ನಗುಮೊಗದ ಆಪತ್ಪಾಂದವ ವೈದ್ಯ ನಮ್ಮೂರ ಡಾ: ಅನಿಲ್ ನಾಯ್ಕ
ಹ್ಯಾಪಿ ಬರ್ತುಡೆ ಮೈ ಡಿಯರ್ ಲವ್ಲಿ ಡಾಕ್ಟ್ರೆ
ಅವರದ್ದು ಜಬರ್ದಸ್ತ್ ಪರ್ಸನಾಲಿಟಿ. ನೇರ ಮಾತಿನ ಕ್ರಿಯಾಶೀಲ ಯುವಕ. ಗಂಡೆದೆಯ ದೈರ್ಯವಂತ. ಅಪತ್ತಿಗಂತೂ ಆಪತ್ಪಾಂದವ ಎನ್ನಲು ಅಡ್ಡಿಯಿಲ್ಲ. ಒಟ್ಟಿನಲ್ಲಿ ವೈದ್ಯ ಸೇವೆಯ ಮೂಲಕ ಅಲ್ಪ ವರ್ಷದಲ್ಲೆ ಮನೆ ಮಾತಾದ ಯುವಕ ಬೇರೆ ಯಾರು ಅಲ್ಲ. ಆ ಗುಣವಂತ ಡಾ: ಅನಿಲ್ ನಾಯ್ಕ.
ಅಂದ ಹಾಗೆ ಇಂದು ನಮ್ಮಲ್ಲೆರ ಅಚ್ಚುಮೆಚ್ಚಿನ ಡಾ: ಅನಿಲ್ ಅವರಿಗೆ ಜನ್ಮದಿನದ ಸಂಭ್ರಮ. ಹುಟ್ಟು ಹಬ್ಬದ ಖುಷಿಯಲ್ಲಿರುವ ಡಾ: ಅನಿಲ್ ಅವರಿಗೆ ನನ್ನ ಕಡೆಯಿಂದ ಒಲವಿನ ಶುಭಾಶಯಗಳು.
ಮಾಜಿ ಪೌರಾಯುಕ್ತ ಎನ್.ಎಸ್.ನಾಯ್ಕ ಅವರ ಮುದ್ದಿನ ಮಗನಾದ ಡಾ: ಅನಿಲ್ ಅವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಪಡೆದರು. ಆ ಬಳಿಕ ಬಂಗೂರನಗರ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದು, ದಾವಣಗೆರೆಯ ಸುಪ್ರಸಿದ್ದ ಜೆ.ಜೆ.ಎಂ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದರು.
ಎಳೆಯ ಮಗುವಾಗಿದ್ದಾಗಲೇ ದಷ್ಟಪುಷ್ಟರಾಗಿದ್ದ ನಮ್ಮ ಅನಿಲ್ ಅವರನ್ನು ಅವರ ಅಮ್ಮನಿಗೆ ಸಲೀಸಾಗಿ ಎತ್ತಿಕೊಳ್ಳಲು ಆಗುತ್ತಿರಲಿಲ್ಲ. ಮುದ್ದು ಕಂದ ಆವಾಗ್ಲೆ ಮನೆ ಸುತ್ತಾಮುತ್ತ ಎಲ್ಲರ ಪ್ರೀತಿ ವಾತ್ಸಲ್ಯಕ್ಕೆ ಪಾತ್ರರಾಗಿದ್ದದ್ದು ಮಾತ್ರ ವಿಶೇಷ. ಕ್ರಿಕೆಟ್, ವಾಲಿಬಾಲ್ ಅಂದರೆ ಪಂಚಪ್ರಾಣ ನಮ್ಮ ಅನಿಲ್ ಅವರಿಗೆ. ಶಾಲೆಗೆ ರಜೆ ಬಂತೆಂದರೆ ಉರಿ ಬಿಸಿಲಲ್ಲಿಯೂ ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ಬೆಳೆಸಿಕೊಂಡಿದ್ದರಂತೆ. ಆಟದಲ್ಲೂ ಪಾಠದಲ್ಲೂ ಮುಂದಿದ್ದ ಡಾ: ಅನಿಲ್ ಅವರು ಶಾಲಾ/ಕಾಲೇಜು ದಿನಗಳಲ್ಲಿರುವಾಗ್ಲೆ ಅಸಂಖ್ಯಾತ ಗೆಳೆಯರನ್ನು ಸಂಪಾದಿಸಿಕೊಂಡಿದ್ದರು. ಅವರ ಗೆಳೆಯರ ಬಳಗವನ್ನು ನೋಡಿ ಇವ ಡಾಕ್ಟರ್ ಆಗುತ್ತಾನೊ ಎಂಬ ಒಳಗೊಳಗೆ ಚಿಂತೆ ಅವರ ಅಪ್ಪನಿಗಿದ್ದದ್ದು ಹೌದಾದರೂ, ಮಗನ ಕಲಿಕೆ ಮತ್ತು ಉತ್ಸಾಹ ಅಪ್ಪ, ಅಮ್ಮ ಇಟ್ಟುಕೊಂಡಿದ್ದ ಭವಿಷ್ಯದ ಕನಸು ನನಸಾಗಲು ಸಾಧ್ಯವಾಯಿತು.
ಎಂ.ಬಿ.ಬಿ.ಎಸ್ ಪದವಿ ಬಳಿಕ ಕೇರಳದ ಪ್ರಸಿದ್ದ ಆಸ್ಪತ್ರೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಡಾ: ಅನಿಲ್ ಅವರು ಅಪ್ಪ, ಅಮ್ಮನ ಕರೆಗೆ ಓಗೊಟ್ಟು ಕೈ ತುಂಬ ಸಂಬಳ ಬರುವ ಕೆಲಸಕ್ಕೆ ಗುಡ್ ಬೈ ಹಾಡಿ ದಾಂಡೇಲಿಗೆ ಬಂದರು. ದಾಂಡೇಲಿಗೆ ಬಂದವರೆ ಹಳಿಯಾಳ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾಗಿ ಸೇವೆಯನ್ನು ಸಲ್ಲಿಸಲಾರಂಭಿಸಿದರು. ಪ್ರಸಕ್ತ ಹಳಿಯಾಳ ಸಾರ್ವಜನಿಕ ಆಸ್ಪತ್ರೆ ವ್ಯಾಪ್ತಿಯ ಭಾಗವತಿಯಲ್ಲಿರುವ ಪ್ರಾಥಾಮಿಕ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದರ ಮುನ್ನ ಯಡೋಗಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆಯನ್ನು ಸಲ್ಲಿಸಿ ಯಡೋಗಾ ಜನರ ಪೀತಿಗೆ ಪಾತ್ರರಾಗಿದ್ದರು. ಯಡೋಗಾ ಜನತೆಯ ಪಾಲಿಗೆ ಅದೃಷ್ಟ ವೈದ್ಯರಾಗಿ ಸೇವೆಯನ್ನು ಸಲ್ಲಿಸಿದ ಕೀರ್ತಿ ನಮ್ಮ ಅನಿಲ್ ಅವರಿಗಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಅತ್ಯಂತ ಗೌರವಯುತವಾಗಿ ನಡೆದುಕೊಳ್ಳುವ ಪರಿಯಂತು ಅವರ ಹೃದಯವಂತಿಕೆಯನ್ನು ಸಾರಿ ಹೇಳುತ್ತದೆ. ಸಾವಿನ ಸನಿಹದಲ್ಲಿದ್ದ ಅನೇಕರಿಗೆ ಆರೋಗ್ಯ ಧೈರ್ಯವನ್ನು ನೀಡಿ ಅವರುಗಳನ್ನು ಉಳಿಸಿಕೊಂಡ ಧನ್ಯತೆ ನಮ್ಮ ಅನಿಲ್ ಅವರಿಗಿದೆ.
ತನ್ನ ಕೆಲಸದ ನಂತರ ಪ್ರತಿದಿನ ಸಂಜೆಯಿಂದ ರಾತ್ರಿ 11 ಗಂಟೆಯವರೆಗೆ ದಾಂಡೇಲಿಯ ಸೋಮಾನಿ ವೃತ್ತದ ಬಳಿ ಇರುವ ವಿಶಾಲ ಕಟ್ಟಡದಲ್ಲಿ ಶ್ರೀ.ಕ್ಲಿನಿಕ್ ಮೂಲಕ ವೈದ್ಯ ಸೇವೆ ನೀಡುತ್ತಿರುವ ಡಾ: ಅನಿಲ್ ನಾಯ್ಕ ಅವರು ಅತ್ಯುತ್ತಮವಾಗಿ ಆರೋಗ್ಯ ಸೇವೆಯನ್ನು ನೀಡಿ ನಗರದ ಜನತೆಯ ಮಮತೆಗೆ ಪಾತ್ರರಾಗಿದ್ದಾರೆ.
ಕಳೆದ ವರ್ಷ ಮರವೊಂದು ಬಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವಯಸ್ಸಾದ ಮಹಿಳೆಯೊಬ್ಬರನ್ನು ಸುದರ್ಶನ್ ಆರ್.ಸಿ ಯವರು ಅನಿಲ್ ಅವರ ಕ್ಲಿನಿಕಿಗೆ ಕರೆ ತಂದಾಗ ಡಾ: ಅನಿಲ್ ಅವರು ಸ್ಪಂದಿಸಿದ ರೀತಿ ಮತ್ತು ಆ ಹೆಣ್ಮಗಳನ್ನು ಉಳಿಸಲು ಮಾಡಿದ ಹೋರಾಟಕ್ಕೆ ಬಿಗ್ ಸೆಲ್ಯೂಟ್ ಹೊಡೆಯಲೆಬೇಕು. ಹೀಗೆ ಇನ್ನೂ ಅನೇಕ ಜೀವಗಳಿಗೆ ಮರಳಿ ಜೀವವನ್ನು ಒದಗಿಸಿಕೊಟ್ಟಂತಹ ಸಾಧನೆಯನ್ನು ಮಾಡಿದ ಡಾ: ಅನಿಲ್ ಅವರ ಮಾನವೀಯ ಕಾರ್ಯವನ್ನು ಮೆಚ್ಚಲೆಬೇಕು. ಬಡ ಬಗ್ಗರು ಅವರ ಕ್ಲಿನಿಕ್ ಹೋದರೆ ಉಚಿತವಾಗಿ ಆರೋಗ್ಯ ಸೇವೆ ನೀಡುವುದರ ಮೂಲಕ ಜೀವನ ಸಾರ್ಥಕತೆಯತ್ತ ಹೆಜ್ಜೆಯಿಟ್ಟಿದ್ದಾರೆ.
ಒಬ್ಬ ಮಾದರಿ ವೈದ್ಯರಾಗಿ, ಅನುಪಮ ಸೇವೆಗೈಯುತ್ತಿರುವ ಡಾ: ಅನಿಲ್ ಅವರು ನಿಜವಾಗಿಯೂ ನಮ್ಮ ದಾಂಡೇಲಿಯ ಆಸ್ತಿ ಎಂದರೆ ಅತಿಶಯೋಕ್ತಿ ಎನಿಸದು. ವಿಶಾಲ ಮನಸ್ಸಿನ ನನ್ನ ಆತ್ಮೀಯ ಮಿತ್ರರಾದ ಡಾ: ಅನಿಲ್ ಅವರ ಸಾಮಾಜಿಕ ಕಾಳಜಿ, ಬದ್ಧತೆಗೆ ಗೌರವಪೂರ್ವಕ ಕೃತಜ್ಞತೆಗಳು.
ಭವಿಷ್ಯದ ಬಹಳಷ್ಟು ಕನಸುಗಳನ್ನೇರಿ ನಾಗಲೋಟದಲ್ಲಿ ಸಾಗುತ್ತಿರುವ ಡಾ: ಅನಿಲ್ ಅವರಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮವ
ಸಂದೇಶ್.ಎಸ್.ಜೈನ್