ಸಾಹಿತ್ಯ ಕ್ಷೇತ್ರದ ದ್ರುವತಾರೆ ಅಳಗುಂಡಿ ಅಂದಾನಯ್ಯ
ಸಾಹಿತ್ಯ ಕ್ಷೇತ್ರದ ದ್ರುವತಾರೆ ಅಳಗುಂಡಿ ಅಂದಾನಯ್ಯ
ಅಂದು ದಿನಾಂಕ : 01.08.1953 ರಂದು ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಅಪರೂಪದ ಅಪೂರ್ವ ಪ್ರತಿಭೆಯ
ಜನ್ಮವಾಯಿತು. ಆ ಕೂಸು ಮುಂದೊಂದು ದಿನ ಊರಿನ ಹೆಸರಿನ ಜೊತೆಗೆ ಹೆತ್ತವರ ಹೆಸರಿಗೆ ಕೀರ್ತಿ
ತರಬಹುದು ಎಂಬ ಲೆಕ್ಕಚಾರ ಬಹುಷ : ಯಾರು ಮಾಡಿರಲಕ್ಕಿಲ್ಲ, ಯಾರು
ಊಹಿಸಿರಲಿಕ್ಕಿಲ್ಲ. ಸತತ ಪ್ರಯತ್ನ, ಕಠಿಣ ಅಭ್ಯಾಸ, ಉನ್ನತ ಸಂಸ್ಕೃತಿ ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಮೈಗೂಡಿಸಿ ಇಂದು
ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ, ಅನವರತ ಸೇವೆ ಸಲ್ಲಿಸುತ್ತಿರುವ ದಾಂಡೇಲಿಯ ಹಿರಿಯಣ್ಣನೆ ಇಂದಿನ
ಯಶೋಗಾಥೆಯ ದ್ರುವ ನಕ್ಷತ್ರ.
ಆ ದ್ರುವ ನಕ್ಷತ್ರದ ಪರಿಚಯ ಸರ್ವರಿಗಿದ್ದರೂ, ಈ ಸುದಿನದ ಸಮಯದಲ್ಲಿ ತಡವಾಗಿಯಾದರೂ ನನ್ನ ಹಲವಾರು ತಪ್ಪುಗಳನ್ನು ಹೊಂದಿರುವ ಲೇಖನಿಯ ಮೂಲಕ ಅಳಗುಂಡಿ ಅಂದಾನಯ್ಯ ಅವರಿಗೆ ನುಡಿ ರೂಪದಲ್ಲಿ ಅಭಿನಂದನೆ ಹೇಳಲು ಹೊರಟಿದ್ದೇನೆ.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಂತಹ ಹೆಮ್ಮಯ ತಿಂಗಳಾದ ಆಗಷ್ಟ್ ತಿಂಗಳಲ್ಲಿ ಜನ್ಮವೆತ್ತ ನಮ್ಮೂರ ಹಿರಿಯಣ್ಣ, ವಚನ ಸಾಹಿತ್ಯದ ಬಗ್ಗೆ ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅಪರೂಪದ ಅಪೂರ್ವ ವ್ಯಕ್ತಿ ಮಾನ್ಯ ಶ್ರೀ ಅಳಗುಂಡಿ ಅಂದಾನಯ್ಯ ಅವರು.
ಗದಗ ಜಿಲ್ಲೆಯ ರೋಣ ತಾಲೂಕಿನ ಎಸ್.ಎ.ವಿ ಪ್ರೌಢಶಾಲೆಯಲ್ಲಿ ಉನ್ನತ ಅಂಕಗಳೊಂದಿಗೆ ಎಸ್.ಎಸ್.ಎಲ್.ಸಿ ಮುಗಿಸಿದ ಇವರು ರೋಣ ತಾಲೂಕಿನಲ್ಲೆ ವಿಜ್ಞಾನ ವಿಷಯದಲ್ಲಿ ಪಿಯುಸಿ ಓದಿ ಮುಂದೆ ಹೊಳೆ ಆಲೂರಿನ ಕಲ್ಮೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿಯೂ ಉನ್ನತ ಅಂಕಗಳೊಂದಿಗೆ ಪದವಿ ಪಡೆದರು. ಇವರು ಓದಿದ್ದು ವಿಜ್ಞಾನವಾದರೂ, ಬಸವಣ್ಣನವರ ವಚನಗಳಿಂದ ಪ್ರಭಾವಿತರಾಗಿ ವಚನ ಸಾಹಿತ್ಯದ ಕಡೆಗೆ ಒಲವನ್ನು ಹರಿಸಿದರು.
ಓದಿನ ಜೊತೆ ಜೊತೆಗೆ ವಚನ ಸಾಹಿತ್ಯವನ್ನು ಓದಿ, ವಚನಗಳ ಸಾರವನ್ನು ಮೈಗೂಡಿಸಿ ಬೆಳೆದ ಇವರು ಮುಂದೆ ತಾನೊಬ್ಬ ಪ್ರಖರ ಸಮಾಜ ಸುಧಾರಕನಾಗಬೇಕೆಂದು ಕನಸು ಕಟ್ಟಿಕೊಂಡವರು. ಆದರೆ ಹೆತ್ತವರ ಆಸೆಗೆ ತಣ್ಣಿರೆರಚಬಾರದೆಂದು ಹೆತ್ತವರ್ತೊತ್ತಾಯಕ್ಕೆ ಮಣಿದು ಮನೆ ಬಾಗಿಲಿಗೆ ಬಂದ ಸರಕಾರಿ ಉದ್ಯೋಗಕ್ಕೆ ಸೇರ್ಪಡೆಯಾದರು.
ಮುಂದೆ ಅವರಂದುಕೊಂಡಿದ್ದೆ ಆದದ್ದು ಅವರದ್ದು, ನಮ್ಮದು ಸೌಭಾಗ್ಯ. ಅಂದ ಹಾಗೆ ದಾಂಡೇಲಿ ನಗರ ಸಭೆಯಲ್ಲಿ ಅಧಿಕಾರಿಯಾಗಿ ಬಹಳಷ್ಟು ವರ್ಷಗಳ ಕಾಲ ದಕ್ಷ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಧನ್ಯತೆಯನ್ನು ಹೊಂದಿರುವ ಅಳಗುಂಡಿ ಅಂದಾನಯ್ಯನವರ ವ್ಯಕ್ತಿತ್ವಕ್ಕೆ ನಗರ ಸಭೆಯವರು ಮಾತ್ರವಲ್ಲ ನಗರದ ಬಹುತೇಕ ಜನತೆಯು ಅವರನ್ನು ಸ್ವಾಮಿಗಳೆಂದೆ ಕರೆಯುತ್ತಿದ್ದರು. ಸಮಾಜವನ್ನು ವಚನಗಳ ಮೂಲಕ ಪರಿವರ್ತಿಸಬೇಕು, ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕೆಂಬ ತುಡಿತವನ್ನಿಟ್ಟುಕೊಂಡ ಅಳಗುಂಡಿ ಅಂದಾನಯ್ಯನವರು ತನ್ನ ಬಿಡುವಿಲ್ಲದ ಕೆಲಸದ ನಡುವೆಯು ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತನ್ನನು ತಾನು ತೊಡಗಿಸಿಕೊಂಡವರು.
ಆ ಕಾರಣಕ್ಕಾಗಿಯೆ ಅವರು ಒರ್ವ ಸರಕಾರಿ ಅಧಿಕಾರಿಯಾಗಿ ಜನಪ್ರಿಯತೆಯನ್ನು ಗಳಿಸಿರುವುದಕ್ಕಿಂತಲೂ ಸರ್ವರಿಗೂ ಬೇಕಾದವರು ಎಂದೆ ಪರಚಿತರಾಗಿದ್ದರು. ನಗರ ಸಭೆಗೆ ಬರುತ್ತಿದ್ದ ಅನೇಕನೇಕ ಬಡವರಿಗೆ ಸೂಕ್ತ ರೀತಿಯ ಸಹಾಯ ಮಾಡಿರುವುದನ್ನು ಅವರು ಹೇಳದಿದ್ದರೂ ಅವರಿಂದ ಸಹಾಯ ಪಡೆದವರ ಬಾಯಲ್ಲೆ ಕೇಳಬೇಕು ಅವರ ಉದಾರ ಮನಸ್ಸಿನ ಪ್ರತಿರೂಪವನ್ನು ಎಂಬುವುದನ್ನು ನಾನು ಬಹಳ ಅಭಿಮಾನದಿಂದ ಹೇಳಬಯಸುತ್ತೇನೆ.
1982 ರಲ್ಲಿ ಶ್ರೀಮತಿ ಅನ್ನಪೂರ್ಣರವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ಅಳಗುಂಡಿ ಅಂದಾನಯ್ಯನವರು ಅಲ್ಲಿಂದ ಹಿಂದುರಿಗಿ ನೋಡಿದವರೆ ಅಲ್ಲ. ಮದುವೆಯಾದ ನಂತರದ ದಿನಗಳಲ್ಲಿ ಅದು ತನ್ನಿ, ಇದು ತನ್ನಿ ಎಂದು ಗಂಡನ ಇಷ್ಟಕ್ಕೆ ಪ್ರೋತ್ಸಾಹ ಕೊಡದ ಮಹಿಳೆಯರಿಗೆ ನಮ್ಮ ಹೆಮ್ಮೆಯ ಅಕ್ಕ ಅನ್ನಪೂರ್ಣರವರು ಮಾದರಿಯಾಗಬಲ್ಲರು. ಅದು ಓದಿರಿ, ಇದು ಬರೆಯಿರಿ, ಇನ್ನಷ್ಟು ಪುಸ್ತಕ ಬರೆಯಿರಿ ಎಂದು ಸದಾ ಪ್ರೋತ್ಸಾಹಿಸಿದ ಅನ್ನಪೂರ್ಣರವರು ಅಳಗುಂಡಿ ಅಂದಾನಯ್ಯನವರ ಪಾಲಿಗೆ ಹೆಂಡತಿಯಾಗಿರದೆ ಅಕ್ಕರೆಯ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎನ್ನುವುದು ಅಷ್ಟೇ ಸತ್ಯ.
ಈ ದಂಪತಿಗಳಿಗೆ ಸುಸಂಸ್ಕೃತ ಅಮೃತಾ ಮತ್ತು ಅವಿನಾಶ ಎಂಬ ಕುಡಿಗಳನ್ನು ದೇವರು ದಯಾಪಾಲಿಸಿದ್ದು, ಅದು ಅಂದಾನಯ್ಯನವರ ಸಾಹಿತ್ಯ ಮತ್ತು ಸಾಮಾಜಿಕ ಸೇವಾ ಕೈಂಕರ್ಯಕ್ಕೆ ದೇವರು ಸಿದ್ದಿಸಿದ ಬಹುದೊಡ್ಡ ಫಲ ಎಂದೆ ಹೇಳಬಹುದು.
2013 ರಲ್ಲಿ ದಾಂಡೇಲಿ ನಗರ ಸಭೆಯಿಂದಲೆ ನಿವೃತ್ತಿ ಪಡೆದ ಅಳಗುಂಡಿ ಅಂದಾನಯ್ಯನವರು ಮುಂದೆ ಹೆಚ್ಚಿನ ಸಮಯವನ್ನು ಸಾಹಿತ್ಯ ಹಾಗೂ ಉಪನ್ಯಾಸಕ್ಕಾಗಿಯೆ ಮೀಸಲಿಟ್ಟಿದ್ದಾರೆ. ಅಳಗುಂಡಿಯವರ ಬತ್ತಳಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಪುಸ್ತಕಗಳು ಕೊಡುಗೆಯ ರೂಪದಲ್ಲಿ ಬಂದಿವೆ. ವಚನ ಸಾಹಿತ್ಯದ ಬಗ್ಗೆ ಅವರಿಗಿರುವ ಕಾಳಜಿ ಮತ್ತು ಜ್ಞಾನ ಇಡೀ ನಗರಕ್ಕೆ ಅವರ ಪ್ರಭಾವವನ್ನು ವಿಸ್ತರಿಸಿದೆ. ಇವರ ಸಾಹಿತ್ಯಾ ಸೇವೆಗೆ ಇಂಬುಕೊಡುವಂತೆ ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಬಿ.ಎನ್.ವಾಸರೆಯವರು ತಾಲೂಕು, ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿಸಲು ಮುಂಚೂಣಿಯ ಪಾತ್ರವನ್ನು ವಹಿಸಿದ್ದರು.
ಅವರು ಬರೆದ ಪುಸ್ತಕಗಳು ಹಲವಾರು, ಅವೆಲ್ಲವುಗಳ ಹೆಸರು ನನ್ನ ನೆನಪಿನ ಜೋಳಿಗೆಯಲ್ಲಿ ಇಲ್ಲದಿರುವುದರಿಂದ ಅವುಗಳ ಹೆಸರನ್ನು ಉಲ್ಲೇಖಿಸಲು ಕಷ್ಟಸಾಧ್ಯವಾಗುತ್ತಿದೆ.
ಒಬ್ಬ ಸೃಜನಾತ್ಮಕ ಚಟುವಟಿಕೆಯ ನೇರ ನಡೆ ನುಡಿಯ ವಿಶೇಷ ವ್ಯಕ್ತಿ ಹಾಗೂ ಭಾವನೆಗಳನ್ನು ಅರ್ಥೈಸಿ ಅದಕ್ಕೆ ಬೆಲೆ ನೀಡುವ ಸುಯೋಗ್ಯ ಮನಸ್ಸಿನ ಸುಯೋಗ್ಯ ವ್ಯಕ್ತಿ ಮಾನ್ಯ ಅಳಗುಂಡಿ ಅಂದಾನಯ್ಯನವರ ಬಗ್ಗೆ ಬರೆಯಲು ಪುಟಗಳು ಸಾಲದು ಎನ್ನುವುದು ಸರ್ವವಿಧಿತವಾದರೂ ಅವರ ಅನುಮತಿಯಿಲ್ಲದೆ ನಾಲ್ಕಕ್ಷರ ಬರೆದು ಅವರಿಗೊಂದು ಪ್ರೀತಿಪೂರ್ವಕ ಶುಭಾಶಯಗಳನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ.
ನಿಮ್ಮವ
ಸಂದೇಶ್.ಎಸ್.ಜೈನ್


No comments:
Post a Comment