Wednesday, January 30, 2019

ಜನ್ಮದಿನದ ಸಂಭ್ರಮದಲ್ಲಿ ಜೀವದ ಗೆಳೆಯ ಪ್ರಮೋದ ನಾಯರ್
ಶ್ರಮ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಯಶಸ್ವಿ ಯುವಕ ಪ್ರಮೋದ
ಅವನ ಹೆಸರು ಪ್ರಮೋದ ನಾಯರ್. ಆತನಿಗೆ ಎಲ್ಲರು ಬೇಕು. ಇನ್ನೊಬ್ಬರ ಕಷ್ಟ ನಿವಾರಣೆಗಾಗಿಯೆ ಜನ್ಮವೆತ್ತಿ ಬಂದ ಹೆಮ್ಮೆಯ ಕುವರ. ಗೆಳೆಯರಿಗಾಗಿ ಜೀವವನ್ನು ಕೊಡುವ ನಿಸ್ವಾರ್ಥ ಮನಸ್ಸಿನ ಸರಳ ಗುಣಸಂಪನ್ನ. ಅಪ್ಪ, ಅಮ್ಮನಿಗೆ ಮುದ್ದಿನ ಮಗನಾದರೂ, ಅಪ್ಪ, ಅಮ್ಮನಿಗೆ ಸುಂದರ ಮತ್ತು ಸ್ವಚ್ಚ ಮನಸ್ಸಿನ ಗೆಳೆಯನಂತಿರುವ ಸುಂದರ ಮೈಕಟ್ಟಿನ ನಗುಮೊಗದ ಯುವಕ.

ಆತ ಮೂಲತ: ಕೇರಳದವನಿರಬಹುದು. ಆದ್ರೆ ಆತನ ತಂದೆ ಉದ್ಯೋಗವನ್ನರಸಿ ಬಂದದ್ದು ದಾಂಡೇಲಿಗೆ. ಹಾಗಾಗಿ ಆತನ ಜನ್ಮ ಕಾಳಿ ನದಿಯ ವಿಹಂಗಮ ತಟದ ಬಳಿಯಿರುವ ದಾಂಡೇಲಿಯಲ್ಲಿ ಆಯ್ತೆನ್ನಿ.  ಅವನು ಬೇರೆ ಯಾರು ಅಲ್ಲರೀ. ನಾನು ಆರಂಭದಲ್ಲೆ ಹೇಳಿದಂತೆ ಎಲ್ಲರ ಮೆಚ್ಚಿನ ಮತ್ತು ಹೆಚ್ಚಿಗೆ ಪ್ರೀತಿ ಕೊಡುವ ಮುದ್ದಿನ ಗೆಳೆಯ ನಮ್ಮೂಡುಗ ಪ್ರಮೋದ ನಾಯರ್. ಇಂದವ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಈ ಶುಭ ಸಂದರ್ಭದಲ್ಲಿ ನನ್ನೊಳವಿನ ಪ್ರಮೋದನಿಗೆ ಜನ್ಮದಿನದ ಮನದುಂಬಿದ ಹಾರ್ದಿಕ ಶುಭಾಶಯಗಳನ್ನು ಪ್ರೀತಿಯ ಮನಸ್ಸಿನಿಂದ ಅರ್ಪಿಸಿ ಮುಂದಿನ ಬರವಣಿಗೆಗೆ ಹೆಜ್ಜೆಯನ್ನಿಡುತ್ತಿದ್ದೇನೆ.

ಬಹುಷ: ಕೇರಳದವರೆಂದ್ರೆ ಬೆವರು ಸುರಿಸಿ ಶ್ರಮ ಸಾಧನೆಯ ಮೂಲಕ ಬದುಕು ನಡೆಸುವವರು ಎಂದು ಅಭಿಮಾನ ಮತ್ತು ಬಿಗುಮಾನದಿಂದ ಹೇಳಲು ನನಗಂತೂ ಸ್ವಲ್ಪವೂ ಸಂಕೋಚವಿಲ್ಲ. ನನಗೇಕೆ ಕೇರಳಿಯರು ಇಷ್ಟವಾಗುತ್ತಾರೆಂದ್ರೆ, ಅವರು ಬೆವರು ಸುರಿಸಿ ಕಷ್ಟಪಟ್ಟು ಜೀವನದಲ್ಲಿ ಯಶಸ್ಸನ್ನು ಕಾಣುವಂತಹ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವರು. ನಾನು ಸೇರಿ ನನ್ನ ಜೇಬಲ್ಲಿ 500 ರ ನೋಟು ಇದ್ದ ಕೂಡ್ಲೆ ಮಾರ್ಕೆಟಿಗೆ ಹೋಗಿ 1 ಕೇಜಿ ಪ್ರುಟ್ಸ್ ಖರೀದಿಸುತ್ತೇನೆ. ಆದ್ರೆ ಜೇಬಲ್ಲಿ ದುಡ್ಡು ಇಲ್ಲದಿದ್ದಾಗ ಮತ್ತೇ ಮರಳಿ ಹಿಂದಿನ ಸ್ಥಿತಿಯತ್ತ ಹೋಗುತ್ತೇನೆ. ಆದರೆ ಕೇರಳಿಗರು ಮಾತ್ರ ಡಿಫರೆಂಟ್ ಕಣ್ರೀ. ಎಲ್ಲಿ ಕೇರಳಿಗರು ಹೋಗುತ್ತಾರೆ, ಅಲ್ಲಿ ಮರಗೆಣಸು ಇದ್ದೇ ಇರುತ್ತದೆ. ನಂಗೊತ್ತು ಇವತ್ತಿಗೂ ನಮ್ಮ ಪ್ರಮೋದ ನಾಯರ್ ಮನೆಯಂಗಳದಲ್ಲಿ ಮರಗೆಣಸಿನ ಗಿಡವಿದೆ.  ನಾನ್ಯಾಕೆ ಹೇಳ್ತೇನೆಂದ್ರೆ, ಹಾಸಿಗೆ ಇದ್ದಷ್ಟೆ ಕಾಲು ಚಾಚುವವರು ನಮ್ಮ ಕೇರಳಿಗರು. ಆದ್ರೆ ನಾನು ಹಾಸಿಗೆ ತೆಗೆದುಕೊಳ್ಳಲು ದುಡ್ಡು ಇಲ್ಲದಿದ್ದರೂ ಸಾಗುವಾಣಿಯ ಮಂಚ ಮಾಡಲು ಮುಂದೆ ಹೋಗುತ್ತೇನೆ. ನಾನು ಸೇರಿ ಬಹಳಷ್ಟು ಜನ ಅಲ್ಪ ದಿನದ ಖುಷಿಗೋಸ್ಕರವೆ ಶಾಶ್ವತ ಸುಖವನ್ನು ಮರೆಯುತ್ತೇವೆ. ಆದರೆ ನಮ್ಮ ಕೇರಳಿಗರು ಬಹುಕಾಲದ ಸುಖಕ್ಕಾಗಿ ಅಲ್ಪವರ್ಷ ತಮ್ಮ ಖುಷಿಯನ್ನು, ನೆಮ್ಮದಿಯನ್ನು ತ್ಯಾಗ ಮಾಡುತ್ತಾರೆ. ಅದಕ್ಕಾಗಿ ಅವರು ಜೀವನದಲ್ಲಿ ಸಫಲತೆ ಕಾಣುತ್ತಾರೆ, ನನ್ನಂಥವರು ಜೀವನದಲ್ಲಿ ವಿಫಲತೆಯನ್ನು ಕೈಯಾರೆ ಸ್ವೀಕರಿಸಬೇಕಾದ ಅನಿವಾರ್ಯ ಸಂದಿಗ್ದತೆಗೆ ಒಳಗಾಗಬೇಕಾದ ಸ್ಥಿತಿಯನ್ನು ಅಲ್ಪ ಖುಷಿಗಾಗಿ ತರುತ್ತೇವೆ. ಹಾಗಾಗಿ ಕೇರಳಿಗರು ಎಲ್ಲೆ ಹೋದರು ಜೀವನಯಶಸ್ಸನ್ನು ಕಾಣುತ್ತಾರೆ, ಯಾಕಿರಬಹುದು ಎಂಬುವುದಕ್ಕೆ ಇದೊಂದು ಸಣ್ಣ ಉದಾಹರಣೆ ಎನ್ನಿ.

ಇದೆಲ್ಲಾ ಯಾಕೆ ಉಸಾಬರಿ ಎನ್ನಬಹುದು. ನೀವು ಹಾಗೆ ಅಂದ್ರುನೂ ಬೇಜಾರಿಲ್ಲ. ನಮ್ಮ ಪ್ರಮೋದ ನಾಯರ್ ಶ್ರಮ ಸಾಧನೆಯ ಮೂಲಕ ಜೀವನದ ಯಶಸ್ಸನ್ನು ಕಂಡ ಅಪ್ಪಟ ಶ್ರಮಸಾಧಕ. ಹಾಗಾಗಿ ಇಷ್ಟೆಲ್ಲಾ ಬರೆಯಬೇಕಾಯ್ತಿನ್ನಿ.

ಅಂದ ಹಾಗೆ ನಮ್ಮ ಪ್ರಮೋದ ನಾಯರ್ ಬಹಳ ಶ್ರೀಮಂತಿಕೆಯ ಸುಪ್ಪೊತ್ತಿಗೆಯಲ್ಲಿ ಬೆಳೆದವನಲ್ಲ. ಉದ್ಯೋಗವನ್ನರಸಿ ಕೇರಳದಿಂದ ದಾಂಡೇಲಿಯ ಐಪಿಎಂ ಕಾರ್ಖಾನೆಯಲ್ಲಿ ಕಾರ್ಮಿನಾಗಿ ವೃತ್ತಿ ಮಾಡಲು ಬಂದ ಪ್ರಭಾಕರ ಹಾಗೂ ತಾಯಿ ಹೃದಯದ ಪ್ರೇಮಾ ದಂಪತಿಗಳ ಮುದ್ದಿನ ಕುವರ. ನಮ್ಮ ಪ್ರಮೋದನಿಗೆ ನಮ್ಮ ನಗರ ಸಭೆಗೆ ಚೊಚ್ಚಲ ಬಾರಿಗೆ ಸದಸ್ಯರಾಗಿ ಆಯ್ಕೆಯಾದ ಸುಸಂಸ್ಕೃತ ಮನಸ್ಸಿನ ಪ್ರೀತಿ ಮತ್ತು ಸೀಯಾ ಎಂಬ ಅಕ್ಕಂದಿರರಿದ್ದಾರೆ.

ಪ್ರಮೋದ ನಾಯರ್ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವನಶ್ರೀನಗರದ ಪರಿಜ್ಞಾನಾಶ್ರಮ ಶಿಕ್ಷಣ ಸಂಸ್ಥೆಯಲ್ಲಿ ಪಡೆದನು. ಓದಿನಲ್ಲಿ ಬುದ್ದಿವಂತನಲ್ಲದಿದ್ದರೂ ದಡ್ಡನಂತೂ ಅಲ್ಲವೆ ಅಲ್ಲ. ಆದರೆ ಸ್ವಲ್ಪ ಹುಡುಗಾಟಿಗೆ ಬುದ್ದಿ ಇದ್ದರೂ ಕಷ್ಟದಲ್ಲಿದ್ದವರಿಗೆ ತನ್ನ ಊಟದ ಡಬ್ಬಿಯಿಂದ ಊಟವನ್ನು ಹಂಚಿ ತಿನ್ನುತ್ತಿದ್ದ ಸರ್ವಶ್ರೇಷ್ಟ ಗುಣವನ್ನು ಹೊಂದಿದ್ದ ಅಪರೂಪದ ಅಪೂರ್ವ ಬಾಲಕನಾಗಿದ್ದವ ಎನ್ನುವುದು ಇಲ್ಲಿ ಉಲ್ಲೇಖನೀಯ.

ಎಸ್.ಎಸ್.ಎಲ್.ಸಿ ಯಾದ ನಂತರ ಮುಂದೆ ಓದೋ ಎಂಬ ಅಪ್ಪ, ಅಮ್ಮನ ಹಟವಿದ್ದರೂ, ಇಷ್ಟೆ ಸಾಕೆಂಬ ಆಗ್ರಹ ನಮ್ಮ ಪ್ರಮೋದನದ್ದಾಗಿತ್ತು. ಹಾಗಾಗಿ ಎಸ್.ಎಸ್.ಎಲ್.ಸಿಗೆ ಅವನ ಶಿಕ್ಷಣ ಮುಗಿಯಲ್ಪಟ್ಟಿತ್ತು. ಶಾಲಾ ವಿದ್ಯಾರ್ಥಿಯಾಗಿರುವಾಗ ನಮ್ಮ ಪ್ರಮೋದ ಅತ್ಯುತ್ತಮ ಕಬಡ್ಡಿ ಪಟುವಾಗಿ ಗಮನ ಸೆಳೆದಿದ್ದ. ಆದರೆ ಆ ಸಮಯದಲ್ಲಿ ಕಬಡ್ಡಿಗೆ ಪ್ರಾಮುಖ್ಯತೆ ಸರಿಯಾಗಿ ಸಿಗದೇ ಇದ್ದ ಕಾರಣ ಅದರಲ್ಲಿ ಯಶಸ್ಸಿನ ಫಲಶೃತಿ ಪಡೆಯಲಾಗಲಿಲ್ಲ ಎನ್ನುವುದು ಸತ್ಯದ ಮಾತು.

ಮುಂದೆ ಸ್ಮಾರ್ಟ್ ಹುಡುಗನಿಗೆ ಕೆಲಸ ಕೊಡುವವರಾದರೂ ಯಾರು ಎಂಬ ಚಿಂತೆಯಲ್ಲಿರುವಾಗ್ಲೆ ಅಲ್ಲಿ ಇಲ್ಲಿ ಡ್ರೈವಿಂಗ್ ಕಲಿತುಕೊಂಡು ಲೈಸನ್ಸ್ ಆಗುವ ಮುನ್ನವೆ ಚಾಲಕನಾಗಿ ಸೇವೆಯನ್ನು ಸಲ್ಲಿಸಲಾರಂಭಿಸಿದ. ಆನಂತರದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಗಟ್ಟಿಗೊಳಿಸಿಕೊಂಡಿದ್ದ ಮಂಜು ರಾಥೋಡ ಅವರ ಐಪಿಎಂ ನಲ್ಲಿರುವ ಹೋಂ ಸ್ಟೆಯಲ್ಲಿ ಕೆಲ ವರ್ಷ ಕೆಲಸ ನಿರ್ವಹಿಸಿದ. ಇಲ್ಲಿಂದ ಪ್ರಮೋದ ನಾಯರ್ ವೈಯಕ್ತಿಕವಾಗಿ ಜೀವನದಲ್ಲಿ ಹೊಸತನವನ್ನು ಸಾಧಿಸಬೇಕು, ಅಪ್ಪ, ಅಮ್ಮನಿಗೆ ಹೆಮ್ಮೆಯ ದಿಟ್ಟ ಮಗನಾಗಬೇಕೆಂದು ಬಯಸಿ, ಡ್ರೈವಿಂಗ್ ಲೈಸನ್ಸ್ ಪಡೆದು, ಆದಾದನಂತರ ಪಾಸ್ ಪೋರ್ಟ್ ಮಾಡಿಸಿಕೊಂಡು, ವಿದೇಶದಲ್ಲಿ ಕೆಲಸ ಮಾಡಿಕೊಳ್ಳಬೇಕೆಂದು ಹಟಸಾಧಿಸಿ, ಅವರಿವರ ಬಳಿ ನಿವೇಧಿಸಿಕೊಂಡು ಪ್ರಯತ್ನ ಪಡಲು ಆರಂಭಿಸಿದ. ಕೊನೆಗೂ ಅವನ ಪ್ರಯತ್ನ ಕೈಗೂಡಿತು. ಅದರ ಫಲವಾಗಿ ಕಳೆದ ನಾಲ್ಕೈದು ವರ್ಷಗಳಿಂದ ವಿದೇಶದಲ್ಲಿ ಕೆಲಸ ಮಾಡುವ ಸುಯೋಗ ನಮ್ಮ ಪ್ರಮೋದನ ಪಾಲಿಗೆ ಲಭಿಸಿತ್ತು.

ವಿದೇಶದಲ್ಲಿ ಉದ್ಯೋಗ ಮಾಡುವುದರ ಮೂಲಕ ಆರ್ಥಿಕ ಚೇತರಿಕೆ ಕಂಡ ಪ್ರಮೋದ ಇಂದು ಜೀವನ ಯಶಸ್ಸಿನ ನಾಗಲೋಟದಲ್ಲಿ ಮುನ್ನಡೆಯುತ್ತಿದ್ದಾನೆ. ಅವನ ಬೇಕು ಬೇಡಗಳನ್ನು ಪೊರೈಸಿಕೊಂಡಿದ್ದಾನೆ. ಅಪ್ಪ, ಅಮ್ಮನ ಮನಸ್ಸು ಗೆಲ್ಲುವ ಕೆಲಸವನ್ನು ಆತ ಮಾಡುತ್ತಿದ್ದಾನೆ. ಅಕ್ಕಂದಿರರಿಬ್ಬರಿಗೆ ಬೆಸ್ಟ್ ಪ್ರೆಂಡ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. 

ಮೃದು ಹೃದಯದ ಪ್ರಮೋದ ಭವಿಷ್ಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾನೆ. ಜನ್ಮಕೊಟ್ಟ ದಾಂಡೇಲಿಯಲ್ಲೆ ಬದುಕು ಕಟ್ಟಿಕೊಳ್ಳುವ ಶಪಥಗೈದಿದ್ದಾನೆ. ಮುಂದಿನ ದಿನಮಾನದಲ್ಲಿ ದಾಂಡೇಲಿಯೆ ಮೆಚ್ಚುವಂತಹ ಸಾಹುಕಾರನಾಗುವ ಎಲ್ಲ ಅರ್ಹತೆಗಳನ್ನು ಮೈಗೂಡಿಸಿಕೊಂಡು ಬೆಳೆದು ನಿಂತ ನಮ್ಮ ಪ್ರಮೋದನ ಯಶಸ್ಸಿಗೆ ಅವನಪ್ಪ ಹಾಗೂ ಅವನಮ್ಮನ ಆಶೀರ್ವಾದ, ಸಹೋದರಿಯರ ಮಾರ್ಗದರ್ಶನ, ಸಮಾಜಸೇವಕ ಭಾವ ಉದಯ ನಾಯರ್ ಅವರ ಗೌರವದ ಭಯ, ಕುಟುಂಬಸ್ಥರ, ಬಂಧುಗಳ ಪ್ರೀತಿ, ಗೆಳೆಯರ ಪ್ರೀತಿ, ಸಹಕಾರವೆ ಪ್ರಮುಖ ಕಾರಣ. ಅದರಲ್ಲೂ ವಿಶೇಷವಾಗಿ ಅವನ ಜೀವದ ಗೆಳೆಯರಾದ ರಚಿತ್, ದೇವೇಂದ್ರ ಮತ್ತು ಸಂತೋಷ್ ಗಂಗಾಧರ್ ಅವರುಗಳ ಹೃದಯದ ಪ್ರೀತಿಯೂ ಬಹುಮಾಲ್ಯ ಕಾರಣವಾಗಿದೆ.

ನನ್ನೊಳವಿನ ಮಧುರ ಮನಸ್ಸಿನ ಅಪರಂಜಿಯಾಗಿರುವ ಪ್ರಮೋದ ನಾಯರನಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶಭಾಶಯಗಳನ್ನು ತಿಳಿಸುತ್ತಾ, ಮುಂದಿನ ವರ್ಷ ಜೋಡಿಯಾಗಿ ಜನ್ಮದಿನವನ್ನು ಆಚರಿಸುವ ಸೌಭಾಗ್ಯ ಪ್ರಮೋದನ ಪಾಲಿಗೆ ಒದಗಿ ಬರಲೆಂಬ ಪ್ರಾರ್ಥನೆಯೊಂದಿಗೆ.

ನಿಮ್ಮವ

ಸಂದೇಶ್.ಎಸ್.ಜೈನ್



No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...