Saturday, December 1, 2018

ಹುದ್ದೆಯಲ್ಲಿ ಭಡ್ತಿಗೊಂಡ ನಮ್ಮ ಶಂಕರ ಖಾರ್ವಿಯವರಿಗೆ ಜನ್ಮದಿನದ ಸಡಗರ
ಗುಣವಂತ, ಹೃದಯವಂತ ಈ ನಮ್ಮ ಶಂಕರ


ಹುದ್ದೆಯಲ್ಲಿ ಭಡ್ತಿಗೊಂಡ ನಮ್ಮ ಶಂಕರ ಖಾರ್ವಿಯವರಿಗೆ ಜನ್ಮದಿನದ ಸಡಗರ
ಗುಣವಂತ, ಹೃದಯವಂತ ಈ ನಮ್ಮ ಶಂಕರ

ಅವರದ್ದು ಒಂಥರ ಡಿಪರೆಂಟ್ ವ್ಯಕ್ತಿತ್ವ. ಅವರಿಗೆ ಎಲ್ಲರು ಬೇಕು. ಇನ್ನೊಬ್ಬರ ಸಂಕಷ್ಟಕ್ಕೆ ತಡವರಿಯದೇ ಸ್ಪಂದಿಸುವ ವಿಶಾಲ ಹೃದಯದ ಹೃದಯಶ್ರೀಮಂತ. ಸಹಜವಾಗಿ ನಾವು ಅಂದುಕೊಂಡಿರುವುದೇ ಬೇರೆ. ಪೊಲೀಸರೆಂದ್ರೆ ಕರುಣೆ, ಅನುಕಂಪನೆ ಇಲ್ಲವೆಂದು ಬಹುತೇಕ ಜನರು ತಿಳಿದಿರಬಹುದೆಂಬ ವಿಶ್ಲೇಷಣೆ ನನ್ನದು. ಆದರೆ ನಮ್ಮ ಹೆಮ್ಮೆಯ ಉತ್ತರ ಕನ್ನಡ ಜಿಲ್ಲೆಯ ಪೊಲೀಸರ ನಡವಳಿಕೆ, ಗುಣವಂತಿಕೆ, ಮಾನವೀಯ ಸ್ಪಂದನೆಯ ಮನಸ್ಸಿಗೆ ಕೈಮುಗಿದು ನಮಸ್ಕಾರ ಹೇಳಬೇಕ್ರಿ. ನಾನ್ಯಕೆ ಹೇಳ್ತೇನೆಂದ್ರೆ ನಮ್ಮ ಜಿಲ್ಲೆಯ ಪೊಲೀಸರ ವ್ಯಕ್ತಿತ್ವ, ಸಮಾಜಮುಖಿಯಾಗಿರುವ ಅವರ ಜೀವನ ನಡವಳಿಕೆಯಿದೆಯಲ್ಲಾ ಅದು ನಮ್ಮ ಜಿಲ್ಲೆಯ ವೈಶಿಷ್ಟ್ಯವೆೆಂದೆ ಹೇಳಬೇಕು. ಇವರಲ್ಲೊಬ್ಬರಾದ ಕರುಣಾಮಯಿ ಪೊಲೀಸರೊಬ್ಬರ ಬಗ್ಗೆ ನಾಲ್ಕಕ್ಷರ ಬರೆಯಲು ಸಜ್ಜಾಗಿದ್ದೇನೆ.

ಅವರು ಬೇರೆ ಯಾರು ಅಲ್ಲ. ನಮ್ಮ ಜಿಲ್ಲೆಯವರೇ ಆದ ಹಾಗೂ ಪೊಲೀಸ್ ನೌಕರಿಗೆ ಸೇರಿ ಪ್ರಪ್ರಥಮವಾಗಿ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಸೈಲೆಂಟ್ ವ್ಯಕ್ತಿತ್ವದ ಹಾಗೂ ಕಡಿಮೆ ಮಾತಿನ ಸುಸಂಸ್ಕೃತ ನಡವಳಿಕೆಯ ನಮ್ಮ ಶಂಕರ ಖಾರ್ವಿ. ಇಂದವರಿಗೆ ಜನ್ಮದಿನದ ಸಂಭ್ರಮ, ಸಡಗರ. ಚೊಚ್ಚಲ ಬಾರಿಗೆ ಬಗಲಲ್ಲಿ ಮುದ್ದಿನ ಮಡದಿಯನ್ನು ನಿಲ್ಲಿಸಿಕೊಂಡು ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಶಂಕರ ಖಾರ್ವಿಯವರಿಗೆ ಹಾರ್ದಿಕ ಶುಭಾಶಯಗಳು ಹೇಳುವ ಮುನ್ನಾ ಮುಂದಿನ ವರ್ಷ ಕೈಯಲ್ಲೊಂದು ಮುದ್ದಾದ ಮಗುನೊಂದಿಗೆ ಹುಟ್ಟುಹಬ್ಬವನ್ನು ಆಚರಿಸುವಂತಾಗಲೆಂಬ ಶುಭ ಹಾರೈಕೆಯೊಂದಿಗೆ ಬರೆಯಲು ಮುಂದುವರಿಯುತ್ತೇನೆ.

ಶಂಖರ ಖಾರ್ವಿ ಅವರೇನು ಶ್ರೀಮಂತ ಕುಟುಂಬದವರಲ್ಲ. ಅಂಕೋಲಾದ ಬೆಳಂಬಾರದ ಗ್ರಾಮದಲ್ಲಿ ಜನ್ಮವೆತ್ತವರು ಈ ನಮ್ಮ ಶಂಕರ ಅವರು. ತೀರಾ ಬಡತನದ ಕುಟುಂಬದಲ್ಲೆ ಬದುಕು ಕಟ್ಟಿಕೊಂಡವರು. ಅವರಪ್ಪ ಒಂದು ಕಾಲದಲ್ಲಿ ಮೀನುಗಾರಿಕೆ ವೃತ್ತಿಯಲ್ಲೆ ಸಂಸಾರವನ್ನು ನಿರ್ವಹಿಸಿದವರು. ಆದಾದ ಬಳಿಕ ಅವರಪ್ಪನಿಗೆ ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತ ನೌಕರಿ ದೊರೆಯಿತು. ಇಲ್ಲಿಂದ ಅವರ ಬದುಕು ಹಸನಾಗಲು ಪ್ರಾರಂಭವಾಯಿತು. ಅಂದ ಹಾಗೆ ನಮ್ಮ ಶಂಕರ ಅವರು ನಿಸ್ವಾರ್ಥ ಮನಸ್ಸಿನ ಕಾಮೇಶ್ವರ ಖಾರ್ವಿ ಹಾಗೂ ಲಕ್ಷ್ಮೀ ದಂಪತಿಗಳ ಹಿರಿ ಮಗ. ಶಂಕರ ಅವರಿಗೆ ಸವಿತಾ ಮತ್ತು ಗೀತಾ ಎಂಬಿಬ್ಬರು ತಂಗಿಯಂದಿರರು ಹಾಗೂ ರಮಾನಂದ ಎಂಬ ಮುದ್ದಿನ ತಮ್ಮ ಇದ್ದಾರೆ.

ಶಂಕರ ಅವರ ತಂದೆ ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಒಂದೇ ಸ್ಥಳದಲ್ಲಿ ಇರಲಾಗುತ್ತಿರಲಿಲ್ಲ. ಹಾಗಾಗಿ ನಮ್ಮ ಶಂಕರ ಅವರು ಬೇರೆ ಬೇರೆ ಶಾಲೆಗಳಲ್ಲಿ ಕಲಿಯುವ ಅನಿವಾರ್ಯತೆ ಬಂದಿತ್ತು. ಶಂಕರ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಕಾರವಾರದ ಗೋಟೆಗಾಳಿಯಲ್ಲಿರುವ ಸರಕಾರಿ ಶಾಲೆಯಲ್ಲಿ, ಅಂಕೋಲಾ ತಾಲೂಕಿನ ಅಡ್ಲೂರುನಲ್ಲಿದ್ದ ಸರಕಾರಿ ಶಾಲೆ, ಮತ್ತು ಅದೇ ತಾಲೂಕಿನ ಅಗಸೂರು ಸರಕಾರಿ ಶಾಲೆಯಲ್ಲಿ ಪಡೆದರು. ಮುಂದೆ ಅಗಸೂರಿನಲ್ಲಿರುವ ಸರಕಾರಿ ಹೈಸ್ಕೂಲ್ ಮತ್ತು ಸರಕಾರಿ ಪಿಯು ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರಿಸಿದರು. ಪಿಯುಸಿ ಆದ ಬಳಿಕ ಅಂಕೋಲಾದ ಜಿ.ಸಿ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆದರು.

ಶಾಲಾ/ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಮಾತು ಕಡಿಮೆಯಾದರೂ ಕ್ರೀಡೆಯಲ್ಲಿ ಜನಪ್ರಿಯತೆಯನ್ನು ಗಳಿಸಿದ್ದರು. ಪ್ರಮುಖವಾಗಿ ವಾಲಿಬಾಲ್, ಕ್ರಿಕೆಟ್ ಪಂದ್ಯಾವಳಿಯಲ್ಲಿ ತನ್ನ ತಾಕತ್ತನ್ನು ಪ್ರದರ್ಶಿಸಿ ಅನೇಕ ಫಲಕಗಳನ್ನು ಪಡೆದ ಧನ್ಯತೆ ನಮ್ಮ ಶಂಕರ ಅವರಿಗಿದೆ. ಇದರ ಜೊತೆ ಜೊತೆಯಲ್ಲಿ ಗಾಯನ ಮತ್ತು ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಶೀಲರಾಗಿ ಶಾಲೆಗೆ ಮತ್ತು ಊರಿಗೆ ಕೀರ್ತಿ ತಂದುಕೊಟ್ಟ ಹೆಗ್ಗಳಿಕೆ ಶಂಕರ್ ಅವರಿಗಿದೆ.

ಖುಲಾಯಿಸಿದ ಅದೃಷ್ಟ:

ನಮ್ಮ ಶಂಕರ ಅವರೇನೂ ಇನ್ನೂ ಅಂತಿಮ ಪದವಿಯ ಅಂತಿಮ ಪರೀಕ್ಷೆ ಬರೆಯುವ ಐದಾರು ತಿಂಗಳು ಇರುವಾಗ್ಲೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಮಹೋನ್ನತ ಅವಕಾಶ ಅವರಿಗೆ ಒಲಿದು ಬಂತು. ಬಂದ ಅವಕಾಶವನ್ನು ಬಿಡದೇ, ಸೇವೆಗೆ ಸೇರಿಕೊಂಡ ಶಂಕರ ಅವರು ಪೊಲೀಸ್ ತರಬೇತಿ ಪಡೆಯುತ್ತಲೆ ಇತ್ತ ಬಿ.ಎ ಅಂತಿಮ ಪರೀಕ್ಷೆಯನ್ನು ಬರೆದು ಪದವಿ ಪೊರೈಸಿದರು.

2005 ರಲ್ಲಿ ಪೊಲೀಸ್ ಇಲಾಖೆಗೆ ಸೇರಿಕೊಂಡ ನಮ್ಮ ಶಂಕರ ಅವರು 2005 ರ 150 ಜನರ ಪೊಲೀಸ್ ಬ್ಯಾಚಿನಲ್ಲಿ ಸೆಲೆಕ್ಷನ್ ಆದ ಮೊದಲ ಪೊಲೀಸ್ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.  ಒಂದು ವರ್ಷಗಳ ಕಾಲ ತರಬೇತಿ ಪಡೆದು ಚೊಚ್ಚಲ ಸೇವೆಯನ್ನು 2006 ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾರಂಭಿಸಿದರು. 2006 ರಿಂದ 2013 ರವರೆಗೆ ದಾಂಡೇಲಿಯಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿ, ಆ ಬಳಿಕ 2013 ಕ್ಕೆ ರಾಮನಗರಕ್ಕೆ ವರ್ಗಾವಣೆಯಾದರೂ, ದಾಂಡೇಲಿ ಪೊಲೀಸ್ ಉಪ ವಿಭಾಗದ ಕಚೇರಿಯಲ್ಲಿ ಸೇವೆಯನ್ನು ಸಲ್ಲಿಸಲು ಅವಕಾಶ ಅವರಿಗೆ ಒಲಿದಿತ್ತು. ಹೀಗೆ ಡಿವೈಎಸ್ಪಿ ಕಚೇರಿಯಲ್ಲಿ 2013 ರಿಂದ 2018 ರವರೆಗೆ ಸೇವೆಯನ್ನು ಸಲ್ಲಿಸಿದ ಶಂಕರ ಅವರು ಇದೇ ವರ್ಷ ಕೆಲ ತಿಂಗಳ ಹಿಂದೆ ಹುದ್ದೆಯಲ್ಲಿ ಭಡ್ತಿಗೊಂಡು ಮುಂಡಗೋಡಕ್ಕೆ ವರ್ಗಾವಣೆಯಾಗಿ, ಅಲ್ಲಿಯೂ ಮೆಚ್ಚುವ ರೀತಿಯಲ್ಲಿ ಸೇವೆಯನ್ನು ನೀಡುತ್ತಿದ್ದಾರೆ.

ಸಂಕಷ್ಟಕ್ಕೆ ಸ್ಪಂದಿಸುವ ನನ್ನ ಹೆಮ್ಮೆಯ ಗೆಳೆಯ ಶಂಕರ ಅವರು ತನ್ನ ಸೇವಾವಧಿಯಲ್ಲಿ ಪ್ರಾಮಾಣಿಕತೆ ಮತ್ತು ಹೃದಯವಂತಿಕೆಯಿಂದ ಎಲ್ಲರ ಪ್ರೀತಿ, ವಾತ್ಸಲ್ಯಕ್ಕೆ ಪಾತ್ರರಾಗಿದ್ದಾರೆ. ಸೈಲೆಂಟಾದ್ರೂ ಎಕ್ಸಲೆಂಟ್ ಬುದ್ದಿವಂತರಾಗಿರುವ ಶಂಕರ ಅವರು ಮಾತಾಡುವುದು ಕಡಿಮೆಯಾದರೂ ಅಪಾರ ಸಂಖ್ಯೆಯಲ್ಲಿ ಗೆಳೆಯರನ್ನು ಸೃಷ್ಟಿಸಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳನ್ನು ತುಂಬು ಹೃದಯದಿಂದ ಗೌರವಿಸುವ ಶಂಕರ ಅವರು ಸಹದ್ಯೋಗಿಗಳ ಪಾಲಿಗೆ ಪ್ರೀತಿಯ ಗೆಳೆಯನಂತೆ, ತಮ್ಮನಂತೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

2018 ನಮ್ಮ ಶಂಕರ್ ಅವರಿಗೆ ಡಬ್ಬಲ್ ಧಮಾಕ ಎಂದೆ ಹೇಳಬಹುದು. ಒಂದು ಕಡೆ ಜೀವನ ಸಂಗಾತಿಯನ್ನು ಸ್ವೀಕರಿಸಿದ ಮಹತ್ವದ ವರ್ಷವಾದರೇ, ಇನ್ನೊಂದು ಕಡೆ ಪ್ರಮೋಶನ್ ಎಂಬ ಮುಂಭಡ್ತಿ. ಒಟ್ಟಿನಲ್ಲಿ ಡಬ್ಬಲ್ ಧಮಾಕ ನಮ್ಮ  ಶಂಕರ ಅವರಿಗೆ ಎಂದು ಹೇಳಬಹುದು.
 
ಸುಸಂಸ್ಕೃತ ಮನಸ್ಸಿನ ಚೆಲುವ ಶಂಕರ ಅವರಿಗೆ ಮಗದೊಮ್ಮೆ ಜನ್ಮದಿನದ ಶುಭಾಶಯಗಳು.
 
ನಿಮ್ಮವ
 
ಸಂದೇಶ್.ಎಸ್.ಜೈನ್

2 comments:

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...