Sunday, December 2, 2018






ಕಲಾಸೇವೆಯಲ್ಲಿ ಜೀವನಸಂತಸ ಕಂಡ ಸಂತೋಷ್ ರಾಣೆ
ಪ್ರಾಂಜಲ ಮನಸ್ಸಿನ ಗುಣ ಸಂಪನ್ನ ನಮ್ಮ ರಾಣೆಯವರಿಗೆ ಜನ್ಮದಿನದ ಸಂಭ್ರಮ


ಅವರು ಹುಟ್ಟಿದ್ದೆ ಕಲಾಸೇವೆ ಮಾಡಲೆಂದೆ ಎಂದು ಹೇಳಿದರೇ ತಪ್ಪಾಗಲಾರದು. ಕಲೆಯಲ್ಲಿ ಜೀವನಸಂತಸವನ್ನು ಕಂಡ ಅಪರೂಪದ ಅಪೂರ್ವ ಸ್ನೇಹಜೀವಿ. ಸೊಕ್ಕಿಲ್ಲ, ಅಹಂವಿಲ್ಲ, ಆಡಂಭರವಿಲ್ಲದ ಸರಳ ಸಜ್ಜನಿಕೆಯ ಪರೋಪಕಾರಿ ಪುಣ್ಯಾತ್ಮ. ಇನ್ನೊಬ್ಬರ ನೋವಿಗೆ ಶರವೇಗದಲ್ಲಿ ಸ್ಪಂದಿಸುವ ಆಪತ್ಪಾಂದವ. ಸಮಾಜಮುಖಿಯಾಗಿ ಬದುಕು ನಡೆಸುವುದರ ಮೂಲಕ ಜನಮಾನಸದಲ್ಲಿ ತನ್ನ ಇರುವಿಕೆಯನ್ನು ಸದ್ದು ಮತ್ತು ಸುದ್ದಿ ಇವರೆಡು ಇಲ್ಲದೆ ಸಾದರಪಡಿಸಿದ ಕಾಯಕಯೋಗಿ. ಇಂತಹ ಉತ್ಕರ್ಷ ಮನಸ್ಸಿನ ಕಾಯಕಯೋಗಿಯ ಯಶೋಗಾಥೆಯನ್ನು ಪ್ರಿಯ ಓದುಗರ ಮುಂದೆ ಬಿಚ್ಚಿಡಲು ಹರ್ಷಿತನಾಗಿದ್ದೇನೆ.

ಅವರು ಬೇರೆ ಯಾರು ಅಲ್ಲ. ದಾಂಡೇಲಿಯ ಹಲವೆಡೆ ಯಾಕೆ, ಜಿಲ್ಲೆಯ ವಿವಿದೆಡೆಗಳಲ್ಲಿ ತನ್ನ ಮನೋಜ್ಞ ಚಿತ್ರಕೃತಿಗಳಿಂದ ಗಮನ ಸೆಳೆದ ಎಲ್ಲರ ಮನಮೆಚ್ಚಿದ ಕಲಾವಿದ. ಅವರ ಹೆಸರೆ ಹೇಳಿದಂತೆ ತನ್ನ ಕಲಾಸೇವೆಯ ಮೂಲಕ ಎಲ್ಲರಿಗೂ ಸಂತೋಷವನ್ನು ಉಣಬಡಿಸುವ ಸರಸ್ವತಿ ಪುತ್ರ ನಮ್ಮ ಹೆಮ್ಮೆಯ ದಾಂಡೇಲಿಯ ಕುವರ ಸಂತೋಷ್ ರಾಣೆಯವರು. ಅವರನ್ನು ಪಕ್ಕ ಪರಿಚಯಿಸುವುದು ಜಿ.ಎಸ್.ರಾಣೆ ಎಂದು ಹೇಳಿದರೇ ತಪ್ಪಗಲಾರದು.

ಇಂದವರ ಬಗ್ಗೆ ಸುಖಸುಮ್ಮನೆ ಬರೆಯುತ್ತಿಲ್ಲ ಮಾರಾಯ್ರೆ. ಅವರ ಬದುಕು ಮತ್ತವರ ಕಲಾಸೇವೆಯ ಬಗ್ಗೆ ನನಗನಿಸಿದ್ದನ್ನು ಬರೆಯುವ ಅವಕಾಶ ಇಂದು ಲಭಿಸಿದೆ. ಕಾರಣ ಇಷ್ಟೆ ಇಂದವರಿಗೆ ಜನ್ಮದಿನದ ಸಂಭ್ರಮ. ಈ ಸಂಭ್ರಮ, ಸಡಗರಕ್ಕೆ ನನ್ನದೊಂದು ಪುಟ್ಟ ಲೇಖನ ಬರೆಯುವ ಮುಂಚೆ, ಜನ್ಮದಿನವನ್ನು ಆಚರಿಸುತ್ತಿರುವ ಸ್ವಚ್ಚ ಹೃದಯದ ಅಣ್ಣ ಸಂತೋಷ್ ರಾಣೆಯವರಿಗೆ ಹಾರ್ದಿಕ ಶುಭಾಶಯಗಳು.

ಅಂದ ಹಾಗೆ ನಮ್ಮ ರಾಣೆಯವರು ದೂರದೂರಿನವರಲ್ಲರೀಯಪ್ಪಾ, ನಮ್ಮ ಕಡಲ ನಾಡು ಕಾರವಾರ ಸಮೀಪದ ಸದಾಶಿವಗಡ ಅವರ ಮೂಲ ಊರು. ಆದರೆ ಅವರಪ್ಪ ಉದ್ಯೋಗವನ್ನರಸಿ ದಾಂಡೇಲಿಗೆ ಬಂದು, ದಾಂಡೇಲಿಯ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನಲ್ಲಿ ನೌಕರಿಗೆ ಸೇರಿದ ಫಲಶೃತಿ ಎಂಬಂತೆ ನಮ್ಮ ರಾಣೆಯವರ ಕುಟುಂಬ ಪಕ್ಕಾ ದಾಂಡೇಲಿ ರಹವಾಸಿ ಕುಟುಂಬವಾಯ್ತಿತೆನ್ನಿ.

ಅತ್ತ ಶ್ರೀಮಂತರೂ ಅಲ್ಲ, ಇತ್ತ ಬಡವರು ಅಲ್ಲದ ಮಧ್ಯಮ ವರ್ಗದ ಕುಟುಂಬದಲ್ಲಿ ಜನ್ಮವೆತ್ತವರು ಈ ನಮ್ಮ ಸಂತೋಷ್ ರಾಣೆಯವರು. ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಇತ್ತೀಚಿನ ಕೆಲ ವರ್ಷಗಳ ಹಿಂದೆ ಸ್ವರ್ಗಸ್ಥರಾದ ಮಾನವೀಯ ಜೀವಿ ಸದಾನಂದ ರಾಣೆ ಹಾಗೂ ಎಲ್ಲರಿಗೂ ಅಮ್ಮನ ಪ್ರೀತಿಯನ್ನು ನೀಡುವ ಪ್ರಭಾವತಿ ರಾಣೆ ದಂಪತಿಗಳ ದಾಂಪತ್ಯ ಜೀವನದಲ್ಲಿ ಚಿಗುರಿದ ಕುಡಿ ಈ ನಮ್ಮ ಸಂತೋಷ್ ರಾಣೆಯವರು. ಸಂತೋಷ್ ರಾಣೆಯವರಿಗೆ ಸುಜಾತ, ರಾಜೇಶ ಹಾಗೂ ಗುರುಪ್ರಸಾದ ಎಂಬ ಸಹೋದರಿ ಮತ್ತು ಸಹೋದರರಿದ್ದಾರೆ. ಒಟ್ಟಿನಲ್ಲಿ ಸುಸಂಸ್ಕೃತ ನಡವಳಿಕೆಯ ಮತ್ತು ಧಾರ್ಮಿಕ ನಲೆಗಟ್ಟಿನಲ್ಲಿ ಬದುಕು ಕಟ್ಟಿಕೊಂಡ ಆದರ್ಶ ಸಂಸಾರ ನಮ್ಮ ರಾಣೆಯವರದ್ದಾಗಿತ್ತು. ಅದು ಈಗಲೂ ಮುಂದುವರಿದಿದೆ.

ಸಂತೋಷ್ ರಾಣೆಯವರು ದಾಂಡೇಲಿಯಲ್ಲೆ ಜನ್ಮ ಪಡೆದು, ದಾಂಡೇಲಿಯ ರೋಟರಿ ಶಾಲೆ ಪ್ರಾರಂಭವಾಗಿ ಮೊದಲ ಬ್ಯಾಚಿನ ವಿದ್ಯಾರ್ಥಿಗಾಗಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಜೆವಿಡಿಯಲ್ಲಿ ಹೈಸ್ಕೂಲ್ ಮತ್ತು ಬಂಗೂರನಗರ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದರು. ಆನಂತರ ಬಂಗೂರನಗರ ಪದವಿ ಕಾಲೇಜಿನಲ್ಲಿ ಪಲ್ಪ್ & ಪೇಪರ್ ಸೈನ್ಸ್ ವಿಷಯದಲ್ಲಿ ಬಿಎಸ್ಸಿ ಪದವಿಯನ್ನು ಉತ್ತಮ ಅಂಗಳೊಂದಿಗೆ ಪಡೆದರು.

ಸಂತೋಷ್ ಅವರು ಯಾಕೆ ಗ್ರೇಟ್ :

ಈ ಮಾತು ಎಲ್ಲರು ಕೇಳಬಹುದು. ನನಗೆ ಬಹಳ ಇಷ್ಟವಾದ ಸಂಗತಿ ಏನಂದ್ರೆ, ನಮ್ಮ ಸಂತೋಷ್ ಅವರು 8 ನೇ ತರಗತಿ ವಿದ್ಯಾರ್ಥಿಯಾಗಿರುವಾಗ್ಲೆ ತಬಲಾ ಹಾಗೂ ಹಾರ್ಮೋನಿಯಂ ಬಾರಿಸುವುದನ್ನು ನೋಡಿ ಕಲಿತರು. ತನಗೆ ತಾನೆ ನೋಡಿ, ನೋಡಿ ಈ ಕಲೆಯನ್ನು ಅರಗಿಸಿಕೊಂಡು, ತಬಲಾ ಹಾಗೂ ಹಾರ್ಮೋನಿಯಂ ಸೆಟನ್ನು ಅವರಪ್ಪನ ಬಳಿ ಕಾಡಿ ಬೇಡಿ ಖರೀದಿಸಿ, ಮನೆಯಲ್ಲಿ ನಿರಂತರವಾದ ಅಭ್ಯಾಸವನ್ನು ಮಾಡಿದರು. ಅದು ಪೇಪರ್ ಮಿಲ್ ಕ್ವಾಟ್ರಸ್ ಅಂದ್ರೆ ಕೇಳಬೇಕೆ, ಅಲ್ಲಿ ಎ ಸಿಪ್ಟ್, ಬಿ.ಸಿಪ್ಟ್ ಎಂದು ಡ್ಯೂಟಿ ಮುಗಿಸಿಕೊಂಡು ವಿಶ್ರಾಂತಿಗಾಗಿ ಮನೆಯಲ್ಲಿ ಮಲಗಿದ್ದವರ ನಿದ್ದೆ ಹಾಳು ಮಾಡಿದ ಹೆಸರು ನಮ್ಮ ರಾಣೆಯವರು ಬಾರಿಸುತ್ತಿದ್ದ ತಬಲದ ಶಬ್ದಕ್ಕಿದ್ದರೂ, ಅಕ್ಕಪಕ್ಕದ ಜನರೆಲ್ಲರೂ ನಮ್ಮ ಸಂತೋಷ್ ಅವರ ಕಲಾಸೇವೆಗೆ ಸಾರ್ಥಕ ಪ್ರೀತಿ, ವಾತ್ಸಲ್ಯವನ್ನು ನೀಡಿ ಬೆಳೆಸಿದ ಪರಿ ಮಾತ್ರ ಶ್ಲಾಘನೀಯ.

ಕಲಿತು ಕಲಿಯುವವರು ಬಹಳ ಜನ ಇರುತ್ತಾರೆ. ಆದ್ರೆ ನೋಡಿ ಕಲಿಯುವವರು ಅಪರೂಪದ ಸಂಖ್ಯೆಯಲ್ಲಿ ಸಿಗುತ್ತಾರೆ. ಈ ವಿಷ್ಯದಲ್ಲಿ ನಮ್ಮ ಸಂತೋಷ್ ಅವರು ಏಕಲವ್ಯನಂತೆ ನೋಡಿ ಕಲಿತ ವಿದ್ಯೆಯೆ ತಬಲಾ ಮತ್ತು ಹಾರ್ಮೋನಿಯಂ ಬಾರಿಸುವ ಕಲೆಯನ್ನು ಎಂದರೇ ಅತಿಶಯೋಕ್ತಿ ಎನಿಸದು.

ದಾಂಡೇಲಿಯ ಟೌನಶಿಪ್ ನಲ್ಲಿರುವ ಕಲಾವತಿ ಹರಿಮಂದಿರದಲ್ಲಿ ಪ್ರತಿನಿತ್ಯವು ಭಜನೆ, ಹರಿ ಸಂಕೀರ್ತನೆ ನಡೆಯುತ್ತಿರುವುದನ್ನು ಪ್ರತಿನಿತ್ಯ ಹೋಗಿ ನೋಡುತ್ತಿದ್ದ ಸಂತೋಷ್ ರಾಣೆಯವರು ಅಲ್ಲಿ ತಬಲಾ ಹಾಗೂ ಹಾರ್ಮೋನಿಯಂ ಬಾರಿಸುವುದನ್ನು ಕಲಿತು, ಮುಂದೆ ಎಳೆ ಪ್ರಾಯದಲ್ಲಿ ಅತ್ಯುತ್ತಮ ಕಲಾವಿದರಾಗಿ ಜನಜನಿತರಾಗಿರುವುದು ಅವರ ಕಲಾಪ್ರೇಮಕ್ಕೆ ಸಂದ ಜಯ ಎಂದೆ ಹೇಳಬಹುದು. ಕಲಾವತಿ ಹರಿ ಮಂದಿರದ ಸಂಸ್ಕಾರಯುತ ಕಾರ್ಯಕ್ರಮ ಯಾವ ರೀತಿಯಲ್ಲಿ ಪ್ರೇರಣೆಯಾಯಿತೆನ್ನುವುದಕ್ಕೆ ನಮ್ಮ ರಾಣೆಯವರು ನೈಜ ಉದಾಹರಣೆಯಾಗಿ ನಿಲ್ಲುತ್ತಾರೆ. ಇಂತಹ ಪ್ರತಿಭೆಗಳನ್ನು ಸಮಾಜದ ಮುಖ್ಯಭೂಮಿಕೆಗೆ ಬರುವಂತಾಗಲೂ ಮೂಲಕಾರಣೀಭೂತವಾದ ಕಲಾವತಿ ಹರಿಮಂದಿರದ ಸಮಿತಿಯವರಿಗೆ ಅಭಿಮಾನದ ಅಭಿವಂದನೆಗಳನ್ನು ಸಲ್ಲಿಸಲೆಬೇಕು.

ಸಂತೋಷ್ ರಾಣೆಯವರು ತಬಲಾ, ಹಾರ್ಮೋನಿಯಂ ಜೊತೆಗೆ ಅತ್ಯುತ್ತಮ ಚಿತ್ರ ಕಲಾವಿದರಾಗಿಯೂ ಪ್ರಾಥಮಿಕ ವಿದ್ಯಾರ್ಥಿ ದೆಸೆಯಲ್ಲೆ ಗಮನ ಸೆಳೆದವರು. ಎಳೆಯ ಬಾಲಕನಿರುವಾಗ್ಲೆ ಅತ್ಯುತ್ತಮ ಚಿತ್ರಾಕೃತಿಗಳನ್ನು ಬಿಡಿಸಿ, ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದವರೆಗೆ ಹೋಗಿ ತನ್ನ ಕಲಾಸಾಮರ್ಥ್ಯವನ್ನು ಪ್ರದರ್ಶಿಸಿ ದಾಂಡೇಲಿಯ ಹೆಮ್ಮೆಯನ್ನು ಸಾರಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಬಣ್ಣದ ಲೋಕದ ಜೊತೆಗೆ ಕ್ರೀಡೆಗಳಾದ ವಾಲಿಬಾಲ್, ಕ್ರಿಕೆಟ್ ಅವರ ನೆಚ್ಚಿನ ಆಟಗಳಾಗಿದ್ದವು. ಹೈಸ್ಕೂಲ್ ಸಂದರ್ಬದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳ ವಾಲಿಬಾಲ್ ತಂಡದ ಪ್ರಧಾನ ಆಟಗಾರರಾಗಿ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಮನೆ ಮಂದಿಯಾಕೆ, ಊರ ಮಂದಿಯ ಗೌರವದ ಪ್ರೀತಿಗೆ ಪಾತ್ರರಾದ ಹೆಮ್ಮೆ ನಮ್ಮ ಸಂತೋಷ್ ರಾಣೆಯವರಿಗಿದೆ.

ಪದವಿ ಮುಗಿದು ಇನ್ನೇನು ಎಂದು ಚಿಂತಿಸುವ ಮುಂಚೆಯೆ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನ ಕೆಮಿಕಲ್ ರಿಕಾವರಿ ವಿಭಾಗದಲ್ಲಿ ಜ್ಯೂನಿಯರ್ ಸೂಪರ್ ವೈಸರ್ ಆಗಿ ನೌಕರಿ ಬಂದಿತ್ತು. ಬಂದ ನೌಕರಿಯನ್ನು ಆತ್ಮಾಭಿಮಾನದಿಂದ ಸ್ವೀಕರಿಸಿ, ಕೆಲಸಕ್ಕೆ ಸೇರಿಕೊಂಡ ಸಂತೋಷ್ ಅವರು ತನ್ನ ಪ್ರಾಮಾಣಿಕ ಮತ್ತು ಕ್ರಿಯಾಶೀಲ ಕಾರ್ಯವೈಖರಿ ಹಾಗೂ ನೀಡಿದ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪರಿಣಾಮವಾಗಿ ಇಂದವರು ಅದೇ ವಿಭಾಗದಲ್ಲಿ ಸೂಪರಿಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಹದ್ಯೋಗಿಗಳ ಜೊತೆಗೆ ಅತ್ಯುತ್ತಮ ಸಂಬಂಧವನ್ನಿಟ್ಟುಕೊಂಡಿರುವ ರಾಣೆಯವರು ತನ್ನ ಕೈಕೆಳಗಿನ ಸಿಬ್ಬಂದಿಗಳಿಗೆ ಅಕ್ಕರೆಯ ಅಣ್ಣನಾಗಿದ್ದಾರೆ.

ವೃತ್ತಿ ಬದುಕಿನ ನಡುವೆ ಕಲಾಸೇವೆ:
ವೃತ್ತಿ ಬದುಕಿನ ನಡುವೆ ಬಿಡುವಿನ ಸಮಯದಲ್ಲಿ ಕಲಾಸೇವೆಗೈಯುವ ಸಂತೋಷ್ ಅವರ ಕುಂಚದಲ್ಲಿ ಅರಳಿದ ಚಿತ್ರಾಕೃತಿಗಳಿಗೆ ಲೆಕ್ಕವೆ ಇಲ್ಲ. ದಾಂಡೇಲಿ ಹಾಗೂ ಜಿಲ್ಲೆಯ ವಿವಿದೆಡೆಗಳಲ್ಲಿ ವಿವಿಧ ಚಿತ್ರಾಕೃತಿಗಳನ್ನು ಬಿಡಿಸುವುದರ ಮೂಲಕ ಪ್ರಬುದ್ದ ಚಿತ್ರ ಕಲಾವಿದರಾಗಿ ಜಿಲ್ಲೆಯ ಜನತೆಯ ಮನಗೆದ್ದಿದ್ದಾರೆ. ದೇವಸ್ಥಾನ, ಗುಡಿ-ಗೋಪುರಗಳಲ್ಲಿ ನಡೆಯುವ ಹರಿಕೀರ್ತನೆ, ಭಜನಾ ಕಾರ್ಯಕ್ರಮಗಳಿಗೆ ತಬಲಾ ಹಾಗೂ ಹಾರ್ಮೋನಿಯಂ ವಾದಕರಾಗಿ ಭಕ್ತಿ ಸೇವೆಯನ್ನು ನೀಡುವುದರ ಮೂಲಕ ಭಗವಂತನ ಸ್ಮರಣೆ ಮಾಡುತ್ತಿದ್ದಾರೆ ನಮ್ಮ ರಾಣೆಯವರು.

ರಂಗೋಲಿ, ಆಯಿಲ್ ಪೈಟಿಂಗ್, ವಾಟರ್ ಪೈಟಿಂಗ್ ಮತ್ತು ಬೋರ್ಡ್ ಪೈಟಿಂಗ್ ಸಂತೋಷ್ ಅವರ ಇಷ್ಟದ ಕಲೆಗಳಾಗಿದ್ದಾವೆ. ನಮ್ಮ ರಾಣೆಯವರ ಕೈಯಲ್ಲಿ ಮಾಜಿ ರಾಷ್ಟ್ರಪತಿ ದಿ: ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ದಿ: ಅಟಲ್ ಬಿಹಾರಿ ವಾಜಪೇಯಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಹೀಗೆ ರಾಷ್ಟ್ರದ ದಿಗ್ಗಜರುಗಳ ಪೊಟೋವಿರುವ ರಂಗೋಲಿಯನ್ನು ಬಿಡಿಸಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ. ಕಾಗದ ಕಾರ್ಖಾನೆಯಲ್ಲಿ ನಡೆಯುವ ಆಯುಧ ಪೂಜೆಯ ಸಂದರ್ಭದಲ್ಲಿ ನಮ್ಮ ರಾಣೆಯವರ ರಂಗೋಲಿಯೆ ಆ ಆಯುಧ ಪೂಜೆಗೆ ವಿಶೇಷ ಮೆರುಗು ನೀಡುತ್ತಾ ಬಂದಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ಇದಲ್ಲದೇ ದಾಂಡೇಲಿ ಹಾಗೂ ಜಿಲ್ಲೆಯ ವಿವಿದೆಡೆಗಳಲ್ಲಿ ನಡೆಯುವ ಚಿತ್ರಾಕೃತಿಗಳನ್ನು ಬಿಡಿಸುವ ಕಾರ್ಯದಲ್ಲಿ ಸದಾ ಮುಂದಿರುವ ನಮ್ಮ ರಾಣೆಯವರು ವನ್ಯಜೀವಿ ಸಪ್ತಾಹದ ಸಂದರ್ಭದಲ್ಲಿ ಬಿಡಿಸಿದ ವನ್ಯಪ್ರಾಣಿಗಳಾದ ಸಿಂಹ, ಹುಲಿ, ಆನೆ, ಹಾರ್ನಬಿಲ್ ಹೀಗೆ ಮೊದಲಾದ ವನ್ಯಪ್ರಾಣಿಗಳ ಹಾಗೂ ಸಮೃದ್ದ ಪರಿಸರದ ಬಗ್ಗೆ ಬಿಡಿಸಿದ ಚಿತ್ರಗಳು ಮನಗೆದ್ದಿರುವುದಲ್ಲದೇ ಎಲ್ಲರ ಹೃದಯ ಗೆದ್ದಿದೆ ಎಂದು ಎದೆ ತಟ್ಟಿ ಹೇಳಬಹುದು.

ಅತ್ಯುತ್ತಮ ಚಿತ್ರಕಲಾವಿದರಾಗಿ ಗಮನ ಸೆಳೆದಿರುವ ನಿಷ್ಕಲ್ಮಶ ಹೃದಯದ ಸಂತೋಷ್ ರಾಣೆಯವರ ಕಲಾಸೇವೆ ಮತ್ತು ಆರಾಧನೆಯನ್ನು ಗುರುತಿಸಿ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಸನ್ಮಾನಿಸಿ, ಪ್ರೋತ್ಸಾಹವನ್ನು ನೀಡುತ್ತಿದೆ. ಕಲಾಸೇವೆಗೆ ಬಂದ ಸನ್ಮಾನ, ಪುರಸ್ಕಾರಗಳಿಗೆ ಲೆಕ್ಕವೆ ಇಲ್ಲ. ಅಷ್ಟು ಸನ್ಮಾನಗಳು, ಪುರಸ್ಕಾರಗಳಿಗೆ ಭಾಜನರಾಗಿ ದಾಂಡೇಲಿಯ ಮಣ್ಣಿನ ಋಣವನ್ನು ತೀರಿಸುವ ಮಹೋನ್ನತ ಕಾಯಕವನ್ನು ಸದ್ದಿಲ್ಲದೆ ಮಾಡುವುದರ ಮೂಲಕ ನಗರದ ಕಲಾಸಾಮ್ರಾಟ್ ಆಗಿ ನಮ್ಮ ಮುಂದಿದ್ದಾರೆ ಈ ನಮ್ಮ ಸಂತೋಷ್ ರಾಣೆಯವರು.

ಜೀವನದಲ್ಲಿ ಹಲವಾರು ಯಶಸ್ಸಿನ ಮೆಟ್ಟಿಲನ್ನೇರಿದ ಶ್ರಮ ಹಾಗೂ ಸಾಹಸ ಯೋಗಿ ಸಂತೋಷ್ ರಾಣೆಯವರ ಜೀವನ ಯಶಸ್ಸಿಗೆ ಅವರಪ್ಪ ಹಾಗೂ ಅವರಮ್ಮನ ಆಶಿರ್ವಾದ, ಸಹೋದರಿ ಹಾಗೂ ಸಹೋದರರ ಮಾರ್ಗದರ್ಶನ, ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶೂಷ್ರಕಿಯಾಗಿ ಅನುಪಮ ಆರೋಗ್ಯ ಸೇವೆ ನೀಡುತ್ತಿರುವ ಕನಸಿನ ರಾಣಿ ಹಾಗೂ ಮುದ್ದಿನ ಮಡದಿಯಾಗಿರುವ ಶೇಜಲ ಅವರ ಮನದುಂಬಿದ ಪ್ರೀತಿ, ವಾತ್ಸಲ್ಯ, ಮಕ್ಕಳಾದ ವೇದಾಂತ ಮತ್ತು ಸೋಹುಂ ಅವರುಗಳ ಅಕ್ಕರೆಯ ಅಭಿಮಾನದ ಪ್ರೀತಿ, ಬಂಧುಗಳ, ಗೆಳೆಯರ ಪ್ರೋತ್ಸಾಹ, ಸಹಕಾರವೆ ಪ್ರಮುಖ ಕಾರಣ. ಇದರ ಜೊತೆಗೆ ಸತತ ಪ್ರಯತ್ನ, ಶ್ರಮವೆ ರಾಣೆಯವರ ಬದುಕನ್ನು ಅರಳಿಸಿತೆಂದು ಹೆಮ್ಮೆಯಿಂದ ಹೇಳಬಹುದು.
ಮಗದೊಮ್ಮೆ ಹ್ಯಾಪಿ ಬರ್ತುಡೆ ಮೈ ಲವ್ಲಿ ಬ್ರದರ್.

ನಿಮ್ಮವ

ಸಂದೇಶ್.ಎಸ್.ಜೈನ್



 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...