ಶಾಂತ ಮನಸ್ಸಿನ ಶಾರದಾ ಇನ್ನಿಲ್ಲ
ಅಯ್ಯೋ ವಿಧಿಯೆ?. ನನ್ನ ತಂಗಿಯನ್ನೇಕೆ ಕರಕೊಂಡಿ?
ಅಯ್ಯೋ ವಿಧಿಯೆ?. ನನ್ನ ತಂಗಿಯನ್ನೇಕೆ ಕರಕೊಂಡಿ?
ನಾನು ಅತ್ಯಂತ ಇಷ್ಟ ಮತ್ತು ಗೌರವಿಸುತ್ತಿದ್ದ ನನ್ನ ಒಡಹುಟ್ಟಿದ ತಂಗಿಯಂತೆ ಇದ್ದವರು ನನ್ನ ತಂಗಿ ಶಾರದಾ ಅವರು. ನಮ್ಮ ದಾಂಡೇಲಿ ನಗರ ಸಭೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ ಏಳೆಂಟು ವರ್ಷಗಳ ಕಾಲ ಅನುಪಮ ಸೇವೆ ಸಲ್ಲಿಸಿ ಪ್ರಾಮಾಣಿಕ ಅಧಿಕಾರಿಯಾಗಿ ಗಮನ ಸೆಳೆದವರು ಇದೇ ಸಹೋದರಿ ಶಾರದಾ ಅವರು. ಹಸುಗೂಸು ಮಗುವನ್ನು ತನ್ನ ತಾಯಿಯ ಕೈಯಲ್ಲಿ ಕೊಟ್ಟು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕೆಲಸ ಮಾಡುತ್ತಿದ್ದ ಸ್ವಚ್ಚ ಹೃದಯದ ಕೆಲಸಗಾರ್ತಿ ಮುದ್ದಿನ ತಂಗಿ ಶಾರದಾ ಇನ್ನಿಲ್ಲ. ಮರಳಿ ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ ಎನ್ನುವುದನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ.
ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದ ಕರುಳ ಬಳ್ಳಿಗೆ ಕಾಲ ಕಾಲಕ್ಕೆ ಎದೆ ಹಾಲು ಉಣಿಸಬೇಕಾದ ನಮ್ಮ ಶಾರದಾ ಅವರು ಬಾಟಲಿ ಹಾಲನ್ನು ಕೊಡಿಸಿ ಮಗುವನ್ನು ಬೆಳೆಸುವುದರ ಜೊತೆಗೆ ಕರ್ತವ್ಯ ಪ್ರಜ್ಞೆ ಮೆರೆದಿರುವುದನ್ನು ಭಗವಂತನು ಸಹಿಸಿಕೊಳ್ಳಲಿಲ್ಲವಲ್ಲ ಎಂಬ ಕೊರಗು ಇಂದು ಮುಂಜಾನೆಯಿಂದ ನನಗೆ ಕಾಡಿಸುತ್ತಿದೆ.
ಹೌದು, ಸ್ನೇಹಿತರೇ, ಇಂದು ನಾನು ಅತೀಯಾಗಿ ಮುದ್ದಿಸುತ್ತಿದ್ದ ನನ್ನ ಮನದ ತಂಗಿ ಶಾರದಾ ಅವರು ನಮ್ಮೆಲ್ಲರನ್ನು ಬಿಟ್ಟು ಪರಲೋಕಕ್ಕೆ ಪ್ರಯಾಣಿಸಿದ್ದಾರೆ. ಇನ್ನೂ ಬಹುವರ್ಷಗಳ ಕಾಲ ಬದುಕಿ, ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಬೇಕಿದ್ದ ಶಾರದಾ ಇಂದು ನಮ್ಮನ್ನೆಲ್ಲ ಅಗಲಿರುವುದು ಅತ್ಯಂತ ದುಖ:ದ ಸಂಗತಿ. ಸ್ನೇಹಿತರೇ ಬೆಂಗಳೂರಿಗೆ ಪಯಾಣಿಸುತ್ತಿದ್ದ ಶಾರದಾ ಅವರು ಸೇರಿ ಅವರ ಮನದೊಡೆಯ ಸುನೀಲ ಗಾವಡೆಯವರು ಇತ್ತೀಚೆಗೆ ಖರೀದಿಸಿದ ಹೊಚ್ಚ ಹೊಸ ಸ್ವಿಪ್ಟ್ ಡಿಜೈರ್ ಕಾರಿನಲ್ಲಿ ಬೆಂಗಳೂರಿನಲ್ಲಿದ್ದ ಮಾನಸ ಪುತ್ರನನ್ನು ಕರೆಯಲೆಂದು ರಾತ್ರಿ ಪಯಾಣ ಬೆಳೆಸಿದ್ದರು. ಆದರೆ ವಿಧಿಯಾಟಕ್ಕೆ ಏನು ಹೇಳಲಿ. ತಾಳ್ಮೆ, ಏಕಾಗ್ರತೆಯನ್ನು ಮೈಗೂಡಿಸಿಕೊಂಡಿದ್ದ ಕರಾಟೆಯಲ್ಲಿ ಅಂತರಾಷ್ಟ್ರೀಯ ಸಾಧನೆಗೈದಿದ್ದ ಸುನೀಲ ಗಾವಡೆಯವರು ಚಲಾಯಿಸುತ್ತಿದ್ದ ಕಾರು ಟ್ರಕಿಗೆ ಬಡಿದ ಪರಿಣಾಮವಾಗಿ ನನ್ನ ತಂಗಿ ಶಾರದಾ ಅವರು ಸ್ಥಳದಲ್ಲೆ ಅಸು ನೀಗಿದ್ದಾರೆ. ಇನ್ನೂ ನಮ್ಮ ಸುನೀಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತ್ಯಂತ ಕರುಳ ಹಿಂಡುವ ನೋವಿನ ಘಟನೆ ಇದಾಗಿದ್ದು, ಇಂಥಹ ದುರ್ಘಟನೆ ಎಂದು ಮರುಕಳಿಸದಿರಲೆಂದು ಪ್ರಾರ್ಥಿಸುತ್ತೇನೆ. ನಮ್ಮನ್ನು ಅಗಲಿದ ಮುದ್ದಿನ ತಂಗಿ ಶಾರದಾ ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲಿ, ಅವರ ಪತಿ ಸುನೀಲ ಗಾವಡೆಯವರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಇತೀ,
ಸಂದೇಶ್.ಎಸ್.ಜೈನ್



No comments:
Post a Comment