Sunday, January 27, 2019

ಜಬರ್ದಸ್ತಾಗಿ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ
ಪ್ರಚಂಡ ಬ್ಯಾಟಿಂಗ್, ಉಗ್ರ ಸ್ವರೂಪದ ಬೌಲಿಂಗ್, ಯರ್ರಾ ಬಿರ್ರಿ ಎದ್ದು ಬಿದ್ದು ಓಡಿ ಮಾಡಿದ ಕ್ಷೇತ್ರರಕ್ಷಣೆ
ಪಂದ್ಯಾವಳಿಯಲ್ಲಿ ಗೆದ್ದ ರೋಟರಿ, ಲಯನ್ಸ್ ಮತ್ತು ಪ್ರೆಸ್ ಕ್ಲಬ್ ತಂಡ
ದಾಂಡೇಲಿಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ದಾಂಡೇಲಿ ಪ್ರೆಸ್ ಕ್ಲಬ್ ಗಳ ನಡುವೆ ಬಂಗೂರನಗರದ ಡಿಲಕ್ಸ್ ಮೈದಾನದಲ್ಲಿ ಸ್ಥಳೀಯ ರೊಟರಿ ಕ್ಲಬ್ ಆಶ್ರಯದಡಿ ಇಂದು ಅಂದರೆ ಜನವರಿ 27 ರಂದು ನಡೆದ  ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಯಶಸ್ಸಿನೊಂದಿಗೆ ಸಂಪನ್ನಗೊಂಡಿತು.
 
ಈ ಪಂದ್ಯಾವಳಿಯಲ್ಲಿ ಜೀವದ ಹಂಗುತೊರೆದು ಆಡಿದ ಎಲ್ಲ ಆಟಗಾರರಿಗೆ ಅಭಿಮಾನದ ವಂದನೆಗಳು, ಅಭಿವಂದನೆಗಳು. ಪಂದ್ಯಾವಳಿಯಲ್ಲಿ ಎಲ್ಲರು ಗೆದ್ದವರೇ ಎನ್ನುವುದು ಎಲ್ಲರಿಂದ ಬಂದ ಮಾತು. ರೋಟರಿ ಕ್ಲಬ್ ಪ್ರಥಮ ಸ್ಥಾನ ಪಡೆದರೇ, ಲಯನ್ಸ್ ಕ್ಲಬ್ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಆದರೆ ತೃತೀಯ ಸ್ಥಾನಕ್ಕಾಗಿ ನಡೆದ ಬಾರಿ ಪೈಪೋಟಿಯ ಮಧ್ಯೆಯು ನಮ್ಮ ದಾಂಡೇಲಿ ಪ್ರೆಸ್ ಕ್ಲಬ್ ಮೂರನೆ ಬಹುಮಾನವನ್ನು ಯಾರಿಗೂ ಬಿಟ್ಟುಕೊಡದೆ ತನ್ನತ್ತ ಎಳೆಯಿತು. ಆದ್ರೆ ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್ ನಲ್ಲಿದ್ದ ಆಟಗಾರರ ವಯಸ್ಸಿಗೆ ಗೌರವ ಕೊಡಬೇಕೆಂಬ ಅಭಿಮಾನದಿಂದ ಮತ್ತು ಗೌರವದಿಂದ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆಯಲು ಅವರಿಗೆ ಮಹತ್ವದ ಅವಕಾಶ ನೀಡಿದ್ದೇವು ಎನ್ನುವುದು ಇಲ್ಲಿ ಪ್ರಮುಖ ಸಂಗತಿ. 
 
ಸ್ಮರಣೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ ಧನ್ಯತೆ ನನಗಿದೆ. ನಮ್ಮ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಪ್ರೆಸ್ ಕ್ಲಬಿನ ಗೌರವಾನ್ವಿತ ಪದಾಧಿಕಾರಿಗಳು, ಸದಸ್ಯರುಗಳು ಈ ಪಂದ್ಯಾವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿಗೆ ಹ್ಯಾಟ್ಸ್ ಆಪ್ ಹೇಳಲೆಬೇಕು.
 
ಕೆಸರಿ-ಬಿಳಿ-ಹಸಿರು ಬಣ್ಣಗಳ ಟೀ ಶರ್ಟಿನೊಂದಿಗೆ ಕಂಗೊಳಿಸಿದ ಕ್ರೀಡಾಪಟುಗಳು:
ರೋಟರಿಯವರು ಕೆಸರಿ ಟೀ ಶರ್ಟ್, ಲಯನ್ಸ್ ನವರು ಬಿಳಿ ಹಾಗೂ ಪ್ರೆಸ್ ಕ್ಲಬಿನ ಆಟಗಾರರು ಹಸಿರು ಟೀ ಶರ್ಟಿನೊಂದಿಗೆ ಕಂಗೊಳಿಸಿದ್ದು ಮಾತ್ರ ಆಕಸ್ಮಿಕವಾದರೂ ಸತ್ಯ ಕಣ್ರೀ.
 
ರೋಟರಿ ತಂಡದ ಇಮಾಮ್ ಸರ್ವರ್ ಅವರ ಬ್ಯಾಟಿಂಗ್ ಬಗ್ಗೆ ವರ್ಣಿಸಲು ನನ್ನಲ್ಲಿ ಪದಗಳ ಕೊರತೆಯಿದೆ. ಅದ್ಬುತ ಮತ್ತು ಸ್ಟೈಲೀಶ್ ಬ್ಯಾಟ್ಸ್ ಮ್ಯಾನ್ ಆಗಿ ಗಮನ ಸೆಳೆದವರು ಇಮಾಮ್ ಸರ್ವರ್. ಸಿಡಿಲ ಮರಿಗಳಂತೆ ರೋಟರಿಯ ಡಾ: ಅನೂಪ್ ಮಾಡ್ದೊಳ್ಕರ್, ವಿಷ್ಣುಮೂರ್ತಿ ರಾವ್, ಮಿಥುನ್ ನಾಯಕ, ರಾಹುಲ್ ಬಾವಾಜಿ, ಲಯನ್ಸ್ ಕ್ಲಬಿನಿಂದ ಅಭಿಷೇಕ, ಸಂತೋಷ್ ಚೌವ್ಹಾಣ್, ಮಹೇಶ ಹಿರೇಮಠ, ದಾಂಡೇಲಿ ಪ್ರೆಸ್ ಕ್ಲಬಿನಿಂದ ಸಂತೋಷ್, ಜೀವನ್, ಕಿರಣ್ ಅವರ ಆಟ ಪಂದ್ಯಾವಳಿಯ ಪ್ರಮುಖ ಹೈಲೈಟ್ಸ್. 
 
ಮೊಬೈಲಿನಲ್ಲಿ ಮಾತಾಡಿಕೊಂಡೆ ಕ್ಷೇತ್ರ ರಕ್ಷಣೆ ಮಾಡಿದ ನಮ್ಮ ಮಹೇಂದ್ರಕುಮಾರ್, ಬ್ಯಾಟಿಂಗ್ ಸಮಯದಲ್ಲೂ ಮೈದಾನದಲ್ಲೆ ಮೊಬೈಲ್ ನಲ್ಲಿ ಮಾತನಾಡಿದ ಇಮಾಮ್ ಸರ್ವರ್ ಅವರುಗಳ ಈ ಕಾರ್ಯ ಮರೆಯುವಂತಿಲ್ಲ. ಕ್ಷೇತ್ರ ರಕ್ಷಣೆ ಮಾಡುವಾಗ ಮೂರು ಬೌಂಡರಿ ಹೋಗಲು ಬಿಟ್ಟು ಎದುರಾಳಿಗೆ ಬಿಚ್ಚು ಮನಸ್ಸಿನಿಂದ ಹೆಚ್ಚುವರಿಯಾಗಿ ರನ್ ಕೊಡಿಸಿದ ನನ್ನ ಔದಾರ್ಯಕ್ಕೆ ಏನು ಹೇಳಲಿ. ನಮ್ಮ ಪ್ರೆಸ್ ಕ್ಲಬ್ ಅಧ್ಯಕ್ಷರಾದ ವಾಸರೆ, ಕೃಷ್ಣಾ ಪಾಟೀಲ ಅವರ ಪಿಲ್ಡಿಂಗ್ ಗುಣಮಟ್ಟದಿಂದ ಕೂಡಿತ್ತು. ಸಿಕ್ಸರ್ ಸಿದ್ದು ಎಂದೆ ಖ್ಯಾತಿ ಪಡೆದಿದ್ದ ಯಾಗೇಶ ಸಿಂಗ್ ಅವರಿಂದ ಸಿಕ್ಸರ್ ಸುರಿಮಳೆ ಇರಲಿಲ್ಲ. ಇನ್ನೂ ಕ್ರಿಕೆಟ್ ಕಲಿ ರಾಜೇಶ ತಿವಾರಿ ಮೈದಾನಕ್ಕಿಳಿಯದೇ ತನ್ನ ರೋಟರಿ ತಂಡಕ್ಕೆ ಮಾರ್ಗದರ್ಶನ ಮಾಡಿದರು. ಹಿರಿಯ ವಕೀಲ ವಿ.ಆರ್.ಹೆಗಡೆಯವರ ಕರಾರುವಕ್ಕಾದ ಬೌಲಿಂಗ್ ಮೆಚ್ಚುವಂತಹದ್ದು. ಉಮೇಶ ಜಿ.ಈ ಮತ್ತು ಅನಿಲ್ ಪಾಟ್ನೇಕರ ಅವರುಗಳ ವಿಕೆಟ್ ಕಿಪಿಂಗ್ ಬಗ್ಗೆ ದೂಸ್ರ ಮಾತೆ ಇಲ್ಲ. ಗುರುಶಾಂತ ಜಡೆಹಿರೇಮಠ ಅವರು ಬ್ಯಾಟ್ ಬೀಸಿದ್ದು ಪಂದ್ಯಕ್ಕೆ ಮೆರುಗು ತಂದಿತ್ತು. ಕೃಷ್ಣಾ ಪಾಟೀಲ ಅವರ ಬೌಲಿಂಗ್ ಯುವಕರನ್ನು ನಾಚಿಸುವಂತಿತ್ತು. ನರೇಂದ್ರ ಚೌವ್ಹಾಣ್, ಎನ್.ವಿ.ಪಾಟೀಲ ಅವರುಗಳು ತಾಕತ್ತಿಗೆ ಅನುಗುಣವಾಗಿ ಬೆಸ್ಟ್ ಬೌಲಿಂಗ್ ಮಾಡಿ ಗಮನ ಸೆಳೆದರು. ಎಸ್.ಪ್ರಕಾಶ ಶೆಟ್ಟಿಯವರ ಪಿಲ್ಡಿಂಗ್ ಸೂಪರ್ ಇತ್ತು. ಲಯನ್ಸ್ ಕ್ಲಬಿನ ಚಾಣಕ್ಯ ಅಟಗಾರ ಉದಯ ಶೆಟ್ಟಿಯವರ ಕ್ಷೇತ್ರ ರಕ್ಷಣೆ ಲಯನ್ಸ್ ತಂಡಕ್ಕೆ ಆಸ್ತಿಯಾಯಿತು. ಕ್ರಿಯಾಶೀಲ ವಕೀಲರಾದ ಎಸ್.ಸೋಮಕುಮಾರ್ ಅವರು ಕ್ರೀಡಾಪ್ರಜ್ಞೆ ಶ್ಲಾಘನೀಯವಾಗಿತ್ತು.  ಕ್ಷೇತ್ರ ರಕ್ಷಣೆಯಲ್ಲಿ ಮುರಳಿ ನಾಯ್ಕ, ಅಶುತೋಷ್ ರಾಯ್ ಅವರ ಎದೆಗಾರಿಕೆ ಯಾವತ್ತು ಮರೆಯುವ ಹಾಗಿಲ್ಲ. ಲಯನ್ಸಿನ ಪ್ರಸಾದ ಶಿರಹಟ್ಟಿಯವರು ಅಂತರಾಷ್ಟ್ರೀಯ ಗುಣಮಟ್ಟದ ಸ್ಕೋರರ್ ಆಗಿ ಸೇವೆಯನ್ನು ನೀಡಿದರು. ಇನ್ನೂ ನಮ್ಮ ಯು.ಎಸ್.ಪಾಟೀಲ ಅವರು ಇತ್ತ ಪ್ರೆಸ್ ಕ್ಲಬಿಗೂ ಪ್ರೋತ್ಸಾಹಿಸಿದರು, ಅತ್ತ ಲಯನ್ಸಿಗೂ ಪ್ರೀತಿಸಿದರು. ಡಾ: ಮೋಹನ ಪಾಟೀಲ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಕೋರಿದರೇ, ಇತ್ತ ನಮ್ಮ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಹಾಗೂ ನಗರ ಸಭಾ ಸದಸ್ಯ ಮೋಹನ ಹಲವಾಯಿಯವರು ಪಂದ್ಯ ಆರಂಭವಾಗಿ ಮುಗಿಯುವರೆಗೂ ಪಂದ್ಯಾವಳಿಗೆ ಪ್ರೋತ್ಸಾಹ ನೀಡುತ್ತಿದ್ದದ್ದು ಉಲ್ಲೇಖನೀಯ.
 
ಒಟ್ಟಿನಲ್ಲಿ ಪಂದ್ಯಾವಳಿ ವಿಶೇಷ ಆಕರ್ಷಣೆಯಾಗಿ, ಮನೋರಂಜನೆಯಾಗಿ ನಡೆದಿರುವುದರ ಜೊತೆಗೆ ಒಂದು ಸ್ಪರ್ಧೆಯ ತರವೆ ನಡೆದಿರುವುದು ಇಲ್ಲಿ ಉಲ್ಲೇಖನೀಯ. ಬೆಳ್ಳಂ ಬೆಳಗ್ಗೆ ಎದ್ದು ಮನೆ ಮನೆಗೆ ಪೇಪರ್ ಹಂಚುವ ನಮ್ಮ ಹುಡುಗರ ಆಟಕ್ಕೆ ಯಾವ ರೀತಿಯಲ್ಲೂ ಥ್ಯಾಂಕ್ಸ್ ಹೇಳಿದರೂ ಕಡಿಮೆನೆ. ದಾಂಡೇಲಿ ಪ್ರೆಸ್ ಕ್ಲಬಿನ ಆಟಗಾರರಿಗೆ ಯುವ ಪ್ರವಾಸೋದ್ಯಮಿ ಸಂಜಯ್ ಭಟ್ ಅವರು ಟೀ ಶರ್ಟ್ ಒದಗಿಸಿ ಸಹಕರಿಸಿದರು. ಸಂಜಯ್ ಭಟ್ ಅವರಿಗೆ ಪ್ರೀತಿಯ ಧನ್ಯವಾದಗಳು. ವಾಸರೆಯವರು, ಮಹೇಂದ್ರಕುಮಾರ್ ಅವರು, ಜಡೆಯವರು, ಕೃಷ್ಣಾ ಪಾಟೀಲ ಅವರು, ಯು.ಎಸ್.ಪಾಟೀಲ ಅವರು ನಮ್ಮ ರಿಯಾಜ ಅವರು ನನಗೆ ನೀಡಿದ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಋಣಿಯಾಗಿದ್ದೇನೆ.
 
ಪಂದ್ಯಾವಳಿಯ ಸಂದರ್ಭದಲ್ಲಿ ಎಲ್ಲರು ಆಡಿಕೊಳ್ಳುತ್ತಿದ್ದದ್ದು ಒಂದೆ ಮಾತು. ಗಿಡ್ಡಗಿದ್ದವರಿಗೆ ಮಾತ್ರ ಬೌಂಡರಿ ಲೈನ್ ಸ್ವಲ್ಪ ಹತ್ತಿರ ಇಡಬೇಕೆಂಬುವುದೆ ಆಗಿತ್ತು. ನೋಡೋಣ, ಮುಂದಿನ ದಿನಗಳಲ್ಲಿ ಪಂದ್ಯಾವಳಿಯ ಆಯೋಜಕರು ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುವರೆಂಬ ಆಶಾಭಾವನೆಯಿದೆ.
 
ಒಟ್ಟಿನಲ್ಲಿ ಈ ಪಂದ್ಯಾವಳಿಯಲ್ಲಿ ಎಲ್ಲರು ಗೆದ್ದಿದ್ದಾರೆ. ಇಲ್ಲಿ ಮುಖ್ಯವಾಗಿ ಪ್ರೀತಿ, ಆತ್ಮೀಯತೆ, ಸಂಬಂಧಗಳು ಗೆದ್ದಿವೆ, ಮನಸ್ಸುಗಳು ಸಮೀಪವಾಗಿವೆ. ಇದಕ್ಕಿಂತ ದೊಡ್ಡ ಗೆಲುವು ಇನ್ನೇನು ಬೇಕು ಅಲ್ವೆ.
 
ಪಂದ್ಯಾವಳಿಯಲ್ಲಿ ಭಾಗವಹಿಸಿ, ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲ ತಂಡಗಳ ಆಟಗಾರರಿಗೆ ಗೌರವದ ಕೃತಜ್ಞತೆಗಳು. ತೀರ್ಪುಗಾರರಾಗಿ ಸಹಕರಿಸಿ ಮಹೇಶ ಹಾಗೂ ದಾಂಡೇಲಿ ಪಾಟೀಲ ಅವರಿಗೆ ದೊಡ್ಡ ದನ್ಯವಾದಗಳು. ಡಿಲಕ್ಸ್ ಮೈದಾನದಲ್ಲಿ ಆಡಲು ಅವಕಾಶ ಕೊಡಿಸಿ, ಪಂದ್ಯಾವಳಿಗೆ ಸಹಕರಿಸಿದ ರಾಜೇಶ ತಿವಾರಿಯವರಿಗೆ ಮತ್ತು ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಸಂಘಟಿಸಿದ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರಿಗೆ ಕೃತಜ್ಞತೆಗಳು.
 
ಮಗದೊಮ್ಮೆ ರೋಟರಿ ಕ್ಲಬಿನ, ಲಯನ್ಸ್ ಕ್ಲಬಿನ ಹಾಗೂ ಪ್ರೆಸ್ ಕ್ಲಬಿನ ಸರ್ವ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ಹೃದಯಸ್ಪರ್ಶಿ ವಂದನೆ, ಅಭಿವಂದನೆಗಳು.
 
ನಿಮ್ಮವ
 
ಸಂದೇಶ್.ಎಸ್.ಜೈನ್


 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...