Wednesday, December 5, 2018

ಸಾಧನೆಯ ಬೆನ್ನೇರಿದ ಸಾಧಕ ನಮ್ಮ ಡಿ.ಎಪ್.ಓ ಬಾಲಕೃಷ್ಣ
ಬುದ್ದಿವಂತ ಬಾಲಕ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಗೆಯಿದು.
ಎತ್ತರಕ್ಕೇರಿಸಿದ ಸತತ ಪರಿಶ್ರಮ










ಸಾಧನೆಯ ಬೆನ್ನೇರಿದ ಸಾಧಕ ನಮ್ಮ ಡಿ.ಎಪ್.ಓ ಬಾಲಕೃಷ್ಣ
ಬುದ್ದಿವಂತ ಬಾಲಕ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಗೆಯಿದು.
ಎತ್ತರಕ್ಕೇರಿಸಿದ ಸತತ ಪರಿಶ್ರಮ
ಮುಂದೊಂದು ದಿನ ಈ ಬಾಲಕ ಹೆಸರಾಂತ ಉನ್ನತ ಅಧಿಕಾರಿಯಾಗುತ್ತಾನೆಂದು ಬಹಳ ವರ್ಷಗಳ ಹಿಂದೆಯೆ ಚಿತ್ರದುರ್ಗದ ಹಿರಿಯರು ಮಾತಾಡಿಕೊಂಡಿದ್ದರಂತೆ. ಒಂದು ಕಡೆ ಮುದ್ದು ಮುಖದ ಬಾಲಕ, ಇನ್ನೊಂದು ಕಡೆ ಅಷ್ಟೆ ಚುರುಕಾದ ಹಾಗೂ ಬುದ್ದಿವಂತಿಕೆಯ ನಡವಳಿಕೆಯನ್ನು ಹೊಂದಿದ ಬಾಲಕ. ಇವೆಲ್ಲವನ್ನು ಗಮನಿಸಿಯೆ ಅಂದು ಹಿರಿಯರು ಅಂದಿದ್ದರು ಎನ್ನಬಹುದು. ಹಿರಿಯರು ಅಂದುಕೊಂಡಿದ್ದನ್ನು ಅಂದುಕೊಂಡಂತೆ ಸಾಧಿಸಿ, ಬಹುದೊಡ್ಡ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆಗೈಯುತ್ತಿರುವ ಆ ವ್ಯಕ್ತಿ ಬೇರಾರು ಅಲ್ಲ. ಸದಾ ಮೊಗದಲ್ಲಿ ನಗುವನ್ನೆ ಆಸ್ತಿಯನ್ನಾಗಿಸಿಕೊಂಡ ಸರಳತೆಗೆ ಇನ್ನೊಂದು ಹೆಸರೇ ಎಂದು ಹೇಳಬಹುದಾದ ದಾಂಡೇಲಿಯಲ್ಲಿ ಬಹುವರ್ಷಗಳವರೆಗೆ ಸೇವೆ ಸಲ್ಲಿಸಿ, ವರ್ಗಾವಣೆಗೊಂಡು ಇದೀಗ ಹುದ್ದೆಯಲ್ಲಿ ಮುಂಬಡ್ತಿಗೊಂಡು ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅನುಪಮ ಸೇವೆ ಸಲ್ಲಿಸುತ್ತಿರುವ ದಕ್ಷ ಅಧಿಕಾರಿ ಬೇರೆ ಯಾರು ಅಲ್ಲ. ನಮ್ಮೆಲ್ಲರ ಪ್ರೀತಿಗೆ ಪಾತ್ರರಾದ ಸ್ಮಾರ್ಟ್ ಪರ್ಸನಾಲಿಟಿಯ ಡೈನಮಿಕ್ ಆಪೀಸರ್ ಬಾಲಕೃಷ್ಣ ಅವರು.

ಅವರೂರಲ್ಲಿ ಜನಮೆಚ್ಚಿದ ಬಾಲು, ಕಿರಿಯರಿಗೆ ಅಚ್ಚುಮೆಚ್ಚಿನ ಬಾಲಣ್ಣ, ಪರಿಸರ ಪ್ರಿಯರಿಗೆ ಗ್ರೀನಿ ವಿಕೆಯಾಗಿ, ಸಹದ್ಯೋಗಿಗಳಿಂದ ಕೃಷ್ಣಣ್ಣ ಎಂದೆ ಕರೆಸಿಕೊಳ್ಳುತ್ತಿರುವ ಸ್ನೇಹಜೀವಿ ಬಾಲಕೃಷ್ಣ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಶುಭ ಸಂದರ್ಬದಲ್ಲಿ ನುಡಿರೂಪದಲ್ಲಿ ಶುಭವನ್ನು ಕೋರಲು ಹರ್ಷಿತ ಮನಸ್ಸಿನಿಂದ ಅಣಿಯಾಗಿದ್ದೇನೆ. ಅದರ ಮುಂಚೆ ಸರ್, ತಮಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಕಲ್ಲಿನ ಕೋಟೆಯ ಮೂಲಕ ಜನಖ್ಯಾತಿ ಮತ್ತು ವಿಶ್ವಖ್ಯಾತಿ ಪಡೆದ ಚಿತ್ರದುರ್ಗ ನಮ್ಮ ಬಾಲಕೃಷ್ಣ ಅವರ ಜನ್ಮಭೂಮಿ. ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು ಸತ್ಯ, ಧರ್ಮದ ಜೀವನ ನಡೆಸಿದ ಎ.ಸತ್ಯಪ್ಪಾ ಹಾಗೂ ಮಮತಾಮಯಿ ನಾಗರತ್ನಾ ದಂಪತಿಗಳ ಹೆಮ್ಮೆಯ ಕುಡಿ ಈ ನಮ್ಮ ಬಾಲಕೃಷ್ಣ ಅವರು.

ಅಂದ ಹಾಗೆ ನಮ್ಮ ಬಾಲಣ್ಣನವರಿಗೆ ಇಬ್ಬರು ಅಣ್ಣಂದಿರರು, ಐವರು ಅಕ್ಕಂದಿರರು ಮತ್ತು ಇಬ್ಬರು ತಮ್ಮಂದಿರರಿದ್ದಾರೆ. ಒಟ್ಟಿನಲ್ಲಿ ತುಂಬು ಕುಟುಂಬ. ಮನೆಯಲ್ಲಿ ಮಂದಿನೂ ಜಾಸ್ತಿ, ಸಂಸ್ಕಾರನೂ ಜಾಸ್ತಿ. ಒಟ್ಟಿನಲ್ಲಿ ಅಪ್ಪಟ ಕೃಷಿಕ ಮನೆತನ. ಆರ್ಥಿಕವಾಗಿ ಸದೃಢ ಕುಟುಂಬವಾದರೂ ಮಕ್ಕಳಿಂದ ಹಿಡಿದು ಮನೆ ಮಂದಿಯೆಲ್ಲರೂ ತಮ್ಮ ಕೃಷಿ ಜಮೀನಿನ ಕೆಲಸದಲ್ಲಿ ಶೃದ್ದೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.

ನಮ್ಮ ಬಾಲಕೃಷ್ಣ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಶಿವಮೊಗ್ಗದ ಸರಕಾರಿ ಶಾಲೆಯಲ್ಲಿ ಪಡೆದು, ಮುಂದೆ ಸಾಗರ ಮತ್ತು ತೀರ್ಥಹಳ್ಳಿಯಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಪಡೆದರು. ಮುಂದೆ ತೀರ್ಥಹಳ್ಳಿಯ ತುಂಗ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಉನ್ನತ ಅಂಕಗಳೊಂದಿಗೆ ಪಡೆದರು. ಇದಾದ ಬಳಿಕ ಚಿತ್ರದುರ್ಗದಲ್ಲಿರುವ ಅರಣ್ಯ ವಿಜ್ಞಾನ ಮಹಾ ಪದವಿ ವಿದ್ಯಾಲಯದಲ್ಲಿ ಅರಣ್ಯ ಶಾಸ್ತ್ರದಲ್ಲಿ ಪದವಿಯನ್ನು ಅತ್ಯುನ್ನತ ಅಂಕಗಳೊಂದಿಗೆ ಪಡೆದ ಶ್ರೇಯಸ್ಸನ್ನು ಸಂಪಾದಿಸಿಕೊಂಡಿದ್ದಾರೆ. ಪದವಿ ಮುಗಿದ ಬಳಿಕ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪದವಿಯನ್ನು ಪಡೆದರು.

ಹಸನ್ಮುಖಿ ವಿದ್ಯಾರ್ಥಿಯಾಗಿದ್ದ ಬಾಲಕೃಷ್ಣ :

ವಿದ್ಯಾರ್ಥಿಯಾಗಿರುವಾಗಲೆ ನಮ್ಮ ಬಾಲಕೃಷ್ಣನವರು ಸದಾ ಹಸನ್ಮುಖಿಯಾಗಿದ್ದರು. ಅದೂ ಈಗಲೂ ಮುಂದುವರಿದಿದೆ. ಪ್ರೈಮರಿ ವಿದ್ಯಾರ್ಥಿಯಾಗಿರುವಾಗ ಮಾಸ್ತರ ಮಂದಿಯೆಲ್ಲ ನಮ್ಮ ಬಾಲಕೃಷ್ಣನವರನ್ನು ಎತ್ತಿ ಮುದ್ದಾಡುತ್ತಿದ್ದದ್ದೆ ಜಾಸ್ತಿ. ಒಟ್ಟಿನಲ್ಲಿ ಅಷ್ಟು ಸ್ಮಾರ್ಟ್ ಆಗಿದ್ದರೆನ್ನಿ. ಶಾಲಾ ಪ್ರವಾಸದ ಸಂದರ್ಭದಲ್ಲಿ ಪ್ರವಾಸದ ಬಸ್ಸಿನಲ್ಲಿ ನಮ್ಮ ಬಾಲಕೃಷ್ಣ ನವರಂತು ಪಕ್ಕಾ ಬೇಕೆ ಬೇಕಾಗಿತ್ತು. ಅವರಿದ್ದರೇ ಅಲ್ಲಿ ಹಾಸ್ಯಮಯ ಸಂಭ್ರಮ ಮನೆಮಾತಾಗಿತ್ತು. ತಾನು ನಕ್ಕು ಎಲ್ಲರನ್ನು ನಗಿಸುತ್ತಿದ್ದ ಬಾಲಕೃಷ್ಣ ನವರ ಹೃದಯದೊಳಗೊಬ್ಬ ಪ್ರಬುದ್ದ ಕಲಾವಿದ ಅಡಗಿ ಕೂತಿದ್ದ ಎನ್ನುವುದು ಅಷ್ಟೆ ಸತ್ಯ. ಕ್ರಿಕೆಟ್, ವಾಲಿಬಾಲ್, ಶಟಲ್ ಕ್ರೀಡಾಪಟುವಾಗಿ ಬಹಳಷ್ಟು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಅನೇಕನೇಕ ಪದಕಗಳಿಗೆ ಭಾಜನರಾದವರು ನಮ್ಮ ಬಾಲಕೃಷ್ಣನವರು.

ಎಂ.ಎ ಮುಗಿಯುವ ಮುಂಚೆಯೆ ಅವರು ಬಯಸಿದಂತೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿಯಾಯಿತು. ಮೊದಲ ಒಂದು ವರ್ಷಗಳ ಕಾಲ ತರಬೇತಿಯನ್ನು ಪಡೆದು ವಲಯಾರಣ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ, ಮೊದಲ ಸೇವೆಯನ್ನು ಗುಜರಾತಿನಲ್ಲಿರುವ ಫಾರೆಸ್ಟ್ ರೇಂಜರ್ ಫಾರೆಸ್ಟ್ ಟ್ರೈನಿಂಗ್ ಕಾಲೇಜಿನಲ್ಲಿ ಒಂದು ವರ್ಷಗಳವರೆಗೆ ಸೇವೆಯನ್ನು ಸಲ್ಲಿಸಿದರು. ಆನಂತರ ವಲಯಾರಣ್ಯಾಧಿಕಾರಿಯಾಗಿ ಶಿವಮೊಗ್ಗ, ಚಿತ್ರದುರ್ಗ, ಕುಂಬಾರವಾಡ, ಜೊಯಿಡಾ, ಲೋಂಡಾ, ಬರ್ಚಿ, ಅಣಶಿ ಮೊದಲಾದ ಕಡೆಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಮೆ ನಮ್ಮ ಬಾಲಣ್ಣನವರಿಗಿದೆ. ಇಲ್ಲಿ ಸೇವೆ ಮಾಡಿದ ಬಾಲಕೃಷ್ಣನವರಿಗೆ ಹುದ್ದೆಯಲ್ಲಿ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿಗೊಂಡ ಬಳಿಕ ಅಂಕೋಲಾದಲ್ಲಿರುವ ಅರಣ್ಯ ಇಲಾಖೆಯ ಕಾರ್ಯನಿರ್ವಹಣಾಧಿಕಾರಿಯಾಗಿ, ಅದಾದ ಬಳಿಕ ಖಾನಪೂರದಲ್ಲಿಯೂ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿದರು. ಆನಂತರದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವಲಯದಲ್ಲಿ ಸೇವೆಯನ್ನು ಸಲ್ಲಿಸಿದರು. ಮುಂದೆ ದಾಂಡೇಲಿ ವಲಯದಲ್ಲಿ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಜನಮೆಚ್ಚುವ ರೀತಿಯಲ್ಲಿ ಕೆಲಸವನ್ನು ಮಾಡಿದ ಹೆಗ್ಗಳಿಕೆ ಬಾಲಕೃಷ್ಣನವರಿಗಿದೆ.

ದಾಂಡೇಲಿಯಿಂದ ವರ್ಗಾವಣೆಗೊಂಡ ಬಾಲಕೃಷ್ಣನವರು ಧಾರವಾಡದಲ್ಲಿರುವ ಫಾರೆಸ್ಟ್ ಸ್ಕ್ವಾಡ್ ನಲ್ಲಿ ಸೇವೆಯನ್ನು ಸಲ್ಲಿಸಲಾರಂಭಿಸಿದರು. ಇಲ್ಲಿ ಕೆಲಸ ನಿರ್ವಹಿಸಿ ಕೆಲವೆ ಕೆಲವು ತಿಂಗಳೊಳಗೆ ಹುದ್ದೆಯಲ್ಲಿ ಉಪ ಅರಣ್ಯ ಸಂರಕ್ಷಾಣಧಿಕಾರಿಯಾಗಿ ಮುಂಬಡ್ತಿಗೊಂಡು ಇದೀಗ ಬೆಳಗಾವಿಯ ಫಾರೆಸ್ಟ್ ಸ್ಕ್ವಾಡ್ ನಲ್ಲಿ ಪ್ರಾಮಾಣಿಕ ಸೇವೆಯನ್ನು ನೀಡುತ್ತಿದ್ದಾರೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ಜನಪಯೋಗಿ ಕಾರ್ಯಕ್ರಮಗಳನ್ನು, ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬಾಲಕೃಷ್ಣ ನವರ ಕಾರ್ಯಶೈಲಿ ಮೆಚ್ಚುಗೆಗೆ ಪಾತ್ರವಾಗಿದೆ. ದಾಂಡೇಲಿ ವಲಯದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ದಂಡಕಾರಣ್ಯ ಇಕೋ ಪಾರ್ಕ್ ನಿರ್ಮಾಣದಲ್ಲಿ ಅಗ್ರಣೀಯ ಸೇವೆಯನ್ನು ಸಲ್ಲಿಸಿರುವ ಬಾಲಕೃಷ್ಣ ಅವರ ಸೇವಾದಕ್ಷತೆ ಮತ್ತು ಕ್ರಿಯಾಶೀಲತೆ ಸದಾ ಸ್ಮರಣೀಯ.

ಮೇಲಾಧಿಕಾರಿಗಳ ಪ್ರೀತಿಗೆ ಪಾತ್ರರಾಗಿ, ಸಹೊದ್ಯೋಗಿಗಳಿಗೆ ಅತ್ಯುತ್ತಮ ಗೆಳೆಯರಾಗಿ, ತನ್ನ ಕೈಕೆಳಗಿನ ಸಿಬ್ಬಂದಿಗಳಿಗೆ ಗೌರವದ ಅಣ್ಣನಂತಿದ್ದ ಬಾಲಕೃಷ್ಣ ಅವರ ಜೀವನ ನಡವಳಿಕೆ, ಕಾರ್ಯಶೈಲಿ ಮಾತ್ರ ಅನುಕರಣೀಯ ಮತ್ತು ಅಭಿನಂದನೀಯ. ವೃತ್ತಿ ಬದುಕಿನ ಜೊತೆ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿಯಾಗಿ, ಜನಮುಖಿಯಾಗಿ ಎಲ್ಲರ ಮನಗೆದ್ದಿರುವವರು ಇದೇ ಬಾಲಕೃಷ್ಣನವರು.

ಸೊಕ್ಕು, ಅಹಂ ಇಲ್ಲದಿರುವ ಹಾಗೂ ಅಪರೂಪದ ಅಪೂರ್ವ ಸರಳತೆಯ ಮೃದು ಅಧಿಕಾರಿ ಬಾಲಕೃಷ್ಣನವರ ಜೀವನ ಸಾಧನೆಗೆ ಅವರಪ್ಪ, ಅವರಮ್ಮನ ಆಶೀರ್ವಾದ, ಸಹೋದರರ ಹಾಗೂ ಸಹೋದರಿಯರ ಮನದಾಳದ ಮಾರ್ಗದರ್ಶನ, ಮುದ್ದಿನ ಮಡದಿ ವಿನಯಕೃಷ್ಣರವರ ನಗುಮೊಗದ ಸ್ಪಂದನೆ ಮತ್ತು ಪ್ರೀತಿ, ಮಕ್ಕಳಾದ ಕೇಸರಕೃಷ್ಣ ಮತ್ತು ಕಾನನ ಕೃಷ್ಣ ಇವರುಗಳ ಅಕ್ಕರೆಯ ಪ್ರೀತಿ, ವಾತ್ಸಲ್ಯ, ಕುಟುಂಬಸ್ಥರ, ಗೆಳೆಯರ, ಇಲಾಖೆಯ ಅಧಿಕಾರಿಗಳ ಪ್ರೀತಿ, ಪ್ರೋತ್ಸಾಹವು ಪ್ರಮುಖ ಕಾರಣ.
ಮಗದೊಮ್ಮೆ ಹ್ಯಾಪಿ ಬರ್ತುಡೆ ಲವ್ಲಿ ಬ್ರದರ್.

ನಿಮ್ಮವ

ಸಂದೆಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...