತಿಂಗಳು ಯಾವುದೆ ಹಾಗೂ ಯಾರಿಂದಲೂ ಹಣವನ್ನು ಜಮಾ ಮಾಡಬಾರದೆಂದು ಕಟ್ಟುನಿಟ್ಟಿನ ಆದೇಶವನ್ನು ಮಾಡಬೇಕಿತ್ತು. ಆದರೆ ಆ ರೀತಿಯ ಆದೇಶವನ್ನು ಮಾಡದೇ ಇದ್ದ ಕಾರಣಕ್ಕೆ ಕಪ್ಪು ಹಣವುಳ್ಳವರು ತಮ್ಮ ಹಣವನ್ನು ಸಹಕಾರಿ ಸಂಘ, ಸೌಹಾರ್ಧ ಕೋ ಅಪರೇಟಿವ್ ಸಂಘ, ಸಹಕಾರಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುವುದರ ಮೂಲಕ ಪಾರಾಗಿ ಬಂದಿರುವುದಂತು ಗಮನಿಸಬೇಕಾದ ವಿಚಾರ. ನೋಟು ಬ್ಯಾನ್ ಸಮಯದಲ್ಲಿ ಅದೇಷ್ಟೊ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕ್ ಗಳು ನಿರೀಕ್ಷೆಗೂ ಮೀರಿ ಹಣ ಸಂಗ್ರಹಿಸಿ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನೋಟು ಬ್ಯಾನ್ ಘೋಷಣೆಯಾದ ನಂತರದ ದಿನಗಳಲ್ಲಿ ವೇಗವಾಗಿ ಜಮಾವನ್ನು ಮಾಡಿದೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಹಾಗಾಗಿ ದೇಶದ ಎಲ್ಲ  ಸಹಕಾರಿ ಸಂಘ, ಸೌಹಾರ್ಧ ಹಾಗೂ ಸಹಕಾರಿ ಬ್ಯಾಂಕ್ ಗಳನ್ನು ಆದಾಯ ತೆರಿಗೆ ಇಲಾಖೆ ಸೂಕ್ತವಾಗಿ ತನಿಖೆಗೊಳಪಡಿಸಿದ್ದಲ್ಲಿ ಇನ್ನೂ ಸಾವಿರಾರು ಕೋಟಿ ಹಣ ದೇಶದ ಬೊಕ್ಕಸಕ್ಕೆ ಜಮಾವಾಗಬಹುದು. ಹಾಗಾಗಿ ಮೋದಿಯವರ ನೋಟು ಬ್ಯಾನ್ ಉತ್ತಮವಾದ ನಿರ್ಧಾರವಾದರೂ ಅದನ್ನು ಜಾರಿಗೊಳಿಸುವಲ್ಲಿ ಹಿನ್ನಡೆ ಆಗಿದೆ ಎನ್ನುವುದು ಮುಖ್ಯ ವಿಚಾರ.

2.    ಕರೆಂಟ್ ಅಕೌಂಟ್ ಗಳಿಗೆ ನೋಟು ಜಮಾ: ದೇಶದ ಬಹುತೇಕ ಬ್ಯಾಂಕ್ ಗಳಲ್ಲಿದ್ದ ಉದ್ಯಮಿಗಳ, ಬಂಡವಾಳ ಶಾಹಿಗಳ, ವ್ಯವಹಾರೋದ್ಯಮಿಗಳ ಕರೆಂಟ್ ಅಕೌಂಟ್ ಗೆ ಬಹುತೇಕ ಕಡೆಗಳಲ್ಲಿ ನಿಷೇಧಿತ ರೂ:500/-, ರೂ:1000/- ನೋಟುಗಳು ಭಾರೀ ಪ್ರಮಾಣದಲ್ಲಿ ಜಮಾ ಮತ್ತು ವರ್ಗಾವಣೆಯಾಗಿದೆ ಎಂಬ ಮಾಹಿತಿಯಿದೆ. ಇನ್ನು ಕೆಲವರು ಹೇಳುವ ಪ್ರಕಾರ ಸರಕಾರಿ ಸೌಮ್ಯಕ್ಕೊಳಪಟ್ಟ ಇಲಾಖೆಗಳ ದೈನಂದಿನ ಹಣ ಸಂಗ್ರಹಣೆಯಲ್ಲೂ ವ್ಯಾಪಕವಾಗಿ ನಿಷೇಧಿತ ನೋಟುಗಳ ಬಳಕೆ ಮತ್ತು ಕೊಂಡು ಕೊಳ್ಳುವಿಕೆ ನಡೆದಿರಬಹುದೆ ಎಂಬ ಅನುಮಾವೂ ಬಹಳ ಜನರನ್ನು ಕಾಡುತ್ತಿದೆ. ಕರೆಂಟ್ ಅಕೌಂಟ್ ದಾರರ  ಅಕೌಂಟನ್ನು ತನಿಖೆಗೊಳಪಡಿಸುವುದು ಔಚಿತ್ಯಪೂರ್ಣವೂ ಹೌದು.

3.    ಇನ್ನೂ ನೋಟು ಬ್ಯಾನ್ ಮಾಡುವ ಒಂದೆರಡು ತಿಂಗಳ ಹಿಂದೆ ಮತ್ತು ಒಂದೆರಡು ತಿಂಗಳ ಆದ ಬಳಿಕ ಈ ದೇಶದ ಬಂಡವಾಳ ಶಾಹಿಗಳ, ಶಾಸಕರಾದಿಯಾಗಿ ರಾಜಕೀಯ ಮುಖಂಡರುಗಳ ಉಳಿತಾಯ ಖಾತೆ, ಕರೆಂಟ್ ಅಕೌಂಟ್ ಮತ್ತು ಬ್ಯಾಂಕ್ ಗಳಲ್ಲಿ ಹೊಂದಿದ್ದ ಲಾಕರ್ ಗಳ ಬಗ್ಗೆ ಸಮಗ್ರ ತನಿಖೆ ನಡೆಸಿದರೇ ಕೆಲವೊಂದು ವಾಸ್ತವಗಳು ಹೊರಬೀಳಬಹುದಾಗಿದೆ.

4.    ರೂ: 500 ಅಷ್ಟೆ ಜಮಾವಿದ್ದ ಬಡವರ ಉಳಿತಾಯ ಖಾತೆಗಳಲ್ಲಿ ನೋಟು ಬ್ಯಾನ್ ಘೋಷಣೆಯಾದ ಬಳಿಕ ಏಕಾಏಕಿ ರೂ:50,000/- ಜಮಾ ಆಗಿದೆ. ಜಮಾ ಆದ ಬಳಿಕ ರೂ: 45 ರಿಂದ 48 ಸಾವಿರ ಡ್ರಾ ಮಾಡಲಾಗಿದೆ ಎಂಬ ಮಾತುಗಳು ಆವಾಗ ಹರಿದಾಡುತ್ತಿತ್ತು. ಅದು ಎಲ್ಲಿಂದ ಬಂದಿರಬಹುದೆನ್ನುವುದು ತನಿಖೆಯಿಂದ ಮಾತ್ರ ತಿಳಿಯಲು ಸಾಧ್ಯ.

ಹೀಗೆ ಈ ಮೇಲೆ ತಿಳಿಸಿದ ವಿಚಾರಗಳ ಬಗ್ಗೆ ಸಮಗ್ರ ತನಿಖೆ ಮಾಡಿಸಿದ್ದಲ್ಲಿ ಮಾತ್ರ ನೋಟು ಬ್ಯಾನ್ ನಿರ್ಧಾರ ಇನ್ನೂ ಅತ್ಯುತ್ತಮ ಎಂದು ಖಡಖಂಡಿತವಾಗಿ ಹೇಳಬಹುದಾಗಿದೆ.

ಭೃಷ್ಟಚಾರ ನಿಯಂತ್ರಣಕ್ಕೆ ಒಂದೆ ಮಾರ್ಗ- ಚುನಾವಣೆಯ ವ್ಯವಸ್ಥೆಗೆ ಹೊಸತನವನ್ನು ನೀಡುವುದೆ ಒಳಿತು.

ಸರಕಾರಗಳು ಯಾವುದೇ ಕ್ರಮ ಕೈಗೊಳ್ಳಲಿ, ಯೋಜನೆಯನ್ನು ರೂಪಿಸಲಿ ಆದರೆ ಎಲ್ಲಿಯವರೆಗೆ ನಮ್ಮ ಚುನಾವಣಾ ವ್ಯವಸ್ಥೆಗೆ ಹೊಸ ಆಯಾಮವನ್ನು ನೀಡಲಾಗುವುದಿಲ್ಲವೊ ಅಲ್ಲಿವರೆಗೆ ಭೃಷ್ಟಚಾರ ನಿಯಂತ್ರಣ ಅಸಾಧ್ಯ ಎನ್ನುವುದು ಒಪ್ಪಿಕೊಳ್ಳಲೆಬೇಕು.

ಚುನಾವಣೆ ವ್ಯವಸ್ಥೆಗೆ ಹೊಸ ರೂಪ ನೀಡುವುದು ಅತ್ಯವಶ್ಯ: ಹೀಗಾದರೆ ಹೇಗೆ
ಚುನಾವಣಾ ಆಯೋಗ ಚುನಾವಣೆಗೂ 6 ತಿಂಗಳು ಇರುವಾಗಲೆ ಮುಂದೆ ಆರು ತಿಂಗಳೊಳಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆಸಬಹುದಾಗಿದೆ ಎಂದು ಘೋಷಣೆಯನ್ನು ನೀಡಬೇಕು. ಈ 6 ತಿಂಗಳಲ್ಲಿ ಚುನಾವಣೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡುವಂತಾಗಬೇಕು. ಆರು ತಿಂಗಳ ಬಳಿಕ ಒಂದು ದಿನ ಚುನಾವಣೆಯ ದಿನವನ್ನು ಘೋಷಿಸಬೇಕು.  ಚುನಾವಣಾ ದಿನವನ್ನು ಘೋಷಣೆ ಮಾಡಿ ಕೇವಲ ಒಂದು ವಾರದೊಳಗಡೆ ನಾಮಪತ್ರ ಸಲ್ಲಿಸಲು ಅವಕಾಶವಿರಬೇಕು. ನಾಮಪತ್ರ ಸಲ್ಲಿಸಿ ಹಿಂಪಡೆಯಲು 2 ದಿನ ಮಾತ್ರ ಅವಕಾಶ ನೀಡಬೇಕು. ನಾಮಪತ್ರ ಪರಿಶೀಲನೆ ಸೇರಿ ಮುಂದೆ 5 ದಿನದೊಳಗಡೆ ಚುನಾವಣೆ ನಡೆಯುವಂತಹ ವ್ಯವಸ್ಥೆಯನ್ನು ರೂಪಿಸುವುದು ಬಹು ಉತ್ತಮ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಂದ ಇದ್ದ ಬಿದ್ದ ದಾಖಲಾತಿಗಳನ್ನು ಪಡೆಯುದಕ್ಕಿಂತ ಅಭ್ಯರ್ಥಿ ಹಾಗೂ ಅಭ್ಯರ್ಥಿಯ ಕುಟುಂಬದವರ ಆಧಾರ್  ಕಾರ್ಡ್, ಮತದಾರನ ಗುರುತಿನ ಚೀಟಿ, ರೇಶನ್ ಕಾರ್ಡ್ ಮತ್ತು ಪಾನ್ ಕಾರ್ಡನ್ನು ಹಾಗೂ ಒಂದು ಬಾಂಡ್ ಪೇಪರನ್ನು ಪಡೆದುಕೊಳ್ಳುವುದು. ಯಾವುದೇ ಕಾರಣಕ್ಕೂ ಮನೆಪ್ರಚಾರಕ್ಕೆ ಅವಕಾಶ ನೀಡದೆ, ಕೇವಲ ಧ್ವನಿ ವರ್ಧಕದ ಮೂಲಕ ಎರಡು ದಿನದ ಪ್ರಚಾರಕ್ಕೆ ಅವಕಾಶ ನೀಡಿ, ಚುನಾವಣೆಯ ದಿನವೆ ಮತಗಟ್ಟೆಯ ಹೊರಗಡೆ ತಮ್ಮ ತಮ್ಮ ಅಭ್ಯರ್ಥಿಗಳ ಬಗ್ಗೆ ಪ್ರಚಾರಕ್ಕೆ ಅವಕಾಶ ನೀಡುವುದು.

ಮನೆ ಮನೆ ಪ್ರಚಾರದ ಅವಶ್ಯಕತೆ ಈಗಿಲ್ಲ: ಈಗ ಕಾಲ ಬದಲಾಗಿದೆ. ತಾಂತ್ರಿಕಯುಗಕ್ಕೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಒಗ್ಗಿಕೊಂಡಿದ್ದಾರೆ. ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ಸಾಮಾಜಿಕ ಜಾಲತಾಣಗಳ ಬಳಕೆ ವ್ಯಾಪಕವಾಗಿದೆ. ಹಾಗಾಗಿ ಮನೆ ಮನೆ ಪ್ರಚಾರ ಯಾಕೆ ಬೇಕು. ಮನೆ ಮನೆ ಚುನಾವಣಾ ಪ್ರಚಾರ ಮಾಡಲು ಅವಕಾಶವಿತ್ತಲ್ಲಿ ವಿವಿಧ ಆಮಿಷಗಳನ್ನು ಒಡ್ಡಿ ಮತಗಳನ್ನು ಕೊಂಡುಕೊಳ್ಳುವ ಅಕ್ರಮಗಳು ನಡೆಯುವ ಸಾಧ್ಯತೆಗಳಿರುತ್ತದೆ. ಹೀಗಿರುವಾಗ ಮನೆ ಮನೆ ಪ್ರಚಾರವೆ ಇಲ್ಲದಾಗ ಹೇಗೆ ತಾನೆ ಮತದಾರರಿಗೆ ಆಮಿಷ ಒಡ್ಡಲು ಸಾಧ್ಯ ಅಲ್ಲವೆ.

ಪಟ ಪಟ್ ಚುನಾವಣೆ ನಡೆಯುವ ದಿನಮಾನ ತ್ವರಿತಗತಿಯಲ್ಲಿ ಬರಲಿ. ಆ ರೀತಿಯಾದಾಗ ಮಾತ್ರ ಈ ದೇಶದ ಬಹುದೊಡ್ಡ ಸಮಸ್ಯೆ ಭೃಷ್ಟಚಾರವನ್ನು ಮೆಟ್ಟಿ ನಿಲ್ಲಬಹುದಾಗಿದೆ ಎಂಬ ಮನದ ಅಭಿಪ್ರಾಯ ನನ್ನದು.

ನಿಮ್ಮವ

ಸಂದೇಶ್.ಎಸ್.ಜೈನ್,
Dandeli. Uttarkannada dist, Karnataka.-581325.
9620595555.
email: sandesh.kanyady55@gmail.com
blog: sandeshnewspage@blogspot.com





 

1 comment:

  1. 👍 Very well written and I agree with the feelings expressed by you. Irrespective of any Political Party that we may support individually, the views expressed are not at all biased !

    ReplyDelete

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...