Saturday, December 29, 2018

ಸ್ವಾಭಿಮಾನಿ ಸಹೋದರಿ ಸುಮಂಗಲಾ ಚಿಕ್ಕಮಠ
ಜನ್ಮದಿನದ ಸಂಭ್ರಮದಲ್ಲಿ ಸಹೋದರಿ ಸುಮಂಗಲಾ
ಅವರು ಅತ್ತ ಬಡವರೂ ಅಲ್ಲ, ಇತ್ತ ಶ್ರೀಮಂತರೂ ಅಲ್ಲ. ಆದರೆ ಸಂತೃಪ್ತಿಯ ಮನೆತನದಲ್ಲಿ ಜನ್ಮವೆತ್ತ ಸಹೋದರಿಯವರು. ಒಂದು ಮೆನಯಲ್ಲಿ ಹೆಣ್ಣು ಹುಟ್ಟಿತೆಂದರೇ ಅವಳನ್ನು ಸಾಕಿ, ಶಿಕ್ಷಣ ನೀಡಿ, ಇನ್ನೊಬ್ಬನಿಗೆ ಧಾರೆಯೆರೆದು ಕೊಡುವುದೆ ಪ್ರಮುಖ ಜವಾಬ್ದಾರಿ, ಆಕೆಯಿಂದ ನಮಗೇನೂ ಲಾಭವಿಲ್ಲದಿದ್ದರೂ ಖರ್ಚು ಜಾಸ್ತಿ ಎಂಬ ವಾಡಿಕೆಯ ಮಾತು ಅಲ್ಲಿ ಇಲ್ಲಿ ಕೇಳುತ್ತಿರುತ್ತೇವೆ. ಅದು ಕೆಲವೊಂದು ಸಲ ಹೆತ್ತವರ ಮನದೊಳಗಿನ ಮಾತು ಬಿಡಿ. ಅಂತಹದ್ದರಲ್ಲಿಯೂ ಹೆಣ್ಣಾಗಿ ಹುಟ್ಟಿ, ಅಪ್ಪ, ಅಮ್ಮನಿಗೆ ಆಸರೆಯಾಗಿ, ತನ್ನ ಮದುವೆಗೂ ಸಹ ತಕ್ಕಮಟ್ಟಿಗೆ ದುಡ್ಡು ಕೂಡಿಟ್ಟು ಅಪ್ಪ, ಅಮ್ಮನಿಗೆ ಎಲ್ಲಿಯೂ ತೊಂದರೆ ಕೊಡದೆ ಬದುಕು ಕಟ್ಟಿಕೊಂಡ ಸಾಹಸಿ, ಶ್ರಮಸಾಧಕಿ ಸಹೋದರಿಯೊಬ್ಬರನ್ನು ಪರಿಚಯಿಸಲು ಗೌರವ ಮನಸ್ಸಿನಿಂದ ಹೆಮ್ಮೆ ಪಡುತ್ತೇನೆ.

ಈ ಸಹೋದರಿ ಬೇರೆ ಯಾರು ಅಲ್ಲ. ಜೀವನದಲ್ಲೆಂದೂ ಯಾರ ಮನಸ್ಸನ್ನು ನೋಯಿಸದೇ ಎಲ್ಲರನ್ನು ಗೌರವಿಸುವ ಈ ಸಹೋದರಿಗೆ ದುಡಿಮೆಯಿದ್ದರೂ, ಕಣ್ಣೀರು ಮಾತ್ರ ಬಗಲಲ್ಲೆ ಇತ್ತು ಅನ್ನಿಸ್ತದೆ. ಆದಾಗ್ಯೂ ಅವೆಲ್ಲವನ್ನು ಮೆಟ್ಟಿ ತನ್ನೆರಡು ಮಕ್ಕಳ ಸಲುವಾಗಿ, ಸ್ವಾಭಿಮಾನದ ಬದುಕು ಕಟ್ಟಿಕೊಂಡು ಎಲ್ಲರಿಗೂ ಮಾದರಿ ಮತ್ತು ಅನುಕರಣೀಯವಾಗಬಲ್ಲ ಸಹೋದರಿ ಸುಮಂಗಲಾ ಚಿಕ್ಕಮಠ ಅವರು ಕಣ್ರೀ.

ಕಳೆದ 20 ವರ್ಷಗಳಿಂದ ಟ್ಯೂಷನ್ ಸೆಂಟರನ್ನು ನಡೆಸುವುದರ ಮೂಲಕ ದಾಂಡೇಲಿಯ ಹೆಸರಾಂತ ಟ್ಯೂಷನ್ ಸೆಂಟರಿನ ಮಾಲಕಿಯಾಗಿ, ಮುದ್ದು ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಶಿಕ್ಷಣ ಸೇವೆ ನೀಡುತ್ತಿರುವ ಸುಮಂಗಲಾ ಅವರ ಸ್ವಾಭಿಮಾನದ ಬದುಕಿಗೆ ಬಿಗ್ ಸೆಲ್ಯೂಟ್ ಹೇಳಿಯೆ ಬರೆಯಲು ಪ್ರಾರಂಭಿಸುತ್ತೇನೆ.

ಅಂದ ಹಾಗೆ ಇವತ್ತು ನನ್ನ ಸಿಸ್ಟರ್ ಸುಮಂಗಲಾ ಅವರಿಗೆ ಜನ್ಮದಿನದ ಸಂಭ್ರಮ. ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಸಹೋದರಿ ಸುಮಂಗಲಾ ಅವರಿಗೆ ಹಾರ್ದಿಕ ಶುಭಾಶಯಗಳು ಈ ನಿಮ್ಮ ಸಹೋದರನಿಂದ ಎಂದು ಶುಭದ ಮಾತಿನೊಂದಿಗೆ ಅವರು ಬೆಳೆದು ಬಂದ ಯಶೋಗಾಥೆಯನ್ನು ವಿವರಿಸಲು ಅಣಿಯಾಗಿದ್ದೇನೆ.

ನಮ್ಮ ಸುಮಂಗಲಾ ಅವರು ದೂರದೂರಿನವರಲ್ಲ. ಅವರು ದಾಂಡೇಲಿಯವರೆ ಎನ್ನುವುದು ಸಂತಸದ ವಿಚಾರ. ದಾಂಡೇಲಿಯ ಆದರ್ಶ ವ್ಯಕ್ತಿತ್ವದ ಎಸ್.ಜಿ.ಹಿರೇಮಠ ಹಾಗೂ ಸುಸಂಸ್ಕೃತ ಗೃಹಿಣಿ ಸಾವಿತ್ರಿ ದಂಪತಿಗಳ ಎರಡನೆ ಮಗಳು ಈ ನಮ್ಮ ಸುಮಂಗಲಾ ಅವರು. ಸುಮಂಗಲಾ ಅವರಿಗೆ ರಾಜೇಶ್ವರಿ ಎಂಬ ಅಕ್ಕ ಹಾಗೂ ಜ್ಯೋತಿ, ಲಕ್ಷ್ಮೀ ಮತ್ತು ಪೂರ್ಣಿಮಾ ಎಂಬ ಮೂವರು ತಂಗಿಯರಿದ್ದಾರೆ. ಒಂದು ರೀತಿಯಲ್ಲಿ ದೊಡ್ಡ ಸಂಸಾರವಾದರೂ ಮನೆಯಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೇನೂ ಕೊರತೆಯಿರಲಿಲ್ಲ. ಭಜನೆ, ಧ್ಯಾನ್ಯ, ಪ್ರವಚನ ಇವೆಲ್ಲವೂ ನಿತ್ಯದ ಕರ್ತವ್ಯಗಳಾಗಿತ್ತು.

ಸುಮಂಗಲಾ ಅವರು ತನ್ನ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ದಾಂಡೇಲಿಯ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಪಡೆದು, ಮುಂದೆ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಹಾಗೂ ಬಂಗೂರನಗರ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದರು. ಇದಾದ ಬಳಿಕ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿದ್ದ ಕೆ.ಎಲ್.ಇ ಬಿ.ಎಡ್ ಕಾಲೇಜಿನಲ್ಲಿ ಬಿ.ಎಡ್. ಪದವಿಯನ್ನು ಪಡೆದರು. ಮುಂದೆ ಹುಬ್ಬಳ್ಳಿಯ  ಕೆ.ಎಲ್.ಇ ಸಂಸ್ಥೆಯಲ್ಲಿ ಎಂ.ಇಡ್ ಪದವಿಯನ್ನು ಪೊರೈಸಿದರು.

ಶಾಲಾ/ಕಾಲೇಜು ವಿದ್ಯಾರ್ಥಿನಿಯಾಗಿರುವಾಗ್ಲೆ ನಮ್ಮ ಸುಮಂಗಲಾ ಅವರು ಅತ್ಯಂತ ಚುರುಕಿನ ಮತ್ತು ಬುದ್ದಿವಂತ ವಿದ್ಯಾರ್ಥಿನಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಹೀಗೆ ಬೆಳೆದ ಸುಮಂಗಲಾ ಅವರು ಪದವಿ ಶಿಕ್ಷಣ ಪಡೆಯುತ್ತಿರುವಾಗಲೆ ಟ್ಯೂಷನ್ ಕೇಂದ್ರವನ್ನು ಪ್ರಾರಂಭಿಸಿ, ತನ್ನ ಶಿಕ್ಷಣಕ್ಕೆ ಬೇಕಾದ ಹಣವನ್ನು ಹೊಂದಿಸಿಕೊಳ್ಳಲಾರಂಭಿಸಿದರು.

ಶಿಕ್ಷಣ ಪಡೆದ ಮೇಲೆ ಕಿತ್ತೂರುನಲ್ಲಿರುವ ರಾಣಿ ಚೆನ್ನಮ್ಮ ಶಾಲೆಯಲ್ಲಿ ಶಿಕ್ಷಕಿಯಾಗಿ ಒಂದು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದರು. ಆನಂತರದಲ್ಲಿ ಬಸವರಾಜ ಚಿಕ್ಕಮಠ ಅವರೊಂದಿಗೆ ವಿವಾಹವಾಯ್ತು. ಸುಂದರ ಸಂಸಾರವನ್ನು ಬೆಳಗಿಸುವ ದೀಪವಾಗಿ ಗಂಡನ ಮನೆಗೆ ಪ್ರವೇಶಿಸಿದ ಸುಮಂಗಲಾ ಆ ಮನೆಯ ಗೃಹಲಕ್ಷ್ಮೀಯಾದರು.

ವಿವಾಹವಾದ ಬಳಿಕ ಪತಿಯವರ ಸಂಪೂರ್ಣ ಸಹಕಾರ, ಪ್ರೋತ್ಸಾಹ ಪಡೆದು ಪರಿಜ್ಞಾನಾಶ್ರಮ ಹೈಸ್ಕೂಲಿನಲ್ಲಿ ಕೆಲ ವರ್ಷ, ರೋಟರಿ ಶಾಲೆಯಲ್ಲಿ ಸ್ವಲ್ಪ ವರ್ಷ ಮತ್ತು ತಾನೆ ಕಲಿತ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ 5 ವರ್ಷಗಳ ಕಾಲ ಶಿಕ್ಕಿಯಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿದ ಅಭಿಮಾನ ಮತ್ತು ಹೆಮ್ಮೆ ನಮ್ಮ ಸುಮಂಗಲಾ ಅವರಿಗಿದೆ.

ಹೀಗೆ ಜೀವನ ಸವೆಸಿದ ಸುಮಂಗಲಾ ಅವರಿಗೆ ಬಿರುಗಾಳಿಯಂತೆ ಬಂದು ಅಪ್ಪಳಿಸಿದ್ದು ಅವರ ಪತಿಯವರ ಅಗಲುವಿಕೆ. ಒಂದು ಕಡೆ ಎಳೆಯ ಮಕ್ಕಳು, ಭವಿಷ್ಯದ ಹೊಂಗನಸನ್ನು ಕಾಣುತ್ತಿದ್ದ ಸಹೋದರಿ ಸುಮಂಗಲಾ ಅವರು ಎದೆಗುಂದದೇ ಸ್ವಾಭಿಮಾನದ ಬದುಕು ಕಟ್ಟಿಕೊಂಡದ್ದು ಮಾತ್ರ ರಿಯಾಲಿ ಗ್ರೇಟ್.

ಎಂದಿನಂತೆ ಟ್ಯೂಷನ್ ಕೇಂದ್ರವನ್ನು ಗಟ್ಟಿಗೊಳಿಸಲಾರಂಭಿಸಿದ ಸುಮಂಗಲಾ ಅವರು ಮನೆಯಲ್ಲಿದ್ದುಕೊಂಡೆ ಮಕ್ಕಳ ಯೋಗಕ್ಷೇಮದ ಜೊತೆಗೆ ಟ್ಯೂಷನ್ ಕೇಂದ್ರವನ್ನು ನಡೆಸಿ, ನೂರಾರು ಮಕ್ಕಳಿಗೆ ಶಿಕ್ಷಣದ ನೆರವನ್ನು ನೀಡಿ ಗಮನ ಸೆಳೆಯುವ ಸಾಧನೆ ಮಾಡುತ್ತಿದ್ದಾರೆ. ತನ್ನ ಪ್ರಬುದ್ದ ಕಲಿಕೆ, ಗುಣಮಟ್ಟದ ಶಿಕ್ಷಣದಿಂದ ಹೆಸರನ್ನು ಗಟ್ಟಿಗೊಳಿಸಿಕೊಂಡ ಸುಮಂಗಲಾ ಅವರ ಟ್ಯೂಷನ್ ಕೇಂದ್ರ ಇಂದು ದಾಂಡೇಲಿ ನಗರದಲ್ಲಿ ಅಗ್ರ ಹೆಸರಿನೊಂದಿಗೆ ಮುಂಚೂಣಿಯಲ್ಲಿದೆ.

ಸೆಂಟ್ ಮೈಕಲ್ ಕಾನ್ವೆಂಟ್ ಹೈಸ್ಕೂಲಿನ ಸುವರ್ಣ ಮಹೋತ್ಸವ ಸಮಿತಿಯ ಸಕ್ರೀಯ ಪದಾಧಿಕಾರಿಯಾಗಿ, ಸುವರ್ಣ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಸುಮಂಗಲಾ ಅವರು ಯಶಸ್ವಿಯಾಗಿ, ಸ್ವಾಭಿಮಾನಿಯಾಗಿ, ಶ್ರಮವಹಿಸಿ ಬದುಕು ಕಟ್ಟಿಕೊಳ್ಳುವುದರ ಮೂಲಕ ಎಲ್ಲರಿಗೂ ಪ್ರೇರಣಾದಾಯಿಯಾಗಿದ್ದಾರೆ.

ಜೀವನದಲ್ಲಿ ಕಣ್ಣೀರನ್ನು ಉಂಡು ತಿಂದು, ಯಶಸ್ಸಿನ ಮೆಟ್ಟಿಲೇರುತ್ತಿರುವ ಶ್ರಮಸಾಧಕಿ ಸುಮಂಗಲಾ ಅವರ ಜೀವನ ಸಾಧನೆಗೆ ಅವರಪ್ಪ, ಅವರಮ್ಮ, ಅತ್ತೆ, ಮಾವನ ಆಶೀರ್ವಾದ, ಸ್ವರ್ಗಸ್ಥರಾಗಿದ್ದರೂ ಅಂದು ಪತಿಯವರು ನೀಡಿದ ಪ್ರೋತ್ಸಾಹ, ಮುದ್ದಿನ ಮಕ್ಕಳಾದ ನಿಧಿ ಮತ್ತು ಸಿದ್ದಾರ್ಥ ಅವರುಗಳ ಅಕ್ಕರೆಯ ಪ್ರೀತಿ, ಕಟುಂಬಸ್ಥರ, ಬಂಧುಗಳ ಸಹಕಾರ ಸ್ಮರಣೀಯ.

ಸ್ವಾಭಿಮಾನಿ ಸಹೋದರಿ ಸುಮಂಗಲಾ ಅವರಿಗೆ ಮಗದೊಮ್ಮೆ ಜನ್ಮದಿನದ ಶುಭಾಶಯಗಳು.

ನಿಮ್ಮ ಸಹೋದರ,

ಸಂದೇಶ್.ಎಸ್.ಜೈನ್
 
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...