Wednesday, January 16, 2019

ವಿಶ್ವವೆ ಕೊಂಡಾಡುವ ಆಳ್ವಾಸ್ ಸಾಂಸ್ಕೃತಿಕ ವೈಭವ ನಮ್ಮ ದಾಂಡೇಲಿಯಲ್ಲಿ 
ವಿ.ಆರ್.ಡಿ.ಎಂ ಟ್ರಸ್ಟ್ ಆಶ್ರಯದಲ್ಲಿ ಜ:18 ರಂದು ದಾಂಡೇಲಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ
ದಾಂಡೇಲಿಯಲ್ಲಿ ಮಗದೊಮ್ಮೆ ಮೇಳೈಸಲಿದೆ ಆಳ್ವಾಸ್ ನುಡಿಸಿರಿ
 
ದಾಂಡೇಲಿ : ಕಳೆದ ಮೂರು ವರ್ಷಗಳ ಹಿಂದೆ ದಾಂಡೇಲಿಯಲ್ಲಿ ಮೇಳೈಸಿದ್ದ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಳ್ವಾಸ್ ಸಾಂಸ್ಕೃತಿಕ ವೈಭವ ಅಂದರೆ ಆಳ್ವಾಸ್ ನುಡಿಸಿರಿ ಕಾರ್ಯಕ್ರಮವು ಹಳಿಯಾಳದ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ ಆಶ್ರಯದಲ್ಲಿ ಇದೇ ಜನವರಿ ತಿಂಗಳ 18 ರಂದು ಸಂಜೆ 6 ಗಂಟೆಗೆ ಸರಿಯಾಗಿ ನಗರದ ಕಾಗದ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರಗಲಿದೆ ಎಂದು ಆಳ್ವಾಸ್ ನುಡಿಸಿರಿ ಘಟಕದ ಸಮನ್ವಯಾಧಿಕಾರಿ ನಾಗರಾಜ ಶೆಟ್ಟಿಯವರು ಹೇಳಿದರು.
 

ಅವರು ಬುಧವಾರ ನಗರದ ಸಂತೋಷ್ ಹೊಟೆಲ್ ಸಭಾಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಆಳ್ವಾಸ್ ಶಿಕ್ಷಣ ಸಂಸ್ಥೆ ರಾಜ್ಯ, ಹೊರ ರಾಜ್ಯ, ದೇಶ-ವಿದೇಶಗಳ ಒಟ್ಟು 26 ಸಾವಿರ ವಿದ್ಯಾರ್ಥಿಗಳನ್ನು ಹೊಂದಿದ ಒಂದು ವಿದ್ಯಾ ಸಂಸ್ಥೆ. ಸಂಸ್ಥೆಯ ಅಧ್ಯಕ್ಷರಾದ ಡಾ: ಎಂ. ಮೋಹನ ಆಳ್ವಾ ಅವರ ಚಿಂತನೆಯ ಫಲವಾಗಿ ಹುಟ್ಟಿಕೊಂಡ ವಿಶಿಷ್ಟ ಸಾಂಸ್ಕೃತಿಕ ವೇದಿಕೆಯೆ ಆಳ್ವಾಸ್ ನುಡಿಸಿರಿ ಘಟಕ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯ, ಹೊರ ರಾಜ್ಯ ಹಾಗೂ ದೇಶ-ವಿದೇಶಗಳ ವಿದ್ಯಾರ್ಥಿಗಳಿರುವುದರಿಂದ ಅವರವರ ಊರಿನ, ಅವರವರ ದೇಶದ, ರಾಜ್ಯದ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಜನಪದ ಪ್ರಕಾರಗಳನ್ನು ಸಂರಕ್ಷಿಸಿ ಬೆಳೆಸಬೇಕೆಂಬ ಮಹೋನ್ನತ ಉದ್ದೇಶದಿಂದ ಆಳ್ವಾಸ್ ನುಡಿಸಿರಿ ಘಟಕದ ಉದಯವಾಗಿದೆ ಎಂದು ನಾಗರಾಜ ಶೆಟ್ಟಿ ವಿವರಿಸಿದರು.
 
ಒಟ್ಟು 350 ವಿದ್ಯಾರ್ಥಿಗಳನ್ನೊಳಗೊಂಡ ತಂಡ ದಾಂಡೇಲಿಗಾಗಮಿಸುತ್ತಿದ್ದು, 80*40 ವಿಸ್ತೀರ್ಣದ ಬೃಹತ್ ರಂಗ ಸಜ್ಜಿಕೆಯಲ್ಲಿ ಮನಮೋಹಕ ಸಾಂಸ್ಕೃತಿಕ ವೈಭವವನ್ನು ಉಣ ಬಡಿಸಲಿದ್ದೇವೆ. ಪ್ರಮುಖವಾಗಿ ಕೇರಳದ ಮೋಹಿನಿಯಾಟ್ಟಮ್-ಅಷ್ಟಲಕ್ಷ್ಮೀ ನೃತ್ಯ, ಬಡಗುತಿಟ್ಟು ಯಕ್ಷಗಾನ-ದಾಸ ದೀಪಾಂಜಲಿ, ಆಂದ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶಾಸ್ತ್ರೀಯ ನೃತ್ಯ ನವದುರ್ಗೆ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ದೋಲ್ ಚಲಮ್, ಕಥಕ್ ನೃತ್ಯ-ನವರಂಗ, ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ, ತೆಂಕುಯಕ್ಷ ಪ್ರಯೋಗ -ಅಗ್ರಪೂಜೆ ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.


















 
 ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗುವ ಮುನ್ನ ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ: ಎಂ.ಮೋಹನ ಆಳ್ವಾ ಅವರು ಹತ್ತನೆ ತರಗತಿ ವಿದ್ಯಾರ್ಥಿಗಳು, ಪಾಲಕರು, ಮಾದ್ಯಮ ಮಿತ್ರರು ಹಾಗೂ ಆಯ್ಕ ನಾಗರೀಕರ ಜೊತೆ ಸಂವಾದ ಕಾರ್ಯಕ್ರಮವನ್ನು ನಡೆಸಲಿದ್ದಾರೆ.
 
ಸಾರ್ವಜನಿಕರಿಗೆ, ಕಲಾಭಿಮಾನಿಗಳಿಗೆ ಉಚಿತ ಪ್ರವೇಶವಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ನಮ್ಮ ತಂಡಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿ, ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನಾಗರಾಜ ಶೆಟ್ಟಿ ವಿನಂತಿಸಿದ್ದಾರೆ.
 
ಈ ಸಂದರ್ಭದಲ್ಲಿ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟಿನ ಅಧಿಕಾರಿಗಳಾದ ವಿಕ್ರಂ ಲೋಕಾಂಡೆ, ಗಣೇಶ ಭಟ್ ಉಪಸ್ಥಿತರಿದ್ದರು.
 
ಮಾದರಿ ಮತ್ತು ಸ್ಮರಣೀಯ ಕಾರ್ಯಕ್ರಮ ಇದಾಗಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾಕುಸುಮಗಳಿಗೆ ಪ್ರೋತ್ಸಾಹದ ಆಶೀರ್ವಾದವನ್ನು ನೀಡಬೇಕಾಗಿ ವಿನಂತಿ.

ನಿಮ್ಮವ

ಸಂದೇಶ್.ಎಸ್.ಜೈನ್

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...