Friday, December 21, 2018

ಪ್ರಾಮಾಣಿಕ ಪೌರ ಕಾರ್ಮಿಕ ನಮ್ಮ ಯಹೋನ (ವಿಜಯಕುಮಾರ್) ನಿಗೆ ಜನ್ಮದಿನದ ಸಂಭ್ರಮ
ಕಷ್ಟವಾದರೂ ಇಷ್ಟಪಟ್ಟು ಕೆಲಸ ಮಾಡುವ ಶ್ರಮಯೋಗಿ
 




 ಪ್ರಾಮಾಣಿಕ ಪೌರ ಕಾರ್ಮಿಕ ನಮ್ಮ ಯಹೋನ (ವಿಜಯಕುಮಾರ್) ನಿಗೆ ಜನ್ಮದಿನದ ಸಂಭ್ರಮ
ಕಷ್ಟವಾದರೂ ಇಷ್ಟಪಟ್ಟು ಕೆಲಸ ಮಾಡುವ ಶ್ರಮಯೋಗಿ
ಆತನೂರು ಮೂಲತ: ಆಂಧ್ರಪ್ರದೇಶ. ಆದರೆ ಅವನ ಮುತ್ತಾತ ಉದ್ಯೋಗವನ್ನರಸಿ ದಾಂಡೇಲಿಗೆ ಬಂದವರು. ಹಾಗೆ ದಾಂಡೇಲಿಗೆ ಬಂದವರು ದಾಂಡೇಲಿಯ ಖಾಯಂ ನಿವಾಸಿಯಾದರು. ಹಾಗಾಗಿ ಆ ಯುವಕನ ಜನ್ಮಭೂಮಿ ಒಡಲ ಕಾಳಿ ನದಿಯ ದಂಡೆಯಲ್ಲಿರುವ ದಾಂಡೇಲಿಯಲ್ಲಾಯ್ತು. ಅವನಪ್ಪ ಒಬ್ಬ ಪ್ರಾಮಾಣಿಕ ಪೌರಕಾರ್ಮಿಕ. ಊರೀಡಿ ಸ್ವಚ್ಚ ಮಾಡುವ ಕಾಯಕವನ್ನು ಹೊಂದಿದ್ದ ಅವನಪ್ಪ ಕೆಲಸದಲ್ಲಿರುವಾಗಲೆ ಇಹಲೋಕ ತ್ಯಜಿಸಿದ್ದರು. ಅವನಪ್ಪ ಮೃತಪಟ್ಟ ನಂತರ ಅಪ್ಪನ ಕೆಲಸ ಅವನಮ್ಮನಿಗೆ ಒಲಿದು ಬಂತು. ಪುಟಾಣಿ ಮೂವರು ಮಕ್ಕಳನ್ನು ಕೆಲಸದ ಒತ್ತಡದ ನಡುವೆಯೂ ದೊಡ್ಡವನರನ್ನಾಗಿಸಿದ ಹೆಮ್ಮೆ ಆ ಯುವಕನ ಅಮ್ಮನಿಗಿದೆ. ಅಮ್ಮನ ಕಷ್ಟವನ್ನು ನೋಡಿ, ಒಂಬತ್ತನೆ ವಯಸ್ಸಿನಲ್ಲೆ ಅಡುಗೆ ಮನೆಯ ಜವಾಬ್ದಾರಿಯನ್ನು ತಾನೆ ಹೊತ್ತುಕೊಂಡು, ತನ್ನಿಬ್ಬರು ತಮ್ಮಂದಿರರಿಗೆ ಉಣಬಡಿಸಿ ಶಾಲೆಗೆ ಹೋಗುವುದನ್ನು ರೂಢಿ ಮಾಡಿಕೊಂಡಿದ್ದ. ಆದರೂ ಅವನೇನೂ ಬಹಳ ಓದಲಿಲ್ಲ. ತಲೆಗೆ ಹತ್ತುವುದೆ ಇಲ್ಲವೆಂದು ಶಾಲೆ ಬಿಟ್ಟು ಅಲ್ಲಿ ಇಲ್ಲಿ ಕೆಲಸ ಮಾಡಿ, ಇದೀಗ ಕಳೆದೆರಡು ವರ್ಷಗಳಿಂದ ದಾಂಡೇಲಿ ನಗರ ಸಭೆಯಲ್ಲಿ ಹೊರಗುತ್ತಿಗೆ ಪೌರಕಾರ್ಮಿಕನಾಗಿ ಅತ್ಯಂತ ಗೌರವ, ಅಭಿಮಾನದಿಂದ ತನ್ನ ಸೇವೆಯನ್ನು ಸಲ್ಲಿಸಿ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಇಷ್ಟೆಲ್ಲಾ ಓದಿದ ಮೇಲೆ ಬಹಳ ಜನ ಕೇಳಬಹುದು. ಅವನ್ಯಾರು ಎಂದು ಅಲ್ಲವೆ?. ಅವನ್ಯಾರು ಅಲ್ಲ. ಮುಂಜಾನೆ ನಾಲ್ಕು ಗಂಟೆಗೆದ್ದು, ನಗರ ಸಭೆಯ ನಗರ ಸ್ವಚ್ಚತಾ ಕಾರ್ಯಕ್ಕಿಳಿಯುವ ಬಿಸಿರಕ್ತದ ನವತರುಣ. ಬಹಳಷ್ಟು ಸಲ ಸ್ವಚ್ಚತೆಯ ಸಂದರ್ಭದಲ್ಲಿ ಮಾತಿನ ಭರದಲ್ಲಿ ಹಿಗ್ಗಾ ಮುಗ್ಗಾ ಮಾತಾಡಿದ್ದು ಇದೆ. ಆದರೇ ಯಾರು ಬೈಯ್ದರೂ, ತಲೆಕೆಡಿಸಿಕೊಳ್ಳದೇ, ಅವರಿಗೆ ಮರು ಬೈಯದೆ ತನ್ನ ಪಾಡಿಗೆ ತಾನು ಕೆಲಸ ಮಾಡುವ ಆ ಯುವಕನೆ ಇವತ್ತಿನ ನನ್ನ ಬರಹದ ಪ್ರಮುಖ ಹಿರೋ ಮಿಸ್ಟರ್ ಯಾಹೋನಾ (ವಿಜಯಕುಮಾರ್) ಓಬಲೇಶ ಹರಿಜನ.

ಅವನ ದಾಖಲೆಯ ಪ್ರಕಾರ ಹೆಸರು ವಿಜಯಕುಮಾರ್, ಆದರೆ ಯಹೋನಾ ಎಂಬ ಹೆಸರಿನಲ್ಲಿ ಪ್ರಚಲಿತನಿದ್ದಾನೆ. ನನ್ನ ಹೆಮ್ಮೆಯ ಗೆಳೆಯ ಯಹೋನಾನಿಗೆ ಇಂದು ಜನ್ಮದಿನದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿಯೆ ಅವನ ಬಗ್ಗೆ ನನಗನಿದ್ದನ್ನು ಬರೆಯಲು ಅಣಿಯಾಗಿದ್ದೇನೆ.

ನಮ್ಮ ಯಹೋನಾ ಪೌರಕಾರ್ಮಿಕರಾಗಿದ್ದ ಸ್ವರ್ಗಸ್ಥರಾದ ಓಬಲೇಶ ಹರಿಜನ ಹಾಗೂ ಹಾಲಿ ಪೌರ ಕಾರ್ಮಿಕರಾಗಿರುವ ಪುಷ್ಪಾ ದಂಪತಿಗಳ ಹಿರಿಮಗ. ಯಹೋನಾನಿಗೆ ಮೂರು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ ಅಜಯ್ ಹಾಗೂ ಹೈಸ್ಕೂಲ್ ಓದುತ್ತಿರುವ ಆಕಾಶ ಎಂಬಿಬ್ಬರು ತಮ್ಮಂದಿರರು.

ನಮ್ಮ ಯಹೋನಾನು ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಗೂರನಗರ ಸರಕಾರಿ ಶಾಲೆಯಲ್ಲಿ ಪಡೆದು, ಮುಂದೆ ಪರಿಜ್ಞಾನಾಶ್ರಮ ಹೈಸ್ಕೂಲಿನಲ್ಲಿ ಎಂಟನೆ ತರಗತಿಯವರೆಗೆ ಓದಿ, ಮುಂದೆ ತಲೆಗೆ ಹತ್ತದ ಶಿಕ್ಷಣ ಯಾಕೆಂದು ಬಗೆದು ಕೂಲಿ ಕೆಲಸ ಮಾಡಲು ಪ್ರಾರಂಭಿಸಿದ. ಆರಂಭದ ಸ್ವಲ್ಪ ವರ್ಷಗಳವರೆಗೆ ಅಲ್ಲಿ ಇಲ್ಲಿ ಎಂದು ಮನೆಕೆಲಸ ಕೂಲಿ ಕೆಲಸ ಮಾಡುತ್ತಾ ಬೆಳೆದ ಈ ಯುವಕ ಮುಂದೆ ಕೆಲ ವರ್ಷಗಳವರೆಗೆ ಕೊಲ್ಲಾಪುರದಲ್ಲಿ ಗೌಂಡಿ ಕೆಲಸವನ್ನು ಮಾಡಲಾರಂಭಿಸಿದ. ಈ ಸಂದರ್ಭದಲ್ಲಿ ಅವನ ತಮ್ಮ ಅಜಯ್ ಅಪಘಾತವೊಂದರಲ್ಲಿ ಸಿಲುಕಿ ಒಂದು ಕಾಲು ಸಂಪೂರ್ಣ ತುಂಡಾಗಿ, ಸಾವು ಬದುಕಿನ ನಡುವೆ ಹೋರಾಟ ಮಾಡುವುದನ್ನು ಮನಗಂಡು ಕೊಲ್ಲಾಪುರದ ಗೌಂಡಿ ಕೆಲಸವನ್ನು ಬಿಡಬೇಕಾಯ್ತು. ತಮ್ಮ ಅಜಯ್ ನಿಗೆ ಎಲ್ಲ ರೀತಿಯ ಆರೋಗ್ಯ, ಮಾನಸಿಕ ನೆರವನ್ನು ನೀಡಿ, ಅಣ್ಣನಾದರೂ ತಂದೆಯ ಸ್ಥಾನದಲ್ಲಿ ನಿಂತೂ ಈಗಲೂ ತಮ್ಮ ಅಜಯನ ಎಲ್ಲಾ ಆರೋಗ್ಯಸೇವೆಯನ್ನು ಮಾಡುತ್ತಾ, ಅಮ್ಮನ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿರುವುದು ಇದೇ ನಮ್ಮ ಯಹೋನಾ.

ತಮ್ಮನನ್ನು ಮುದ್ದಿನಿಂದ ಎತ್ತಿಕೊಂಡು ಹೋಗಿ ಕಾಲಕಾಲಕ್ಕೆ ಚಿಕಿತ್ಸೆ ನೀಡಿಸುವ ಜವಾಬ್ದಾರಿಯನ್ನು ನಿಷ್ಟೆಯಿಂದ ನಿಭಾಸುತ್ತಾ ಬರುತ್ತಿರುವ ಯಹೋನಾನ ಸಹೋದರತ್ವದ ಬಾಂದವ್ಯಕ್ಕೆ ಬೆಲೆ ಕಟ್ಟಲಾರದು.

ಹೀಗೆ ದಿನ ಉರುಳಿದಂತೆ, ತಮ್ಮನ ಆರೋಗ್ಯ ಸೇವೆಯ ಜೊತೆಗೆ, ಏನಾದರೂ ಕೆಲಸ ಮಾಡಬೇಕೆಂದು ಹಂಬಲಿಸಿ, ಕಳೆದೆರಡು ವರ್ಷಗಳಿಂದ ದಾಂಡೇಲಿ ನಗರ ಸಭೆಯಲ್ಲಿ ಹೊರಗುತ್ತಿಗೆ ಆಧಾರದಡಿ ಪೌರಕಾರ್ಮಿಕನಾಗಿ ಎಲ್ಲರಿಗೂ ಇಷ್ಟವಾಗುವಂತೆ ಕೆಲಸವನ್ನು ಮಾಡುತ್ತಾ ಬಂದಿರುವವನು ಇದೇ ನಮ್ಮ ಯಹೋನಾ.

ಎಂಥಹ ಸಂದರ್ಭದಲ್ಲಿಯೂ ಧಾವಿಸಿ ಬರುವ ನನ್ನ ಮುದ್ದು ತಮ್ಮ :
ಯಹೋನಾ ನಮ್ಮ ಗಾಂಧಿನಗರದ ಶ್ರೀ ಗಣೇಶ ಹಿಂದು, ಮುಸ್ಲಿಂ, ಕ್ರೈಸ್ತ ಯುವಕ ಮಂಡಳದ ಸಕ್ರೀಯ ಪದಾಧಿಕಾರಿ. ಹಾಗಾಗಿ ನನಗೆ ಅವನ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ. ನನ್ನ ಏನೇ ಕೆಲಸವಿದ್ದರೂ ಮತ್ತು ಎಂಥಹ ಸಂದರ್ಭದಲ್ಲಿಯೂ ಧಾವಿಸಿ ಬಂದು ಸಹಾಯ ಮಾಡುವ ಯಹೋನಾನ ಗುಣವಂತಿಕೆಯನ್ನು ಶ್ಲಾಘಿಸಲೆಬೇಕು.  ತಪ್ಪು ಮಾಡಿದಾಗ ನಾನು ಬೈಯ್ದರು ಒಂದು ದಿನವೂ ಎದುರು ಮಾತನಾಡದೇ ಅಣ್ಣನ ಗೌರವವನ್ನು ನೀಡುತ್ತಿರುವ ಯಹೋನಾ ನಮ್ಮ ಗಣಪತಿ ಮಂಡಳದ ಎಲ್ಲರಿಗೂ ಇಷ್ಟವಾದ ವ್ಯಕ್ತಿಯಾಗಿದ್ದಾನೆ.

ಆಸ್ತಿ, ಅಂತಸ್ತನ್ನೆಂದು ಬಯಸದ ಯಹೋನಾ ತಾನು ಬದುಕ ಬೇಕು, ಉಳಿದವರು ಖುಷಿಯ ಜೀವನ ಮಾಡಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದಾನೆ. ಜೀವನದ ಮಹತ್ವದ ಆಸೆಯಾದ ಗುಡಿಸಲು ಮನೆಯಿಂದ ಹೊಸ ಮನೆಗೆ ಹೋಗಬೇಕೆಂಬ ಕನಸನ್ನು ಅಮ್ಮನ ಸಹಕಾರದಲ್ಲಿ ಸಕಾರಗೊಳಿಸಿದ ಸಂಭ್ರಮ ನಮ್ಮ ಯಹೋನನಿಗಿದೆ.

ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿ, ದಿಟ್ಟವಾಗಿ ಬದುಕು ಕಟ್ಟಿಕೊಂಡಿರುವ ಯಹೋನಾನ ಜೀವನ ಯಶಸ್ಸಿಗೆ ಅವನಮ್ಮನ ಆಶೀರ್ವಾದ, ಕುಟುಂಬಸ್ಥರ ಮಾರ್ಗದರ್ಶನ, ಗೆಳೆಯರ, ಬಂಧುಗಳ ಪ್ರೀತಿ, ಸಹಕಾರವು ಪ್ರಮುಖ ಕಾರಣ.

ಯಹೋನಾ ನಿನಗೆ ಮಗದೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು. ಶುಭವಾಗಲಿ ಲವ್ಲಿ ತಮ್ಮ

ನಿಮ್ಮವ

ಸಂದೇಶ್.ಎಸ್.ಜೈನ್

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...