ದಾಂಡೇಲಿಯ ಹೃದಯವಂತ ಆಟೋ ಚಾಲಕರ ಸೇವಾಗುಣವನ್ನು ಪ್ರೋತ್ಸಾಹಿಸಿ
ದಾಂಡೇಲಿಯ ಹೆಮ್ಮೆಯ ಸೇವಕರ ಸೇವಾಗುಣ ಕೈಂಕರ್ಯಕ್ಕೆ ಬಿಗ್ ಸೆಲ್ಯೂಟ್
ದಾಂಡೇಲಿಯ ಹೆಮ್ಮೆಯ ಸೇವಕರ ಸೇವಾಗುಣ ಕೈಂಕರ್ಯಕ್ಕೆ ಬಿಗ್ ಸೆಲ್ಯೂಟ್
ಬಹಳ ಹೆಮ್ಮೆಯಿಂದ ಬರೆಯುತ್ತಿದ್ದೇನೆ ಬಂಧುಗಳೆ. ಅದಕ್ಕೆ ಕಾರಣವುಂಟು. ನಾನಿವತ್ತು ಬರೆಯಲು ಹೊರಟಿರುವುದು ದಾಂಡೇಲಿಯ ಹೆಮ್ಮೆಯ ಸುಪುತ್ರರುಗಳ ಬಗ್ಗೆ ಎನ್ನುವುದನ್ನು ಅಭಿಮಾನದಿಂದ ಹೇಳಲು ಹೊರಟಿದ್ದೇನೆ.
ನಾನಿವತ್ತು ಬರೆಯಲು ಹೊರಟಿರುವುದು, ನಮ್ಮ ದಾಂಡೇಲಿಯ ಕರ್ಮಜೀವಿಗಳವರ ಬಗ್ಗೆ. ಅವರು ಬೇರೆ ಯಾರು ಅಲ್ಲ. ಬೆಳ್ಳಂ ಬೆಳಗ್ಗೆ ಮನೆಮಂದಿಯೆಲ್ಲ ಏಳುವ ಮುಂಚೆ ಬರಿಹೊಟ್ಟೆಯಲ್ಲಿ ರಿಕ್ಷಾ ಓಡಿಸುವ ಕಾಯಕಯೋಗಿಗಳು. ಅವರ ಬದುಕು ಒಂಥರ ದುಸ್ತರದ ಬದುಕು ಕಣ್ರೀ.
ಮನೆ ಮಂದಿ ಏಳುವ ಮುಂಚೆ ಮನೆಯಿಂದ ಹೊರಬೀಳುವ ನಮ್ಮ ಆಟೋ ಚಾಲಕರು ಮತ್ತೇ ಮನೆ ಸೇರುವುದು ಮನೆ ಮಂದಿ ಮಲಗಿದ ಮೇಲೆಯೆ ಎಂಬುವುದನ್ನು ವಿವರಿಸುವ ಅಗತ್ಯವಿಲ್ಲ. ಬಹುಷ: ನಮ್ಮ ಆಟೋ ಚಾಲಕರು ಬಿಸಿ ಬಿಸಿ ಅಡುಗೆ ತಿನ್ನುವುದೆ ವಿರಳಾತಿ ವಿರಳ ದಿನವೆನ್ನಿ. ಆದರೂ ತಮ್ಮ ಕಾರ್ಯವನ್ನು ಶೃದ್ದೆಯಿಂದ ನಿರ್ವಹಿಸುವುದರ ಮೂಲಕ ದಾಂಡೇಲಿಗರ ಮನಗೆದ್ದಿರುವುದಿದೆಯಲ್ಲ ಅದವರ ವ್ಯಕ್ತಿತ್ವ ಮತ್ತು ಗುಣಸಂಪನ್ನತೆಗೆ ಮಹತ್ವದ ಸಾಕ್ಷಿ ಎಂದೆ ಹೇಳಬಹುದು.
ಅದು ಈಗೀಗ ಸರಕಾರಿ ಬಸ್ಸು ಗಲ್ಲಿ ಗಲ್ಲಿ ತಿರುಗುವುದರಿಂದ ಆಟೋ ಚಾಲಕರ ಆದಾಯಕ್ಕೆ ಕತ್ತರಿ ಬಿದ್ದಿರುವುದು ಸತ್ಯ. ಆದರೂ ತಮ್ಮ ಮನೆಮಂದಿಗಾಗಿ ನಾಳೆಯ ಕನಸನ್ನೇರಿ ಅವರು ಬದುಕಿನ ಪಯಾಣವನ್ನು ಆಟೋ ವೃತ್ತಿಯ ಮೂಲಕ ನಿಭಾಯಿಸುತ್ತಿರುವುದು ಗ್ರೇಟ್.
ನಾನೇಕೆ ಆಟೋ ಚಾಲಕರ ಬಗ್ಗೆ ಹೆಮ್ಮೆ ಪಡುತ್ತೇನೆಂದ್ರೆ, ಇಡೀ ರಾಜ್ಯದಲ್ಲೆ ನೋಡಬಹುದಾದರೇ, ಜಾತಿ, ಧರ್ಮ, ಭಾಷೆಯನ್ನು ಮೀರಿ ಮನುಷ್ಯತ್ವವನ್ನೆ ಧರ್ಮ, ಜಾತಿ ಎಂದು ಬಗೆದು ಮನುಷ್ಯತ್ವದ ಮಾನವೀಯ ಕಾರ್ಯಗಳನ್ನು ಮಡುತ್ತಿರುವ ಬಿಡಿಗಾಸು ಸಂಪಾದನೆಯ ಆಟೋ ಚಾಲಕರೆ ನಮ್ಮ ದಾಂಡೇಲಿಯ ನಿಜವಾದ ಆಸ್ತಿ ಎಂದು ಹೇಳಲೇಕೆ ಅಂಜಲಿ ಅಲ್ವೆ.
ಯಾವುದೇ ಧರ್ಮದ ಹಬ್ಬ ಹರಿದಿನಗಳು ಬರಲಿ, ರಾಷ್ಟ್ರೀಯ ಹಬ್ಬಗಳು ಬರಲಿ ದಾಂಡೇಲಿಯ ಎಲ್ಲಾ ಆಟೋ ನಿಲ್ದಾಣಗಳು ತಳಿರು ತೋರಣಗಳಿಂದ ಶೃಂಗರಿಸಿಕೊಂಡು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿರುವಂತೆ ಮಾಡುವ ಇದೇ ನಮ್ಮ ಆಟೋ ಚಾಲಕರು ಇದಕ್ಕಾಗಿ ಯಾರ ಬಳಿಯೂ ಆರ್ಥಿಕ ಸಹಾಯ ಪಡೆಯುವುದಿಲ್ಲ. ತಾವು ದುಡಿದ ಬಿಡಿಕಾಸು ಹಣವನ್ನೆ ಸಂಗ್ರಹಿಸಿ, ಬಳಕೆ ಮಾಡಿ ತಮ್ಮತನದ ಜೊತೆಗೆ ಆದರ್ಶ ಸಂಸ್ಕೃತಿಯನ್ನು ಸಾದರ ಪಡಿಸಿಕೊಳ್ಳುತ್ತಿದ್ದಾರೆ.
ಆಟೋ ಚಾಲಕರೊಳಗೆ ಏನೆ ತೊಂದರೆ, ಅನಾಹುತ, ಅಪತ್ತುಗಳು ನಡೆದರೂ ಸ್ವತ: ಎಲ್ಲ ಅಟೋ ಚಾಲಕರು ಒಂದಾಗಿ ಸಮಸ್ಯೆ ಪರಿಹಾರವನ್ನು ಸೂಚಿಸಿ, ಸಂಕಷ್ಟಕ್ಕೆ ಅಪತ್ಪಾಂದವರಂತೆ ಜೀವದುಸಿರನ್ನು ನೀಡುವ ಮಾನವೀಯ ಸ್ಪಂದನೆಗೆ ಏನು ಹೇಳಲಿ.
ಇಂದು ನಮ್ಮ ಆಟೋ ಚಾಲಕರು ಸಂಕಷ್ಟದಲ್ಲಿದ್ದಾರೆ. ಒಂದು ಕಡೆ ನಗರದ ಸುತ್ತಮುತ್ತಲಿಗೆ ಹಾಗೂ ನಗರದೊಳಗಡೆ ಸರಕಾರಿ ಬಸ್ಸುಗಳು ಸಂಚರಿಸುತ್ತಿರುವುದರಿಂದ ಆಟೋ ಚಾಲಕರು ಕಂಗಲಾಗಿದ್ದರೂ ಈ ಬಗ್ಗೆ ಯಾವತ್ತು ಆಕ್ಷೇಪಣೆ ಎತ್ತಿದವರಲ್ಲ. ಇತ್ತ ತಮ್ಮ ಕಾಯಕವನ್ನು ನಡೆಸುವ ಸಲುವಾಗಿ ಬೆಳ್ಳಂ ಬೆಳಗ್ಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಕೆಲಸವನ್ನು ಶೃದ್ದೆಯಿಂದ ನಿರ್ವಹಿಸುತ್ತಿದ್ದಾರೆ. ಆದರೇನು ನಮ್ಮ ಆರ್.ಟಿ.ಓ ಅಧಿಕಾರಿಗಳು ಸಹ ಅವರಿಗೆ ಆ ಕೇಸ್ ಈ ಕೇಸ್ ಎಂದು ಹೆದರಿಸುತ್ತಿರುವುದು ಕೆಲವಡೆ ಬೆಳಕಿಗೆ ಬರುತ್ತಿದೆ. ಸ್ವಾಮಿ, ನಮ್ಮ ಆಟೋ ಚಾಲಕರು ಪ್ರತಿದಿನ ಬೇರೆ ಬೇರೆ ಮನೆಯ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋದರೂ, ಆ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳೆಂದು ಪ್ರೀತಿಸುವುದರ ಜೊತೆಗೆ ಅತ್ಯಂತ ಜೋಪನವಾಗಿ ಶಾಲೆಗೆ ಕರೆದುಕೊಂಡು ಮರಳಿ ಮನೆಗೆ ವಾಪಸ್ಸು ಕರೆದುಕೊಂಡು ಹೋಗಿ ಬಿಡುತ್ತಾರೆ. ಇನ್ನೊಂದು ಮಾತು ಹೇಳಬೇಕೆಂದರೇ, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಎಲ್ಲ ಆಟೋಗಳಲ್ಲಿ ಮಕ್ಕಳಿಗಾಗಿ ಚಾಕಲೇಟ್ಸ್ ಬಾಕ್ಸ್ ಇಟ್ಕೊಂಡಿರುತ್ತಾರೆ. ಆ ಮಕ್ಕಳಿಗೆ ಆಟೋ ಮಾಮಾ ಕೊಡುವ ಚಾಕಲೇಟೆ ಪೇವರಿಟ್ ಕೂಡಾ ಎನ್ನುವುದು ಇಲ್ಲಿ ಪ್ರಮುಖ ವಿಷಯ:
ಸ್ವಾಬಿಮಾನದ ಬದುಕು ನಡೆಸುತ್ತಿರುವ ದಾಂಡೇಲಿಯ ಹೆಮ್ಮೆಯ ಮಾನಸಪುತ್ರರಾದ ಆಟೋ ಚಾಲಕರ ಜೊತೆ ನಾವು ನೀವೆಲ್ಲರೂ ಇರೋಣ. ಅವರ ಮಾನವೀಯ ಕಾರ್ಯವನ್ನು ಬೆಂಬಲಿಸುವುದರ ಜೊತೆಗೆ ಅವರನ್ನು ಪ್ರೀತಿಯಿಂದ ಕಾಣೋಣ, ಗೌರವಿಸೋಣ ಎಂಬ ಪ್ರಾರ್ಥನೆಯೊಂದಿಗೆ,
ನಿಮ್ಮವ
ಸಂದೇಶ್.ಎಸ್.ಜೈನ್
No comments:
Post a Comment