Saturday, January 19, 2019

ದಾಂಡೇಲಿಯಲ್ಲಿ ಮೇಳೈಸಿದ ಆಳ್ವಾಸ್ ಸಾಂಸ್ಕೃತಿಕ ವೈಭವ
ಕನ್ನಡ ಸಂಸ್ಕೃತಿ ಉಳವಿಗೆ ಕನ್ನಡ ಶಾಲೆಯ ಉಳಿವು ಅತ್ಯಗತ್ಯ-
ಡಾ: ಎಂ.ಮೋಹನ ಆಳ್ವಾ
 




ದಾಂಡೇಲಿ : ಕಾಲ ಬದಲಾಗಿದೆ. ಪಾಶ್ವಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಾವು ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ತೀವ್ರ ಹಿನ್ನಡೆ ಸಾಧಿಸುತ್ತಿರುವುದು ದುರ್ದೈವ್ಯ. ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಚಿಂತಜನಕವಾಗಿದೆ. ಕನ್ನಡ ನಾಡಿನ ದಿವ್ಯ ಸಂಸ್ಕೃತಿ ಉಳಿಯಬೇಕಾದರೇ ನಮ್ಮ ನೆಲದ ಭಾಷೆಯ ಕನ್ನಡ ಶಾಲೆಗಳನ್ನು ಉಳಿಸುವುದರ ಜೊತೆಗೆ ಹೊಸ ಆಯಾಮವನ್ನು ನೀಡಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದೇ ಹೋದಲ್ಲಿ ಭವಿಷ್ಯದಲ್ಲಿ ಕನ್ನಡ ಭಾಷೆ, ನಮ್ಮ ನೆಲದ ಸಂಸ್ಕೃತಿ ವಿನಾಶದ ಅಂಚಿಗೆ ಹೋಗಲಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ: ಎಂ.ಮೋಹನ ಆಳ್ವಾ ಅವರು ಹೇಳಿದರು.

ಅವರು ನಗರದಲ್ಲಿ ಹಳಿಯಾಳದ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ ಆಶ್ರಯದಲ್ಲಿ ಶುಕ್ರವಾರ ನಗರದ ಬಂಗೂರನಗರ ಡಿಲಕ್ಸ್ ಮೈದಾನದಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ರಾಜ್ಯ ಸರ್ಕಾರ ಕೆಲ ವರ್ಷಗಳ ಹಿಂದೆ ಮೊರಾರ್ಜಿ ವಸತಿ ಶಾಲೆಯನ್ನು ಪ್ರಾರಂಭಿಸಿತ್ತು. ಆದರೆ ನಂತರ ವರ್ಷಗಳಲ್ಲಿ ಅದರ ಅಭಿವೃದ್ಧಿಯ ಬಗ್ಗೆ ಮತ್ತು ಇನ್ನೂ ಹೆಚ್ಚಿನ ಕಡೆಗಳಲ್ಲಿ ಈ ಶಾಲೆಗಳನ್ನು ಪ್ರಾರಂಭಿಸುವಲ್ಲಿ ಗಮನ ನೀಡಿಲ್ಲ. ಕನ್ನಡ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ನಾಡಿನ ಸಂಸ್ಕೃತಿಗೆ ಧಕ್ಕೆಯಾಗುವುದರಲ್ಲಿ ಯಾವ ಅನುಮಾವು ಇಲ್ಲ.

ನಮ್ಮ ನೆಲದ ಬಾಷೆ, ಸಂಸ್ಕೃತಿ, ನಮ್ಮ ಆಚಾರ ವಿಚಾರಗಳ ಜೊತೆಗೆ ಮೇರು ಸಾಂಸ್ಕೃತಿಕ ಕಲೆಗಳನ್ನು ಜೀವಂತವಾಗಿರಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಒಂದು ಪ್ರಯತ್ನವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಮೂಲಕ ಮಾಡಿಕೊಂಡು ಬರುತ್ತಿದೆ. ಇದು ರಾಜ್ಯದ ಉದ್ದಗಲದಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕು. ಶಿಕ್ಷಣ ವ್ಯಾಪಾರವಾಗಬಾರದು. ವ್ಯಾಪಾರದ ದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳು, ಶಾಲೆಗಳು ಬೆಳೆಯುತ್ತಿರುವುದು ನಾಡಿನ ಸಂಸ್ಕೃತಿ ಮತ್ತು ಕಲೆಗಳು ನಾಶವಾಗಲು ಕಾರಣವಾಗಲಿದೆ. ಆ ಕಾರಣಕ್ಕಾಗಿ ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ಕಟಿಬದ್ದವಾಗಬೇಕೆಂದು ಡಾ: ಮೋಹನ.ಎಂ.ಆಳ್ವಾ ಕರೆ ನೀಡಿದರು. ಮನರಂಜನೆ ಎಂದರೆ  ಕೇವಲ ಕಲೆಗಳ ಪ್ರದರ್ಶನವಷ್ಟೇ ಅಲ್ಲ. ಅದು ದೇಶಿ ಸಂಸ್ಕೃತಿ, ಶಾಶ್ತ್ರೀಯ ಹಾಗೂ ಜಾನಪದ ಕಲೆಗಳನ್ನು ರಕ್ಷಿಸುವ ಒಂದು ಪ್ರಕ್ರಿಯೆ ಕೂಡಾ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸೌಹಾರ್ಧ ಮನಸ್ಸುಗಳನ್ನು ಕಟ್ಟುವ ಕೆಲಸವೂ ಆಗಬೇಕು ಎಂದು ಡಾ. ಮೋಹನ ಆಳ್ವಾ ನುಡಿದರು.  

ಮುತ್ಸದ್ದಿ ರಾಜಕಾರಣಿಯಾಗಿ, ಸಮಾಜಮುಖಿಯಾಗಿರುವ ಸಚಿವ ದೇಶಪಾಂಡೆಯವರ ಕಾಳಜಿ ಮತ್ತು ಜನಪಯೋಗಿ ನೀತಿಗಳು ಅವರ ರಾಜಕೀಯ ಮುತ್ಸದ್ದಿತನಕ್ಕೆ ಪ್ರಮುಖ ಸಾಕ್ಷಿ ಎಂದು ದೇಶಪಾಂಡೆಯವರ ಸಮಾಜೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಡಾ: ಮೋಹನ.ಎಂ.ಆಳ್ವಾ ಅವರು ಕೊಂಡಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟಿನ ಧರ್ಮದರ್ಶಿ ಪ್ರಸಾದ ದೇಶಪಾಂಡೆಯವರು ಡಾ: ಮೋಹನ ಆಳ್ವಾ ಅವರು ಈ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಶಕ್ತಿ. 26 ಸಾವಿರ ವಿದ್ಯಾಥರ್ಿಗಳಿಗೆ ಶೈಕ್ಷಣಿಕ ಸೇವೆಯ ಜೊತೆಗೆ ಸಾಂಸ್ಕೃತಿಕವಾಗಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅವರಿಗೆ ಹೊಸ ಬದುಕು ಕಟ್ಟಿಕೊಡುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾರ್ಯ ಅದು ಮಹೋನ್ನತ ಕಾರ್ಯ ಎಂದು ಬಣ್ಣಿಸಿದರು.

ಅತಿಥಿಗಳಾಗಿದ್ದ ಪದವಿ ಕಾಲೇಜಿನ ಉಪನ್ಯಾಸಕ, ಲೇಖಕ ಡಾ. ಆರ್.ಜಿ. ಹೆಗಡೆಯವರು ಡಾ. ಮೋಹನ ಆಳ್ವಾರವರು ಸಾರ್ಥಕ ಶ್ರಮ ಹಾಗೂ ಸಾಧನೆಗಳ ಬಗ್ಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ  ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ, ನಗರಸಭಾ ಸದಸ್ಯೆ ಯಾಸ್ಮಿನ್ ಕಿತ್ತೂರ, ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ, ಸಾಹಿತಿ ಮಾಸ್ಕೇರಿ ಎಮ್.ಕೆ. ನಾಯಕ, ಕನ್ನಡ ಸಾಹಿತ್ಯ ಪರಿಷತ್ತಿನ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷ ಉಪೇಂದ್ರ ಘೋರ್ಪಡೆ, ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವಾಸರೆ  ಮುಂತಾದವರಿದ್ದರು.
ಕಾರ್ಯಕ್ರಮದಲ್ಲಿ ಡಾ. ಮೋಹನ ಅಳ್ವಾರನ್ನು ಸನ್ಮಾನಿಸಿ ಗೌರವಿಸಿದರು. ಗೀತಾ ವಿ. ಹೆಗಡೆ ಪ್ರಾರ್ಥಿಸಿದರು.  ದಿನೇಶ ನಾಯ್ಕ  ಸ್ವಾಗತಿಸಿ ಪರಿಚಯಿಸಿದರು.  ಸಂಗೀತಾ ಮೇಲಗೇರಿ ವಂದಿಸಿದರು. ವಿ.ಆರ್.ಡಿ.ಎಂ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಆಳ್ವಾಸ್ ಶಿಕ್ಷಣ ಸಂಸ್ಥೆಯ ನಾಗರಾಜ ಶೆಟ್ಟಿ ಸಹಕರಿಸಿದರು.

ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಕೇರಳದ ಮೋಹಿನಿಯಾಟ್ನಮ್-ಅಷ್ಟಲಕ್ಷ್ಮಿ,  ಬಡಗುತಿಟ್ಟು ಯಕ್ಷಗಾನ-ದಾಸ ದೀಪಾಂಜಲಿ,  ಆಂದ್ರದ ಜನಪದ - ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಶಾಸ್ತ್ರೀಯ ನೃತ್ಯ ನವ ದುರ್ಗೆ, ಶ್ರೀಲಂಕಾದ  ಕ್ಯಾಂಡಿಯನ್ ನೃತ್ಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತನ ಗಾರ್ಬ ಮತ್ತು ದಾಂಡಿಯಾ, ಮಣಿಪುರ ಡೋಲ್ - ಚಲಮ್,   ಕಥಕ್ ನೃತ್ಯ-ನವರಂಗ, ಪಶ್ಚಿಮ ಬಂಗಾಳದ ಪುಲಿಯಸಿಂಹ ನೃತ್ಯ, ತೆಂಕು ಯಕ್ಷಗಾನ ಪ್ರಯೋಗ-ಅಗ್ರಪೂಜೆ ಸೇರಿದಂತೆ ದೇಶದ ವಿವಿದೆಡೆಯ ಜನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅಭೂತಪೂರ್ವವಾಗಿ ಪ್ರದರ್ಶನಗೊಂಡು ಜನಮನ ರಂಜಿಸಿದವು. 




 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...